ಕನ್ನಡ ರಾಷ್ಟ್ರೀಯತೆ, ಭಾಷಾ ಹೋರಾಟ ಬ್ಯಾಂಗಲೋರ್ ಮತ್ತು ಸಿಂಗರ್

ಕನ್ನಡನಾಡಿನಿಂದ ದೂರವಿರುವುದು, ಸಾಹಿತ್ಯಕ್ಷೇತ್ರದಲ್ಲಿ ಅಲ್ಲದೇ ಬೇರೊಂದು ಕಾಯಕದಿಂದ ಜೀವನ ನಡೆಸುವುದು, ಮಾತೃಭಾಷೆ ಕನ್ನಡವಲ್ಲವಾಗಿರುವುದು, ಬೆಂಗಳೂರಿನಲ್ಲಿ ಮನೆಯಿದ್ದೂ ಹೈದರಾಬಾದಿನಲ್ಲಿ ನೆಲೆಸಬಯಸಿ ಅಲ್ಲಿ ಫ್ಲಾಟ್ ಕೊಂಡಿರುವುದು, ಕನ್ನಡ ಸಾಹಿತ್ಯ ಓದಿದಷ್ಟೇ ಉತ್ಸಾಹದಿಂದ ವಿಶ್ವ ಸಾಹಿತ್ಯವನ್ನು ಅಭ್ಯಾಸ ಮಾಡುವುದು, ಕನ್ನಡದಷ್ಟೇ ಸರಾಗವಾಗಿ ತೆಲುಗಿನಲ್ಲಿ ಮಾತನಾಡಬಲ್ಲದ್ದು, ಹಾಗೆ ಮಾತನಾಡಲು ಇಷ್ಟಪಡುವುದು, ತೆಲುಗಿನ ಸಿನೇಮಾ ನೋಡುವುದು, ಪತ್ರಿಕೆ ಓದುವುದು, ಮನೆ ಮಾತು ತೆಲುಗಾಗಿದ್ದು ಹಿರಿಯರೊಂದಿಗೆ ಆ ಭಾಷೆಯನ್ನು ಮಾತನಾಡಿದಾಗ್ಯೂ ಹೆಂಡತಿ ಮಗನೊಂದಿಗೆ ಕನ್ನಡ ಮಾತನಾಡುವುದು. ಹೊರನಾಡಿಗನಾದ್ದರಿಂದ ಮಗನಿಗೆ ಸ್ಕೂಲಿನಲ್ಲಿ ಹಿಂದಿ ಭಾಷೆ ಕೊಡಿಸಿದ್ದ ಚಾರಿತ್ರಿಕ ಸತ್ಯವನ್ನು ಅವನು ಬೆಂಗಳೂರಿನ ಶಾಲೆಗೆ ಸೇರಿದಾಗಲೂ ಹಾಗೇ ಬಿಟ್ಟಿರಿವುದು...
ಮುಂದೆ....

27 comments:

Anonymous said...

ನಿಮ್ಮ ವಾದ ಹಾಸ್ಯಾಸ್ಪದ ಎನ್ನದೇ ವಿಧಿಯಿಲ್ಲ. ನೀವು ಇಂಗ್ಲಿಷ್ ಚೆನ್ನಾಗಿ ಬಲ್ಲ ಎಲೀಟ್ ಕನ್ನಡಿಗರಿಗಿಂತ ಯಾವ ರೀತಿಯಲ್ಲೂ ಭಿನ್ನರಲ್ಲ. ಕನ್ನಡಿಗರು ಬಂಗಾಳಿಗಳಿಗೆ ಇಷ್ಟವಾಗುವಂತೆ ಕೊಲ್ಕತಾ ಹೆಸರನ್ನು ಉಚ್ಚರಿಸುತ್ತಾರೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಅದು ಇಂಗ್ಲಿಷ್ ನಲ್ಲಿ ಬರೆಯುವಂತೆ ಕಲ್ಕಟ್ಟ ಅಲ್ಲ ಎಂಬುದು ಅವರಿಗೆ ಅರ್ಥವಾದರೆ ಸಾಕಲ್ಲವೇ. ಬ್ಯಾಂಗಲೋರ್ ವಿಷಯಕ್ಕೆ ಬಂದಾಗ ಅದನ್ನು ಇಂಗ್ಲಿಷ್ ನಲ್ಲಿ ಹಾಗೆಯೇ ಉಳಿಸಿಕೊಳ್ಳಬೇಕೆಂದು ವಾದಿಸುವ ನೀವು ಕನ್ನಡಿಗರು ಇಂಗ್ಲಿಷ್ ಮಾತನಾಡುವಾಗ ತಪ್ಪಾದ ಉಚ್ಚಾರಣೆ ಬಳಸಿದರೆ ತಮಾಷೆ ಮಾಡುವುದಿಲ್ಲವೇ?

Sriram said...

ನನ್ನ ನಿಲುವು ಹಾಸ್ಯಾಸ್ಪದ? ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ನಾನು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ.

ನಾನು ಇಂಗ್ಲೀಷ್ ಚೆನ್ನಾಗಿ ಬಲ್ಲವನು? ಗೊತ್ತಿಲ್ಲ. ಬಹುಶಃ ನಿಜ.

ಎಲೀಟ್ ಕನ್ನಡಿಗ? ಹೌದು. ಅದಕ್ಕೆ ನಾನು ತಲೆತಗ್ಗಿಸಿ ನಿಲ್ಲಬೇಕಿಲ್ಲವೇನೋ. ಎಲೀಟ್ ಆಗಿರುವುದು ಸಾಂದರ್ಭಿಕ. ಅಪರಾಧವೇನೂ ಅಲ್ಲ ಅನ್ನಿಸುತ್ತದೆ.

ಕೊಲ್ಕತಾದ ಹೆಸರು ಬದಲಾಯಿಸುವ ಮುನ್ನ ಅದನ್ನು ಬಂಗಾಳಿಯಲ್ಲಿ [ಬೆಂಗಾಲಿ ಅಲ್ಲ, ಬಾಂಗ್ಲಾ ಅಲ್ಲ] ಕಲ್ಕಟ್ಟ ಅಂತ ಕರೆಯುವುದಿಲ್ಲ ಅಂತ ನನಗೆ ತಿಳಿದಿತ್ತು. ಬಹಳಷ್ಟು ಜನರಿಗೆ ತಿಳಿದಿತ್ತು. ಹೆಸರು ಬದಲಾಯಿಸಿದ್ದರಿಂದ ಯಾವ ಮೂಲಭೂತ ಬದಲಾವಣಿಯೂ ಆಗಲಿಲ್ಲ. ಜಯತೀರ್ಥ ರಾವ್ ಜೆರ್ರೀ ರಾವ್ ಆದಾಗ, ಮ್ಯಾಡಲೀನ್ ಸ್ಲೇಡ್ ಗಾಂಧೀಜಿಗೆ ಮೀರಾ ಆದಾಗ ಅವರ ಮೂಲಭೂತ ವ್ಯಕ್ತಿತ್ವ ಬದಲಾಗಲಿಲ್ಲ. ಅವರ ಸಂದರ್ಭಕ್ಕೆ ಸರಿಯಾಗಿ ದಿನನಿತ್ಯದ ಜೀವನ ನಡೆಸಲು ಹೆಚ್ಚಿನ ಅನುಕೂಲವಾಯಿತು ಅಷ್ಟೇ. ಬ್ಯಾಂಗಲೂರ್ ಎಂದು ಯಾರಾದರೂ ಇಂಗ್ಲೀಷಿನಲ್ಲಿ [ಆಂಗ್ಲ ಅಲ್ಲ] ಹೇಳಿದಾಗ ಮೈಸೂರಿಗೆ [ಮಹಿಷೂರು ಅಲ್ಲ] ಹೋಗದಿದ್ದರೆ ಸಾಕು! ಹೆಸರು ತಿದ್ದುವುದೇ ಆದರೆ ಬೆಂಗಳೂರು ಬೆಂದಕಾಳೂರು ಯಾಕಾಗಬಾರದು? ಹಾಗೂ ರಾಜಕಾರಣಿಗಳಿಗೆ ಕೆಲಸ ಕೋಡಲು ಒಂದು ದೊಡ್ಡ ಯಾದಿಯನ್ನೇ ತಯಾರಿಸಬಹುದು - ಮಂಗಳೂರು, ಶಿವಮೊಗ್ಗ, ಮಡಿಕೇರಿ, ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ, ಬಳ್ಳಾರಿ... ಅನಂತಮೂರ್ತಿಯವರೂ ಯು.ಆರ್. ಬಿಟ್ಟು ಉ.ರಾ. ಆಗಬಹುದು.

ನನ್ನ ಇಂಗ್ಲೀಷು ಕನ್ನಡದ ಉಚ್ಚಾರಣೆಯಿಂದ ಕೂಡಿದೆ. ನಾನು ಝೆಡ್ ಅನ್ನುತ್ತೇನೆ. ಝೀ ಅಲ್ಲ. ಫೈನಾನ್ಸ್ ಅನ್ನುತ್ತೇನೆ ಫಿನಾನ್ಸ್ ಅಲ್ಲ. ಪಾರ್ಲಿಯಾಮೆಂಟ್ ಅನ್ನುತ್ತೇನೆ, ಪಾರ್ಲಮೆಂಟ್ ಅಲ್ಲ. ರೆಸ್ಟಾರೆಂಟ್ ಅನ್ನುತ್ತೇನೆ ರೆಸ್ಚುರಾ ಅಲ್ಲ. ಆ ಬಗ್ಗೆ ನನಗೆ ಅವಮಾನವಿಲ್ಲ. ನಾನು ಇತರರನ್ನು ಈ ವಿಷಯದಲ್ಲಿ ತಮಾಷೆ ಮಾಡುವುದಿಲ್ಲ.

ಶ್ರೀರಾಮ್

Anonymous said...

Sriram,
I am a regular reader of your blog..(Only as regular as your writing! because many a times I happen to visit your blog to see it having not been updated - this is not a comment as such. Take your time and write).
I am writing this since you have seen a decline in the number of replies you are getting. Please don't get discouraged. Your writing is really good and thought-provoking. I also like it because of the level of detail you give.

Now a little bit about re-christening the place names.. I happen to differ with you slightly here. There is a place called 'kaapu' near Udupi. Some fool has made it 'kaup' which has been blindly followed by everyone. 'shivamogga' is such a beautiful name, which is meaninglessly pruned to 'shimoga'.
Many of our place names are originated due to some speciality of that place. Considering Mangalore (I should be writing mangaLUru), is the ooru where 'mangaLaadEvi temple' is situated. 'ore' of Mangalore doesn't serve this purpose. 'ore' doesn't have any meaning in Kannada. Isn't it?

Keep writing..

ಜೀವಿಶಿವು said...

ಒಂದು ಚಿಕ್ಕ ವಿವರಣೆ.

ಶಿಮೊಗ ಎಂದು ಇಂಗ್ಲೀಷ್-ನಲ್ಲಿ ನಾವು ಕರೆಯುವುದು ಹಿಂದೆ ಸಿಹಿಮೊಗ್ಗೆ ಆಗಿತ್ತು ಎಂದು ಕೇಳಿದ್ದೇನೆ. ಶಿವಮೊಗ್ಗ ಅಲ್ಲ.

-ಶಿವು

sahrudaya said...

ಶ್ರೀರಾಮ್,
ನೀವು ಬೆಂಗಳೂರಿಗೆ ವಾಪಾಸು ಬರುತ್ತಿದ್ದೀರಿ ಅಂತೆ. ಬಹಳ ಸಂತೋಷದ ವಿಷಯ. ಕನ್ನಡ ರಾಷ್ಟ್ರೀಯತೆ ಬಗ್ಗೆ ನೀವು ಬರೆದ ಲೇಖನ ಅನೇಕ ಕಾರಣಗಳಿಗೆ ನನ್ನ ಗಮನ ಸೆಳೆಯಿತು. ಅದರಲ್ಲೂ ಸಾಹಿತ್ಯದ ಮಾನದಂಡಗಳ ವಿಷಯದ ಬಗ್ಗೆ ನೀವು ವ್ಯಕ್ತಪಡಿಸಿರುವ ಅಭಿಪ್ರಾಯ ನನಗೆ ಕುತೂಹಲವನ್ನುಂಟು ಮಾಡಿದೆ. `ಕನ್ನಡ ಸಂದರ್ಭದಲ್ಲಿ ಬೃಹತ್ತಾಗಿ ಕಾಣುವೆ ಎಷ್ಟೋ ವಿಚಾರಗಳು ನಾವು ನೋಡುವ ಚೌಕಟ್ಟನ್ನು ಬದಲಾಯಿಸಿದಾಗ ಬೇರೆಯಾಗಿಯೇ ಕಾಣುವುದು ಸೋಜಿಗದ ವಿಷಯವಾದರೂ ಸತ್ಯ' ಎಂದು ಒಂದು ಕಡೆ ನೀವು ಬರೆದಿದ್ದೀರಿ. ಇದರ ಕುರಿತು ವಿಶದವಾಗಿ ಬರೆಯಲು ಸಾಧ್ಯವೆ? `ಕರ್ವಾಲೋ' ಓದಿನ ಅನುಭವದ ಹಿನ್ನೆಲೆಯಲ್ಲಿ ಮೇಲಿನ ಅಭಿಪ್ರಾಯವನ್ನು ವಿವರಿಸಿ ಎಂದು ನಿಮ್ಮನ್ನು ಕೋರುತ್ತೇನೆ.
-- ರಾಘವೇಂದ್ರ

yashaswini said...

ಸರ್, ನೀವು ರಾಘವೇಂದ್ರರ ಪ್ರಶ್ನೆಗೆ ಉತ್ತರಿಸಬಹುದೆಂದು ಬಹಳ ದಿನದಿಂದ ಕಾದಿದ್ದೇನೆ. ಯಾಕೆಂದರೆ ಅದರಿಂದ ಆಂಗ್ಲ ಸಾಹಿತ್ಯವನ್ನು ಓದುವಾಗಿನ ನನ್ನ ಅನುಭವದ ಬಗ್ಗೆ ನನಗಿರುವ ಕೆಲ ಸಂದೇಹಗಳು ನಿವಾರಣೆಯಾಗಬಹುದೆಂದುಕೊಂಡಿದ್ದೇನೆ.
ನಿಮ್ಮ ಅನುಭವಕ್ಕಿಂತ ಭಿನ್ನವಾಗಿ , ನನಗೆ ಹೆಮ್ಮ್ಮಿಂಗ್‍ವೇ ಅವರ 'ಓಲ್ದ್ ಮ್ಯಾನ್ ಅಂಡ್ ಸೀ' ಆಗಲೀ, ಥೊಮಸ್ ಮನ್ ಅವರ 'ಡೆತ್ ಇನ್ ವೆನಿಸ್' ಆಗಲೀ ಹೀಗೆ ಮತ್ತೂ ಕೆಲವು ಪ್ರಸಿದ್ಧ ಕೃತಿಗಳನ್ನು ಓದಿದಮೇಲೂ ನಮ್ಮ ಕನ್ನಡದವರೂ ಇಷ್ಟೇ ಚೆನ್ನಾಗಿ ಬರೆಯುತ್ತಾರಲ್ಲವೇ ಎಂದು ಅನ್ನಿಸಿದೆ!. ನನಗ್ಯಾಕೆ ಹಾಗೆ ಅನ್ನಿಸುತ್ತೆ ಎಂದು ಯೋಚಿಸುವಾಗ,ನನ್ನ ನೆಲದ ಕೃತಿಗಳನ್ನು ಓದುವಾಗ,ನಮ್ಮ ಜಾನಪದ,ಪುರಾಣ,ನಮ್ಮವರ ಸ್ವಭಾವ,ಜೀವನ ವೈಶಿಷ್ಟ್ಯಗಳಿಂದ ತುಂಬಿಹೋದ ರೂಪಕಗಳು ಹೊಳೆಯಿಸುವ ಅರ್ಥ ಪರಂಪರೆ,- ಬೇರೆ ಭಾಷೆಯ ಕೃತಿಯನ್ನು ಓದುವಾಗ್ಗೆ,ಅಲ್ಲಿಯ ಜಾನಪದ,ಮಿಥ್‍‌ಗಳು,ಜೀವನದ ನೇರ ಅನುಭವ ಸಾಧ್ಯವಿಲ್ಲದೆ, ನನ್ನ ಪರಿಸರದ ಸೀಮಿತ ಅನುಭವದಲ್ಲಿ ಅವುಗಳನ್ನು ಓದಿದಾಗ ಮತ್ತಿನ್ನೇನೋ ವಿಶೇಷ ಅನುಭೂತಿಯನ್ನು ಗಳಸಿಕೊಡದ ಕಾರಣ ಹಾಗೆನ್ನಿಸುತ್ತಿದೆಯೇ ಎಂದು ಅನುಮಾನಿಸಿದ್ದೇನೆ. ಹೀಗೆ ಒಂದು ಒಂದು ಒಳ್ಳೆಯ ಅನ್ಯ ಭಾಷೀಯ ಕೃತಿಯನ್ನು ಸಂಪೂರ್ಣ ಅನುಭವಿಸುವುದೆಂದರೆ ಮಾನಸಿಕವಾಗಿ ಅಲ್ಲಿಯವರೇ ಆಗಿಬಿಡಬೇಕಾಗುತ್ತದೆಯೇನೋ ಎಂಬ ಸಂಶಯ ನನಗೆ.ನಿಜಕ್ಕೂ ಅನಿವಾಸಿ ಅನ್ನುವುದಕ್ಕೆ ಆಗ ಅರ್ಥವೇನಾದರೂ ಇದೆಯೇ?

ಮತ್ತೂ ಒಂದು ಪ್ರಶ್ನೆ. ಸಾಹಿತ್ಯದ ಕೆಲವು ಅತಿರೇಕಗಳಿಗೆ ಮ್ಯಾಜಿಕ್ ರಿಯಲಿಸಮ್,ರಿಯಲಿಸಿಮ್,ಪುರಾಣ,ಐತಿಹ್ಯ- ಇತ್ಯಾದಿ ಇತ್ಯಾದಿ ಹೆಸರಿಟ್ಟು ಎಲ್ಲವನ್ನೂ ಆಸ್ವಾದಿಸುವ ನಾವು, ನಿತ್ಯ ಜೀವನದ ಅತಿರೇಕಗಳನ್ನು ಒಪ್ಪದೇ ಹೋಗುತ್ತೇವೆ ಯಾಕೆ?
ಪುರಾಣದಲ್ಲಿ ಯಾವುದೋ ಡೈಮೆನ್‍ಶನ್‍ನಲ್ಲಿ ಅತಿರೇಕಗಳು ಬೆಳೆದು ಉದ್ದೇಶ ಸಫಲವಾಗುವಂತೆ, ಸಂವಿಧಾನಾತ್ಮಕವಾದ ರೀತಿಯಲ್ಲಿ ನಿಜ ಜೀವನದ ಅತಿರೇಕವನ್ನು ಒಪ್ಪಿಕೊಂಡು ಅದರ ಡೈಮೆನ್‍ಶನ್ಗಳನ್ನು ನಿರ್ದೇಶಿಸಲಾಗದೇ? ಭಸ್ಮಾಸುರರ ಉಗಮ ಸ್ಥಾನ ಶಿವ ಸ್ವರೂಪವಾದದ್ದೇ ಅಲ್ಲವೆ?

ವಂದನೆಗಳು
ಯಶಸ್ವಿನಿ.

Sriram said...

ರಾಘವೇಂದ್ರ, ಯಶಸ್ವಿನಿ: ಪ್ರತಿಕ್ರಿಯೆಗೆ ತಡವಾದದ್ದಕ್ಕೆ ಕ್ಷಮೆಯಿರಲಿ. ಅಹಮದಾಬಾದಿನಿಂದ ಬೆಂಗಳೂರಿಗೆ ಬರುವ ಪ್ರಕ್ರಿಯೆಯಲ್ಲಿ ನೆಟ್ ಸೌಲಭ್ಯಕ್ಕೆ ಸ್ವಲ್ಪ ಧಕ್ಕೆಯಾಗಿದ್ದರಿಂದ ಸೈಬರ್‍ನಾಡಿನಲ್ಲಿರದೇ ಭೂಮಿಯಲ್ಲಿ ಬೇರು ಬಿಟ್ಟು ನಿಂತಿದ್ದೆ.

ಕರ್ವಾಲೋವನ್ನ ನಾನು ನನ್ನ ಬರಹದಲ್ಲಿ ಪ್ರಸ್ತಾಪಿಸಿದ್ದು ಸಾಂದರ್ಭಿಕವಾಗಿ ಮಾತ್ರ. ಅದು ನನ್ನ ಮೊಮೆಂಟ್ ಆಫ್ ಟ್ರೂಥ್ ಆಗಿತ್ತು. ಅದುವರೆಗೆ ನಾನು ಅದು ನಿಜಕ್ಕೂ ಅತ್ಯುತ್ತಮ ಕೃತಿ ಅಂತ ನಂಬಿದ್ದೆ. ಆದರೆ ಆ ಕಥೆ ಓದಿದರೆ ಅಂಥಹ ಗಹನವಾದ ವಿಚಾರವಾಗಲೀ, ಪರಿಸರಕ್ಕೆ ಸಂಬಂಧಿಸಿದ ಸೂಕ್ಷ್ಮಗಳಾಗಲೀ ವಿಶ್ವಸ್ಥರದಲ್ಲಿ ಎದ್ದು ನಿಂತು ಜನರ ಗಮನ ಸೆಳೆಯುವ ಮಟ್ಟದಲ್ಲಿ ಇರಲಿಲ್ಲ. ಒಂದು ರೀತಿಯಲ್ಲಿ ನಾನು ಅದನ್ನ ಅವರ ಅಬಚೂರಿನ ಪೋಸ್ಟಾಫೀಸು ಕಥೆಗಳಷ್ಟು ಉತ್ತಮ ಅಂತ ಹೇಳಲೂ ತಯಾರಿಲ್ಲ.

ಅಂದ ಮಾತ್ರಕ್ಕೆ ಇಂಗ್ಲೀಶಿನಲ್ಲಿ ಬಂದದ್ದೆಲ್ಲವೂ ಉತ್ತಮ, ಅಥವಾ ಕನ್ನಡದಲ್ಲಿ ವಿಶ್ವ ಸಾಹಿತ್ಯದಲ್ಲಿ ನಿಲ್ಲುವಷ್ಟು ಮಟ್ಟದ ಕೃತಿಗಳು ಬಂದಿಲ್ಲವೆಂದಲ್ಲ. ಆದರೆ ಕನ್ನಡದ ಸಂದರ್ಭದಲ್ಲಿ ನಾವು ಯಾವ ಅಂಜಿಕೆಯೂ ಇಲ್ಲದೇ ಅಡಿಗರ ನಂತರದ ನವ್ಯರನ್ನು ಚರ್ಚಿಸುವಾಗ ತಿರುಮಲೇಶ, ರಾಮಾನುಜಂ, ಶರ್ಮ ಎಂದು ಒಂದೇ ಉಸಿರಿಗೆ ಹೇಳುವುದುಂಟಲ್ಲವಾ? ಕನ್ನಡದ ಚೌಕಟ್ಟನ್ನು ತೆಗೆದರೆ ಈ ಮೂವರನ್ನೂ ಒಂದೇ ಚೌಕಟ್ಟಿನಲ್ಲಿ ಇಡಲು ಸಾಧ್ಯವಾ? ತಿರುಮಲೇಶ್‍ಗೂ ಶರ್ಮರಿಗೂ ಇರುವ ಅಂತರವನ್ನು ಬೆಸೆಯಲು ಸಾಕಷ್ಟು ಲೇಖಕರು ನಿಲ್ಲಬಹುದಲ್ಲವೇ. ನಾನು ಈ ದೃಷ್ಟಿಯಿಂದ ಕನ್ನಡದ ಚೌಕಟ್ಟಿನಾಚೆ ನಿಂತಾಗ ಆಗುವ ಅನುಭವದ ಬಗ್ಗೆ ಹೇಳಿದೆ.

ಮಾನ್, ಹೆಮಿಂಗ್ವೆ ಇಬ್ಬರನ್ನೂ ನಾನು ಓದಿಲ್ಲ. ಆದರೆ ನಾವು ಬೇರೆ ಸಾಹಿತ್ಯವನ್ನು ಓದುವಾಗ ಎಷ್ಟೇ ಉತ್ತಮ ಭಾಷಾಂತರವಾದರೂ, ಅವರ ಸಂದರ್ಭದ ಒಳತೋಟಿಗಳನ್ನು ಅನುಭವಿಸುವುದು ಸಾಧ್ಯವೇ ಇಲ್ಲ.. ಆದ್ದರಿಂದ ಅದನ್ನು ನಾವು ನಮ್ಮ ಚೌಕಟ್ಟಿನಲ್ಲಿಯೇ ಗ್ರಹಿಸುತ್ತೇವೆ ಅಲ್ಲವೇ?

ನಾನು ನನ್ನ ಇಂಗ್ಲೀಷ್ ಬ್ಲಾಗ್ ನಲ್ಲಿ ಮಾರ್ಕೇಸ್‍ನ ಇತ್ತೀಚಿನ ಕಾದಂಬರಿಯನ್ನು ಮೆಚ್ಚಿ ಕೆಲ ಮಾತುಗಳನ್ನು ಬರೆದಿದ್ದೆ. ಆದರೆ ಅದನ್ನು ಓದಿದ ಮಹಿಳೆ ಒಬ್ಬರು ಆ ಕಾದಂಬರಿಯ [memories of my melonchaly whores] ಮೂಲಭೂತ ಐಡಿಯಾನೇ ಮಹಿಳೆಯಾದ ತಮಗೆ ಒಪ್ಪಿತವಲ್ಲ ಅಂತ ಹೇಳಿದರು. ತುಸು ಯೋಚಿಸಿದಾಗ ನಿಜವೆನ್ನಿಸಿತು - ೯೦ ವರ್ಷದ ಮನುಷ್ಯ ೧೪ ವರ್ಷದ ಹುಡುಗಿಯ ಜೊತೆ ಮಲಗಬೇಕು ಎಂದು ಆಲೋಚಿಸುವುದೇ ಒಂದು ಥರದ ಅತಿರೇಕವಲ್ಲವೇ? ಆದರೂ ನಾನು ಆ ಕಾದಂಬರಿಯನ್ನು ಮೆಚ್ಚಿದ್ದು ಮಾರ್ಕೇಸರ ಇತರ ಪುಸ್ತಕಗಳಿಗಿಂತ ಇರುವ ಭಿನ್ನತೆಯಿಂದಾಗಿ ಹಾಗೂ ಅದರಲ್ಲಿರುವ ಕಥನ ಸಂಭ್ರಮದಿಂದಾಗಿ. ಬಹಳಷ್ಟು ವಿಮರ್ಶಕರು ಈ ಪುಸ್ತಕವನ್ನು ತಳ್ಳಿಹಾಕಿದ್ದಾರೆ..

ಇನ್ನು ಅತಿರೇಕಗಳ ಮಾತು, ಮತ್ತು ಇದೇ ಮಾತನ್ನೇ ನಾನು ಆ ಮಹಿಳೆಗೂ ಬರೆದಿದ್ದೆ... ಪುಸ್ತಕಗಳಲ್ಲಿ ನಾವು ಮ್ಯಾಜಿಕ್ ರಿಯಲಿಸಂ ಇತ್ಯಾದಿ ಪ್ರಯೋಗಿಸಿ ಅತಿರೇಕ ಬಳಸಿ ಹೇಳಬೇಕಾದ್ದನ್ನು ಎಫೆಕ್ಟಿವ್ ಆಗಿ ಹೇಳಬಹುದು. ಆದರೆ ಅದೇ ನಿಜಜೀವನದಲ್ಲಿ ನಮ್ಮ ಆಲೋಚನಾ ಕ್ರಿಯೆಗೂ ನಮ್ಮ ನುಡಿಗೂ ತುಂಬಾ ಅಂತರವಿದೆ. ನಮ್ಮ ಆಲೋಚನಾಕ್ರಿಯೆ ಬಹುಸಮಯ ದುಷ್ಟ, ಅಸಂಗತ ಮತ್ತು ಅತಿರೇಕಗಳಿಂದ ಕೂಡಿರುತ್ತದೆ. ಎಷ್ಟೋ ಬಾರಿ ಎದುರಿಗಿರುವವನ ಕತ್ತು ಹಿಸುಕಬೇಕು ಅನ್ನಿಸುತ್ತದೆ. ಆದರೆ ನಮ್ಮ ನಡತೆ ಶಿಷ್ಟವಾಗಿರುತ್ತದೆ. ಆದ್ದರಿಂದ ನಾವು ಸಾಹಿತ್ಯ, ಬರವಣಿಗೆಯಲ್ಲಿ ಸಹಿಸುವಷ್ಟು ಅತಿರೇಕವನ್ನು ನಿಜಜೀವನದಲ್ಲಿ ಸಹಿಸಲು ತಯಾರಿಲ್ಲವೇನೋ. ಅಲ್ಲವೇ.

ನನಗೆ ಗೊತ್ತು ಈ ಪ್ರತಿಕ್ರಿಯ ಸ್ವಲ್ಪ disjointed ಆಗಿದೆ. ಆದರೆ ವಿಷಯ ಜಟಿಲವಾದದ್ದು. ಅದಕ್ಕೆ ಸರಳ ಉತ್ತರಗಳಿಲ್ಲ.

ಶ್ರೀರಾಮ್

myindia said...

ಮಾನ್ಯ ಶ್ರೀರಾಮ್, ನಿಮ್ಮ ಬ್ಲಾಗ್ ಇಷ್ತ್ಟವಾಯಿತು. ಆದರೆ ಬೆಂಗಳೂರಿನ ಮರುನಾಮಕರಣದ ಬಗೆಗಿನ ನಿಮ್ಮ ನಿಲುವನ್ನು ನಾನು ಕನ್ನಡಿಗನಾಗಿ ಸಮರ್ಥಿಸುವದಿಲ್ಲ. ಏಕೆಂದರೆ ಕನ್ನಡ ಬಾರದಿರುವವರಿಗೆ ನಾವು ಬೆಂಗಳೂರಿನ ಬಗ್ಗೆ ಹೇಳುವಾಗ ಬ್ಯಾಂಗಲೋರ್ ಎಂದು ಉಚ್ಛರಿಸಿ ಹೇಳುವುದು, ನಮ್ಮ ಮೇಲಿನ ಇಂಗ್ಲೀಷಿನ ಹೇರಿಕೆಯ ಅನುಭವಾಗುವುದು. ಬೆಂಗಳೂರಿನ ಮರುನಾಮಕರಣದಿಂದ ಬೆರೇನೂ ಆಗದಿದ್ದರೂ ಕನ್ನಡಿಗರಾದ ನಮಗೆ ಯಾವುದೋ ಒಂದು ಅವ್ಯಕ್ತ ಸಂತೋಷವಾಗುವುದು. ಒಬ್ಬ ಮಹೋದಯರು (ಅನೊನಿಮಸ್ ೨) ಅವರ ಮಾತು ಒಪ್ಪತಕ್ಕದ್ದು. ಯಾವುದೇ ಅರ್ಥ ಕೊಡದ ಇಂಗ್ಲೀಷ ಹೆಸರುಗಳಿಗಿಂತ ಚೆಂದದ ಕನ್ನಡ ಹೆಸರುಗಳು ಬೇಕು.

Anonymous said...

ಶ್ರೀರಾಮ್ ಅವರೆ,

ಈ ವಿಷಯದ ಬಗ್ಗೆ ಕೆಲವು ನನ್ನ ಪ್ರಶ್ನೆಗಳಿವೆ.

೧) ಮದ್ರಾಸನ್ನು ಚೆನ್ನೈ ಅಂತಲೂ, ಕಲ್ಕಟ್ಟವನ್ನು ಕೊಲ್ಕತಾ ಅಂತಲೂ ಮರುನಾಮಕರಣ ಮಾಡಿದಾಗ ಯಾರಾದರೂ ತಮಿಳರು, ಬಂಗಾಳಿಗಳು ಆಕ್ಷೇಪ ಎತ್ತಿದ್ದು ನಿಮಗೆ ತಿಳಿದಿದೆಯೇ? ತಿಳಿದಿದ್ದರೆ ತಿಳಿಸಿ.

೨) ಮದ್ರಾಸನ್ನು ಚೆನ್ನೈ ಅಂತ ಮಾಡಿದಾಗ ಮದ್ರಾಸಿನಲ್ಲಿರುವ ಹೊರಗಿನವರು ಆಕ್ಷೇಪಣೆ ವ್ಯಕ್ತಪಡಿಸಿರಬಹುದೇ ಹೊರತು (ರಾಜಾರೋಷವಾಗಂತೂ ವ್ಯಕ್ತಪಡಿಸಿರಲಾರರು!) ಸ್ಥಳೀಯ ತಮಿಳು ಜನರಂತೂ ಹಾಗೆ ಮಾಡಿರಲಾರರು.

೩) ಬ್ಯಾಂಗಲೋರ್ ಅನ್ನು ಬೆಂಗಳೂರಾಗಿ ಬದಲಾಯಿಸುವುದರ ಕನ್ನಡಿಗರ ಉದ್ದೇಶ ನ್ಯಾಯಯುತವಾದ ಮತ್ತು ಸಹಜವಾದ ಕ್ರಿಯೆಯಾಗಿದೆ. "ಈ ನೆಲದಲ್ಲಿ ಬಾಳುವ ಹೆಚ್ಚಿನ ಹಕ್ಕು ಸ್ಥಳೀಯರಾದ ಕನ್ನಡಿಗರಿಗೆ ಸೇರಿದ್ದು. ಹೊರಗಿನವರು ನಮಗೆ ಹೊಂದಿಕೊಂಡು ಗೌರವಿಸತಕ್ಕದ್ದು" ಎಂಬುದನ್ನು ಇದು ಸಾಂಕೇತಿಕವಾಗಿ ಹೇಳುತ್ತದೆ. ಈ ವಿಷಯ ನಿಮಗೆ ಗೊತ್ತಿಲ್ಲವೆಂದೇನೂ ಅಲ್ಲ. ಒಂದು ನಾಯಿ ಮೂತ್ರ ವಿಸರ್ಜನೆಯ ಮೂಲಕ ಈ ಸ್ಥಳ ತನ್ನದು ಎಂದು ಗುರುತು ಮಾಡುತ್ತದೆ. ಅದು ಸಹಜವಾದ ಕ್ರಿಯೆಯಾಗಿದೆ. ನಮ್ಮ ಕನ್ನಡಿಗರಲ್ಲಿ ಇಂತಹ ನಿರುಪದ್ರವಿ ವಿಷಯದಲ್ಲೂ ಭಿನ್ನಭಿಪ್ರಾಯಗಳು ಏಕೆ? ಅಥವಾ ಯಾರನ್ನು ಮೆಚ್ಚಿಸಲು ಈ ಉದಾರಭಾವ? ತಿಳಿಯುತ್ತಿಲ್ಲ.

೪) `ಬೆಂಗಳೂರು' ಯಾಕೆ ಆಗಬೇಕು? ಬೆಂದಕಾಳೂರು ಯಾಕಾಗಬಾರದು? ಬೆಂಗಳೂರು ಒಂದಾದರೆ ಸಾಕೆ? ಮೈಸೂರ್ ಮೈಸೂರು ಆಗಬೇಡವಾ? ಯು.ಆರ್. ಉ.ರಾ ಆಗಬೇಕಲ್ಲವಾ? ಇಂತಹ ವಿತಂಡವಾದ ಏಕೆ?

-ಅನಾಮಧೇಯ

Sriram said...

ಸಾಮಾನ್ಯವಾಗಿ ಅನಾಮದೇಯ ಪತ್ರಗಳಿಗೆ ಉತ್ತರಿಸುವ ಅವಶ್ಯಕತೆ ನನಗೆ ಕಾಣುವುದಿಲ್ಲ. ಚರ್ಚೆ ಮಾಡುವ ಮನಸ್ಸಿದ್ದರೆ ಹೆಸರು ಹೇಳಲು ಏನು ನಾಚಿಗೆ? ಆದರೂ ನನ್ನ ಲೇಖನದಲ್ಲಿರುವ ಮೂಲ ವಿಷಯಕ್ಕಿಂತ ಈ ವಿಷಯವೇ ಹೆಚ್ಚಿನ ಚರ್ಚೆಗೊಳಗಾಗುತ್ತಿರುವುದರಿಂದ ಈ ಮಾತುಗಳನ್ನು ಬರೆಯುತ್ತಿದ್ದೇನೆ.

ಬೇರೆ ಊರುಗಳ ಪುನರ್ನಾಮಕರಣವಾದಾಗ ಯಾರೋ ವಿರೋಧಿಸಲಿಲ್ಲ ಆದ್ದರಿಂದ ನಾವೂ ವಿರೋಧಿಸಬಾರದು ಅನ್ನುವುದು ನನ್ನ ಮಟ್ಟಿಗೆ ವಿತಂಡವಾದ. ನನ್ನ ಬರಹ ಸೂಕ್ಷ್ಮವಾಗಿ ಗಮನಿಸಿದರೆ ಅದರ ಸಂದರ್ಭ ಅರ್ಥವಾಗುತ್ತದೆ. ನನ್ನ ಪ್ರಶ್ನೆ: ಇದರಿಂದ ನಾವು ಸಾಧಿಸುವುದು ಏನನ್ನು ಅನ್ನುವ ವಿಚಾರ. ಇದನ್ನು ನಾನು ಚರ್ಚಿಸಿದ್ದು ಕನ್ನಡದ "ಅಸ್ಮಿತತೆ"ಯನ್ನು ಪುನರ್ನಾಮಕರಣದಿಂದ ಕಂಡುಕೊಳ್ಳುವ ಸಂದರ್ಭದಲ್ಲಿ. ಅಂದಹಾಗೆ ಹೊರಗಿನವರು ಯಾರು? ಕರ್ನಾಟಕದಿಂದ ಆಚೆ ಇರುವವರೇ? ಕನ್ನಡ ಬಾರದಿರುವವರೇ? ಪ್ರೇಂಜಿ, ಕಿರಣ್ ಮಜೂಂದಾರ್ ಷಾ, ಗೊಕುಲ್‍ದಾಸ್‍ನ ಹಿಂದೂಜಾ, ಸಪ್ನಾದ ಷಾ, ಇವರನ್ನೆಲ್ಲಾ ನಾವು ನಮ್ಮವರೆಂದು ಪರಿಗಣಿಸಬೇಕೋ ಹೇಗೆ? ಇವರಲ್ಲಿ ಎಷ್ಟು ಮಂದಿಗೆ ಕನ್ನಡ ಬರುತ್ತದೆ? ಕರ್ನಾಟಕಕ್ಕೆ/ ಕನ್ನಡಿಗರಿಗೆ ಇವರ ಕೊಡುಗೆ ಕಡಿಮೆಯೇ? ಸಂಕುಚಿತರಾಗುವ ಮುನ್ನ ಸ್ವಲ್ಪ ಕಣ್ತೆರೆದು ನೋಡೋಣ,

ನನ್ನ ಟಿಪ್ಪಣಿಯ ಅಂತ್ಯದಲ್ಲಿ ನಾನು "ರಾಜಕಾರಣಿಗಳಿಗೆ ಕೆಲಸ ಕೊಡಲು...." ಅನ್ನುವ ಮಾತಿನಲ್ಲಿರುವ ವ್ಯಂಗ್ಯವನ್ನ ಅನಾಮಧೇಯರು ಗಮನಿಸಿಲ್ಲ ಅನ್ನಿಸುತ್ತದೆ.

ಹೊರಗಿನವರು ಬೆಂಗಳೂರಿನ/ಕನ್ನಡದ ಸಂಸ್ಕೃತಿ ಅರಿಯಲು ನಗರದ ಪುನರ್ನಾಮಕರಣ ಮೊದಲ ಹಾಗೂ ಏಕಮೇವ ಹೆಜ್ಜೆ ಆಗುವ ಅವಶ್ಯಕತೆ ಇಲ್ಲ. ಆ ಸಂಸ್ಕೃತಿಯನ್ನು ನಾವು ರಂಗಶಂಕರದ ಮೂಲಕ, ಚರ್ಚಾಕೂಟಗಳ ಮೂಲಕ, ಉತ್ತಮ ಸಿನೇಮಾ ಮಾಡುವುದರ ಮೂಲಕ, ಉತ್ತಮ ಸಾಹಿತ್ಯ ರಚಿಸುವುದರ ಮೂಲಕ, ಉತ್ತಮರಾಗಿರುವ ಮೂಲಕ ಮಾಡಬಹುದು.

ಉದಾರವಾದ ಯಾರನ್ನು ಮೆಚ್ಚಿಸಲೂ ಅಲ್ಲ. ನನ್ನ ಪುನರ್ನಾಮಕರಣದ ವಾದಕ್ಕೆ ತುಸು ಮುನ್ನ ನಾನು ತಿರುಮಲೇಶರ ಮುಖಾಮುಖಿಯ ಒಂದು ಭಾಗ ಕೊಟ್ಟಿರುವುದೂ ಇದೇ ಕಾರಣವಾಗಿ: "ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ".. ಉದಾರವಾದ ನಮಗೆ ಸಹಜವಾಗಿ ಬಂದದ್ದು. ಅದು ಉತ್ತಮವಾದ ಗುಣ. ಅದನ್ನು ಉಳಿಸಿಕೊಳ್ಳೋಣ.

ಶ್ರೀರಾಮ್

Anonymous said...

ನಮಸ್ಕಾರ ಶ್ರೀರಾಮ್,

ನನ್ನ ಮೊದಲನೆ ಪ್ರಶ್ನೆಗೆ ನೀವು ಉತ್ತರ ಕೊಡಲೇ ಇಲ್ಲ. ಅದರ ಅರ್ಥ ಯಾವುದೇ ವಾಗ್ವಿವಾದಗಳಿಲ್ಲದೆ ಚೆನ್ನೈ ಮತ್ತು ಕೊಲ್ಕಾತ ಮರುನಾಮಕರಣ ಹೊಂದಿದವು ಎಂದು ಭಾವಿಸಬಹುದು.

ನೀವು ಹೇಳಿದಂತೆ ಕನ್ನಡಿಗರು ಉದಾರಿಗಳು ಎಂಬುದರಲ್ಲಿ ಸಂಶಯವಿಲ್ಲ. ಇತರೆ ಭಾಷೆಗಳ ಕಲಾವಿದರು, ಸಂಗೀತಗಾರರನ್ನು ನಮ್ಮವರು ಪರಂಪರಾಗತವಾಗಿ ಆದರಿಸಿಕೊಂಡು ಬಂದಿದ್ದಾರೆ. ಆದರೆ ಹೊರಗಿನವರು ನಮ್ಮನ್ನು ಉದಾರಿಗಳೆಂದು ಭಾವಿಸಿದ್ದಾರೆಯೆ? ಬಲ್ಲವರು ಹೇಳಬೇಕು.

ಇಲ್ಲಿ "ನಮ್ಮವರು" ಎಂಬ ಪದವನ್ನು ಸಂಕುಚಿತವಾಗಿ ಭಾವಿಸಬಹುದಾದ ಅಪಾಯವಿದೆ. ಹೊರಗಿನವರು ಎಂದರೆ ನನ್ನ ಅಭಿಪ್ರಾಯದಲ್ಲಿ ಯಾರು ಕರ್ನಾಟಕದ ಬಗ್ಗೆ ಕಾಳಜಿ ಹೊಂದಿಲ್ಲವೋ, ಕನ್ನಡದ ಬಗ್ಗೆ ಅಸಡ್ಡೆ ಹೊಂದಿರುವರೋ ಅಂತಹವರು. ನೀವು ಉದಹರಿಸಿದ ವ್ಯಕ್ತಿಗಳೆಲ್ಲರ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಸ್ವಪ್ನದ ಷಾ ಅವರು ನಮ್ಮವರು ಎಂಬುದರಲ್ಲಿ ಸಂಶಯವಿಲ್ಲ.

ನನ್ನ ವಿಚಾರವನ್ನು 'ಬೆಂಗಳೂರು' ವಿಷಯಕ್ಕೆ ಮಾತ್ರ ಸೀಮಿತಗೊಳಿಸುತ್ತೇನೆ. ಶ್ರೀ ಅನಂತಮೂರ್ತಿಯವರು ಹೇಳಿದ ಹಾಗೆ ಕನ್ನಡತನವನ್ನು ಪ್ರತಿಪಾದಿಸುವ ಶಕ್ತಿ ಬಹಳ ಇದೇ ಎಂದೇ ನನ್ನ ಅಭಿಪ್ರಾಯ. ರಂಗಶಂಕರ, ಚರ್ಚಾಕೂಟಗಳು, ಉತ್ತಮ ಸಿನೇಮಾ, ಸಾಹಿತ್ಯ ಇವು ಅಲ್ಪಸಂಖ್ಯಾತರಾದ ಬುದ್ದಿಕೀವಿಗಳನ್ನಷ್ಟೆ ತೃಪ್ತಿಪಡಿಸಬಲ್ಲುದು! ಇಂದು ಸಾಮಾನ್ಯ ಕನ್ನಡಿಗನೊಬ್ಬ ಬೆಂಗಳೂರಿನಲ್ಲಿ ಕಳೆದುಹೋಗಿಬಿಡುವ ಪರಿಸ್ಥಿತಿ ಇದೆ. ನನ್ನಂತಹ ಜನಸಾಮಾನ್ಯ ಕನ್ನಡಿಗರಿಗೆ `ಬೆಂಗಳೂರು' ಶಬ್ದ ಆತ್ಮವಿಶ್ವಾಸ ನೀಡುತ್ತದೆ.

ಬಾಹುಬಲಿಯು ಎಲ್ಲವನ್ನೂ ತ್ಯಾಗಮಾಡುವುದಕ್ಕೆ ಮೊದಲು ಜಗತ್ತನ್ನೇ ಗೆದ್ದಿದ್ದ ಅಲ್ಲವೇ? ಒಂದು ವೇಳೆ ಭರತನ ಕೈಯೇ ಮೇಲಾಗಿದ್ದಿದ್ದರೆ ಬಾಹುಬಲಿಯನ್ನು ಯಾರೂ ನೆನಪಿಸಿಕೊಳ್ಳುತ್ತಲೇ ಇರುತ್ತಿರಲಿಲ್ಲ. ಶೂರನಾದವನು ಕರುಣಾಶಾಲಿಯಾಗಿದ್ದರೆ ಚೆನ್ನ. ಹೇಡಿಯಾದವನಲ್ಲ.

ನಾವು ಉದಾರಿಗಳಾಗಿರಬೇಕು ನಿಜ. ಆದರೆ ವಾಸ್ತವವನ್ನು ಅಗಾಗ್ಗೆ ಜ್ಞಾಪಿಸಿಕೊಳ್ಳುತ್ತಿರಬೇಕು. ಇಂದು ಕನ್ನಡಿಗ ತನ್ನ ನೆರೆ ಹೊರೆ ಭಾಷಿಕರಿಗೆ ತನ್ನನ್ನು ಹೋಲಿಸಿಕೊಂಡಾಗ ಏಕೆ ಕೀಳರಿಮೆ ಮೂಡುತ್ತದೆ? ೭ ಜ್ಞಾನಪೀಠ ಬಂದರೂ ಇನ್ನೂ ಕೀಳರಿಮೆ ಏಕೆ? ಅದು ಜನಸಾಮ್ನ್ಯರಲ್ಲಿ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸದ ಕೊರತೆ. 'ಬೆಂಗಳೂರು' ಅದನ್ನು ಸ್ವಲ್ಪಮಟ್ಟಿಗಾದರೂ ಸಾಧಿಸುತ್ತೆ.

'ಯಾರನ್ನೂ ಕಚ್ಚಬೇಡ. ಆದರೆ ನಿನ್ನ ಆತ್ಮಗೌರವಕ್ಕೆ ಹಾನಿಯಾದರೆ 'ಬುಸ್' ಎಂದು ಹೆದರಿಸದೆ ಇರಬೇಡ' ಎಂಬ ಸನ್ಯಾಸಿ ಮತ್ತು ಹಾವು ಕಥೆ ಇಲ್ಲಿ ನನಗೆ ಜ್ಞಾಪಕ ಬರುತ್ತಿದೆ.

ಕೊನೆಯ ಮಾತು- ಕನ್ನಡ ಹೋರಾಟಗಾರರು ಪ್ರತಿವರ್ಷ ಆಂಗ್ಲ ಬೋರ್ಡುಗಳಿಗೆ ಕಪ್ಪುಬಣ್ಣ ಬಳಿಯುತ್ತಾರೆ ನಿಜ. ಆದರೆ, ಆ ಮಳಿಗೆಯವರು ಬೋರ್ಡುಗಳಲ್ಲಿ ಪುಟ್ಟದಾಗಿ ಇನ್ನೂ ಕನ್ನಡದಲ್ಲಿ ಹೆಸರು ಬರೆಸಿಲ್ಲ ಯಾಕೇ?

ತಮಿಳುನಾಡಿನಲ್ಲಿ ಇದ್ದ ಕೆಲದಿವಸಗಳಲ್ಲಿ ಎಲ್ಲಿನ ಎಲ್ಲಾ ಬೋರ್ಡುಗಳಲ್ಲಿ ತಮಿಳು ಇದ್ದೇ ಇತ್ತು.

"ಅವರು ಮಾಡಲಿಲ್ಲ. ಅದಕ್ಕೆ ನಾವೂ ಮಾಡಬಾರದು ಎಂಬುದು" ನಿಮ್ಮ ಪ್ರಕಾರ ವಿತಂಡವಾದ. "ಅವರು ಮಾಡಿದರು. ಅದಕ್ಕೆ ನಾವೂ ಮಾಡಬೇಕು" ಎಂಬುದೂ ಸಹಾ ವಿತಂಡವಾದವೇ?

-ಅನಾಮಧೇಯ
[ಇಲ್ಲಿ ವ್ಯಕ್ತಿಗಿಂತ ವಿಷಯ ದೊಡ್ಡದು ಎಂಬ ಭಾವನೆಯಿಂದ ನನ್ನ ಹೆಸರು ಅನಗತ್ಯ ಎಂದು ನನ್ನ ಅಭಿಪ್ರಾಯ. ಜೊತೆಗೆ, ಬುದ್ದಿಜೀವಿಗಳು, ಉದಾರವಾದಿಗಳು ನನ್ನನ್ನು fanatic ಎಂದು ಭಾವಿಸಿಬಿಡುವುದರ ಭಯವೂ ಇದೆ.]

Anonymous said...

ಮುಂದುವರೆದಿದೆ...

ಯಾವುದೇ ವ್ಯವಸ್ಥೆ(system) ಸ್ಥಾಯಿಯಾಗಿರಬೇಕಾದರೆ, ಆರೋಗ್ಯಕರವಾಗಿರಬೇಕಾದರೆ, ಅದು ತನ್ನ ಹೊರಗಿನ ವ್ಯವಸ್ಥೆಗಳೊಂದಿಗೆ ಸಮತೋಲನ ಕಾಯ್ದುಕೊಳ್ಳಬೇಕು. ಕ್ರಿಯೆ ಪ್ರತಿಕ್ರಿಯೆಗಳು ಸಮಾನವಾಗಿದ್ದರೆ ಮಾತ್ರ ಸಮಸ್ಥಾಯಿತ್ವ ಸಾಧ್ಯ. ಆದ್ದರಿಂದ "ಅವರು ಮಾಡಿದ್ದನ್ನು ನಾವೂ ಮಾಡಬೇಕಾಗುತ್ತದೆ" ಅಲ್ಲವೆ?

-ಅನಾಮಧೇಯ

Sriram said...

ಅನಾಮಧೇಯ
ನಿಮಗೆ ಸ್ಪಷ್ಟವಾದ ನಿಲುವಿರುವಂತಿದೆ. ಆದರೆ ಹೆಸರು ತಿಳಿಸಲು ಹಿಂಜರಿಯುತ್ತಿದ್ದೀರಿ. ವಿಷಯ ದೊಡ್ಡದು ನಿಜ. ಆದರೆ ನಾನು ನನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕಾದರೂ, ಬದಲಾಯಿಸಬೇಕಾದರೂ ಯಾವ ಮಹಾನುಭಾವನೆದುರು ನಿಂತಿದ್ದೇನೆ ಅನ್ನುವುದು ನನಗೆ ಮುಖ್ಯ. ನಾನು ಅನಾಮಿಕನಾಗಿ ಚರ್ಚಿನಲ್ಲಿ ತಪ್ಪೊಪ್ಪಿಗೆಯ ಪೆಟ್ಟಿಗೆಯಲ್ಲಿ ನಿಂತಿಲ್ಲ. ಹೆಸರು ತಿಳಿಸುವುದು ಶಿಷ್ಟತೆ. ಆದ್ದರಿಂದ ಅನಾಮಿಕವಾದ ನಿಮ್ಮ ಟಿಪ್ಪಣಿಗೆ ನಾನು ಅಂತಿಮ ಬಾರಿ ಪ್ರತಿಕ್ರಿಯಿಸುತ್ತಿದ್ದೇನೆ.

ಇತರ ನಗರಗಳು ವಾದವಿವಾದ ಇಲ್ಲದೆಯೇ ಪುನರ್ನಾಮಕರಣಗೊಂಡವೋ ಇಲ್ಲವೋ ಎಂಬ ಮಾಹಿತಿ ಇಲ್ಲಿ ಅಸಮರ್ಪಕ. ಅಲ್ಲೇನಾಯಿತೋ ಇಲ್ಲೂ ಅದೇ ಆಗಬೇಕು ಅನ್ನುವುದು ಸಮರ್ಪಕವಲ್ಲ. ಆದ್ದರಿಂದ ಅದನ್ನು ನಾನು ಉತ್ತರಿಸಿಲ್ಲ.

ಹೊರಗಿನವರು ನಮ್ಮನ್ನು ಉದಾರಿಗಳೆಂದು ಭಾವಿಸದಿದ್ದರೆ ನಮ್ಮ ನಡವಳಿಕೆಯಲ್ಲಿ ಬದಲಾವಣೆ ಬರಬೇಕೇ? ಯಾಕೆ?

ಸಪ್ನಾದ ಷಾ ಯಾವಾಗಿನಿಂದ ನಮ್ಮವರಾದರು? ಯಾಕೆ ನಿಮ್ಮ ದೃಷ್ಟಿಯಲ್ಲಿ ನಮ್ಮವರು. ಅವರು ರಾಜ್‍ಕೋಟ್‍ನಿಂದ ಬಂದಾಗ ಅವರಿಗೆ ಕನ್ನಡ ಬರುತ್ತಿತ್ತೇ? ನಮ್ಮವರಾಗಲು ಅವರ ಅರ್ಹತೆಯೇನು? ಕರ್ನಾಟಕದ ಬಗ್ಗೆ ಭಾಷೆ ಬರದೆಯೂ ಕಾಳಜಿಯಿರಲು ಸಾಧ್ಯವಿಲ್ಲವೇ? ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಇಲ್ಲದೆಯೂ ಕನ್ನಡ ಬಾರದಿರುವುದು ಸಾಧ್ಯವಿಲ್ಲವೇ. ಕನ್ನಡವೇ ಯಾಕೆ, ಯಾವುದೇ ಭಾಷೆಯ ಬಗ್ಗೆ ಅಸಡ್ಡೆ ತೋರಿಸುವುದೂ ಅನಾಗರಿಕ ವರ್ತನೆ. ಅನಾಗರಿಕ ವರ್ತನೆಯನ್ನು ಧಿಕ್ಕರಿಸಲು ಬೆಂಗಳೂರಿನ ಹೆಸರು ಬದಲಾಯಿಸುವ ಅವಶ್ಯಕತೆಯಿಲ್ಲ. [ಅಂದಹಾಗೆ, ಹೆಸರು ಬದಲಾಯಿಸುವ ಬಗ್ಗೆ ನನ್ನ ವಿರೋಧವಿದೆ ಎಂದು ಯಾರೂ ಭಾವಿಸಬಾರದು. ಬದಲಾಯಿಸಿದರೆ ನನಗೆ ದುಃಖವೂ ಆಗುವುದಿಲ್ಲ. ಆದರೆ ಅದರ ಅವಶ್ಯಕತೆ ಇಲ್ಲ ಅಂತಷ್ಟೇ ನನ್ನ ವಾದ]

ಬೆಂಗಳೂರಿನ ಹೆಸರು ಬದಲಾಯಿಸುವುದರಿಂದ ಜನಸಾಮಾನ್ಯರ ಆತ್ಮವಿಶ್ವಾಸ ಹೇಗೆ ಬೆಳೆಯುತ್ತದೆ ಅನ್ನುವುದು ನನಗೆ ಅರ್ಥವಾಗುತ್ತಿಲ್ಲ. ಬೆಂಗಳೂರಿನ ಸಮಸ್ಯೆ ಆರ್ಥಿಕ ಸಮತೋಲನದ್ದು. ಹಣವಿರುವವರು ಆತ್ಮವಿಶ್ವಾಸದಿಂದ ಯಾವುದೇ ನಗರದಲ್ಲಿ ಬದುಕುತ್ತಾರೆ. ಇಲ್ಲದವರು ಯಾವುದೇ ಭಾಷೆ ಮಾತನಾಡಿದರೂ vulnerable ಆಗಿರುತ್ತಾರೆ. ಹಣವಿಲ್ಲದವರು ಹೆಚ್ಚಾಗಿ ಕನ್ನಡದವರಾದರೆ, ಅದನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆಯದ್ದಾಗುತ್ತದೆ. ರಾಜಕಾರಣಿಗಳಿಗೆ ಈ ರೀತಿಯ ಸರಳ ವಿಷಯಗಳು ಬೇಕು. ಆದರೆ ಬುದ್ಧಿಜೀವಿಗಳಾದ ಅನಂತಮೂರ್ತಿಯಂತಹವರು ಈ ವಿಷಯದ ಪದರಗಳನ್ನು ಅರ್ಥಮಾಡಿಕೊಳ್ಳಬಲ್ಲರಲ್ಲದೇ ಆ ಬಗ್ಗೆ ವಿಚಾರವಂತರಾಗಿ ಮಾತನಾಡಲೂ ಬಲ್ಲರು. ಅವರು ರಾಜಕಾರಣಿಗಳ ಮಾತನ್ನಾಡುವುದು ಯಾತನೆಯ ಸಂಗತಿ.

ಕನ್ನಡಿಗರಿಗೆ ಕೀಳರಿಮೆ ಇದೆ ಅಂತ ನೀವನ್ನುತ್ತಿದ್ದೀರಿ. ಬಹುಶಃ ಅದು ಸಮರ್ಪಕವಾದ ಅಭಿಪ್ರಾಯವಲ್ಲವೇನೋ. ಅದು ನಮ್ಮ ನಿಮ್ಮ ಮನಸ್ಸಿನಲ್ಲಿರುವ ಮರ್ಕಟ. ನನಗೆಂದೂ ಕನ್ನಡಿಗನೆಂದು ಹೇಳಿಕೊಳ್ಳಲು ಕಷ್ಟವಾಗಿಲ್ಲ. [ನೀವಿನ್ನೂ ಬಿಹಾರದ ಜನರೊಂದಿಗೆ ಒಡನಾಡಿಲ್ಲವೇನೋ.. ಈ ದೇಶದಲ್ಲಿ ಆ ಒಂದು ರಾಜ್ಯವನ್ನು ಬಿಟ್ಟು ಯಾರಿಗೂ ತಮ್ಮ ತಾಯಿನಾಡಿನ ಬಗ್ಗೆ ಹೇಳಿಕೊಳ್ಳಲು ಹಿಂಜರಿಕೆಯಿರುವುದನ್ನು ನಾನು ಕಂಡಿಲ್ಲ]. ಕಲಾಮ್ ತಮಿಳರೆಂದು, ಮುಸ್ಲಿಮರೆಂದು ಯಾರೂ ಅವರನ್ನು ಗೌರವಿಸುವುದಿಲ್ಲ. ಅವರ ನಡತೆಗೆ ಬುದ್ಧಿಶಕ್ತಿಗೆ ಗೌರವ ಸಲ್ಲುತ್ತದೆ. ಹಾಗೆಯೇ ಕನ್ನಡಿಗರಿಗೂ. ಕನ್ನಡಿಗರನ್ನು ಪರಿಹಾಸ್ಯ ಮಾಡಿದ ಪ್ರಸಂಗಗಳೂ ನನಗೆ ತಿಳಿದಿಲ್ಲ.

ಕನ್ನಡದಲ್ಲಿ ಯಾಕೆ ಬೋರ್ಡು ಹಾಕಿಲ್ಲ ಅನ್ನುವುದನ್ನು ನಾವು ಯೋಚಿಸಬೇಕು. ಇದು ಕಪ್ಪು ತಾರು ಬಳಿಯುವುದರಿಂದ ಆಗುವ ಮಾತಲ್ಲ. you can at best take a horse to the water, but it has to be thirsty!!

ನಾವು ಭಯಪಡುತ್ತಿರುವ ಅಪಾಯವಾದರೂ ಏನು? ಇಂಗ್ಲೀಷಿನಲ್ಲಿ Bengalooru ಅಂತ ಬರೆಯುವುದರಿಂದ ಆಗುವ ಮೂಲಭೂತ ಬದಲಾವಣೆಯೇನು? ನಮ್ಮ ಊಹಾಪೋಹದ ಅಪಾದ ವಿರುದ್ಧ ಇದು ತಯತ್ತಾಗಿ ನಿಲ್ಲುತ್ತದೆಯೇ?

ಶ್ರೀರಾಮ್

Anonymous said...

ನಮಸ್ಕಾರ ಶ್ರೀರಾಮ್,

ಒಬ್ಬ ಅನಾಮಧೇಯನಿಗೆ ಉತ್ತರ ಕೊಡುವಾಗ ಮುಜುಗರವಾಗುವುದು ಸಹಜ. ಅಂತಹ ಪರಿಸ್ಥಿತಿಯಲ್ಲೂ ನೀವು ತಾಳ್ಮೆಯಿಂದ ಉತ್ತರ ಕೊಡುತ್ತಿರುವಿರಿ. ಅದಕ್ಕಾಗಿ ಧನ್ಯವಾದಗಳು. ಜೊತೆಗೆ, ವ್ಯಕ್ತಿಯ ಅಸ್ಮಿತತೆಗೆ 'ಹೆಸರು' ಎಷ್ಟು ಮುಖ್ಯ, ನಮ್ಮ ಬಗ್ಗೆ ಇತರರ ಪ್ರತಿಕ್ರಿಯೆ ನಮ್ಮ ಹೆಸರು, ಕುಲಗೋತ್ರಗಳನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಿರುತ್ತೀರಿ.

ನಾನು ಹೊರದೇಶವೊಂದರಲ್ಲಿ ವಾಸಿಸುತ್ತಿರುವ ಸಾಮಾನ್ಯ ಕನ್ನಡಿಗ (ಮಹಾನುಭಾವನಂತೂ ಖಂಡಿತಾ ಅಲ್ಲ). ಇಲ್ಲಿಯ ವ್ಯವಸ್ಥೆಗೆ, ಜನಕ್ಕೆ ಹೊಂದಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಿಂದ ತಮ್ಮ ನಿಜನಾಮಧೇಯವನ್ನು ತುಂಡರಿಸಿಯೋ, ಬದಲಾಯಿಸಿಕೊಂಡೋ ವಾಸಿಸುತ್ತಿರುವ ಅಸಂಖ್ಯಾತ ಭಾರತೀಯರಲ್ಲಿ ನಾನೂ ಒಬ್ಬ! ಪರದೇಶಗಳಲ್ಲಿ ವಲಸಿಗರು ಹೊಂದಿಕೊಂಡು ಹೋಗಬೇಕೆಂಬ ಮನೋಭಾವವುಳ್ಳ ನಾನು ಇಂತಹ ಕೆಲವು ವಿಷಯಗಳನ್ನು ಅರಗಿಸಿಕೊಂಡು ಜೀವಿಸಲು ಕಲಿತಿದ್ದೇನೆ. ನಾನು ವಾಸಿಸುತ್ತಿರುವ ಈ ಸ್ಥಳ ಒಂದು ಕಾಲದಲ್ಲಿ ಡಚ್ಚರ ವಸಾಹತು ಆಗಿದ್ದಾಗ "ನ್ಯೂ ಅಮ್ಸ್‌ಟರ್‌ಡ್ಯಾಂ" ಎಂದು ಕರೆಸಿಕೊಳ್ಳುತ್ತಿದ್ದು ನಂತರ ಇಂಗ್ಲೀಷರು ವಶಪಡಿಸಿಕೊಂಡ ಮೇಲೆ "ನ್ಯೂ ಯಾರ್ಕ್" ಆಯಿತಂತೆ! (ನೀವು ಆ ಕಾಲದಲ್ಲಿ ಇದ್ದಿದ್ದರೆ ಈ ಹೆಸರು ಬದಲಾವಣೆಯೂ ಅಗತ್ಯವಿಲ್ಲದ್ದು ಎನ್ನುತ್ತಿದ್ದಿರೋ ಏನೋ!)

ನಮ್ಮ ಭಾರತವೂ ದಾಸ್ಯಮುಕ್ತವಾದಮೇಲೆ ಚೆನ್ನೈ, ಕೊಲ್ಕಾತ, ಮುಂಬಯಿ ಸ್ಥಳಗಳು ತಮ್ಮ ಹಿಂದಿನ ಹೆಸರುಗಳಿಗೆ ಮರುನಾಮಕರಣವಾದವು. ಎಲ್ಲಾ ಭಾರತೀಯರು ಹೆಮ್ಮೆ ಪಡಬೇಕಾದ, ಪ್ರೋತ್ಸಾಹಿಸಬೇಕಾದ ಇಂತಹ ವಿಷಯದ ಸಾಲಿಗೆ 'ಬೆಂಗಳೂರು' ಸಹಾ ಸೇರುತ್ತದೆ. ಈ ಬದಲಾವಣೆಯನ್ನು ಎಲ್ಲಾ ಭಾರತೀಯರು, ವಿದೇಶೀಯರು ಗೌರವಿಸಬೇಕು. ಮುಖ್ಯವಾಗಿ ನಾವು 'ಕನ್ನಡಿಗರು' ಇದರ ಅಗತ್ಯ ಮನಗಾಣಬೇಕು. ನಾವೇ ಈ ವಿಷಯವನ್ನು ಸಂಕುಚಿತ ಮನೋಭಾವ, ರಾಜಕೀಯ ಪ್ರೇರಿತವಾದದ್ದು, ನಿರುಪಯೋಗವಾದದ್ದು ಎಂದು ಹೇಳಿಕೆ ನೀಡಿ ಕನ್ನಡ ಸೋದರರಲ್ಲಿ ಸಂಶಯಗಳನ್ನು ಮೂಡಿಸಿಬಿಟ್ಟರೆ ಹೇಗೆ? ಅವರು ಮಾಡಿದರು ಅಂತ ನಾವು ಮಾಡಬೇಕು ಎಂಬ ಮೊಂಡುವಾದವಾಗಲೀ, ವಿತಂಡವಾದವಾಗಲೀ ಅಲ್ಲ ಈ ಸಂಗತಿ. ಒಬ್ಬರು ಅನಾಗರೀಕವಾಗಿ ನಡೆದರೆಂದು ನಾವು ಅನಾಗರೀಕರಾಗಬಾರದು. ನಿಜ. ಆದರೆ ಹೆಸರು ಬದಲಾವಣೆ ಸಂದರ್ಭ ನಾಗರ್‍ಈಕ ಜಗತ್ತು ಒಪ್ಪಿಕೊಂಡು ಅನುಸರಿಸುತ್ತಿರುವ ಸಂಗತಿಯಾಗಿದೆ. ಜೊತೆಗೆ, ಬಹಳಷ್ಟು ಸಂದರ್ಭಗಳಲ್ಲಿ ಏನು ಮಾಡುವುದು ಎಂದು ತಿಳಿಯದಿದ್ದಾಗ ನಮ್ಮ ಸುತ್ತಮುತ್ತಲಿನ ಉದಾಹರಣೆಗಳನ್ನು ನೋಡಿ ಕಲಿಯುವುದು ಸಾಮಾನ್ಯ ಪರಿಜ್ಞಾನ.

"ಸಪ್ನಾದ ಷಾ ಯಾವಾಗಿನಿಂದ ನಮ್ಮವರಾದರು? ಯಾಕೆ ನಿಮ್ಮ ದೃಷ್ಟಿಯಲ್ಲಿ ನಮ್ಮವರು. ಅವರು ರಾಜ್‍ಕೋಟ್‍ನಿಂದ ಬಂದಾಗ ಅವರಿಗೆ ಕನ್ನಡ ಬರುತ್ತಿತ್ತೇ? ನಮ್ಮವರಾಗಲು ಅವರ ಅರ್ಹತೆಯೇನು? ಕರ್ನಾಟಕದ ಬಗ್ಗೆ ಭಾಷೆ ಬರದೆಯೂ ಕಾಳಜಿಯಿರಲು ಸಾಧ್ಯವಿಲ್ಲವೇ? ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಇಲ್ಲದೆಯೂ ಕನ್ನಡ ಬಾರದಿರುವುದು ಸಾಧ್ಯವಿಲ್ಲವೇ." ಎಂಬ ಬಿಸಿಬಿಸಿ ಪ್ರಶ್ನೆಗಳನ್ನು ಮತ್ತೆ ಕೇಳಿದ್ದೀರಿ. ಈ ಪ್ರಶ್ನೆಗಳಿಗೆ ನಿಮ್ಮ ಉತ್ತರವೇ ನನ್ನದೂ ಆಗಿವೆ.

ಮತ್ತೊಮ್ಮೆ ನನ್ನ ಅಭಿಪ್ರಾಯವನ್ನು ಹೇಳುತ್ತಿದ್ದೇನೆ. "ಯಾರು ಕರ್ನಾಟಕದ ಬಗ್ಗೆ ಕಾಳಜಿ ಹೊಂದಿಲ್ಲವೋ, ಕನ್ನಡದ ಜನತೆಯ ಬಗ್ಗೆ ಅಸಡ್ಡೆ ಹೊಂದಿರುವರೋ ಅಂತಹವರೇ ಹೊರಗಿನವರು. ಹೊರದೇಶದವರಾದರೂ ಕನ್ನಡನಾಡಿನ ಜನರ ಜೊತೆ ಹೊಂದಿಕೊಂಡು ಬಾಳುವ ಮನೋಭಾವವುಳ್ಳ, ಸರಿಯಾಗಿ ಕನ್ನಡ ಬರದಿದ್ದರೂ, ''ನಮ್ದೂಕಿ ಹೆಣ ವಾಪಸ್ ಮಾಡಿ'' ಎಂದು ತಪ್ಪುತಪ್ಪಾಗಿ ಮಾತನಾಡಿದರೂ, ಇಲ್ಲಿನ ಜನರ ಜೊತೆ ಕನ್ನಡ ಮಾತನಾಡುವ, ಕಲಿಯುವ ಹಂಬಲವುಳ್ಳ ಜನರೇ ನಮ್ಮವರು." ಗಂಡನ ಜತೆಯಲ್ಲಿದ್ದು ಪರಪುರುಷನ ಚಿಂತೆ ಮಾಡುವವಳಿಗಿಂತ, ಪರಪುರುಷನ ಜತೆಗಿದ್ದು ಗಂಡನ ಚಿಂತೆ ಮಾಡುವವಳು ಮೇಲು ಎಂಬ ಮಾತಿದೆ. ಕನ್ನಡ ಕಾಳಜಿ ಇರುವವರು ಕರ್ನಾಟಕದಲ್ಲಿ ಮಾತ್ರ ಇಲ್ಲ. ಅಸಂಖ್ಯಾತ ಜನ ಹೊರಗೂ ಇದ್ದಾರೆ.

ಸ್ವಪ್ನಾದ ನಿತಿನ್ ಷಾ ಕರ್ನಾಟಕಕ್ಕೆ ಬರುವ ಮೊದಲು ನಮ್ಮವರಾಗಿರಲಿಲ್ಲ. ಸಹಜವಾಗಿ ಅದರ ಅಗತ್ಯ ಅವರಿಗೂ ಇರಲಿಲ್ಲ. ನಮಗೂ ಇರಲಿಲ್ಲ. ಯಾವತ್ತು ಕನ್ನಡನಾಡಿನಲ್ಲಿ ವಿದ್ಯಾರ್ಜನೆಗೆ ಅಗತ್ಯವಾದ ತಾಂತ್ರಿಕ, ವೈದ್ಯಕೀಯ ಪುಸ್ತಕ ವ್ಯಾಪಾರ ಶುರು ಮಾಡಿದರೋ ಅಂದೇ ಅವರು ನಮ್ಮ ಅಗತ್ಯಗಳನ್ನು ಪೂರೈಸಿದ ನಮ್ಮವರಾದರು. ಅಷ್ಟಕ್ಕೇ ನಿಲ್ಲಿಸದೆ ಕನ್ನಡ ಸಾಹಿತ್ಯವನ್ನೂ ಪ್ರಕಟಿಸಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರದವರಾದರು. ಹಾಗೆಯೇ ತೆಲುಗು ಮಾತನಾಡುವ ಗೀತಾ ಏಜೆನ್ಸೀಸ್ ಪುಸ್ತಕ ಮಳಿಗೆಯ ರಾಮಚಂದ್ರ ಶೆಟ್ಟರೂ ನಮ್ಮವರು. ವಲಸೆಗಾರರು ಸ್ಥಳೀಯರಿಗೆ ಹೊಂದಿಕೊಳ್ಳಬೇಕಾದ್ದು ಸ್ಥಳೀಯರ ಅಗತ್ಯಕ್ಕೆ ಸ್ಪಂದಿಸಬೇಕಾದ್ದು ನ್ಯಾಯವಾದದ್ದು. ಇಲ್ಲದಿದ್ದರೆ ಅವರು ವಸಾಹತುಶಾಹಿಗಳೆನಿಸಿಕೊಳ್ಳುತ್ತಾರೆ. ಈ ವಸಾಹತುಶಾಹಿ ಮನೋಭಾವದವರೇ ನಮಗೆ ಪರಕೀಯರು. ಇದರ ಜೊತೆಗೆ "ಕುಲಕ್ಕೆ ಮೃತ್ಯು ಕೊಡಲಿ ಕಾವು" ಎಂಬಂತೆ ಕನ್ನಡಿಗರೇ ಕನ್ನಡದ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿದ ಉದಾಹರಣೆಗಳನ್ನು ನೋಡಿದ್ದೇವೆ (ತುಂಬಾ ಹಿಂದೆ ಕನ್ನಡ ನಟೀಮಣಿಯೊಬ್ಬರು ತಾನು ಕನ್ನಡಿಗಳೇ ಅಲ್ಲ. ತಮಿಳಿನವರನ್ನು ವಿವಾಹವಾಗುತ್ತೇನೆಂದು ಹೇಳಿಕೊಂಡ ನಿಜ ಘಟನೆ.) ಅಂತಹವರು ಹುಟ್ಟಿನಿಂದ ಕನ್ನಡಿಗರಿರಬಹುದು ಆದರೆ ನಡವಳಿಕೆಯಿಂದಲ್ಲ. ಅಂತಹ ಮನೋಭಾವದವರು ಎಲ್ಲೂ ಸಲ್ಲುವುದಿಲ್ಲ.

ನಮ್ಮ ಕನ್ನಡಿಗರದು "ಅಚ್ಚ ಕನ್ನಡಿಗ" ಎಂಬ ನಾಜೀವಾದವಲ್ಲ. ನಮ್ಮ ನಾಡು, ಭಾಷೆಗೆ ಸೇವೆ ಸಲ್ಲಿಸಿದ ಹುಟ್ಟಿನಿಂದ ಕನ್ನಡಿಗರಲ್ಲದ ಅನೇಕರಿದ್ದಾರೆ. ಕನ್ನಡದಲ್ಲಿ ನಟಿಸಿದ ತಮಿಳು ನಟ ಕಮಲಹಾಸನ್ ನನ್ನು ನಾವು ಆದರಿಸಿದ್ದೇವೆ. ಹಾಗೆಯೇ, ಮರಾಠಿ-ಕನ್ನಡಿಗ ರಜನೀಕಾಂತ್ ತಮಿಳಿಗೆ ಹೋದಾಗ ಅವರೂ ಸ್ವಾಗತಿಸಿದ್ದಾರೆ. ನಾವೂ ಸಹ ರಜನಿಯ ಕೀರ್ತಿಯನ್ನು ನೋಡಿ ಸಂತೋಷಪಟ್ಟಿದ್ದೇವೆ. ಆದರೆ ಎಲ್ಲರೂ, ಕಮಲಹಾಸನ್, ರಜನೀಕಾಂತ್, ಅಬ್ದುಲ್ ಕಲಾಂ ಆಜಾದರಲ್ಲ ಎಂಬ ಕಟು ಸತ್ಯವನ್ನು ನಾವು ಅರಗಿಸಿಕೊಳ್ಳಬೇಕು. ನಿಮ್ಮಂತೆ ನಾನೂ ಸಹಾ ಹೆಮ್ಮೆಯ ಕನ್ನಡಿಗನೇ. ಈ ಹಿಂದೆ ಬೆಂಗಳೂರಲ್ಲಿ ಕೆಲಸಮಾಡುತ್ತಿದ್ದಾಗ ಕಂಪನಿಯ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದೆ. ಎಲ್ಲಾ ಸಮಯದಲ್ಲೂ ಬಸ್ಸಿನಲ್ಲಿ ಹಾಕುತ್ತಿದ್ದ ಹಿಂದೀ ಕೆಲವು ಸಲಾ ತಮಿಳು ಹಾಡುಗಳನ್ನು ನಾನೂ ಸಹೋದ್ಯೋಗಿಗಳ ಜೊತೆಗೆ ಕೇಳುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ನನ್ನ ಕನ್ನಡ ಮಿತ್ರರು ಹಾಕಿಸುತ್ತಿದ್ದ ಕನ್ನಡ ಹಾಡುಗಳನ್ನು ಕೇಳುವಾಗ ಇತರ ಸಹೋದ್ಯೋಗಿಗಳು ಪರಿಹಾಸ್ಯ ಮಾಡುತ್ತಾ ಓಯ್.... ಎಂದು ಕೂಗುತ್ತಿದ್ದರು! ಇಂತಹ ಪರಿಸ್ಥಿಯಲ್ಲಿ ಕಿರಿಕಿರಿ, ಕೀಳರಿಮೆ ಅನುಭವಿಸಿದ್ದೇನೆ. ಕನ್ನಡಿಗರು ಪರಿಹಾಸ್ಯಕ್ಕೊಳಗಾದ ಪ್ರಸಂಗಗಳು ತಿಳಿದಿಲ್ಲ ಎಂದು ಹೇಳಿದ್ದೀರಾ. ಇತ್ತೀಚೆಗಿನ ಕೆಲವು ಲೇಖನಗಳನ್ನು ಪತ್ರಿಕೆಗಳಲ್ಲಿ ನೀವು ಓದಿಲ್ಲ ಅಂತ ಕಾಣುತ್ತೆ. ಎಂ.ಜಿ.ರೋಡ್ ಸುತ್ತಮುತ್ತಲಿನ ಕೆಲವು ಅಂಗಡಿಗಳಲ್ಲಿ ಕನ್ನಡ ಮಾತನಾಡುವ ಸಾಹಸ ನೀವು ಮಾಡಿಲ್ಲ ಅನ್ನಿಸುತ್ತೆ. ಸಾಮಾನ್ಯವಾಗಿ ಇಂತಹ ಚರ್ಚೆಗಳು ಮೂಲ ಉದ್ದೇಶದ ವ್ಯಾಪ್ತಿಯನ್ನು ಮರೆತು ವಿಷಯಾಂತರವಾಗುವುದು ಸಹಜ. ಕ್ಷಮೆಯಿರಲಿ. ನನ್ನ ವಾದವನ್ನು 'ಬೆಂಗಳೂರು' ಪದಕ್ಕೆ ಮಾತ್ರ ಸೀಮಿತಗೊಳಿಸಲು ಪ್ರಯತ್ನಿಸುತ್ತೇನೆ.

ಹೆಸರು ಬದಲಾಯಿಸುವುದರಿಂದ ಸಾಮಾನ್ಯ ಕನ್ನಡಿಗನಿಗೆ ಹೇಗೆ ಆತ್ಮವಿಶ್ವಾಸ ಬೆಳೆಯುತ್ತೆ ಅಂತ ಕೇಳಿದ್ದೀರಿ. ನಾವು ಪರಸ್ಥಳಗಳಲ್ಲಿ ಆಯಾ ದೇಶಭಾಷೆಗಳಲ್ಲಿ ರೂಢಿಯಲ್ಲಿರುವ ಪದಗಳನ್ನು ಬಳಸುತ್ತೇವೆ. ಅವರ ಉಚ್ಚಾರಣೆ ಅನುಕರಿಸುತ್ತೇವೆ. ಏಕೆ? (ಇಲ್ಲಿ ನಾನು 'ಎನ್ವಿರಾನ್‌ಮೆಂಟ್' ಅನ್ನುವುದಿಲ್ಲ. 'ಎನ್ವೈರನ್‌ಮೆಂಟ್' ಎನ್ನುತ್ತೇನೆ.) ಅದರ ಉದ್ದೇಶ ಇಲ್ಲಿನ ಸ್ಥಳೀಯರೊಂದಿಗೆ ಹೊಂದಿಕೊಳ್ಳಬೇಕೆನ್ನುವ, ಅದರಿಂದ ಅವರಿಗೆ ನನ್ನಲ್ಲಿ ವಿಶ್ವಾಸ ಬೆಳೆಯಲಿ ಎಂಬ ಆಸೆಯಿಂದ. ಒಂದು ಸಲಾ ಯೋಚಿಸಿ. ವಿದೇಶೀಯನೊಬ್ಬ 'ಬೆಂಗಳೂರು' ಎಂಬ ಪದವನ್ನು ಕನ್ನಡಿಗರ ಮುಂದೆ ಉಚ್ಚಾರಿಸಿದಾಗ ನಮ್ಮ ಮುಗ್ಧ ಕನ್ನಡ ಮನಸ್ಸು ರೋಮಾಂಚನಗೊಳ್ಳುತ್ತದೆ. "ಐಯ್... ನೋಡ್ರಪ್ಪಾ ಇವ್ರೂ ನಮ್ಮ ಹಾಗೆ ಮಾತಾಡ್ತಾರೆ..." ಅಂತ ಸಂತೋಷವಾಗುತ್ತದೆ. ಅವರಲ್ಲಿ ನಂಬಿಕೆ ಮೂಡುತ್ತದೆ. ಪರಸ್ಪರ ನಂಬಿಕೆ ಮೂಡಿದಾಗ ಆತ್ಮವಿಶ್ವಾಸ ತಾನಾಗೇ ಹೆಚ್ಚುತ್ತದೆ. 'ಬೆಂಗಳೂರು' ಆದ ತಕ್ಷಣ ಕನ್ನಡಿಗರ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತೆ ಎಂದು ನಾನು ಭಾವಿಸಿಲ್ಲ. ಆದರೆ ಇದನ್ನು ನೀರಿನಲ್ಲಿ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ನೀಡುವ ನಿರರ್ಥಕ ಆಶಾವಾದವೆಂದು ಭಾವಿಸದೆ, ಮಣ್ಣಿನಲ್ಲಿ ಮೊಳಕೆಯೊಡೆದ ಪುಟ್ಟ ಆಲದಮರದ ಸಸಿಯೆಂದೇಕೆ ಭಾವಿಸಬಾರದು? ಒಂದು ಉಪ್ಪಿನ ವ್ಯಾಜ್ಯ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಇನ್ನೊಂದು ಚಹಾ ವ್ಯಾಜ್ಯ ಬೃಹತ್ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಿತು.

ಬ್ಯಾಂಗಲೋರ್, ಬೆಂಗಳೂರು, ಬೆಂದಕಾಳೂರು ಏನೇ ಹೆಸರಿದ್ದರೂ ನಿಮ್ಮ ವಿರೋಧವಿಲ್ಲ ಎಂದು ತಾಟಸ್ಯಭಾವ ನೀವು ತಳಿದಿದ್ದೀರಿ. ಅದ್ದರಿಂದ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಕಾಣುತ್ತಿಲ್ಲ.

-ಅನಾಮಧೇಯ

Obba Kannadiga said...

ಕನ್ನಡಿಗರು ಹೆಚ್ಚು ಭಾಷಾಪ್ರೇಮ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗೆ ಕನ್ನಡ ಚಿತ್ರರಂಗದವರಿಗೆ ಸ್ಪರ್ದಿಗಳು ಬೇಕಾಗಿದ್ದಾರೆ, ಇಲ್ಲಿ ನೋಡಿ.

Anonymous said...

ನಮಸ್ಕಾರ ಮಹಾಶಯರೇ, ಇದನ್ನು ಈ ರೀತಿ ಯೋಚಿಸಿ, ನಿಮ್ಮ ಮನೆಗೆ ಬಂದ ಅತಿಥಿಯೊಬ್ಬ ನಿಮ್ಮ ಹೆಸರನ್ನು ರಾಮ ಎನ್ನುವ ಬದಲು ROM ಎಂದು ಕರೆದರೆ ನಿಮಗೆ ಹೇಗಾಗುತ್ತೆ? ನಿಮ್ಮ ಹೆಸರನ್ನು ಹಾಗೆ ಬದಲಾಯಿಸಿಕೊಳ್ಳುವಿರಾ? ಹೌದು ಅನ್ನುವದಾದರೆ ಇಂದಿನಿಂದ ನಿಮ್ಮನ್ನು ನೀವು ನಿಮ್ಮ ಪ್ರೀತಿಯ ಇಂಗ್ಲೀಷನಲ್ಲಿ ROM ಅಂತ ಬದಲಾಯಿಸಿಕೊಳ್ಳಿ. ಬ್ರಿಟೀಷರು "ಬೆಂಗಳೂರು" ಅಂತ ಉಚ್ಛರಿಸಲು ಬರದೇ ಹಾಗೆ ಕರೆದರೂ ಅಂತ ಅದನ್ನೇ ಉಳಿಸಿಕೊಂಡು ಹೋಗೋಣ ಅನ್ನೋದು ಮೂರ್ಖತನ. ಹಾಗೂ ಹೆಸರು ಬದಲಾವಣೆಯಿಂದ ಹೊರಗಿನವರನ್ನು ಸ್ವಾಗತಿಸಿದಂತಾಗದೆಂಬುದು ಇನ್ನೂ ಮೂರ್ಖತನ.

Sriram said...

ನನ್ನ ಈ ಲೇಖನಕ್ಕೆ ಅತ್ಯಂತ ಹೆಚ್ಚು ಪ್ರತಿಕ್ರಿಯೆಗಳು ಬಂದಿರುವುದೂ, ಎಲ್ಲವೂ ಹೆಚ್ಚಿನಂಶ ನನ್ನ ಬ್ಯಾಂಗಲೂರ್ -ಬೆಂಗಳೂರು ನಿಲುವನ್ನು ವಿರೋಧಿಸಿ ಬಂದಿರುವುದೂ ನಿಜ. ಕೆಲವು ಅನಾಮಧೇಯ ಪ್ರತಿಕ್ರಿಯಗಳೂ, ಕೆಲವು ಕುಹಕದಿಂದ ಕೂಡಿದ ಪ್ರತಿಕ್ರಿಯೆಗಳೂ ಬಂದಿವೆ. ಆರೋಗ್ಯಪೂರ್ಣ ಚರ್ಚೆಯಾಗಬೇಕೆಂಬ ದೃಷ್ಟಿಯಿಂದ ಎಲ್ಲಕ್ಕೂ ಪ್ರತಿಕ್ರಿಯಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಈ ಲೇಖನವೂ, ಮೇಧಾರ ಬಗ್ಗೆ ಬರೆದ ಲೇಖನವೂ ನನಗೆ ಕಲಿಸಿದ್ದು ಒಂದು ವಿಚಾರ. ವಸ್ತುವಿನ ಆಯ್ಕೆಯಲ್ಲಿ ನಾನು ಆದಷ್ಟು ವಿವಾದಾಸ್ಪದವಾದ ವಿಷಯಗಳನ್ನು [ಅದು ಮುಖ್ಯ ವಿಷಯವಲ್ಲದಾಗ] ಉಲ್ಲೇಖ ಮಾಡದಿರುವುದೇ ಒಳ್ಳೆಯದು. ಇಲ್ಲವಾದರೆ ಮೂಲ ಚರ್ಚೆ ಬಿಟ್ಟು ನಾವು ಬೆಂಗಳೂರಿನ ಹೆಸರಿನ ಹಿಂದೆ ತೂ ತೂ ಮೈ ಮೈ ಮಾಡುತ್ತಾ ನಿಲ್ಲುತ್ತೇವೆ.

ನನ್ನ ಮೇಲೆ ಅನಾಮಧೇಯವಾಗಿ ವೈಯಕ್ತಿಕ ಕುಹಕದಿಂದ ಬರೆದ ಮಹಾನುಭಾವರಿಗೆ ನನ್ನ ಮನವಿ ಇಷ್ಟೇ. ದಯವಿಟ್ಟು ಲೇಖನವನ್ನು ಓದಿ. ಚರ್ಚಿಸಿರುವ ಎಲ್ಲ ವಿಷಯಗಳನ್ನೂ ಗಮನಿಸಿ. ಆಗ ನಿಮಗೆ ತಿಳಿಯುತ್ತದೆ ಕನ್ನಡಿಗರ ಬಾಯಲ್ಲಿ ಬೆಂಗಳೂರು ಬ್ಯಾಂಗಲೂರ್ ಆಗಿಯೇ ಇರಲಿಲ್ಲ. ಸಮಸ್ತ ಕನ್ನಡಿಗರೂ ಅದನ್ನು ಬೆಂಗಳೂರೆಂದೇ ಕರೆಯುತ್ತಿದ್ದರು. ಆದರೂ ಒಟ್ಟಾರೆ ಲೇಖನದ ಆಶಯದಲ್ಲಿ ಇದು ನಾನು ಮಾಡಿದ ಒಂದು ಸಣ್ಣ ಟಿಪ್ಪಣಿಯಷ್ಟೇ.

ಈ ಲೇಖನಗುಚ್ಚಕ್ಕೆ ಶಿವು ಅವರು ಒಂದು ವಿಸ್ತಾರವಾದ ಪ್ರತಿಕ್ರಿಯೆಯನ್ನು ನೀಡಿದ್ದರು. ಅದು ದೇಶಕಾಲದ ಜುಲೈ ೨೦೦೬ ರ ಸಂಚಿಕೆಯಲ್ಲಿ ಇದೆ. ಜೊತೆಗೆ ಅವರ ಬ್ಲಾಗಿನಲ್ಲೂ ಕಾಣಬಹುದು[jeevishivu.blogspot.com/2006/07/blog-post_14.html]. ಅದಕ್ಕೆ ನಾನು ಒಂದು ವಿಸ್ತಾರವಾದ ಪ್ರತಿಕ್ರಿಯೆ ನೀಡಿದ್ದು ಈ ಕೆಳಗೆ ಕೊಟ್ಟಿದ್ದೇನೆ.

ನನ್ನ ಪ್ರತಿಕ್ರಿಯೆ:
-----------------------------------------------

ನನ್ನ ಮತ್ತು ರಾಜಶೇಖರ್ ಲೇಖನಕ್ಕೆ ಶಿವು ನೀಡಿದ ಪ್ರತಿಕ್ರಿಯೆ ಆಸಕ್ತಿಕರವಾಗಿದೆ, ಮಾತ್ರವೇ ಅಲ್ಲ ಈ ಚರ್ಚೆಯನ್ನು ಮುಂದುವರೆಸಲು ಪೂರಕವೂ ಆಗಿದೆ. ಆದರೆ ಕನ್ನಡ ರಾಷ್ಟ್ರೀಯತೆಯ ಮೂಲಸೆಲೆಗಳು ರಾಜಕಾರಣದಿಂದ ಮಾತ್ರ ಬರುತ್ತವೆ ಎಂಬುದನ್ನು ಒಪ್ಪುವುದು ಕಷ್ಟ. ಇದಕ್ಕೆ ಕಾರಣ ರಾಷ್ಟ್ರೀಯತೆಯ ಈ ಧಾರೆ ಬಹಳಷ್ಟು ಮಟ್ಟಿಗೆ ಬೆಂಗಳೂರಿಗೆ ಸೀಮಿತವಾದದ್ದು. ಆದ್ದರಿಂದಲೇ ಶಿವು ಹೇಳಿದಂತೆ ಅದು ಮುಖ್ಯಧಾರೆಯಾಗದೆಯೇ ಚಿಕ್ಕೆ ಧಾರೆಯಾಗಿ ಉಳಿದಿರುವುದು. ಮಹಾರಷ್ಟ್ರದ ಶಿವ ಸೇನೆಯ ಮೊದಲ ದಿನಗಳಲ್ಲಿ ಅದು ಹೇಗೆ ಮಹಾರಾಷ್ಟ್ರವಾದದ ಪಕ್ಷವಾಗಿ ಮುಂಬೈಗೆ ಸೀಮಿತವಾಗಿತ್ತೋ ಹಾಗೆ ನಮ್ಮ ಕನ್ನಡ 'ರಾಷ್ಟ್ರವಾದೀ' ಚಳವಳಿ ಬೆಂಗಳೂರಿಗೆ ಹೆಚ್ಚಿನಂಶ ಸೀಮಿತವಾಗಿದೆ. ಶಿವಸೇನೆಯೂ ಮಹಾರಷ್ಟ್ರದಲ್ಲಿ ರಾಜಕೀಯವಾಗಿ ಹೆಚ್ಚಿನ ಸ್ಥಾನ ಪಡೆಯಲು ಮಹಾರಷ್ಟ್ರವಾದಿಯಿಂದ ಹಿಂದೂವಾದಿ ಪಕ್ಷವಾಗಬೇಕಾಯಿತೆಂಬುದನ್ನು ಗಮನಿಸೋಣ.ಆದರೆ ಬೃಹತ್ ಕರ್ನಾಟಕದ ದೃಷ್ಟಿಯಿಂದ ಈ ಮಾತು ಆತಂಕಕಾರೀ ಮಟ್ಟವನ್ನು ಮುಟ್ಟಿಲ್ಲವೇನೋ. ಆದರೆ ಅದು ಆ ಮಟ್ಟ ಮುಟ್ಟುವ ಮೊದಲೇ ಆ ಬಗ್ಗೆ ಚರ್ಚೆಯಾಗುವುದು ಒಳ್ಳೆಯದಲ್ಲವೇ?

ಶಿವು ಕನ್ನಡ ರಾಷ್ಟ್ರೀಯತೆಯ ಉದ್ದೀಪನಕ್ಕೆ ವಲಸೆ ಮತ್ತು ವಿದ್ಯೆಯ [ಮಧ್ಯಮದ] ಎರಡು ಧಾರೆಗಳನ್ನು ಕಾರಣವಾಗಿಸಿ ಚರ್ಚೆಯನ್ನು ಮುಂದುವರೆಸುತ್ತಾರೆ. ಇವೆರಡೂ ಭಿನ್ನನೆಲೆಯ ವಿಷಯಗಳು. ಮೊದಲಿಗೆ ಭಾಷೆಯನ್ನು ಹಿಡಿದ ಧಾರೆಯ ಬಗ್ಗೆ ಸ್ವಲ್ಪ ಗಮನ ಹರಿಸೋಣ. ನನ್ನ ಲೇಖನದಲ್ಲಿ ಭಾಷೆ ಸಂವಹನದ ಮಾಧ್ಯಮ ಮಾತ್ರವಷ್ಟೇ ಆಗಬೇಕು ಎಂದು ನಾನು ಸರಳವಾಗಿ ಅದನ್ನು ತಳ್ಳಿಹಾಕಿದ್ದೆ. ಆದರೆ ಅದು ಅಷ್ಟು ಸರಳವಾದ ವಿಚಾರವಲ್ಲವೆಂದು ಒಪ್ಪುತ್ತೇನೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗಿರುವ ಅವಕಾಶಗಳಿಗೂ, ಇಂಗ್ಲೀಷ್ ಭಾಷೆಯಲ್ಲಿ ಕಲಿತವರಿಗಿರುವ ಅವಕಾಶಗಳಿಗೂ ಅಜಗಜಾಂತರದ ವ್ಯತ್ಯಾಸವಿದೆ. ಉಚ್ಚ ಸ್ಥರದಲ್ಲಿ ವಿದ್ಯೆ ಸಾಧಿಸಲು [ನಾನು ಕೆಲಸ ಮಾಡುವ ಸಂಸ್ಥೆಯನ್ನೊಳಗೊಂಡು] ಇಂಗ್ಲೀಷ್ ಭಾಷೆ ಅತ್ಯವಶ್ಯವಾಗಿದೆ. ಇದಕ್ಕೆ ಕಾರಣಗಳು ಎರಡು: ನಮಗೆ ಕನ್ನಡಮಾಧ್ಯಮದಲ್ಲಿ ವಿದ್ಯೆ ನೀಡಲು ಪರಿಕರಗಳಿಲ್ಲ. ಕನ್ನಡಮಾಧ್ಯಮದಲ್ಲಿ [ಅಥವಾ ಹಿಂದಿಯನ್ನೊಳಗೊಂಡು ಇತರ ಭಾರತೀಯ ಭಾಷೆಗಳಲ್ಲಿ] ವಿದ್ಯೆ ನೀಡಿದರೂ ಜಾಗತೀಕರಣದ ಮಾರುಕಟ್ಟೆಯಲ್ಲಿ ಅವಕಾಶಗಳು ಸೀಮಿತವಾಗಿರುತ್ತವೆ. ಭಾರತ ಚೀನಾದ ಚರ್ಚೆ ನಡೆಯುವಾಗೆಲ್ಲಾ ಭಾರತ ಸಾಫ್ಟ್ವೇರ್ ಕ್ಷೇತ್ರದಲ್ಲಿ ಮುಂದಿರುವುದಕ್ಕೆ ನಮ್ಮ ದೇಶದಲ್ಲಿ ಇಂಗ್ಲೀಷಿನ ಬಳಕೆ ಹೆಚ್ಚಿರುವುದು, ಚೀನಾ ದೇಶದಲ್ಲಿ ಇಂಗ್ಲೀಷ್ ಕಲಿಕೆಗೆ ಈಚೀಚೆಗೆ ಒತ್ತು ನೀಡುತ್ತಿರುವ ಸತ್ಯವನ್ನು ನಾವು ಗಮನಿಸಬೇಕಾಗಿದೆ. ಶಿವು ಹೇಳಿದಂತೆ ಇದು ಕಲಿಕೆ ಮಾಧ್ಯಮಕ್ಕೆ ಸಂಬಂಧಿಸಿದ್ದು ಹಾಗೂ ಇದರಲ್ಲಿ ಭಾಷೆ ಬರುವ/ಬರದ [haves and have-nots] ಎರಡು ವರ್ಗಗಳು ತಯಾರಾಗುತ್ತಿವೆ. ಆಸಕ್ತಿಯ ಮಾತೆಂದರೆ, ಇಂಗ್ಲಷ್ ಕಲಿಯುವುದರಿಂದ ಅವಕಾಶಗಳು ಹೆಚ್ಚಾಗುತ್ತವೆ. ಆದರೆ ಕನ್ನಡ ಕಲಿಯದೇ ಇರುವುದರಿಂದ [ಕನ್ನಡಿಗರನ್ನೊಳಗೊಂಡು] ಅವಕಾಶಗಳ ನಷ್ಟವಾಗುವುದಿಲ್ಲ. ಆರ್ಥಿಕವಾಗಿ ಇದು ನಮ್ಮನ್ನು ಕಾಡುತ್ತದದ್ದರಿಂದ ಭಾಷೆ ಬರುವ ಬಾರದ ಎರಡುವರ್ಗಗಳು ನಮ್ಮಲ್ಲಿ ಏರ್ಪಾಟಾಗುತ್ತದೆ. ವಿದ್ಯೆಯಲ್ಲಿ ಆರಕ್ಷಣೆಯ ಚರ್ಚೆಯ ಸಂದರ್ಭದಲ್ಲಿ ಕಾಂಚ ಅಯಿಲಿಯ್ಯ ದಲಿತರಿಗೆ ಇಂಗ್ಲೀಷ್ ವಿದ್ಯೆಯ ಅವಕಾಶಗಳು ಪ್ರಾಪ್ತವಾದರೆ ಆರಕ್ಷಣೆಯ ಬೇಡಿಕೆಯನ್ನು ತಾವು ಸಮರ್ಥಿಸುವುದಿಲ್ಲ ಎಂಬ ನಿಲುವು ತೆಗೆದುಕೊಂಡಿದ್ದರು. ಹೀಗಾಗಿ ಯಾವ ಭಾಷೆ ಕಲಿಯುವುದರಿಂದ ಅವಕಾಶಗಳು ಹೆಚ್ಚುತ್ತವೆ ಅನ್ನುವುದು ಮುಖ್ಯವಾಗಿ ಅತಿರಾಷ್ಟ್ರೀಯತೆಯ ರೂಪ ತಾಳುತ್ತದೆ. ಈ ಸಮಸ್ಯೆಯನ್ನು "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಪಾಠವಾಗಬೇಕು" ಎಂದು ವಾದಿಸುವ ಗೋಕಾಕ್ ಚಳವಳಿಯ ಸಮರ್ಥಕರು ಗುರುತಿಸಬೇಕಾಗಿದೆ. ಇತರ ರಾಷ್ಟ್ರಗಳಿಗಿಂತ [ಜಪಾನ್, ಚೀನಾ, ಪೋರ್ತುಗಲ್, ನಾರ್ವೇ....] ಈ ಸಮಸ್ಯೆ ಭಾರತದಲ್ಲಿ ಜಟಿಲವಾಗಲು ಕಾರಣ ಕರ್ನಾಟಕ ಭಾರತದ ಸಂವಿಧಾನದ ಒಂದು ಭಾಗವಾಗಿದ್ದು ಏನಿಲ್ಲವೆಂದರೂ ಕನ್ನಡಬಾರದ ಕೇಂದ್ರ ಸರಕಾರ, ಅದರ ಕಾಯಿದೆ ಕಾನೂನು, ವ್ಯವಸ್ಥೆ, ಮತ್ತು ವಿಕಾಸದ ಯೋಜನೆಗಳಡಿಯಲ್ಲಿ ಕೆಲಸ ಮಾಡಬೇಕಾದ್ದರಿಂದ ಒಂದೇ ಭಾಷೆಯ ಸೂತ್ರ ಹಿಡಿದು ನಿಲ್ಲುವುದು ಅಸಾಧ್ಯವಾಗುವ ಕಾರಣವಾಗಿ. ಆದ್ದರಿಂದ ಇಂದು ಮಹಾನಗರಕ್ಕೆ ಸೀಮಿತವಾಗಿರುವ ರಾಷ್ಟ್ರೀಯತೆಯ ಮಾತು ಇಡೀ ರಾಜ್ಯಕ್ಕೆ ಹಬ್ಬುವ ಸಾಧ್ಯತೆಯಿದೆ.

ವಲಸೆಯಿಂದ ಉಂಟಾಗುವ ಸಮಸ್ಯೆಯೂ ಒಂದು ಥರದಲ್ಲಿ ಆರ್ಥಿಕ ದೃಶ್ಟಿಯಿಂದಲೇ ನೋಡಬೇಕು. ವಲಸೆಯಾಗಿ ಬರುವವರು ಯಾರು? ಹೆಚ್ಚಿನಂಶ ವಲಸೆ ಮಾಡುವ ತಾಕತ್ತಿರುವವರು, ಅರ್ಥಾತ್ ಇಂಗ್ಲೀಷ್ ಬಲ್ಲವರು. ಅವರುಗಳನ್ನು "have-nots" ಗಮನಿಸಿದಾಗ ಮೊದಲಿಗೆ ಆರ್ಥಿಕವಾದ ಅವಕಾಶ ದೊರಕಿದೆಯಲ್ಲದೇ ಸ್ಥಳೀಯ ಭಾಷೆ ಬಾರದ್ದರಿಂದ ಯಾವ ನಷ್ಟವೂ ಆಗುತ್ತಿಲ್ಲವೆಂಬುದನ್ನು ಗಮನಿಸಿದರೆ ವಿಪರೀತವಾದಂತಹ ಪ್ರತಿಕ್ರಿಯಗಳು ಬರುವುದು ಸ್ವಾಗತಾರ್ಹವಲ್ಲದಿದ್ದರೂ ಸಹಜ. ಆದರೆ ವಲಸೆಯ ಸಮಸ್ಯೆ ಸದ್ಯಕ್ಕೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಈ ಸಮಸ್ಯೆ ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿಯಂತಹ ರಾಜಧಾನಿ ನಗರಗಳಿಗೆ ಇದ್ದದ್ದೇ. ಒಂದೊಂದು ನಗರವೂ ಈ ಸಮಸ್ಯೆಯನ್ನು ತಮ್ಮದೇ ರೀತಿಯಲ್ಲಿ ಎದುರಿಸುತ್ತಿದೆ. ನಾನು ಅಹಮದಾಬಾದಿನಲ್ಲಿರುವುದರಿಂದ ಇಲ್ಲಿ ವಲಸೆಯಿದ್ದಾಗ್ಯೂ ಇಲ್ಲಿ ಯಾಕೆ ಇಂಥಹ ವಿಪರೀತವಾದ ಪ್ರತಿಕ್ರಿಯ ಬರುವುದಿಲ್ಲ ಎಂಬುದರ ಬಗ್ಗೆ ನನ್ನ ಊಹಾಪೋಹವನ್ನ ಹರಿಯ ಬಿಡುತ್ತೇನೆ. ಇಲ್ಲಿನ ಜನರ ಮೂಲಸೆಲೆ/ಅವಕಾಶಗಳು enterprise ಗೆ ಸಂಬಂಧಿಸಿದ್ದು. ಹೀಗಾಗಿ ವಿದ್ಯೆ ಆಧಾರದ ಮೇಲೆ ಇರುವ ಆರ್ಥಿಕ ಅವಕಾಶಗಳು ಇವರಿಗೆ ಅಷ್ಟು ಮುಖ್ಯವಾಗುವುದಿಲ್ಲ. ಅರ್ಧ ಜೀವನಕಾಲ ಗುಜರಾತಿನಲ್ಲಿ ಕಳೆದ ನನಗೆ ಗುಜರಾತಿ ಬರುವುದಿಲ್ಲ. ಅದನ್ನು ನಾನು ಕಲಿಯುವ ಪ್ರಯತ್ನ ಮಾಡಲಿಲ್ಲವೆಂದೇನೂ ಅಲ್ಲ. ಆದರೆ ಭಾಷೆಯ ಕಾರಣವಾಗಿ ಇಲ್ಲಿನ ಜನ ನನ್ನನ್ನು "ಹೊರಗಿನವನೆಂದು" ತಳ್ಳಿ ಹಾಕಲಿಲ್ಲ. ಇದಕ್ಕೆ ಕಾರಣ ನಾನು ಮಾಡುತ್ತಿರುವ ಕೆಲಸ, ಆ ಸಂಸ್ಥೆ ಅವರುಗಳ "ಅವಕಾಶ"ಗಳ ಪೆಟ್ಟಿಗೆಯಲ್ಲಿಲ್ಲ. ಆ ಪೆಟ್ಟಿಗೆಯನ್ನು ಅವರು ದೂರದಿಂದ ನೋಡುತ್ತಲೇ ಅದಕ್ಕೆ [ಆರ್ಥಿಕವಾಗಿ] ಸಮಾನವಾದ ಇತರ ಅವಕಾಶಗಳ ಪೆಟ್ಟಿಗೆಯನ್ನು ಅವರು ಸೃಷ್ಟಿಸಿಬಲ್ಲರು.

ಇನ್ನು ಬಾಲಿವುಡ್ ಉದಾಹರಣೆ ಬಹಳ ಮಟ್ಟಿಗೆ ಶಿವು ಹೇಳಿದಂತೆ ಹಣಬಲ, ಮಾರುಕಟ್ಟೆಯ ಸೈಜಿಗೆ ಸಂಬಂಧಿಸಿದ್ದು. ನಮ್ಮ ಸಮಸ್ಯೆ ಅಂದರೆ ನಾವು ಬಾಲಿವುಡ್ ತರಹದ ಚಿತ್ರಗಳನ್ನು ಕನ್ನಡದಲ್ಲಿ ಮಾಡಬೇಕೆಂದು ಬಯಸುವುದು. ಹಾಗೆ ಮಾಡಿದಾಗ ಸಹಜವಾಗಿಯೇ ನಾವು ಆ ಚಿತ್ರಗಳೊದಿಗೆ ಪೈಪೋಟಿಗಿಳಿಯುತ್ತೇವ. ಇಲ್ಲಿ ನಾವು ನಮ್ಮದೇ ಅಸ್ಮಿತತೆಯನ್ನು ಯಾಕೆ ಕಂಡುಕೊಳ್ಳಲು ಪ್ರಯತ್ನಿಸಿಲ್ಲ? ಕನ್ನಡ ಸಂದರ್ಭದಲ್ಲಿ ಎಕ್ಸ್ಕ್ಲೂಸಿವ್ ಆದಂತಹ ಚಿತ್ರಗಳನ್ನು ನಾವು ನಮ್ಮ ಬಜೆಟ್ ಮನಸ್ಸಿನಲ್ಲಿಟ್ಟುಕೊಂಡು ಮಾಡುತ್ತಿಲ್ಲವೇನೊ. ಆದರೆ ಶಿವು ಅವರ ವಾದನಿಜ, ಕಡೆಗೆ ಎಲ್ಲವೂ ಕಾಂಚನಮಾಲ.

ನನ್ನ ಲೇಖನದಲ್ಲಿನ ಶುದ್ಧ ತಳಿಯ ವಾದದಲ್ಲಿ ಕೊಟ್ಟ ಮಹನೀಯರ ಪಟ್ಟಿ ಮತ್ತು ಆ ಕುರಿತ ವಾದ ತುಸು ಅತಿರೇಕದ್ದು ಅಂತ ಒಪ್ಪುತ್ತೇನೆ. ಹಾಗೆ ನೋಡಿದರೆ ಈ ರೀತಿಯ ಭೀಕರತೆ ನನ್ನ ವೈಯಕ್ತಿಕ ಅನುಭವದಲ್ಲೂ ಇಲ್ಲ. ನಾನು ಮಾಡಹೊರಟ ವಾದ ರಾಷ್ಟ್ರೀಯತೆಯನ್ನು ಅತಿರೇಕಕ್ಕೆ ಒಯ್ದರೆ ನಾವು ಈ ದಿಕ್ಕಿನಲ್ಲಿ ಪ್ರಯಾಣಮಾಡಬಹುದಾದ ಅಪಾಯವಿರಬಹುದೆಂಬ ಆತಂಕದಿಂದ ಕೂಡಿದ ಮುನ್ನೆಚ್ಚರಿಕೆ ಮಾತ್ರ. ಇಲ್ಲವಾದರೆ ನನಗೆ ಎಂದೂ ಕನ್ನಡನಾಡಿನಲ್ಲಿ "ಹೊರಗಿನವ" ಆಗಿರುವ ಅನುಭವವೇ ಆಗಿಲ್ಲ. ಆ ಅನುಭವ ನನಗೆ ಹೈದರಾಬಾದಿನಲ್ಲೂ, ಅಹಮದಾಬದಿನಲ್ಲೂ ಆಗಿಲ್ಲವೆಂಬುದು ನನ್ನ ಭಾಗ್ಯ. ಶಿವು ಅವರಿಗೆ ಈ ನನ್ನ ಮಾತಿನಿಂದ ನೋವಾಗಿದ್ದರೆ ಯಾವ ಹಿಂಜರಿಕೆಯೂ ಇಲ್ಲದೇ ನಾನು ಅವರ ಕ್ಷಮೆ ಬೇಡುತ್ತೇನೆ.

ಇನ್ನು ಬೆಂಗಳೂರಿನ ಪುನರ್ನಾಮಕರಣದ ವಿಷಯದಲ್ಲಿ ನನ್ನ ವಾದ ಇಷ್ಟೇ. ಆ ಪುನರ್ನಾಮಕರಣದಿಂದ ನಮಗೆ ಭಾಷೆಯ ನುಡಿಗಟ್ಟಿಗೆ ನಾವು ಮರ್ಯಾದೆ ತೋರಿಸಿದೆವು ಅನ್ನಿಸುತ್ತದೆ. ಅದರಿಂದ ಯಾವ ನಷ್ಟವೂ ಇಲ್ಲ. ಆದರೆ ನಾವು ಸಾಧಿಸುವುದು ಏನನ್ನು? ಹೊರಗಿನವರು ಕನ್ನಡ ಕಲಿಯಬೇಕು ಎಂಬುದು ನಮ್ಮ ಬಯಕೆಯೋ ಅಥವಾ ಬೆಂಗಳೂರಿನ ಉಚ್ಚಾರ ಸರಿಯಿರಬೇಕೆಂದೋ? ಕನಸು ಕಂಡರೆ ಮಹತ್ತರ ಕನಸುಗಳನ್ನು ಕಾಣೋಣ!.. ನನ್ನ ಮಟ್ಟಿಗೆ ಬ್ರಿಗೇಡ್ ರೋಡಿನಲ್ಲಿ ಫಲಕಗಳಿಗೆ ತಾರು ಬಳಿಯುವ ಸಂದರ್ಭದಲ್ಲಿ, ಅನಂತಮೂರ್ತಿಯವರಂತಹ ಬುದ್ದಿಜೀವಿಗಳು ಈ ಬೇಡಿಕೆಯನ್ನು ಸಮರ್ಥಿಸುವುದು ಒಂದು ಥರದಲ್ಲಿ ದೊಡ್ಡ ಸಮಸ್ಯೆ [ಆರ್ಥಿಕ] ಬದಿಗಿಟ್ಟು ಹಾರಾಡುವ/ಕೂಗಾಡುವ ವಾಟಾಳ್ವಾದಕ್ಕೆ ಬೆಂಬಲ ಕೊಟ್ಟಂತೆ ಆಗುತ್ತದೆ. ನನ್ನ ವೇದನೆಯ ಮೂಲ ಇದು.

ಒಟ್ಟಿನಲ್ಲಿ ಶಿವು ಅವರ ಪ್ರತಿಕ್ರಿಯೆಯಿಂದ ನಮ್ಮ ಸಮಸ್ಯೆಗಳ ಇತರ ಮಜಲುಗಳನ್ನು ಚರ್ಚಿಸಲು ಸಾಧ್ಯವಾಯಿತು. ಹೀಗಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.

ಶ್ರೀರಾಮ್

ಮೋಹನ said...

ನಿಮ್ಮ ಲೇಖನದ ಶೀರ್ಷಿಕೆಯಲ್ಲಿ 'ರಷ್ಟ್ರೀಯತೆ' ಎಂದಿದೆ. ಅನೇಕ ಕಡೆ 'ಮಹಾರಷ್ಟ್ರ' ಎಂದು ಬರೆದಿರುವಿರಿ. ಅದು 'ರಾಷ್ಟ್ರ' ಎಂದಿರಬೇಕಲ್ಲವೆ?

ನಿಜವಾಗಲೂ 'ಕನ್ನಡ ರಾಷ್ಟ್ರೀಯತೆ' ಎಂಬುದು ಇದೆಯೆ? (ತಮಿಳರ ಹಾಗೆ, ಮಹಾರಾಷ್ಟ್ರದ ಹಾಗೆ). ನಮ್ಮ ಕನ್ನಡ ಹೋರಾಟಗಾರರೇನಾದರೂ ಗಲಾಟೆ ಮಾಡಿದರೆ ಅದು ಕನ್ನಡಕ್ಕೆ ಅನ್ಯಾಯ ಆದ ಸಂದರ್ಭದಲ್ಲಿ ಮಾತ್ರ. ಅವರೆಂದೂ ಸ್ವತಂತ್ರ ಕನ್ನಡ ರಾಷ್ಟ್ರ ಮಾಡಿ ಎಂದು ಕೇಳಿಲ್ಲ (ತಮಿಳರ ಹಾಗೆ). ಅಥವಾ ಕನ್ನಡಿಗರಲ್ಲದವರು ರಾಜ್ಯ ಬಿಟ್ಟು ತೊಲಗಿ ಎಂದು ಹೇಳಿಲ್ಲ (ಮಹಾರಾಷ್ಟ್ರೀಯರ ಹಾಗೆ). ಅವರು ಮಾಡಿದ್ದು ಅಂದರೆ, ಕರ್ನಾಟಕ ನೆಲದಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಿದ ಮೇಯರ್ ಮುಖಕ್ಕೆ ಮಸಿ ಬಳಿದು ಜೈಲಿಗೆ ಹೋದದ್ದು. ಬೋರ್ಡುಗಳಲ್ಲಿ ಕನ್ನಡಕ್ಕೆ ಪ್ರಮುಖ ಸ್ಥಾನ ಸಿಗಲಿಲ್ಲ ಅಂತ ಬಣ್ಣ ಬಳಿದು ನಮ್ಮವರಿಂದಲೇ ಅಪಹಾಸ್ಯಗೊಂಡಿದ್ದು. ಎಫ್.ಎಮ್ ರೇಡಿಯೋ ನಲ್ಲಿ ಕನ್ನಡ ಹಾಡು ಹಾಕಿ ಎಂದು ಗಲಾಟೆ ಮಾಡಿದ್ದು. ಮತ್ತು ಇತ್ತೀಚೆಗೆ ಪುಲಿಕೇಶಿಗೆ ಅವಮಾನ ಮಾಡಿದರು ಎಂಬ ಕಾರಣಕ್ಕೆ ತಮಿಳು ಚಿತ್ರವೊಂದನ್ನು ಎತ್ತಂಗಡಿ ಮಾಡಿಸಿದ್ದು.

ಇದನ್ನು ನಾವು ಕನ್ನಡ ರಾಷ್ಟ್ರೀಯತೆ ಎನ್ನಬಹುದಾದರೆ, ನನ್ನ ಮನೆಯಲ್ಲಿ ಗಣೇಶನ ವಿಗ್ರಹ ಇಟ್ಟು ಪೂಜೆ ಮಾಡುವುದನ್ನು ಕೋಮುವಾದ ಎನ್ನಬಹುದು!

Sriram said...

ಮೋಹನ

ರಾಷ್ಟ್ರೀಯತೆ ಪದದಲ್ಲಿನ ತಪ್ಪು ತೋರಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಇಂಗ್ಲೀಷಿನ ಕೀಬೋರ್ಡಿನಲ್ಲಿ ಕನ್ನಡವನ್ನ ಟೈಪ್ ಮಾಡುವುದರಿಂದ ಆಗುವ ತೊಂದರೆ ಇದು. ಇಲ್ಲಿಯೇ ನಾನು ಕನ್ನಡಕ್ಕೆ ಹೊಂದುವ ಕೀಲಿಮಣೆ ತಯಾರಿಸಿದ್ದ ಐ-ಲೀಪ್‍ನ ಮಹತ್ವವನ್ನು ನನ್ನ ಮೂಲ ಲೇಖನದಲ್ಲಿ ಪ್ರಸ್ತಾಪಿಸಿದ್ದನ್ನು ನಿಮಗೆ ನೆನಪು ಮಾಡಬಯಸುತ್ತೇನೆ.

ಇನ್ನು ನಿಮ್ಮ ಮಿಕ್ಕ ಟಿಪ್ಪಣಿಗಳಿಗೆ ನನ್ನ ಪ್ರತಿಕ್ರಿಯೆ ಇಷ್ಟೇ: ಕನ್ನಡ ನಾಡಿನಲ್ಲಿ ಕನ್ನಡ ಫಲಕಗಳು ಬೇಕೇ - ಖಂಡಿತ ಬೇಕು. ಬಾವುಟಕ್ಕೆ ಅವಮಾನ ಮಾಡಬಹುದೇ - ಖಂಡಿತ ಇಲ್ಲ. ಪುಲಿಕೇಶಿಗೆ ಅವಮಾನ ಮಾಡಬಹುದೇ - ಖಂಡಿತ ಇಲ್ಲ. ಆದರೆ ಅದಕ್ಕೆ ಪ್ರತಿಕ್ರಿಯೆ ಹೀಗಿರಬೇಕೇ? ಗಾಂಧಿಯಂತಹ ಉತ್ತಮ ನಾಯಕರ ನಾಡು ನಮ್ಮದು. ಅವರಿಂದ ನಾವು ಏನಾದರೂ ಕಲಿತಿದ್ದೇವೆಯೇ? ನಮ್ಮ ವಿಷಯವನ್ನು ನಾಗರೀಕವಾಗಿ ಸ್ಪಷ್ಟವಾಗಿ - ನಮ್ಮ ನಿಲುವನ್ನು ಬಿಟ್ಟುಕೊಡದೇ ಮಂಡಿಸುವುದು ಸಾಧ್ಯವಿಲ್ಲವೇ?

ನಿಮ್ಮ ಮನೆಯಲ್ಲಿ ಗಣಪತಿಯ ಮೂರ್ತಿ ಇಟ್ಟು ಪೂಜೆ ಮಾಡಿದರೆ ಕೋಮುವಾದವಲ್ಲ. ಆದರೆ ನನ್ನನ್ನು ಆ ಪೂಜೆ ಮಾಡಲು ಬಲವಂತ ಮಾಡುವುದು ಸಮಂಜಸವಲ್ಲ. ಅದೇರೀತಿ ಬೇರೆ ಯಾರೋ ತಮ್ಮ ಇಷ್ಟದೇವತೆಗಳನ್ನು ತಂದು ನಮ್ಮ ಮನೆಯಲ್ಲೆ ಪ್ರತಿಷ್ಠಾಪಿಸುವುದೂ ಸರಿಯಲ್ಲ. ಆದರೆ ಹಾಗೆ ನಡೆದಾಗ ನಮ್ಮ ಪ್ರತಿಕ್ರಿಯ ಹೇಗಿರಬೇಕು? ನಾಗರೀಕವಾಗಿರಬೇಕೇ ಅಥವಾ ಬರ್ಬರವಾಗಿಯೇ?

ನನ್ನ ಕನ್ನಡಪ್ರೇಮವನ್ನು ನಾನು ಪ್ರದರ್ಶಿಸಲು ಬೇರೆಯವರ ಸ್ವತ್ತನ್ನು ನಾಶಮಾಡುವುದು ಎಷ್ಟು ಸಮಂಜಸ? ಇದಿಷ್ಟೇ ನನ್ನ ಪ್ರಶ್ನೆಗಳು.

ಶ್ರೀರಾಮ್

ಮೋಹನ said...

ಶ್ರೀರಾಮ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಎಲ್ಲಾ ಪ್ರತಿಭಟನೆಗಳೂ ಶಾಂತಿಯುತವಾಗಿರಬೇಕು ನಿಜ. ೬೦ರ ದಶಕದಲ್ಲಾದ ಕನ್ನಡ ಹೋರಾಟಗಳು ಶಾಂತಿಯುತವಾಗೇ ಶುರುವಾದವು ಹಾಗೆಯೇ ಮುಂದುವರೆದವು ಕೂಡ. ಶಾಂತಿಮಾರ್ಗದಲ್ಲಿ ಫಲದೊರೆಯದೆ ಇದ್ದಾಗ ಹಿಂಸಾಚಾರ ದೊಂಬಿ ನಡೆದೇ ನಡೆಯುತ್ತವೆ. ಅಷ್ಟೊಂದು ಸಂಯಮವನ್ನು ಮಾನವರಿಂದ ನಿರೀಕ್ಷಿಸುವುದು ಕಷ್ಟ. ಮಗುವಿಗೆ ಸರಿಯಾಗಿ ಹಾಲು ಕೊಡದ ತಾಯಿ ಅದು ಅತ್ತು ಕರೆದು ರಂಪ ಮಾಡಿದ ಮೇಲೆ 'ದರಿದ್ರವೇ ಹಸಿವು ಅಂತ ಮೊದಲೇ ಹೇಳಬಾರದಿತ್ತೆ' ಅಂತ ಗದರಿಸಿದಂತೆ ಆಗುತ್ತದೆ.

ಗಣಪತಿ ಪೂಜೆಯನ್ನು ಕೇವಲ ಉದಾಹರಣೆ ಕೊಟ್ಟಿದ್ದೇನೆ ಅಷ್ಟೆ. ಹಿಂದುಗಳು ಯಾವತ್ತೂ ಧರ್ಮದ ವಿಷಯದಲ್ಲಿ ಬೇರೊಬ್ಬರನ್ನು ಬಲಾತ್ಕಾರ ಮಾಡಿಲ್ಲ. ಆಮಿಷ ತೋರಿಸಿಲ್ಲ. ಅದೇ ರೀತಿ ಕನ್ನಡಿಗರು ಯಾವತ್ತೂ ಇತರ ಭಾಷಿಕರ ಮೇಲೆ ಅನಗತ್ಯವಾಗಿ ದ್ವೇಷ ಕಾರಿಲ್ಲ. ಅನಗತ್ಯವಾದ ವಿವಾದಗಳನ್ನು ಹುಟ್ಟುಹಾಕಿಲ್ಲ.

ನನ್ನ ಅಭಿಪ್ರಾಯದಲ್ಲಿ ಕನ್ನಡಿಗರು ಸ್ವಭಾವತಃ ಸಂಯಮಶೀಲರೇ ಆಗಿದ್ದಾರೆ. ಪರಿಸ್ಥಿತಿ ಕೈಮೀರಿ ಅಲ್ಲೊಂದು ಇಲ್ಲೊಂದು ಘಟನೆ ವಿಕೋಪಕ್ಕೆ ಹೋಗಿದೆ ನಿಜ. ಪುಲಿಕೇಶಿ ತಮಿಳು ಸಿನಿಮಾ ಉದಾಹರಣೆಯನ್ನೇ ಕೊಡುವುದಾದರೆ, ಇಂತಹ ಘಟನೆ ಬೇರೊಂದು ರಾಜ್ಯದಲ್ಲಿ ನಡೆದಿದ್ದರೆ ಅವುಗಳ ಪರಿಣಾಮ ಇನ್ನೂ ಘೋರವಾಗಿರುತ್ತಿತ್ತು. ನಮ್ಮ ನಾಗರೀಕ ಕನ್ನಡಿಗರು ಅದರ ಬಗ್ಗೆ ಪತ್ರಿಕೆಗಳಲ್ಲಿ ಬರೆದು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿದರು. ನೀವು ಅದನ್ನು ತಪ್ಪು ಎನ್ನುತ್ತೀರಾ? ಇನ್ಯಾವ ರೀತಿ ಬಗೆಹರಿಸಬೇಕಿತ್ತು? ತಿಳಿಸಿ.

Sriram said...

ಮೋಹನ
ಕನ್ನಡಿಗರು ಮೂಲತಃ ಸಂಯಮಶೀಲರು ಅನ್ನುವುದು ನಿಜ. ಅದು ಉತ್ತಮವಾದ ಗುಣ. ಅದನ್ನು ಕಾಪಾಡಿಕೊಂಡು ಹೋಗುವುದು ನನ್ನ ಅಭಿಪ್ರಾಯದಲ್ಲಿ ಒಳ್ಳೆಯದು ಅಲ್ಲವೇ. ಈಗ ನೀವು ಪುಲಿಕೇಶಿಯ ಉದಾಹರಣೆ ಕೊಟ್ಟಿದ್ದೀರಿ. ಆ ಪ್ರಸಂಗ ಶಾಂತಿಯುತವಾಗಿಯೇ ತೀರ್ಮಾನವಾಯಿತು ನಿಜ. ಆದರೆ ಯೋಚಿಸಿ ನೋಡಿ.. ಅಭಿರುಚಿ ಇಲ್ಲದೇ ಮಾಡಿದ ಅಂಥ ಸಿನೇಮಾ ನಾವು ಪ್ರತಿಭಟಿಸದಿದ್ದರೂ ಮಣ್ಣು ಮುಕ್ಕುತ್ತಿತ್ತು. ಆದರೂ ನಮ್ಮ ಸಂವೇದನೆಗೆ ಹಿಂಸೆ ಕೊಟ್ಟಾಗ ನಾವು ಸುಮ್ಮನಿರಬೇಕೆಂದೇನೂ ಇಲ್ಲ.

ಇತ್ತೀಚಿನ ಮತ್ತೊಂದು ವಿವಾದ "ಮಾಸ್ತಿ"ಗೆ ಸಂಬಂಧಿಸಿದ್ದು. ಈ ವಿವಾದ ಹುಟ್ಟುಹಾಕಿದವರೂ, ಅದಕ್ಕೆ ಕಾರಣಕರ್ತರೂ ಕನ್ನಡಿಗರೇ? ನಾನು ಅಂಥ ಸಿನೇಮಾ ಮಾಡಿದ್ದರೆ ಖಂಡಿತ ಮಾಸ್ತಿ ಅಂತ ಹೆಸರಿಡುತ್ತಿರಲಿಲ್ಲ. ಆದರೆ ಯಾರೋ ಅಕಸ್ಮಾತ್ ಅಂಥ ಸಿನೆಮೂ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಅದು ಮಾಸ್ತಿಯವರಿಗೆ ಅವಮಾನವೇ? ಮುಂದಿನ ಪೀಳಿಗೆಗಳು ಮಾಸ್ತಿ ಅಂದಾಕ್ಷಣಕ್ಕೇ ಕಥೆಗಾರ ಮಾಸ್ತಿಯಲ್ಲದೇ ಸಿನೇಮಾ ಮಾಸ್ತಿಯ ಬಗ್ಗೆ ಮಾತನಾಡುತ್ತಾರೆ ಅಂತ ವಾದ ಮಾಡುವುದು ನಮ್ಮ ಮಾಸ್ತಿಗೆ ಘೋರ ಅವಮಾನ ಅಲ್ಲವೇ? ಮಾಸ್ತಿಯವರ ಹೆಸರು ಅಷ್ಟು ನಾಜೂಕಾದ ನೆಲೆಯ ಮೇಲೆ ನಿಂತಿದ್ದರೆ, ನಮ್ಮ ಕನ್ನಡದ ಸಮಸ್ಯೆಯ ಪರಿಮಾಣ ಮಹತ್ತರದ್ದು ಅಂತ ನನ್ನ ಅಭಿಪ್ರಾಯ.

ಅಂದಹಾಗೆ ಇತರೆ ಭಾಷಿಕರು ಇಲ್ಲಿರುವಾಗ ಕನ್ನಡವನ್ನು ಕಲಿಯಬೇಕು ಅಂತ ನಮ್ಮೆಲ್ಲರ ಆಸೆ. ನನ್ನ ವಿದ್ಯಾರ್ಥಿನಿಯೋಬ್ಬಳು ಇಲ್ಲಿಗೆ ಬಂದಿದ್ದಾಳೆ, ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಕನ್ನಡ ಕಲಿಯಬೇಕಾಗಿದೆ. ಕನ್ನಡ ಕಲಿಯಲು ಪರಿಕರಗಳು ಎಲ್ಲಿ? ನಾವು ಬಿ.ಪಿ.ಓ ಗಳಿಗಾಗಿ ನ್ಯೂಯಾರ್ಕ್ ಸ್ಟೈಲಿನಲ್ಲಿ ಇಂಗ್ಲೀಷ್ ಕಲಿಸಲು ಕೋಚಿಂಗ್ ಕ್ಲಾಸುಗಳನ್ನು ಇಟ್ಟಿದ್ದೀವಿ. ಆದರೆ ಇತರರಿಗೆ ಕನ್ನಡವನ್ನು ಕಲಿಸಲು ನಾವು ಮಾಡುತ್ತಿರುವ ಪ್ರಯತ್ನವೇನು ಅನ್ನುವುದನ್ನು ನಾವುಗಳೆಲ್ಲಾ ಯೋಚಿಸಬೇಕಾಗಿದೆ? ಈ ದಿಶೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರೂ ಕನ್ನಡ ರಕ್ಷಣಾ ವೇದಿಕೆಯವದೂ ಏನಾದರೂ ಮಾಡಬೇಕಲ್ಲವೇ?

ಶ್ರೀರಾಮ್

ಮೋಹನ್ ರಂಗನ್ said...

ಶ್ರೀರಾಮ್,

ಒಳ್ಳೆಯ ಅಭಿರುಚಿ ಇಲ್ಲದ ಅನೇಕ ಚಿತ್ರಗಳು ಕೇವಲ ಮಾರ್ಕೆಟಿಂಗ್ ಮೂಲಕ ಗೆದ್ದಿರುವ ಉದಾಹರಣೆಗಳಿವೆ. ಈ ಚಿತ್ರವನ್ನು ನೋಡಿರುವ ತಮಿಳನ್ನು ಬಲ್ಲ ಕೆಲವು ಕನ್ನಡ ಮಿತ್ರರು ಪುಲಿಕೇಶಿ, ರಾಯಣ್ಣ ಹೆಸರಿನ (ದುರ್)ಉಪಯೋಗ ಬಿಟ್ಟರೆ ಒಟ್ಟಿನಲ್ಲಿ ಈ ಹಾಸ್ಯ ಚಿತ್ರವು ಮನೋರಂಜನಾತ್ಮಕವಾಗಿದೆ - ಈಗಿನ ಸ್ಟ್ಯಾಂಡರ್ಡ್ ಪ್ರಕಾರ, ಎಂದು ಹೇಳಿದ್ದಾರೆ. ಒಳ್ಳೆಯದು, ಕೆಟ್ಟದ್ದು ಬೇರೆ ಬೇರೆ ಪ್ಯಾಕೇಜ್‌ಗಳಲ್ಲಿ ಬರುವುದಿಲ್ಲ. ಹೀಗೆ ಒಟ್ಟೊಟ್ಟಿಗೆ ಬರುವುದರಿಂದಲೇ ಸಮಸ್ಯೆ ಇರುವುದು. ಈ ಚಿತ್ರ ಈಗಾಗಲೇ ಇತರ ರಾಜ್ಯಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಅಮೇರಿಕಾದಲ್ಲೂ ಪ್ರದರ್ಶನಗೊಳ್ಳಲಿದೆ ಎಂಬ ಸುದ್ದಿ ಬಂದಿದೆ. ಈ ಚಿತ್ರವನ್ನು ನೋಡಿದವರಿಗೆ ಇನ್ನು ಮುಂದೆ ಪುಲಿಕೇಶಿ ಎಂಬ ಹೆಸರು ಕೇಳಿದೊಡನೆ ಜ್ಞಾಪಕ ಬರುವುದು ಈ ಚಿತ್ರದ ನಾಯಕ ನಟನ ಕೋತಿ ಚೇಷ್ಟೆಗಳು. ರಕ್ಷಣಾ ವೇದಿಕೆ ಪ್ರತಿಭಟಿಸದಿದ್ದರೆ, ಈ ಚಿತ್ರ ಕರ್ನಾಟಕದಲ್ಲೂ ಪ್ರದರ್ಶನಗೊಳ್ಳುತ್ತಿತ್ತು. ನೀವು ಈ ಘಟನೆಯ ಬಗ್ಗೆ ಸ್ಪಷ್ಟವಾಗಿ ರಕ್ಷಣಾ ವೇದಿಕೆಗೆ ಬೆಂಬಲ ಸೂಚಿಸದೆ "ಅಭಿರುಚಿ ಇಲ್ಲದೇ ಮಾಡಿದ ಅಂಥ ಸಿನೇಮಾ ನಾವು ಪ್ರತಿಭಟಿಸದಿದ್ದರೂ ಮಣ್ಣು ಮುಕ್ಕುತ್ತಿತ್ತು. ಆದರೂ ನಮ್ಮ ಸಂವೇದನೆಗೆ ಹಿಂಸೆ ಕೊಟ್ಟಾಗ ನಾವು ಸುಮ್ಮನಿರಬೇಕೆಂದೇನೂ ಇಲ್ಲ" ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿ ಮಡಿವಂತಿಕೆ ಪ್ರದರ್ಶಿಸಿದ್ದೀರಿ. ಇದು ಬಹುತೇಕ ಎಲ್ಲಾ ಬುದ್ದಿವಂತ ಕನ್ನಡಿಗರ ಸಮಸ್ಯೆ.

"ಮಾಸ್ತಿಯವರ ಹೆಸರು ಅಷ್ಟು ನಾಜೂಕಾದ ನೆಲೆಯ ಮೇಲೆ ನಿಂತಿದ್ದರೆ, ನಮ್ಮ ಕನ್ನಡದ ಸಮಸ್ಯೆಯ ಪರಿಮಾಣ ಮಹತ್ತರದ್ದು ಅಂತ ನನ್ನ ಅಭಿಪ್ರಾಯ" ಎಂದು ಹೇಳಿರುವಿರಿ. ನಿಂತಿದ್ದರೆ ಅಲ್ಲ. ನಿಂತಿದೆ. ಇದು ಕನ್ನಡದ್ದೊಂದೇ ಸಮಸ್ಯೆ ಅಲ್ಲ. ಶತಶತಮಾನಗಳ ಜಾಗತಿಕ ಸಮಸ್ಯೆ. "ಸತ್ಯವಂತರಿಗೆ ಕಾಲವಲ್ಲ", "ಧರ್ಮಕ್ಕೆ ಕೈಬಾರದೀ ಕಾಲ" ಎಂದು ಪುರಂದರದಾಸರು ೫ ಶತಮಾನಗಳ ಹಿಂದೆಯೇ ಹಾಡಿದ್ದಾರೆ. ಒಳ್ಳೆಯದ್ದು ಕೆಟ್ಟದ್ದರ ನಡುವೆ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದೆ. ಕಥೆಗಾರ ಮಾಸ್ತಿ ಎಷ್ಟು ಜನಕ್ಕೆ ಗೊತ್ತಿದ್ದಾರೆ? ಎಷ್ಟು ಜನ ಸಾಹಿತ್ಯ ಓದುತ್ತಾರೆ? ಉತ್ತಮ ಸಾಹಿತ್ಯ ಬರುತ್ತಿದ್ದ ಕಾಲದಲ್ಲೇ ಕಾರಂತರ 'ಮರಳಿ ಮಣ್ಣಿಗೆ' ಪುಸ್ತಕದ ೧೦೦೦ ಪ್ರತಿಗಳು ಖರ್ಚಾಗಲು ೧೦ ವರ್ಷ ಬೇಕಾಯಿತಂತೆ! ಅದೇ ಒಂದು ದರಿದ್ರ ಚಿತ್ರವನ್ನು ಒಂದು ಶೋ ನಲ್ಲಿ ಸಾವಿರ ಜನ ನೋಡಬಹುದಾಗಿದೆ. ಇದರಿಂದ ಬರವಣಿಗೆಯ ಪ್ರಭಾವ ದೃಶ್ಯಮಾಧ್ಯಮದ ಮುಂದೆ ಎಷ್ಟು ಗೌಣ ಎಂದು ತಿಳಿಯುತ್ತದೆ.

ಮೊದಲು 'ಮಾಸ್ತಿ' ಹೆಸರ ಉಪಯೋಗವನ್ನು ಅನೇಕ ಸಾಹಿತಿಗಳು ಪತಿಕೆಗಳಲ್ಲಿ ಖಂಡಿಸಿದರು. ಆದನ್ನು ಸಿನಿಮಾ ಮಂದಿ ಯಾವ ಲೆಕ್ಕಕ್ಕೂ ತೆಗೆದುಕೊಳ್ಳಲಿಲ್ಲ. ಒಂದು ಒಳ್ಳೆಯ ಕೆಲಸವನ್ನು ಸಾಮ, ದಾನ, ಭೇಧ, ದಂಡ ಚತುರೋಪಾಯಗಳಲ್ಲಿ ಸಾಧಿಸಬಹುದೆಂದು ಹಿರಿಯರು ಹೇಳಿದ್ದಾರೆ. ರಕ್ಷಣಾ ವೇದಿಕೆಯವರು ತಮ್ಮ ಮಾಮೂಲಿ ಶೈಲಿಯಲ್ಲಿ ಬೀದಿ ಗಲಾಟೆ ಮಾಡಿದ ಮೇಲೆಯೇ ವಿಷಯ ಇತ್ಯರ್ಥವಾಯಿತು. ಆದ್ದರಿಂದ 'ಮಾಸ್ತಿ' ಹೆಸರು ಕೇಳಿದರೆ ರೌಡಿ ಉಪೇಂದ್ರನ ಚಿತ್ರ ಕಣ್ಣಿಗೆ ಬರುವುದನ್ನು ರಕ್ಷಣಾ ವೇದಿಕೆಯವರು ತಪ್ಪಿಸಿ ಉಪಕಾರ ಮಾಡಿದ್ದಾರೆ. ಆದರೆ ಬೀದಿಗಿಳಿದ ಮಂದಿಯನ್ನು 'ಸುಸಂಸ್ಕೃತ' ರೆನಿಸಿಕೊಂಡವರು ಯಾವತ್ತೂ ಬೆಂಬಲಿಸುವುದಿಲ್ಲ ಎಂಬುದು ವಿಪರ್ಯಾಸ.

ಪರಭಾಷಿಕರಿಗೆ ಕನ್ನಡ ಕಲಿಸಲು ರಕ್ಷಣಾ ವೇದಿಕೆಯ ಅಂಗವಾದ ಬನವಾಸಿ ಬಳಗ ಈಗಾಗಲೇ ರಚನಾತ್ಮಕ ಕಾರ್ಯಕ್ರಮವನ್ನು ನಡೆಸುತ್ತಿದೆ. ಬನವಾಸಿ ಬಳಗದ ಸದಸ್ಯರು ಮುಖ್ಯವಾಗಿ ಐ.ಟಿ. ಉದ್ಯೋಗಿಗಳಾಗಿದ್ದು ತಮ್ಮ ಆಸಕ್ತ ಪರಭಾಷಿಕ ಸಹೋದ್ಯೋಗಿಗಳಿಗೆ ಕನ್ನಡ ತರಗತಿಗಳನ್ನು ನಡೆಸುತ್ತಿದ್ದಾರೆ. ಸಾಧ್ಯವಾದರೆ, ಈ ಬಗ್ಗೆ ವಿವರಗಳನ್ನು ಪಡೆದು ನಿಮಗೆ ತಿಳಿಸುತ್ತೇನೆ. ನಿಮ್ಮ ವಿದ್ಯಾರ್ಥಿನಿಯೂ ಅದರ ಉಪಯೋಗ ಪಡೆದುಕೊಳ್ಳಬಹುದು. 'ಬರಹ' ಎಂಬ ಸಾಫ್ಟ್‌ವೇರ್ ನಲ್ಲಿ ಕನ್ನಡ ಲಿಪಿ ಕಲಿಯಲು ಅವಕಾಶವಿದೆ.

http://www.baraha.com/web_docs/learning_scripts.htm
http://www.baraha.com/web_docs/latin_output.htm

ಶ್ರೀರಾಮರೆ, ಈ ಚರ್ಚೆಯಿಂದ ನನಗೆ ಕೆಲವು ಸಾಮಾನ್ಯ ಪ್ರಶ್ನೆಗಳು ಹುಟ್ಟಿಕೊಂಡಿವೆ. ಕನ್ನಡದ ಪ್ರಶ್ನೆ ಹಾಗಿರಲಿ. ನ್ಯಾಯಮಾರ್ಗದಲ್ಲಿ, ಶಾಂತಿಮಾರ್ಗದಲ್ಲಿ ಪ್ರತಿಭಟಿಸಿ ಫಲ ಪಡೆದ ಯಾವುದೇ ಉತ್ಪ್ರೇಕ್ಷೆ ಇಲ್ಲದ ಘಟನೆಗಳು ಚರಿತ್ರೆಯಲ್ಲಿವೆಯೆ? ಅಲ್ಲೊಂದು ಇಲ್ಲೊಂದು ಘಟನೆಗಳು ನಮ್ಮ ಕಣ್ಣಿಗೆ ಬಿದ್ದರೂ ಕೂಲಂಕುಶವಾಗಿ ಪರಿಶೀಲಿಸಿದರೆ ಅವುಗಳಲ್ಲೂ ಏನಾದರೂ ತಕರಾರು ವಿವಾದ ಇದ್ದೇ ಇರುತ್ತದೆ. ಕಾನೂನು, ಶಾಂತಿ, ಸಂಯಮ ಇತ್ಯಾದಿ ಪದಗಳು ಮುಗ್ದರನ್ನು, ಅಸಹಾಯಕರನ್ನು, ಶೋಷಿತರನ್ನೂ ಹತೋಟಿಯಲ್ಲಿಡಲು ಹಣ, ಅಧಿಕಾರ, ಬುದ್ದಿ, ಶಕ್ತಿ ಉಳ್ಳವರು ಬಳಸುವ ಪದಗಳು ಎಂದು ಇತ್ತೀಚೆಗಿನ ವಿದ್ಯಮಾನಗಳಿಂದ ನನ್ನಂತಹ ಸಾಮಾನ್ಯ ಜನ ತಿಳಿಯುವ ಪರಿಸ್ಥಿತಿ ಬಂದಿದೆ. ಸಾಹಿತಿಗಳಾದ ನೀವು ನಿಮ್ಮ ಬ್ಲಾಗ್‌ನಲ್ಲಿ ಇದೊಂದು ಪ್ರತ್ಯೇಕ ಚರ್ಚೆ ಆರಂಭಿಸಬಹುದು. ಏನಂತೀರಿ?

Sriram said...

ಮೋಹನ
ಶಾಂತಿಯುತವಾಗಿ ಕೆಲವು ಸಮಸ್ಯೆಗಳು ಪರಿಹಾರವಾಗಿಲ್ಲ, ಆದರೆ ಹಿಂಸೆಯಿಂದ ಒಳ್ಳೆಯದಾಗಿದೆ ಅನ್ನುವುದು ಹಿಂಸಾಚಾರಕ್ಕೆ, ಅನಾಗರಿಕ ವರ್ತನೆಗೆ ಹೋಗಲು ಸಮಂಜಸ ಕಾರಣ ಎಂದು ನಾನು ನಂಬುವುದಿಲ್ಲ. ಯಾಕೆಂದರೆ ಕಡೆಗೆ ನಾವುಗಳೆಲ್ಲಾ ನಮ್ಮ ನಂಬಿಕೆಯನ್ನೇ ಕಾನೂನು ಮಾಡಿದಂತಾಗುತ್ತದೆ. ಕನ್ನಡ ಪ್ರೀತಿ, ಬೆಳವಣಿಗೆ ನಮ್ಮ ನಮ್ಮ ನಂಬಿಕೆಯ ವಿಷಯ. ಇದು ಕಾನೂನು ವ್ಯವಸ್ಥೆಯ ಉಲ್ಲಂಘನೆ ಅಲ್ಲ.

ಇನ್ನು ಕಥೆಗಾರ ಮಾಸ್ತಿಯನ್ನು ಎಷ್ಟು ಜನ ಓದಿದ್ದಾರೆ ಅನ್ನುವ ವಿಚಾರದ ಬಗ್ಗೆ ನಾನು ಊಹೆ ಮಾಡಲು ಹೋಗುವುದಿಲ್ಲ. ಇದಕ್ಕೆ ಒಂದು ಕೌಂಟರ್ ಉದಾಹರಣೆ ಕೊಡುತ್ತೇನೆ. ತೆಲುಗಿನಲ್ಲಿ ಠಾಗೂರ್ ಅನ್ನುವ ಚಿತ್ರ ಬಿಡುಗಡೆಯಾಯಿತು. ಅದರ ನಾಯಕ ಮೆಗಾಸ್ಟಾರ್ ಚಿರಂಜೀವಿ. ಆತನ ಹೆಸರು ಅದರಲ್ಲಿ ರಬೀಂದ್ರನಾಥ ಠಾಗೂರ್.. ಮಹಾಕವಿಯ ಹೆಸರು ನನಗಿಟ್ಟಿದ್ದಾರೆ ಅಂತ ಅವನು ಹೇಳಿಕೊಳ್ಳುತ್ತಾನೆ. ಅದರಿಂದ ಗುರುದೇವ ಠಾಗೂರರ ಒಟ್ಟಾರೆ ಸಾಹಿತ್ಯಕ್ಕೆ ಏನಾದರೂ ಧಕ್ಕೆ ಉಂಟಾಯಿತೇ? ಇಲ್ಲ. ಅಷ್ಟು ಯಾಕೆ, ಕನ್ನಡಕ್ಕೇ ಬನ್ನಿ - ಸಾಂಗ್ಲಿಯಾನಾ, ವೀರಪ್ಪನ್, ದಯಾನಾಯಕ್ ಎಂಬಂಥ ಚಿತ್ರಗಳು ಬಂದಿವೆ - ಆದರೆ ಆಯಾ ಚಿತ್ರಗಳು ನಿಜಜೀವನದ ನಾಯಕ [ಖಳನಾಯಕ]ರಿಗಿಂತ ಹಿರಿದಾಗಿ ನಮ್ಮ ನೆನಪಿನಲ್ಲಿದೆ ಅಂತ ನಿಮಗನ್ನಿಸುತ್ತದೆಯೇ?

ಶಾಂತಿ/ಹಿಂಸೆಯ ಮಾರ್ಗದಲ್ಲಿ ಪ್ರತಿಭಟಿಸಿ ಫಲ ಪಡೆದ ಘಟನೆಗಳ ಬಗ್ಗೆ ಮತ್ತೊಂದು ಚರ್ಚೆ ಆರಂಭಿಸಬಹುದು ಅಂತ ಸೂಚಿಸಿದ್ದೀರಿ. ಬದಲಿಗೆ, ಮಾಸ್ತಿಯವರ ಸಾಹಿತ್ಯವನ್ನು ಹೆಚ್ಚು ಜನರಿಗೆ ತಲುಪಿಸಲು ಏನು ಮಾಡಬಹುದು ಎಂದು ಚರ್ಚಿಸಬಹುದಲ್ಲವೇ. ಅದರಿಂದ ಇನ್ನೂ ನೂರು ಜನ ಉತ್ತಮ ಕನ್ನಡ ಪುಸ್ತಕಗಳನ್ನು ಓದಿದಂತಾದರೆ ಅದು ಭಾಷೆಗೆ ನುಡಿಗೆ ಒಳ್ಳೆಯದಲ್ಲವೇ?

ಸಂಗನಗೌಡ said...

ಶ್ರೀರಾಮ್, ನೀವು ಈ ವಿಷಯವನ್ನು ಆಯ್ದುಕೊಂಡು ಒಳ್ಳೆಯ ಕೆಲೆಸವನ್ನೇ ಮಾಡಿದ್ದೀರಿ, ಬೆಂಗಳೂರಿನ ಹೆಸರಿನ ಬಗ್ಗೆ ಆಗಲೇ ಸಾಕಷ್ಟು ಜನರು ಬರೆದಿರುವದರಿಂದ ಅದರ ಬಗ್ಗೆ ಇಲ್ಲಿ ನಾನು ಪ್ರಸ್ತಾಪಿಸುವದಿಲ್ಲ. ಅನಂತಮೂರ್ತಿಯವರ ಮಾತಿನಂತೆ ಸದ್ಯಕ್ಕೆ ಕನ್ನಡದ ಉಳಿವು, ಕನ್ನಡಿಗರು ಉತ್ತಮ ದ್ವಿಭಾಷಿಗಳಾಗುವದರಲ್ಲಿದೆ. ಮನಸ್ಸಿನ ಎರಡು ಮನೋಭಾವಗಳಿರುತ್ತವೆ, ೧) ಬೇಡುವ ಮನೋಭಾವ ೨) ನೀಡುವ ಮನೋಭಾವ. ಕನ್ನಡದಿಂದ ನನಗೇನು ಸಿಗುತ್ತದೆ ಅನ್ನುವ ಬೇಡುವ ಮನೋಭಾವದವರೇ ಕರ್ನಾಟಕದಲ್ಲಿ ಹೆಚ್ಚಾಗಿದ್ದಾರೆ, ಅದಕ್ಕಿಂತ ಕನ್ನಡ ನನ್ನದು, ಇದನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗಬೇಕೆನ್ನುವ ಮನೋಭಾವ ಮೂಡಬೇಕಿರುವುದು ಸಧ್ಯದ ಅವಶ್ಯಕತೆ. ನಾರಾಯಣಮೂರ್ತಿಯಂಥವರಿಗೂ ಅಮೇರಿಕರನ್ನು ಹೇಗಾದರೂ ಮೆಚ್ಚಿಸಿ, ಪ್ರೊಜೆಕ್ಟ್ ಗಳಿಸುವುದೇ ಪ್ರಥಮ ಆಧ್ಯತೆ. ರಾಷ್ಟ್ರೀಯ ಟಿವಿಯೊಂದರಲ್ಲಿ ಬಂದ ಅವರ ಸಂದರ್ಶನದಲ್ಲಿ ಅವರು ಹೇಳಿದ್ದು ಅದನ್ನೇ. ಇದೇ ಬೇಡುವ ಬುದ್ಧಿ, 'ಸತ್ಯಂ'ನಲ್ಲಿ ತೆಲುಗು ಮಾಧ್ಯಮದಲ್ಲಿ ಓದಿದವರಿಗೆ ಪ್ರಥಮ ಆದ್ಯತೆ, ನಮ್ಮ ಕನ್ನಡಿಗನಿಂದಲೇ ಸ್ಥಾಪಿತವಾದ ಯಾವ ಕಂಪನಿಯಲ್ಲಿ ಕನ್ನಡ ಮಾದ್ಧ್ಯಮದವರಿಗೆ ಆಧ್ಯತೆ ಇದೆ? MNC ಗಳಲ್ಲಿ ಉತ್ತಮ ಸ್ಥಾನಗಳಲ್ಲಿರುವ ತೆಲುಗರು ಮತ್ತು ತಮಿಳರು ನಿನಗೆ ತೆಲುಗು ಬರುತ್ತದೆಯೇ? ತಮಿಳು ಬರುತ್ತದೆಯೇ? ಅಂತ ನೇರವಾಗಿ ಕೇಳಿ ತೀರ್ಮಾನಿಸುತ್ತಾರೆ. ಅದನ್ನವರು ತಪ್ಪು ಎಂದು ಭಾವಿಸುವದಿಲ್ಲ, ತಮ್ಮ ಭಾಷೆಗೆ ತಮ್ಮ ಸೇವೆ ಎಂದು ಭಾವಿಸುತ್ತಾರೆ. ಈ ನೀಡುವ ಬುದ್ಧಿ ನಮ್ಮಲ್ಲಿ ಬೆಳೆಯಬೇಕು ಅಷ್ಟೆ. ಇದನ್ನೇ ಗ್ರಾಹಕನ ದ್ರುಶ್ಟಿ(ನೀಡುವ ಬುದ್ಧಿ) ಮತ್ತು ವ್ಯಾಪಾರಿ ದ್ರುಷ್ಟಿ(ಬೇಡುವ ಬುದ್ಧಿ)ಗಳಿಗೆ ಹೋಲಿಸಬಹುದು. ವ್ಯಾಪಾರಿಯೊಬ್ಬ ವ್ಯಾಪಾರಿ ದ್ರುಷ್ಟಿಯವನೇ ಆಗಬೇಕೆಂದಿಲ್ಲ, "ನಾನು ಹಣ ಪಡೆಯುವೆ,ಸೇವೆ ನೀಡುವೆ" ಎಂಬ ರೀತಿಯ ದ್ರುಷ್ಟಿ ಅವನಲ್ಲಿ ತನ್ನತನ ಮರೆಸುವದಿಲ್ಲ. ಇದೇ ಕಾರಣದಿಂದ ಗುಜರಾತಿಗಳು ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದರೂ ತಮ್ಮತನ ಮರೆತಿಲ್ಲ. ಈ ಭಾವನೆವುಳ್ಳ ಸ್ವಾಭಿಮಾನ ಮತ್ತು ಕನ್ನಡ ನನ್ನದು ಎಂಬ ಭಕ್ತಿ ಕನ್ನಡಿಗರಲ್ಲಿ ಮೂಡುವವರೆಗೆ ಬೇರೆಲ್ಲವೂ ನಿರರ್ಥಕ.

rumgs said...

ಇಲ್ಲಿ ಯಾವುದೇ ವಿಷಯಕ್ಕೂ ಪರ-ವಿರೋದಗಳನ್ನು ವ್ಯಕ್ತಪಡಿಸಬಹುದು. ಹಿಂಸೆಯಿಂದ ಒಳ್ಳೆಯದಾಗಿದೆ ಎನ್ನುವುದು ಹಿಂಸೆಯನ್ನು ಪ್ರೇರೇಪಿಸಿದ, ಅಹಿಂಸೆ ಕಾಪಾಡುವುದರ ಅಸಡ್ಡೆ ತೋರಿದ ನಾಗರೀಕ ಅಧಿಕಾರಿಗಳ ಅನಾಗರೀಕ ವರ್ತನೆ ಸೂಚಿಸುತ್ತದೆ. ಕಾನೂನಿನಲ್ಲಿ ನೀವು ನಂಬಿಕೆ ಕಳೆದು ಕೊಳ್ಳಬಹುದು ಆದರೆ ಎಂದೆಂದಿಗೂ ನಂಬಿಕೆ ಕಾನೂನಾಗಲು-ಕಾನೂನು ಎದುರಿಸಲು ಖಂಡಿತಾ ಸಾಧ್ಯವಿಲ್ಲ ಆದರೆ ಅವಶ್ಯಕತೆ ಕಾನೂನನ್ನು ಮೀರಲು ಸಾಧ್ಯವಿದೆ. ಕನ್ನಡ ಪ್ರೀತಿ, ಬೆಳವಣಿಗೆ ನಮ್ಮ ಒಂದು ಪ್ರಾಂತ್ಯದ ಸಂಸ್ಕೃತಿಯ ವಿಷಯ. ಇದನ್ನು ಉಳಿಸಿಕೊಳ್ಳಲು ಅಲ್ಲಿನ ಕಾನೂನು ವ್ಯವಸ್ಥೆಯ ಅಧೀನದಲ್ಲಿರುವವರ ಅಧಿಕಾರಿಗಳಿಗೆ ಅದರ ಅರಿವಿಲ್ಲದ ಸಮಯದಲ್ಲಿ ಅವರ ಮೊಂಡುತನವನ್ನು ಧಿಕ್ಕರಿಸುವ ಪರಿಯೆ ಕಾನೂನು ವ್ಯವಸ್ಥೆಯ ಉಲ್ಲಂಘನೆಯಾಗಿ ಪರಿಣಮಿಸಿದೆ. ಇದು ಸಹ ಉತ್ತಮ ಸಂಪ್ರದಾಯದ ಒಂದು ರೀತಿಯೇ ಆಗಿದೆ.
ತೆಲುಗಿನ ಠಾಗೋರ್‍ನ ಕಥೆ ಒಳ್ಳೆಯ ತನ ಬಿಂಬಿಸುವ ಒಂದು ಕಥೆಯ ಹಂದರ ಹೋಂದಿದೆ. ಇಲ್ಲಿನ ಠಾಗೋರ್ [ಚಿರಂಜೀವಿ] ಸಹ ತನ್ನ ಪ್ರಜೆಗಳ ಒಳಿತಿಗಾಗಿ ಸರ್ಕಾರದ ಕಾನೂನು ಮೀರಿದ ತನ್ನದೆ ಕಾನೂನು ನಿರ್ಮಿಸುತ್ತಾನೆ. ಅಲ್ಲಿ ಅವನಿಗೆ ಜನ ಬೆಂಬಲ ದೊರೆಯಲಿಲ್ಲವೇ? ಮುಲ ತಮಿಳು ಚಿತ್ರ ರಮಣ, ತೆಲುಗಿನ ಠಾಗೋರ್, ವಿಷ್ಣುಸೇನಾ ಎಂಬ ಕನ್ನಡದಲ್ಲೂ ಬಂದ ಈಚಿತ್ರ ಪ್ರೇಕ್ಶಕರ ಅಪಾರ ಮೆಚ್ಚುಗೆ ಗಳಿಸಿತ್ತು. ಸುಪ್ತವಾಗಿ ಎಲ್ಲರೂ ಈ ಭ್ರಮೆಯಲ್ಲಿ ತೇಲಾಡಲು ಸಾಧ್ಯವಾಗುವಂತೆ ಮಾಡಿತ್ತು. ಆದರೇ ಚಿತ್ರ ನೋಡಿದ ನಮ್ಮ ಕಾನೂನು ಪಾಲಕರು, ಸಂಸ್ಕೃತಿ ರಕ್ಷಕರು ಇದರಿಂದ ಒಳ್ಳೆಯ ತನ ಅಳವಡಿಸಿಕೊಂಡರೆ? ಹಾಗೇನಾದರು ಅಳವಡಿಸಿಕೊಂಡಿದ್ದಲ್ಲಿ ೧೯೮೧ ರಲ್ಲಿ " ಅಂತ " ಚಿತ್ರ ತೆರೆಕಂಡ ಮೇಲೆ ಈ ರೀತಿಯ ಚಿತ್ರಗಳು ಅರ್ಥ ಕಳೆದುಕೊಳ್ಳುತ್ತಿದ್ದವು.
ಇನ್ನು ಸಾಂಗ್ಲಿಯಾನ, ವೀರಪ್ಪನ್ ಮತ್ತು ದಯಾನಾಯಕ್ ನೈಜ ಕಥೆಯಿಂದ ಪ್ರೇರಣೆ ಪಡೆದವುಗಳೆ ಆಗಿದೆ. ಇಲ್ಲಿ ಸಾಂಗ್ಲಿಯಾನ ಬದಲಿಗೆ ಹಾಜಿ ಮಸ್ತಾನ, ವೀರಪ್ಪನ್ ಬದಲಿಗೆ ವೀರ ಪಾಂಡ್ಯ ಕಟ್ಟ ಬೊಮ್ಮನ್ ಮತ್ತು ದಯಾನಾಯಕ್ ಬದಲು ವೇಲುನಾಯ್ಕರ್ [ನಾಯಗನ್] ನನ್ನು ಬಿಂಬಿಸಲಿಲ್ಲ. ಆದರೆ ಮಾಸ್ತಿಯಲ್ಲಿ ಅವರು ಬಿಂಬಿಸಲು ಹೊರಟಿದ್ದು ಮಸ್ತಾನ್ ಎಂಬ ಬೆಂಗಳೂರಿನ ರೌಡಿಯನ್ನು. ನಾಗರಹಾವೇ ಹುತ್ತದಿಂದ ಹೊರಬಂದು ಚಿತ್ರಪರದೆಯ ಮೇಲೆ ಬರುವುದರೊಳಗೆ ತರಾಸು ಅವರಿಂದ ಕೆರೆಹಾವೆಂದು ಕರೆಸಿದ್ಕೊಂಡದ್ದು ಜನಗಳ ನೆನಪಿನಲ್ಲಿ ಇನ್ನೂ ಇರುವಾಗ " ಆಯಾ ಚಿತ್ರಗಳು ನಿಜಜೀವನದ ನಾಯಕ [ಖಳನಾಯಕ]ರಿಗಿಂತ ಹಿರಿದಾಗಿ ನಮ್ಮ ನೆನಪಿನಲ್ಲಿದೆ ಅಂತ ನಿಮಗನ್ನಿಸುತ್ತದೆಯೇ?" ಎಂದು ನೀವು ಹೇಳಿರುವುದು ಅತಿಶಯೋಕ್ತಿಯೇನಲ್ಲ.
ಶಾಂತಿ/ಹಿಂಸೆಯ ಮಾರ್ಗದಲ್ಲಿ ಪ್ರತಿಭಟಿಸಿ ಫಲ ಪಡೆದ ಘಟನೆಗಳ ಬಗ್ಗೆ ಚರ್ಚೆಯೂ ಆರಂಭಗೊಳ್ಳಲಿ ಹಾಗೆಯೇ ಮಾಸ್ತಿ, ಅನಕೃ, ರಿಂದ ಹಿಡಿದು ಜಿಂದೆ ನಂಜುಂಡಸ್ವಾಮಿ, ಮಾಭಿಶೇ ಯವರೂ ಕನ್ನಡ ಓದುಗರನ್ನು, ಭಾಷೆಯನ್ನು ಹೇಗೆ ಹಿಡಿದಿಟ್ಟಿದ್ದರು ಎಂಬ ಚರ್ಚೆ ಸಹ ಪ್ರಾರಂಭವಾಗಲಿ

Kamalakar said...

ಮಾನ್ಯ್ ಶ್ರೀರಾಮ,
ನಿಮ್ಮ ಕನ್ನಡ ರಾಷ್ಟ್ರೀಯತೆ ಕುರಿತಾದ ಬ್ಲಾಗಗೆ ಬಂದ ನಾಮಧೇಯ ಹಾಗೂ ಅನಾಮಧೇಯ ಪ್ರತಿಕ್ರಿಯಗಳ ಒಟ್ಟಾರೆ ಅರ್ಥವೆಂದರೆ, ನೀವೇ ಸೂಚಿಸುವಂತೆ, ಕನ್ನಡ ರಾಷ್ಟ್ರವಾದ ಎಷ್ಟು ಸೂಕ್ಷ್ಮಸ್ಪಂದಿಯಾಗಿಬಿಟ್ಟಿದೆ ಎನ್ನುವುದು. ಈ ರಾಷ್ಟ್ರವಾದದ ಕಿತಾಪತಿಗಳ ಕುರಿತಾದ ನಿಮ್ಮ ಕಳಕಳಿಗಳು ಜಾಯದ್ ಎಂದು ನಾನು ಒಪ್ಪುತ್ತೇನೆ. ದೇಶಕಾಲದಲ್ಲಿ ನಾನು ಓದಿದ ನಿಮ್ಮ ಲೇಖನವನ್ನು ಕೂಡ ನಾನು ಸಮರ್ಥಿಸುತ್ತೇನೆ.
ನಿಮಗೆ ಪ್ರತಿಕ್ರಿಯಿಸುತ್ತ ಶ್ರೀ ಶಿವುರವರು ಬರೆದಿರುವ ಲೇಖನದಲ್ಲಿ ಬರುವ ಮಹಾರಾಷ್ಟ್ರದ ಪ್ರಸ್ತಾಪಕ್ಕೆ ಇಲ್ಲಿ ಪ್ರತಿಕ್ರಿಯಿಸುತ್ತೇನೆ. ಅದೆಂದರೆ, ಮಹಾರಾಷ್ಟ್ರದಲ್ಲಿನ ಭಾಷಾ ರಾಷ್ಟ್ರೀಯತೆ ಜೋರಾದದ್ದು ಎನ್ನುವುದು ಸರಿಯಾದರೂ, ಇಲ್ಲಿನ ಜನರು ಪರಭಾಷಿಗರ ಬಗ್ಗೆ ತೋರುವ ಒಪ್ಪಿಗೆ ಮಹತ್ತರವಾದದ್ದು. ಮಹಾರಾಷ್ಟ್ರದಲ್ಲಿ ಸಣ್ಣ ಸಣ್ಣ ತಾಲೂಕುಗಳಲ್ಲಿಯೂ ದೂರದೂರಿನಿಂದ ಬಂದವರಿದ್ದಾರೆ ಎಂಬುದನ್ನು ಗಮನಿಸಬೇಕು. ಇದು ಬರೀ ದೊಡ್ಡ ಶಹರಗಳ ಮಾತಲ್ಲ. ಹೊರ ಪ್ರಾದೇಶಿಕರನ್ನು ಸಹಿಸಿಕೊಳ್ಳುವ ಪರಂಪರೆಯೂ ಬಲವಾಗಿದೆ ಮಹಾರಾಷ್ಟ್ರದಲ್ಲಿ. ಅಂಥಹ ಪರಂಪರೆ ಕರ್ನಾಟಕದಲ್ಲಿಯೂ ಸದಾ ಜೀವಂತವಾಗಿರಲಿ ಎಂದೇ ಹಾರೈಕೆ.
ಕಮಲಾಕರ
www.sampada.net/blogs/kamalakar

ಕನ್ನಡಿಗ said...

ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟವನ್ನು ಬೆಂಬಲಿಸಿ...

http://karave.blogspot.com/

www.karnatakarakshanavedike.org