ಚೆ ಜೊತೆ ಪ್ರವಾಸ

ಮೋಟರ್ ಸೈಕಲ್ ಡೈರೀಸ್ - ಭಾಗ ೨

ಇತ್ತೀಚೆಗೆ ನಾನು ಚೆ ನ ಪುಸ್ತಕ ಮೊಟಾರ್ ಸೈಕಲ್ ಡೈರೀಸ್ ಬಗ್ಗೆ ಬರೆದಿದ್ದೆ. ಇದನ್ನು ಬರೆದದ್ದು ಚೆ ನ ಪುಸ್ತಕ ಹಾಗೂ ಅದೇ ಹೆಸರಿನ ಸಿನೆಮಾ ನೋಡಿದ ನಂತರ. ಆ ಲೇಖನವನ್ನು ಬರೆದ ನಂತರ ಅದಕ್ಕೆ ಸಮಾನಾಂತರವಾಗಿ ಬಂದ ಇನ್ನೊಂದು ಪುಸ್ತಕವನ್ನು ಓದುವ ಅವಕಾಶ ನನಗೆ ಸಿಕ್ಕಿತು. ಈ ಪುಸ್ತಕವನ್ನು ಬರೆದದ್ದು ಚೆ ನ ಜೊತೆಗೆ ಯಾತ್ರೆಯನ್ನು ಕೈಗೊಂಡ ಆಲ್ಬರ್ಟೋ ಗ್ರನಾಡೊ. ತುಸು ಬಾಲಿಶವೆನ್ನಿಸುವ ಚೆ ನ ಪುಸ್ತಕಕ್ಕಿಂತ ಈ ಪುಸ್ತಕ ಹೆಚ್ಚಿನ ಆಸಕ್ತಿಹುಟ್ಟಿಸುತ್ತದೆ. ಮೊಟಾರ್ ಸೈಕಲ್ ಡೈರೀಸ್ ಸಿನೇಮಾ ಮಾಡಿದವರು ಆಲ್ಬರ್ಟೋನ ಮಾರ್ಗದರ್ಶನ ಪಡೆದಿದ್ದರು. ಚೆ ನ ಪುಸ್ತಕ ೧೯೬೭ರಲ್ಲಿ ಪ್ರಕಟಗೊಂಡಿತ್ತು. ಆದರೆ ಆಲ್ಬರ್ಟೋನ ಪುಸ್ತಕ ಬೆಳಕು ಕಂಡದ್ದು ೧೯೭೮ರಲ್ಲಿ! ಇದನ್ನು ಕಂಡರೆ ೧೯೫೧-೫೨ರಲ್ಲಿ ಕೈಗೊಂಡ ಯಾತ್ರೆಯ ಬಗೆಗಿನ ಪುಸ್ತಕ ಸುಮಾರಷ್ಟುದಿನ ಡಬ್ಬದಲ್ಲೇ ಉಳಿದು ಇಷ್ಟು ದಿನಗಳ ನಂತರ ಹೊರಬಂದಿದೆಯೆಂದಾಯಿತು.
No comments: