ಕನ್ನಡಕ್ಕಿನ್ನೊಂದು ಪತ್ರಿಕೆ, ಕನ್ನಡ ಕಾವ್ಯ, ಕೆಲವು ಇತರ ವಿಚಾರಗಳು

ಭಾಗ ೧: ಶಬ್ದಗುಣ: ಮತ್ತೊಂದು ಸಣ್ಣ ಪತ್ರಿಕೆ

ದೇಶಕಾಲದ ಬಗ್ಗೆ ಚರ್ಚಿಸುತ್ತಿರುವಾಗಲೇ ಕನ್ನಡಕ್ಕೆ ಮತ್ತೊಂದು ಸಣ್ಣ ಪತ್ರಿಕೆಯ ಪ್ರವೇಶವಾಗಿದೆ. ಇದು ವಸಂತ ಬನ್ನಾಡಿಯವರು ಇತ್ತೀಚೆಗೆ ಹೊರತಂದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ. ದೇಶಕಾಲದ ಬಗ್ಗೆ ನಾನು ನಾಲ್ಕು ಸಂಚಿಕೆಗಳ ನಂತರ ಬರೆದೆನಾದರೂ ಇದರ ಬಗ್ಗೆ ನಾನು ತಕ್ಷಣವೇ ಬರೆಯುತ್ತಿರುವುದಕ್ಕೆ ಕಾರಣಗಳು ಹಲವು. ಮೊದಲ ಭಾಗದಲ್ಲಿ ನಾನು ಈ ಪತ್ರಿಕೆಯ ಸ್ಥಾನ, ಉದ್ದೇಶ, ವಿನ್ಯಾಸದ ಬಗೆ ಚರ್ಚಿಸುತ್ತೇನೆ. ಎರಡನೆಯ ಭಾಗದಲ್ಲಿ ಈ ಸಂಚಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಕಾಲೀನ ಕನ್ನಡಕಾವ್ಯದ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆಯುತ್ತೇನೆ. ಕಡೆಯದಾಗಿ ಕಾವ್ಯವಲ್ಲದೇ ಈ ಸಂಚಿಕೆಯಿಂದ ಹೊರಹೊಮ್ಮಿರುವ ಕೆಲವು ವಿಚಾರಗಳನ್ನು ಚರ್ಚೆ ಮಾಡುವ ಉದ್ದೇಶ ನನಗಿದೆ. ಅಂದರೆ ಶಬ್ದಗುಣದಲ್ಲಿ ಸಾಕಷ್ಟು ಹೂರಣವಿದೆ ಅಂತ ನಾನು ಒಪ್ಪಿದಂತಾಯಿತು. ಅದು ನಿಜವೂ ಸಹ.




8 comments:

Sudarshan said...

ಪ್ರಿಯ ಶ್ರೀರಾಮ್,

ಶಬ್ದಗುಣದ ಮೊದಲ ಸಂಚಿಕೆಯನ್ನು ಓದಿದ್ದೇನೆ. ನಾನು ಕೂಡಾ ಕರ್ನಾಟಕ-ದಿಂದ ೫-೬ ವರ್ಷ ಅನಿವಾಸಿಯಾಗಿದ್ದು ಮತ್ತೆ ಕನ್ನಡ ಮಣ್ಣಿನ ಸಂಬಂಧದಿಂದ ಹೊಸ ಜೀವಂತಿಕೆ ಪಡೆಯುತ್ತಿರುವನಾದ್ದರಿಂದ ಸಂಚಿಕೆಯು ಅನಾವರಣಗಳಿಸುವ ಕನ್ನಡ ಕಾವ್ಯ ಪ್ರಪಂಚದ ಬಗೆಗಿನ ಬಹುತೇಕ ಅನಿಸಿಕೆಗಳು ಬಹುಶಃ ನನ್ನವೂ ಕೂಡಾ. ನಾನು ಕನ್ನಡನಾಡಿನಿಂದ ಅನಿವಾಸಿಯಾಗುವ ಸ್ವಲ್ಪ ಮುಂಚೆ ವಿಜ್ಞಾನದಿಂದ ನಾವು ಪಡೆವ ಪ್ರಜ್ಞೆಯನ್ನು ಕಾವ್ಯಕ್ಕೆ ತಂದು ಕೊಡಹತ್ತಿದ್ದ ಜಿ.ಕೆ. ರವೀಂದ್ರಕುಮಾರ್ ನನಗೆ ಬಹಳ ಇಷ್ಟವಾಗಿದ್ದರು. ತಿರುಮಲೇಶರ ಪ್ರಜ್ಞೆಗೂ ಇವರಿಗೂ ಸ್ವಲ್ಪ ಸಾಮ್ಯವಿದೆಯೆಂದು ನನಗನ್ನಿಸಿತ್ತು. ಆನಂದ ಝುಂಝರವಾಡ-ರ ಪದ್ಯವೊಂದು ಇಷ್ಟವಾಗಿದ್ದಂತೆ ನೆನಪು. ಈಗ ಈ ಇಬ್ಬರೂ ಕವಿಗಳು ಹೆಚ್ಚು ಬೆಳವಣಿಗೆ ಕಂಡಿದ್ದಾರೆ. ಅನುಭಾವದ ತುಡಿತದ ಮಂಜುನಾಥರನ್ನೂ ಖುಶಿಯಿಂದ ಗಮನಿಸುತ್ತಿದ್ದೇನೆ. ಇನ್ನೂ ಹಲವು ಹೊಸ ಕವಿಗಳ ಪರಿಚಯವೂ ಈ ಸಂಚಿಕೆಯಿಂದ ನನಗೆ ದೊರೆತಿದೆ. ರಾಮಾನುಜನ್, ರಾಮಚಂದ್ರ ಶರ್ಮ ಮತ್ತು ಸುಮತೀಂದ್ರ್ಸ ನಾಡಿಗರ ಹೆಸರು ಕಾಣದಿದ್ದಕ್ಕೆ ನನಗೆ ಬೇಸರವೇನೂ ಇಲ್ಲ. ಹೊಸಕಾವ್ಯದ ಬಗ್ಗೆಯೇ ಸಂಚಿಕೆ ಒತ್ತುಕೊಡಲು ನಿರ್ಧರಿಸಿದಂತಿದೆ. (ದೇಶಕಾಲದ ೪ನೇ ಸಂಚಿಕೆಯ ಕಾವ್ಯಕ್ಕೆ ಮೀಸಲಾಗಿದ್ದ ಸಮಯಪರೀಕ್ಷೆ ಅಂಕಣದಲ್ಲೂ ಆ ತಲೆಮಾರಿನ ಕಾವ್ಯದ ಚರ್ಚೆಯಿರಲಿಲ್ಲವೆಂದು ನೆನಪಿಸಿಕೊಳ್ಳಬಹುದು.)

ಶಿವಪ್ರಕಾಶರ ಸಂದರ್ಶನ ನಿಸ್ಸಂಶಯವಾಗಿ ಬೋನಸ್ ಕೊಡುಗೆ. ಆದರೆ ನೀವೇಕೆ ಅವರ ವಿಚಾರ-ನಿಲುಗಳನ್ನು ಗಂಭೀರವಾಗಿ, ವಿಸ್ತಾರವಾಗಿ ಚರ್ಚಿಸುವಂತೆ ಹೊರಟು ಥಟ್ಟನೇ ನಿಲ್ಲಿಸಿದ್ದೀರಿ? ನಿರಾಸೆಯಾಯಿತು.

Satish said...

ದೇಶಕಾಲ, ಶಬ್ದಗುಣ, ವಿಕ್ರಾಂತ ಕರ್ನಾಟಕ - ಹೀಗೆ ಹಲವು ಹೊಸ ಪತ್ರಿಕೆಗಳು ಬರುತ್ತಿರುವುದು ಶ್ಲಾಘನೀಯ. ನನಗೆ ಇವುಗಳ ಸಂಪರ್ಕ ನಿಮ್ಮಂತಹವರ ಲೇಖನಗಳಿಂದ ತಡವಾಗಿಯಾದರೂ ಆಗುತ್ತಿದೆ, ಆದಷ್ಟು ಬೇಗ ಶಬ್ದಗುಣವನ್ನು ತರಿಸಿ ಓದಬೇಕು ಎಂಬ ಕುತೂಹಲವನ್ನು ಹುಟ್ಟಿಸಿದ್ದಕ್ಕೆ ಧನ್ಯವಾದಗಳು.

ಎಂ.ಎಸ್.ಶ್ರೀರಾಮ್ said...

ಸುದರ್ಶನ
ನಿಮ್ಮ ಟಿಪ್ಪಣಿಗೆ ಉತ್ತರಿಸುವುದಕ್ಕೆ ತಡವಾಯಿತು ಕ್ಷಮಿಸಿ. ಶಿವಪ್ರಕಾಶರ ಸಂದರ್ಶನ ಓದುತ್ತಿದ್ದಂತೆ ಮನಸ್ಸಿನಲ್ಲಿ ಹಲವು ವಿಚಾರಗಳು ಹೊಳೆದವು. ಅದನ್ನು ಬರೆಯ ಹೊರಟೆ ಆದರೆ ಯಾಕೋ ಅನೇಕ ವಿಚಾರಗಳನ್ನು ವ್ಯಕ್ತ ಪಡಿಸುವುದು ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಜೊತೆಗೆ ನಾನು ಸದ್ಯದಲ್ಲಿ ರೈತರ ಆತ್ಮಹತ್ಯೆಗಳ ಬಗ್ಗೆ ಪುಟ್ಟ ಅಧ್ಯಯನ ಮಾಡುತ್ತಿದ್ದೇನೆ... ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ವಿಚಾರಗಳನ್ನೂ ಹೇಳಬೇಕೆನ್ನಿಸಿತು. ಆದರೆ ಸಂದರ್ಭ ಸರಿಯಲ್ಲ ಅನ್ನಿಸಿ ಬಿಟ್ಟುಬಿಟ್ಟೆ. ಈ ಬಗ್ಗೆ ಮತ್ತೆಂದಾದರೂ ಬರೆಯಲು ಸಾಧ್ಯವಾದರೆ ಬರೆಯುತ್ತೇನೆ.

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ
ನಿಮ್ಮ ಪ್ರಶ್ನೆಗಳು ನನಗೆ ತಿಳಿಯದ ವಿಚಾರಗಳ ಬಗೆಗಿವೆ. ಜಾನಪದದ ಬಗ್ಗೆ ನಿಮಗಿರಬಹುದಾದ ಆಳವಾದ ಜ್ಞಾನ ನನಗಿಲ್ಲ. ಆ ಬಗ್ಗೆ ನಾನು ಆಳವಾದ ಆಸಕ್ತಿಯನ್ನೂ ಯಾಕೋ ಬೆಳೆಸಿಕೊಂಡಿಲ್ಲ.

ಶಿವಪ್ರಕಾಶರಿಗೆ ಒಂದು ರೀತಿಯಲ್ಲಿ ಶಿವಮೂರ್ತಿಶಾಸ್ತ್ರಿಗಳ ಮಗ ಅನ್ನುವು ಇಮೇಜನ್ನೂ ಮೀರಿ ನಿಲ್ಲುವ ಅವಶ್ಯಕತೆ ಇತ್ತು ಅನ್ನಿಸುತ್ತದೆ. ಅವರಿಗೆ ಶಿವಮೂರ್ತಿಶಾಸ್ತ್ರಿಗಳ ಸಾಹಿತ್ಯಲೋಕದ ಅಸ್ತಿತ್ವದ ಹೊರೆಯನ್ನು ನಿರಾಕರಿಸಬೇಕಾದ ತುರ್ತು ಇದ್ದಿರಬಹುದು. ಅವರ ಸಂದರ್ಶನದಲ್ಲಿ ಇದು ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಾಗಿಯೇ ಅವರು ಆ ಕ್ಷೇತ್ರದಲ್ಲಿಂದ ಹೊರಬರಲು ಸಹಜವಾಗಿಯೇ ಪ್ರಯತ್ನ ಮಾಡಿದರು. ಆದರೆ ಇದು ಪ್ರತಿಸಂಸ್ಕೃತಿಯ ಸಂದರ್ಭದಲ್ಲಿ ಹೇಗೆ ಕೆಲಸ ಮಾಡುತ್ತದೆ ಅನ್ನುವುದರ ಬಗ್ಗೆ ನನಗೆ ಸ್ಪಷ್ಟ ವಿಚಾರವಿಲ್ಲ.

ನಾನು ನೀನಾಸಂ ಅವರ ಎಲ್ಲ ಪ್ರಯೋಗಗಳನ್ನ ನೋಡಿಲ್ಲ. ತಿರುಗಾಟದಲ್ಲಿ ಬೆಂಗಳೂರಿಗೆ ಬಂದ, ಹಾಗೂ ನಾನು ಇಲ್ಲಿದ್ದ ಕಾಲದಲ್ಲಿನ ಕೆಲವು ನಾಟಕಗಳಷ್ಟನ್ನೇ ನೋಡಿದ್ದೇನೆ. ಹಾಗೆ ನೋಡಿದರೆ ನಾನು ಹೆಗ್ಗೋಡಿಗೆ ಹೋಗಿಯೇ ಇಲ್ಲ! ಆದರೆ ಶಿವಪ್ರಕಾಶರ ವಿಷಯ "ನೀನಾಸಂ ನಾಟಕಗಳಿಗೂ ಇತರೆ ಪ್ರಯೋಗಗಳಿಗೂ ವ್ಯತ್ಯಾಸವೇ ಇಲ್ಲ" ಅಂತ ಅಲ್ಲ ಅನ್ನಿಸುತ್ತದೆ. ನೀನಾಸಂ ನಾಟಕಗಳು ಬೇರೆ ಪ್ರಯೋಗಗಳಿಗಿಂತ ಭಿನ್ನವಾಗಿರುತ್ತವೆ ನಿಜ. ಕೈಲಾಸಂ ಅವರ ಪೋಲಿ ಕಿಟ್ಟಿಗೆ ಇಕ್ಬಾಲ್ ಬೇರೆಯದೇ ಒಂದು ರೂಪ ಕೊಟ್ಟುಬಿಟ್ಟರು. ಬಹುಶಃ ಶಿವಪ್ರಕಾಶರ ವಿಚಾರ ಇಂತಿರಬಹುದು: ಇಕ್ಬಾಲ್, ಪ್ರಸನ್ನ, ಜಂಬೆ, ಅಕ್ಷರ, ಸುಬ್ಬಣ್ಣ, ರಘುನಂದನ... ಹೀಗೆ ಅನೇಕರು ತಮ್ಮ ವೈಯಕ್ತಿಕ ಶೈಲಿಯ ಪ್ರಯೋಗಗಳನ್ನು ಮಾಡಿಕೊಂಡು ಹೋದರು, ಆದರೆ ಅವರನ್ನೆಲ್ಲಾ ಒಟ್ಟಾಗಿ ಹಿಡಿಯುವ ಒಂದು ಸಾಮಾನ್ಯ ಧಾರೆ ನೀನಾಸಂನಲ್ಲಿ ಇರಲಿಲ್ಲವೇನೋ. ಆ ಸಾಮಾನ್ಯಧಾರೆ ಬಹುಶಃ ಬರುವುದು ನಾಟಕಗಳ ಆಯ್ಕೆಯಲ್ಲಿ ಮತ್ತು ಅವುಗಳನ್ನು ಪ್ರಸ್ತುತ ಪಡಿಸುವ ರೀತಿಯಲ್ಲಿ. ಉದಾಹರಣೆಗೆ ಸಮುದಾಯದ ನಾಟಕಗಳೆಂದರೆ ಒಂದು ಥರದಲ್ಲಿ ಎಡಪಂಥೀಯ ವಿಚಾರಧಾರೆಯನ್ನು ವ್ಯಕ್ತಪಡಿಸುವ ಹಳೇ, ವಿದೇಶೀ ನಾಟಕಗಳಿಗೂ ಒಂದು ರೀತಿಯ ಇಂಟರ್‍ಪ್ರಿಟೇಶನ್ ಕೊಡುವ ನಾಟಕಗಳು ಎಂದು ನಾವು ಆಶಿಸಬಹುದಿತ್ತು. ಆದರೆ ನೀನಾಸಂ ನಾಟಕಗಳು ಒಂದು ಥರದ ವೈವಿಧ್ಯತೆಯಿಂದ ಕೂಡಿದ್ದವು. ಅದರಲ್ಲಿ ತಪ್ಪೇನೂ ಇಲ್ಲ. ರಂಗಪ್ರಯೋಗದ ಡೈವರ್ಸಿಟಿಯನ್ನು ನೀನಾಸಂ ಪ್ರತಿನಿಧಿಸಬಹುದು. ಆದರೆ ಅದಕ್ಕೊಂದು ವಿಚಾರಧಾರೆಯ ನಂಟಿರಲಿಲ್ಲ ಅನ್ನುವ ಶಿವಪ್ರಕಾಶರ ಮಾತನ್ನು ನಾವು ಒಪ್ಪಬೇಕಾಗುತ್ತದೆ ಅಲ್ಲವೇ? ಹಾಗೆಂದು ಎಲ್ಲಕ್ಕೊ ವಿಚಾರಧಾರೆಯ ನಂಟು ಇರಬೇಕೆಂದು ಆಶಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎನ್ನುವ ಪ್ರಶ್ನೆಯನ್ನು ನಾವು ಕೇಳಬಹುದು. ಬಹುಶಃ ನೀನಾಸಂನ ಉದ್ದೇಶ ಇಂಥ ವಿಚಾರಧಾರೆಯಿಂದ ಭಿನ್ನವಾಗಿರುವುದೇ ಆಗಿದ್ದಿರಬಹುದು. ಆದರೆ ಯಾವುದೇ ಯಶಸ್ವೀ ಪ್ರಯೋಗವನ್ನು ಜನ ತಮ್ಮ ಮಾನದಂಡದಲ್ಲಿ ಅಳೆಯಲು ನೋಡುತ್ತಾರೆ. ಸಾರ್ವಜನಿಕರ ಇಂಟರ್ ಫೇಸ್ ಇರುವ ಈ ಸಂಸ್ಥೆಗಳಿಗೆ ಇಂಥ ವಿಚಾರದ ಟಿಪ್ಪಣಿಗಳನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಉದಾಹರಣೆಗೆ ನೀನಾಸಂ ಬಗೆಗೆ ಇರುವ ಅನೇಕ ಟಿಪ್ಪಣಿಗಳಲ್ಲಿ ಅವರು ಫೋರ್ಡ್ ಫೌಂಡೇಶನ್ ನಿಂದ ದೇಣಿಗೆ ಪಡೆದರು ಅನ್ನುವುದೂ ಒಂದು. ಅದರಲ್ಲಿ ನನಗೆ ಯಾವ ಅಪರಾಧವೂ ಕಾಣುವುದಿಲ್ಲ. ಆದರೆ ಟೀಕೆ ಮಾಡುವವರ ಎಕಮೇವ ದೃಷ್ಟಿಕೋನದಿಂದ ನೋಡಿದಾಗ ಅದು ಕೆಲವರಿಗೆ ತಪ್ಪನ್ನಿಸ ಬಹುದು. ನೀನಾಸಂನ ಒಟ್ಟಾರೆ ಕೆಲಸ ನೋಡಿದಾಗ ಅನ್ನಿಸದಿರಬಹುದು. ಶಿವಪ್ರಕಾಶರ ಟಿಪ್ಪಣಿಯನ್ನು ನಾನು ಈ ಥರದ ದೃಷ್ಟಿಯಿಂದ ಅರ್ಥೈಸಲು ಪ್ರಯತ್ನಿಸಿದೆ ಅಷ್ಟೇ.

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ
ಪ್ರತಿಸಂಸ್ಕೃತಿಯ ವಿಚಾರ ನನಗೆ ಕುತೂಹಲದ್ದು. ಅದರ formulation ನಲ್ಲಿ ಒಂದು ಸಂಸ್ಕೃತಿಯ ವಿರುದ್ಧ ಮತ್ತೊಂದು ಅನ್ನುವ ಅರ್ಥ ಬರುವ ಸಾಧ್ಯತೆ ಉಂಟು. ಆದರೆ ಅದು ಒಂದು ರೀತಿಯ ಮೇಲೆ ಏಳುವ ವೃತ್ತಾಕಾರದ ರೂಪ ಹೊಂದಿರಬಹುದಲ್ಲವೇ. ಎಂ.ಎನ್. ಶ್ರೀನಿವಾಸರ sanskritisation ಮತ್ತು westernisation ವಾದವೂ ಒಂದು ಥರದ ಸರಳೀಕರಣವಲ್ಲವೇ. ಅತೀ westernisation ಆದಾಗ ಮತ್ತೆ sanskritisation ನತ್ತ ನಮ್ಮ ಜನರು ತಿರುಗುತ್ತಿರುವುದನ್ನು ನಾವು ಪಶ್ಚಿಮದತ್ತ ವಲಸೆ ಹೋಗಿ ನೆಲೆಸಿದವರಲ್ಲಿ ಕಾಣುವುದಿಲ್ಲವೇ? ಅದೇ ರೀತಿಯಲ್ಲಿ ನಮ್ಮ ದಲಿತ ವರ್ಗಕ್ಕೆ ಸೇರಿದವರು sanskritisation ದಾಟಿ ಒಂದೇ ಬಾರಿಗೆ westernisation ಕಡೆಗೆ ಒಲವು ತೋರಿರುವುದನ್ನೂ ಕಾಣಬಹುದು. ಇದಕ್ಕೆ ಅಂಬೇಡ್ಕರರ ವಸ್ತ್ರ ಧರಿಸುವ ರೀತಿಯಾಗಲೀ ಕಂಚ ಅಯಿಲಯ್ಯ ಇಂಗ್ಲೀಷ್ ವಿದ್ಯೆಗೆ ಹಾತೊರೆಯುವ ತವಕದಲ್ಲಿ ಕಾಣಬಹುದೇ? ಹೀಗಾಗಿ ಪ್ರತಿಸಂಸ್ಕ್ಟ್ರುತಿ ಅಂದರೆ ಅದರ ರೂಪರೇಶೆಗಳು ಹೇಗಿರಬಹುದು?

****
ಸುಬ್ಬಣ್ಣನವರ ಪುಸ್ತಕ ನಾನು ಓದಿಲ್ಲ. ಆದ್ದರಿಂದ ಆ ಬಗ್ಗೆ ಅರೆಜ್ಞಾನಿಯಾಗಿ ಚರ್ಚೆ ಮುಂದುವರೆಸುವುದು ಸಮಂಜಸವಲ್ಲ. ಜೊತೆಗೆ ನಾನು ವ್ಯಕ್ತಪಡಿಸಿದ್ದು ಶಿವಪ್ರಕಾಶರ ವಿಚಾರ. ಈಗ ನಾನು ಅವರ ವಿಚಾರವನ್ನು ಪ್ರತಿನಿಧಿಸಲು ಸಂಪೂರ್ಣ ಹಕ್ಕುಗಳನ್ನು ಪಡೆದಿರುವಂತೆ ಭಾಸವಾಗುತ್ತದೆ!! ಆದರೆ ಒಂದು ಮಾತು ಹೇಳಬಹುದೇನೋ..ಶಿವಪ್ರಕಾಶರ ವಾದ ಅವರು ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸಲಿಲ್ಲ ಎನ್ನುವುದಲ್ಲವೇನೋ. ಬದಲಿಗೆ ಅವರು ಹೇಳುತ್ತಿರುವುದು ಅವರು ಇಷ್ಟು ದೊಡ್ಡ ಮೂವ್ ಮೆಂಟಾದಗ್ಯೂ ಒಂದು ವಿಚಾರಧಾರೆಯನ್ನು/ಸ್ಟೈಲ್/ಪ್ರತ್ಯೇಕತೆಯನ್ನು ನೀಡಲಿಲ್ಲ ಅನ್ನುವುದನ್ನು. ಅದು ಅವರು ನೀಡಬೇಕು ಅನ್ನುವ ಆಶಯ ಮಾತ್ರ ಸುಬ್ಬಣ್ಣನವರದ್ದಲ್ಲದೇ ಶಿವಪ್ರಕಾಶರದ್ದು ಅನ್ನುವುದನ್ನ ನಾವು ಗಮನಿಸಬೇಕು. ಹೀಗಾಗಿ ಈ ಮೌಲ್ಯಮಾಪನ, ಹೊರಗಿನಿಂದ ಹೇರಿದ ಮಾನದಂಡಗಳ ಮೇಲೆ ಆಧಾರಿತವಾಗಿ ಮಾಡಲಾಗುತ್ತಿದೆ. ಇದನ್ನು ಒಂದಿಷ್ಟು ಉಪ್ಪಿನೊಂದಿಗೆ ಸ್ವೀಕರಿಸಿ.....[take it with a pinch of salt!!]

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ:
ಎರಡು ವಿಚಾರಗಳು: ಮೊದಲಿನದು ನೀನಾಸಂ ಬಗ್ಗೆ. ನಾನು ಇಲ್ಲಿ ಶಿವಪ್ರಕಾಶರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.. ಈ ನಿಟ್ಟಿನಲ್ಲಿ ನೀನಾಸಂ "ಸಮುದಾಯ"ದ ರೀತಿಯಲ್ಲಿ ಒಂದು ಭಿನ್ನ ಧ್ವನಿಯಾಗಲಿಲ್ಲ ಅಂತ ಅವರ ಆಶಯವಿರಬಹುದು. ನಿಮ್ಮ ಟಿಪ್ಪಣಿ ಹಲವು ದಿನಗಳ ಹಿಂದೆ ಬಂದಿತ್ತಾದರೂ, ನಾನು ಜಾನಕೀ ನಾಯರ್ ಅವರ ಬೆಂಗಳೂರಿನ ಪುಸ್ತಕವನ್ನು ಓದುತ್ತಿರುವಾಗ ಶಿವಪ್ರಕಾಶರ ಮಾತನ್ನ ಹೀಗೆ ಅರ್ಥೈಸಬಹುದೋ ಅನ್ನಿಸಿತು. ಆದರೆ ಬೆಂಗಳೂರಿಗರಾದ ನನಗೂ ಶಿವಪ್ರಕಾಶರಿಗೂ ಸಮುದಾಯ ಹತ್ತಿರವಾಗುವುದೂ- ನೀನಾಸಂ ತುಸು ದೂರ ಅನ್ನಿಸುವುದೂ ಸಹಜ. ಬೆಂಗಳೂರಿಗರು ತಾವು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವಂತೆ ಮಾತಾಡುತ್ತಾರೆ! ಹಾಗೆಯೇ ನಾನೂ ಇರಬಹುದು.

ಅಂಬೇಡ್ಕರರ ಪೋಷಾಕಿನ ಬಗ್ಗೆ ನನಗೆ ಯಾವ ಅಭ್ಯಂತರವೂ ಇಲ್ಲ. ಗಾಂಧಿಗಿಂತ ಭಿನ್ನವಾಗಿ ನಿಂತ ಆತ ಆ ಪೋಷಾಕಿನಲ್ಲಿ ಬಹುಶಃ ದಲಿತರ ಆಶಯಗಳನ್ನು ವ್ಯಕ್ತಪಡಿಸುತ್ತಿದ್ದರೇನೊ ಅನ್ನುವುದು ರಾಮ್ ಗುಹಾ ಅಭಿಪ್ರಾಯ. ಬಹುಶಃ ಅದನ್ನು ಒಪ್ಪಬಹುದೇನೋ.

ಶ್ರೀರಾಮ್

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ:
ಸಮುದಾಯ ಆ ಕಾಲಕ್ಕೆ ಎಡಪಂಥೀಯ ಧೋರಣೆಯನ್ನು ಪ್ರತಿನಿಧಿಸುತ್ತಿತ್ತು. ಸಾಕಷ್ಟು ಸಮುದಯ ಕರ್ಮಿಗಳು ಫ್ಯಾಕ್ಟರೀ ಕಾರ್ಮಿಕರಾಗಿದ್ದರಿಂದ ಅದು ಸಹಜವಿತ್ತು. ಜೊತೆಗೆ ಸಮುದಾಯ ತುರ್ತುಪರಿಸ್ಥಿತಿಯ ಅತಿರೇಕಗಳನ್ನೂ ವಿರೋಧಿಸುವ ನಿಲುವು ಹೊಂದಿತ್ತು. ಆದ್ದರಿಂದ ಅವರ ನಾಟಕಗಳ ಆಯ್ಕೆ ಮತ್ತು ಅದರ ಅರ್ಥೈಸುವಿಕೆಯಲ್ಲಿ ಆ ವಿಚಾರಧಾರೆ ಹಾಸುಹೊಕ್ಕಾಗಿತ್ತು. ನೀನಾಸಂಗೆ ಆ ನಿಲುವು ಇರಲಿಲ್ಲ. ಬಹುಶಃ ನೀನಾಸಂ ಶುದ್ಧ ಸಾಂಸ್ಕೃತಿಕ ಸಾಹಿತ್ಯಿಕ ಸಂಸ್ಥೆಯಾಗಿತ್ತು. ಅದರಲ್ಲಿ ನನಗೆ ತಪ್ಪೇನೂ ಕಾಣಿಸುವುದಿಲ್ಲ. ಆದರೆ ಸಾರ್ವಜನಿಕ ಅನ್ನಿಸಿಕೊಳ್ಳುವಂತಹ ಸಂಸ್ಥೆಗಳಿಗೆ ತಮ್ಮ ಮೂಲ ಆಶಯವನ್ನು ಮೀರಿದಂತಹ ಜನರ ಆಶಯಗಳ ಅಪೇಕ್ಷೆ ಇರುತ್ತವೆ. ಆ ಆಶಯಗಳಿಗೆ ಆ ಸಂಸ್ಥೆಗಳು ಪ್ರತಿಸ್ಪಂದಿಸ ಬೇಕೆಂದೇನೂ ಇಲ್ಲ. ಈ ದೃಷ್ಟಿಯಲ್ಲಿ ಶಿವಪ್ರಕಾಶರ ಟೀಕೆಯನ್ನು ಅರ್ಥೈಸಿಕೊಳ್ಳಬೇಕು ಅಂತ ನನ್ನ ಅರಿಕೆ. ಇದಕ್ಕೆ ಶಿವಪ್ರಕಾಶರೇ ಪ್ರತಿಸ್ಪಂದಿಸಬಹುದೋ ನೋಡಬಹುದು..

ಶ್ರೀರಾಮ್

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ: "ಕಡೇಪಕ್ಷ ಓದಿ" ಅಂತ ಹೇಳುವುದರಲ್ಲಿ ನಿಮ್ಮ ಅಭಿಪ್ರಾಯ ನಾನು ನೀವು ಪ್ರಸ್ತುತ ಪಡಿಸುತ್ತಿರುವ ದೃಷ್ಟಿಕೋನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ವಿತಂಡವಾದಕ್ಕಿಳಿದಿದ್ದೇನೆ ಅನ್ನುವ ಭಾವನೆಯಿಂದ ಬರೆದದ್ದೋ ಅಂತ ಅನುಮಾನ ಬರುತ್ತಿದೆ. ಕೊಂಡಿಗಾಗಿ ಧನ್ಯವಾದಗಳು. ಸಂದರ್ಶನವನ್ನು ಓದಿದೆ. ನೀವು ಹೇಳಿದ್ದ ವಿಕೇಂದ್ರೀಕರಣದ ಮಾತೂ ಇದರಲ್ಲಿದೆ. ಒಟ್ಟಾರೆ ಸಂದರ್ಶನ ಓದಿದ್ದರಿಂದ ನನಗೆ ಸುಬ್ಬಣ್ಣನವರನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಕೃತಜ್ಞತೆಗಳು. ಆದರೆ ಆ ಸಂದರ್ಶನಕ್ಕೂ ನಮ್ಮ ಚರ್ಚೆಗೂ ಇರಬಹುದಾದ ಕೊಂಡಿ ನನಗೆ ಕಾಣಿಸುತ್ತಿಲ್ಲ. ನೀನಾಸಂ ಯಾಕೆ "ಸಮುದಾಯ" ಆಗಲಿಲ್ಲ ಅಂತ ಆ ಸಂದರ್ಶನದಿಂದ ತಿಳಿಯುತ್ತದೆ. ಅದು ಮುಂಚಿನಿಂದಲೂ ತಿಳಿದಿದ್ದ ಮಾತು, ಅದಕ್ಕೆ ಈಗ ಸ್ಪಷ್ಟೀಕರಣ ಸಿಕ್ಕಿತು. ನೀನಾಸಂ ಸಮುದಾಯ ಆಗಬೇಕಿತ್ತು ಅನ್ನುವುದೂ ನನ್ನ [ಶಿವಪ್ರಕಾಶರ] ವಾದದ ಆಶಯವಲ್ಲ. ಆದರೆ ಎಲ್ಲೋ ಒಂದು ಕಡೆ ಹೆಗ್ಗೋಡಿನಲ್ಲಿ ನಡೆದ ಚಟುವಟಿಕೆಗಳ ಸಾಂದ್ರತೆ ನೋಡಿದರೆ ಅದೊಂದು ಸ್ಕೂಲ ಆಫ್ ಥಾಟ್ ಆಗುವ ಸಾಧ್ಯತೆಗಳನ್ನು ತೋರಿಸಿತ್ತೇನೋ.. ಹೀಗಾಗಿ ಆ ಆಶಯ ಶಿವಪ್ರಕಾಶರ ಮನದಲ್ಲಿ ಹುಟ್ಟಿರಬಹುದು. ಈ ಬಗ್ಗೆ ನನಗೆ ಬಹಳ ದೃಢವಾದ ನಿಲುವೇನೂ ಇಲ್ಲ. ನಿಮ್ಮ ಮತ್ತು ಶಿವಪ್ರಕಾಶರ ವಾದವನ್ನು ವಿಸ್ತಾರವಾಗಿ ಅರ್ಥಮಾಡಿಕೊಳ್ಳುವ ಕುತೂಹಲ ಅಷ್ಟೇ...

ಶ್ರೀರಾಮ್