ಬದಲಾದ ಬೆಂಗಳೂರಿಗೆ ಬರಲಾಗಿ...

ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿ ತಳವೂರುವುದು ನನಗಿದ್ದ ಕನಸುಗಳಲ್ಲಿ ಒಂದಾಗಿತ್ತು. ಹಾಗೆ ನೋಡಿದರೆ ನಿಜವಾದ ಬೆಂಗಳೂರಿಗ ವಲಸೆ ಹೋಗುವುದೇ ಇಲ್ಲ. ಇಲ್ಲಿಯೇ ಪಿಂಚನಿ ದೊರೆಯಬಹುದಾದ ಒಳ್ಳೆಯ ಕೆಲಸ ಸಿಕ್ಕರೆ, ಹೊರಗೆ ದೊರೆಯಬಹುದಾದ ತುಸು ಹೆಚ್ಚು ಹಣ, ಅಥವಾ ಹುದ್ದೆಯನ್ನು ನಾವು ತಿರಸ್ಕರಿಸುವವರೇ. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು? ಇದ್ದಹಾಗೆ ಇರಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನಿದೆ. ಹೀಗಾಗಿಯೇ ಬೆಂಗಳೂರಿಗರ ಮನಸ್ಥಿತಿಯನ್ನು ವಿವರಿಸಲು ಸರಿಯಾದ ವಿಶೇಷಣವೆಂದರೆ ‘ಅಡ್ಜಸ್ಟ್’ ಅನ್ನವ ಪದವೇ ಇರಬಹುದು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿರುವ ನನಗೆ ಒಳ-ಹೊರಗಿನ ಎರಡೂ ನೋಟಗಳು ಸಿಕ್ಕಿರುವುದರಿಂದ ಇಲ್ಲಿನ ಬದಲಾವಣೆಗಳು ಯಾವ ದಿಗ್ಭ್ರಾಂತಿಯನ್ನೂ ಉಂಟುಮಾಡಿಲ್ಲ. ಊರು, ಒಂದು ರೀತಿಯಲ್ಲಿ ಹಿಂದಿನಷ್ಟೇ ಆರಾಮವಾಗಿ ಸೋಮಾರಿಯಾಗಿದೆ. ಆಗಾಗ ತಕ್ಷಣದ ಚಟುವಟಿಕೆ ಕಾಣುತ್ತದೆ. ಹಾಗೂ ಎಷ್ಟು ಅಸ್ತವ್ಯಸ್ತವಾಗಬಹುದೋ ಅಷ್ಟೂ ಅಸ್ತವ್ಯಸ್ತವಾಗಿದೆ. ಇಲ್ಲಿ ಸಹನಶೀಲತೆ, ಅಸಹನೆ, ಸಹಿಷ್ಣುತೆ ಎಲ್ಲವೂ ಏಕಕಾಲಕ್ಕೆ ಆಗುವುದನ್ನ ನಾವು ಕಾಣುತ್ತಿದ್ದೇವೆ. ನಮಗೆ ನಮ್ಮ ರಜನಿ ಸಾರ್ [ಹೆಸರು: ಶಿವಾಜಿರಾವ್ ಗಾಯಕ್ ವಾಡ್, ತಾಯ್ನುಡಿ: ಮರಾಠಿ, ಕನ್ನಡ ಚೆನ್ನಾಗಿ ಬಲ್ಲ ತಮಿಳು ಸಿನೇಮಾದ ಸೂಪರ್ ಹೀರೋ] ಸಿನೇಮಾಗಳೆಂದರೆ ಪ್ರೀತಿ. ಆತ ಬೆಂಗಳೂರಿಗ, ಕನ್ನಡಿಗ ಅನ್ನುವ ಹೆಮ್ಮೆ. ಆದರೂ ಆತನಿರುವ ನಾಡು ನೀರನ್ನು ಕೇಳಿದರೆ ನಾವು ಉರಿದೇಳುತ್ತೇವೆ. ನೀರು ಕನ್ನಡತನದ ಪ್ರತೀಕವಾದಾಗ ಊರೆಲ್ಲ ಹಳದಿ-ಕೆಂಪು ಬಾವುಟಗಳು ಹಾರಾಡುತ್ತವೆ. ಈ ಬಣ್ಣ ಮತ್ತು ಈ ಬಣ್ಣದ ಬಾವುಟಗಳು ಅಪಾಯಕಾಲದ ಕವಚಗಳಾಗಿ ಇರುತ್ತವೆ.No comments: