Showing posts with label ಕನ್ನಡ. Show all posts
Showing posts with label ಕನ್ನಡ. Show all posts

ಬದಲಾದ ಬೆಂಗಳೂರಿಗೆ ಬರಲಾಗಿ...

ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿ ತಳವೂರುವುದು ನನಗಿದ್ದ ಕನಸುಗಳಲ್ಲಿ ಒಂದಾಗಿತ್ತು. ಹಾಗೆ ನೋಡಿದರೆ ನಿಜವಾದ ಬೆಂಗಳೂರಿಗ ವಲಸೆ ಹೋಗುವುದೇ ಇಲ್ಲ. ಇಲ್ಲಿಯೇ ಪಿಂಚನಿ ದೊರೆಯಬಹುದಾದ ಒಳ್ಳೆಯ ಕೆಲಸ ಸಿಕ್ಕರೆ, ಹೊರಗೆ ದೊರೆಯಬಹುದಾದ ತುಸು ಹೆಚ್ಚು ಹಣ, ಅಥವಾ ಹುದ್ದೆಯನ್ನು ನಾವು ತಿರಸ್ಕರಿಸುವವರೇ. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು? ಇದ್ದಹಾಗೆ ಇರಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನಿದೆ. ಹೀಗಾಗಿಯೇ ಬೆಂಗಳೂರಿಗರ ಮನಸ್ಥಿತಿಯನ್ನು ವಿವರಿಸಲು ಸರಿಯಾದ ವಿಶೇಷಣವೆಂದರೆ ‘ಅಡ್ಜಸ್ಟ್’ ಅನ್ನವ ಪದವೇ ಇರಬಹುದು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿರುವ ನನಗೆ ಒಳ-ಹೊರಗಿನ ಎರಡೂ ನೋಟಗಳು ಸಿಕ್ಕಿರುವುದರಿಂದ ಇಲ್ಲಿನ ಬದಲಾವಣೆಗಳು ಯಾವ ದಿಗ್ಭ್ರಾಂತಿಯನ್ನೂ ಉಂಟುಮಾಡಿಲ್ಲ. ಊರು, ಒಂದು ರೀತಿಯಲ್ಲಿ ಹಿಂದಿನಷ್ಟೇ ಆರಾಮವಾಗಿ ಸೋಮಾರಿಯಾಗಿದೆ. ಆಗಾಗ ತಕ್ಷಣದ ಚಟುವಟಿಕೆ ಕಾಣುತ್ತದೆ. ಹಾಗೂ ಎಷ್ಟು ಅಸ್ತವ್ಯಸ್ತವಾಗಬಹುದೋ ಅಷ್ಟೂ ಅಸ್ತವ್ಯಸ್ತವಾಗಿದೆ. ಇಲ್ಲಿ ಸಹನಶೀಲತೆ, ಅಸಹನೆ, ಸಹಿಷ್ಣುತೆ ಎಲ್ಲವೂ ಏಕಕಾಲಕ್ಕೆ ಆಗುವುದನ್ನ ನಾವು ಕಾಣುತ್ತಿದ್ದೇವೆ. ನಮಗೆ ನಮ್ಮ ರಜನಿ ಸಾರ್ [ಹೆಸರು: ಶಿವಾಜಿರಾವ್ ಗಾಯಕ್ ವಾಡ್, ತಾಯ್ನುಡಿ: ಮರಾಠಿ, ಕನ್ನಡ ಚೆನ್ನಾಗಿ ಬಲ್ಲ ತಮಿಳು ಸಿನೇಮಾದ ಸೂಪರ್ ಹೀರೋ] ಸಿನೇಮಾಗಳೆಂದರೆ ಪ್ರೀತಿ. ಆತ ಬೆಂಗಳೂರಿಗ, ಕನ್ನಡಿಗ ಅನ್ನುವ ಹೆಮ್ಮೆ. ಆದರೂ ಆತನಿರುವ ನಾಡು ನೀರನ್ನು ಕೇಳಿದರೆ ನಾವು ಉರಿದೇಳುತ್ತೇವೆ. ನೀರು ಕನ್ನಡತನದ ಪ್ರತೀಕವಾದಾಗ ಊರೆಲ್ಲ ಹಳದಿ-ಕೆಂಪು ಬಾವುಟಗಳು ಹಾರಾಡುತ್ತವೆ. ಈ ಬಣ್ಣ ಮತ್ತು ಈ ಬಣ್ಣದ ಬಾವುಟಗಳು ಅಪಾಯಕಾಲದ ಕವಚಗಳಾಗಿ ಇರುತ್ತವೆ.ಕನ್ನಡ ಭಾಷೆ, ತಂತ್ರಾಂಶ ಮತ್ತು ಬ್ಲಾಗ್ ಲೋಕ

ಇಪ್ಪತ್ತು ವರುಷಗಳ ಹಿಂದೆ ಬರವಣಿಗೆ ಎನ್ನುವುದು ಕಾಗದದ ಮೇಲೆ ಸೇರಿಸುವ ಅಕ್ಷರಜಾಲವಾಗಿತ್ತು. ಹಾಗೂ ಬರೆದದ್ದು ಪ್ರಕಟಗೊಳ್ಳಲು ಹಲವು ಸಹಜ ಅಡಚಣೆಗಳೂ ಇದ್ದುವು. ಈಗ ತಂತ್ರಜ್ಞಾನದ ವೃದ್ಧಿಯೊಂದಿಗೆ ಇಂದು ಕೀಲಿಮಣೆಯ ಮೇಲೆ ಹಲವುಬಾರಿ ಬೆರಳುಗಳನ್ನಾಡಿಸಿ, ಒಂದು ಗುಂಡಿಯನ್ನು ಒತ್ತಿದರೆ ಬರೆದದ್ದು ಜಗತ್ತಿಗೇ ತಿಳಿಯುತ್ತದೆ. ಅಚ್ಚು ಮಾಧ್ಯಮದಲ್ಲೂ ಇದು ತುಂಬಾ ಸರಳವಾಗಿದೆಯೆಂದು ಗೆಳೆಯರೊಬ್ಬರು ಹೇಳಿದರು. ಡಿಟಿಪಿಯ ತಂತ್ರಜ್ಞಾನ ಬಂದಿರುವುದರಿಂದ ಮೊದಲು 1000 ಪ್ರತಿಗಳಿಗೆ ಕಡಿಮೆ ಅಚ್ಚು ಮಾಡುವುದು ಕಷ್ಟ ಎಂದು ಒದ್ದಾಡುತ್ತಿದ್ದುದಕ್ಕೆ ವಿರುದ್ಧವಾಗಿ 150 ಪ್ರತಿಗಳನ್ನು ಅಚ್ಚು ಹಾಕಬಹುದಾದ ಸಾಧ್ಯತೆಯಿದೆಯಂತೆ. ಅಕ್ಷರ ಜೋಡಣೆಯನ್ನು ಕಂಪ್ಯೂಟರಿನಲ್ಲಿ ಕಾಯ್ದಿರಿಸಬಹುದಾದ್ದರಿಂದ, ಸರಕಾರಿ, ಲೈಬ್ರರಿ ಆರ್ಡರುಗಳು ಬಂದಾಗ ಇನ್ನಷ್ಟು ಪ್ರತಿಗಳನ್ನು ಅಚ್ಚು ಹಾಕಬಹುದು...ಶಿಸ್ತಿನ ಚಿತ್ತಾಲರಿಗೆ ಪಂಪ...

ಯಶವಂತ ಚಿತ್ತಾಲರಿಗೆ ಪಂಪ ಪ್ರಶಸ್ತಿ ಬಂದಿದೆ ಅನ್ನುವುದು ಖುಶಿಯ ವಿಷಯ. ದೂರದೂರಿನಲ್ಲಿ ಕೂತು ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಿರುವ ಚಿತ್ತಾಲರು ಯಾವ ಪ್ರಶಸ್ತಿಯನ್ನೂ ಅಟ್ಟಿಸಿಕೊಂಡು ಹೋದವರಲ್ಲ. ಅಥವಾ ಅಲ್ಲಿ ಇಲ್ಲಿ ಸೆಮಿನಾರುಗಳಲ್ಲಿ ಕಾಣಿಸಿಕೊಂಡವರಲ್ಲ. ತಮ್ಮಷ್ಟಕ್ಕೆ ತಾವು ಬ್ಯಾಂಡ್‍ಸ್ಟಾಂಡಿನಲ್ಲಿ ಕೂತು ಸಾಹಿತ್ಯದ ಬಗ್ಗೆ ಸದಾ ಚಿಂತಿಸುತ್ತ, ಹೊಸ ಸಾಹಿತ್ಯವನ್ನು ಬೆರಗಿನಿಂದ ನೋಡುತ್ತಾ, ಕ್ರಿಕೆಟ್ ಮ್ಯಾಚುಗಳನ್ನು ಚಾಚೂ ಬಿಡದೇ ನೋಡುತ್ತಾ ಶಿಸ್ತಿನ ಜೀವನವನ್ನು ಜೀವಿಸುತ್ತಿರುವವರು. ಕಣ್ಣಿಗೆ ಬೀಳದಿರುವ ವ್ಯಕ್ತಿಗಳನ್ನು ನಾವು ಬಹುತೇಕ ಮರೆತುಬಿಡುತ್ತೇವೆ. ಹಾಗೆ ಮರೆಯದಿರುವಂತೆ ಸದಾ ನೆನಪಿನಲ್ಲಿ ಉಳಿಯಬೇಕಾದರೆ ಎರಡು ಮಾರ್ಗಗಳು ಮಾತ್ರ ಇವೆ. ಒಂದು: ಚಿತ್ತಾಲ, ರಾಘವೇಂದ್ರ ಖಾಸನೀಸ, ದೇವನೂರ ಮಹಾದೇವ -- ಇಂಥವರ ಥರ ಅದ್ಭುತ ಪ್ರತಿಭೆ ಇರಬೇಕು, ಇಲ್ಲವೇ ಆಗಾಗ ಏನಾದರೊಂದು ಬರೆದು ಜನರ ಗಮನವನ್ನು ಸೆಳೆಯುತ್ತಿರಬೇಕು. ಚಿತ್ತಾಲರಿಗೆ ಅದ್ಭುತ ಪ್ರತಿಭೆಯೂ ಇದೆ, ಜೊತೆಗೆ ನಿರಂತರ ಒಳ್ಳೆಯ ಕೃತಿಗಳನ್ನು ಸಾಹಿತ್ಯಕ್ಕರ್ಪಿಸುವ ಶಿಸ್ತೂ ಇದೆ. ಹೀಗಾಗಿಯೇ ಅವರು ಒಂದಕ್ಕಿಂದ ಒಂದು ಉತ್ತಮ ಕೃತಿಗಳನ್ನು ನಮಗೆ ನೀಡುತ್ತಾ, ನಮ್ಮನ್ನೆಲ್ಲ ಪ್ರೋತ್ಸಾಹಿಸುತ್ತಾ, ಹುರುದುಂಬಿಸುತ್ತಾ ಬೆಳೆದು ನಿಂತಿದ್ದಾರೆ.


ಮುಂದೆ...ಕನ್ನಡ ರಾಷ್ಟ್ರೀಯತೆ, ಭಾಷಾ ಹೋರಾಟ ಬ್ಯಾಂಗಲೋರ್ ಮತ್ತು ಸಿಂಗರ್

ಕನ್ನಡನಾಡಿನಿಂದ ದೂರವಿರುವುದು, ಸಾಹಿತ್ಯಕ್ಷೇತ್ರದಲ್ಲಿ ಅಲ್ಲದೇ ಬೇರೊಂದು ಕಾಯಕದಿಂದ ಜೀವನ ನಡೆಸುವುದು, ಮಾತೃಭಾಷೆ ಕನ್ನಡವಲ್ಲವಾಗಿರುವುದು, ಬೆಂಗಳೂರಿನಲ್ಲಿ ಮನೆಯಿದ್ದೂ ಹೈದರಾಬಾದಿನಲ್ಲಿ ನೆಲೆಸಬಯಸಿ ಅಲ್ಲಿ ಫ್ಲಾಟ್ ಕೊಂಡಿರುವುದು, ಕನ್ನಡ ಸಾಹಿತ್ಯ ಓದಿದಷ್ಟೇ ಉತ್ಸಾಹದಿಂದ ವಿಶ್ವ ಸಾಹಿತ್ಯವನ್ನು ಅಭ್ಯಾಸ ಮಾಡುವುದು, ಕನ್ನಡದಷ್ಟೇ ಸರಾಗವಾಗಿ ತೆಲುಗಿನಲ್ಲಿ ಮಾತನಾಡಬಲ್ಲದ್ದು, ಹಾಗೆ ಮಾತನಾಡಲು ಇಷ್ಟಪಡುವುದು, ತೆಲುಗಿನ ಸಿನೇಮಾ ನೋಡುವುದು, ಪತ್ರಿಕೆ ಓದುವುದು, ಮನೆ ಮಾತು ತೆಲುಗಾಗಿದ್ದು ಹಿರಿಯರೊಂದಿಗೆ ಆ ಭಾಷೆಯನ್ನು ಮಾತನಾಡಿದಾಗ್ಯೂ ಹೆಂಡತಿ ಮಗನೊಂದಿಗೆ ಕನ್ನಡ ಮಾತನಾಡುವುದು. ಹೊರನಾಡಿಗನಾದ್ದರಿಂದ ಮಗನಿಗೆ ಸ್ಕೂಲಿನಲ್ಲಿ ಹಿಂದಿ ಭಾಷೆ ಕೊಡಿಸಿದ್ದ ಚಾರಿತ್ರಿಕ ಸತ್ಯವನ್ನು ಅವನು ಬೆಂಗಳೂರಿನ ಶಾಲೆಗೆ ಸೇರಿದಾಗಲೂ ಹಾಗೇ ಬಿಟ್ಟಿರಿವುದು...
ಮುಂದೆ....