skip to main |
skip to sidebar
ಗೆಂಟಿನ ಸ್ಟೇಷನ್‍ನಲ್ಲಿ ಇಳಿದಾಗ ಅಲ್ಲಿಂದ ಮನೆಗೆ ಟ್ಯಾಕ್ಸಿ ತೆಗೆದು ಹೋಗಬಹುದು ಅನ್ನಿಸಿತು. ಎರಡು ದೊಡ್ಡ ಸೂಟ್‍ಕೇಸು, ಒಂದು ಲ್ಯಾಪ್‍ಟಾಪ್ ಬ್ಯಾಗು ಹೊತ್ತು ಟ್ರಾಂನಲ್ಲಿ ಹೋಗುವುದು ಕಿರಿಕಿರಿ ಅನ್ನಿಸಿದರೂ, ಹ್ಯಾನ್ಸ್ ಮಾತ್ರ ಟ್ರಾಮಿನಲ್ಲೇ ಹೋಗೋಣವೆಂದ. ಟ್ರಾಮಿನಲ್ಲೂ ಬಸ್ಸಿನಲ್ಲೂ ಪ್ರವೇಶಮಾಡುತ್ತಿದ್ದ ಹಾಗೆಯೇ ಟಿಕೇಟನ್ನು ಕೊಳ್ಳಬೇಕು. ಸಾಧಾರಣವಾಗಿ ಎಲ್ಲರ ಬಳಿಯೂ ಮೊದಲೇ ಕೊಂಡ ಟಿಕೇಟಿರುತ್ತದೆ. ಅದನ್ನು ಯಂತ್ರದೊಳಕ್ಕೆ ತೂರಿಸಿದರೆ ಅಂದಿನ ಯಾನದ ಮೊಬಲಗು ಅದರಲ್ಲಿ ನಮೂದಾಗುತ್ತದೆ. ಒಂದು ಟಿಕೇಟನ್ನು ತೂರಿಸಿದಾಗ ಅದು ಒಂದಿಷ್ಟು ದೂರಕ್ಕೆ ಮತ್ತು ಸಮಯಕ್ಕೆ ವ್ಯಾಲಿಡ್ ಆಗಿರುತ್ತದೆಂದು ಹ್ಯಾನ್ಸ್ ಹೇಳಿದ. ಉದಾಹರಣೆಗೆ ಆ ಟ್ರಾಮಿನಿಂದ ಇಳಿದು ಬೇರೆ ದಾರಿಯ ಟ್ರಾಂ ಹಿಡಿದರೂ, ಟಿಕೇಟಿನಿಂದ ಮೊಬಲಗನ್ನು ಕತ್ತರಿಸುವುದಿಲ್ಲವಂತೆ. ಆದರೆ ಅದೇ ಟಿಕೇಟನ್ನು ಎರಡು ಬಾರಿ ತಕ್ಷಣಕ್ಕೆ ತೂರಿಸಿದರೆ ಇಬ್ಬರು ಪ್ರಯಾಣಿಕರಿಗೆ ತಕ್ಕ ಮೊಬಲಗನ್ನು ಕತ್ತರಿಸುತ್ತದೆ. ಪ್ರೋಗ್ರಾಂನಲ್ಲಿ ಈ ರೀತಿಯ ಟೈಂ ಸಂಬಂಧಿತ ಕೋಡನ್ನು ಬರೆದಿರಬಹುದು ಅಂತ ಹ್ಯಾನ್ಸ್ ಹೇಳಿದ. ರೈಲು ಟಿಕೇಟು ಇಷ್ಟು ವಿಕಸಿತಗೊಂಡಿಲ್ಲ. ಹತ್ತೋ ಇಪ್ಪತ್ತೋ ಟ್ರಿಪ್ಪುಗಳಿಗಾಗುವ ರೈಲು ಟಿಕೇಟನ್ನು ನೀವು ಕೊಂಡು ಇಟ್ಟುಕೊಳ್ಳಬಹುದು. ಪ್ರತಿಬಾರಿ ರೈಲು ಹತ್ತುವಾಗಲೂ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರೆಂದು ಟಿಕೇಟಿನ ಮೇಲೆ ಬರೆಯಬೇಕು. ಇಬ್ಬರು ಆ ಟಿಕೇಟಿನ ಮೇಲೆ ಪ್ರಯಾಣ ಮಾಡುತ್ತಿದ್ದರೆ ಎರಡುಬಾರಿ. ಈ ಕೆಲಸವನ್ನು ರೈಲು ಹತ್ತುವ ಮೊದಲೇ ಮಾಡಬೇಕು. ಇಲ್ಲವಾದರೆ ಜುಲ್ಮಾನೆ. ಎಷ್ಟೋ ಆಸಕ್ತಿಕರ ಪದ್ಧತಿಗಳು ಈ ದೇಶದಲ್ಲಿವೆ.
ಲಕ್ಸಂಬರ್ಗ್‌ನಿಂದ ಬ್ರಸಲ್ಸ್ ಗೆ ಬಂದದ್ದಾಯಿತು. ಭಾಯಿಸಾಬ್ ಎನ್ನುತ್ತಲೇ ಎರಡು ತಲೆಮಾರಿನ ಹಿಂದೆ ಭಾರತದಿಂದ ವಲಸೆ ಹೋಗಿದ್ದ ರಾಯ್ ಜೊತೆಗೆ ಜೋತುಬಿದ್ದು ಜಿಪಿಎಸ್ ಇದ್ದ ಅವನ ಹೊಸ ಕಾರಿನಲ್ಲಿ ನನ್ನನ್ನು ನಾನೇ ಹೇರಿಕೊಂಡಿದ್ದೆ. ಒಂದು ಥರದಲ್ಲಿ ಭಾರತದ ಯಾವುದೇ ಕೊಂಡಿಯಿದ್ದರೂ ಸಾಕು ಅವರೆಲ್ಲ ನಮ್ಮ ಬಂಧುಗಳೇ. ಎಲ್ಲಿಂದಲಾದರೂ ಒಂದು ಸಂಬಂಧವನ್ನು ನಾವು ಹೆಕ್ಕಿ ತೆಗೆಯುವುದರಲ್ಲಿ ನಿಷ್ಣಾತರು. ವಸುಧೈವ ಕುಟುಂಬಕಂ ಎನ್ನುವ ಕಾನ್ಸೆಪ್ಟನ್ನು ಜಗತ್ತಿಗೆ ಕೊಟ್ಟವರೇ ನಾವಲ್ಲವೇ? ಈಚೆಗೆ ಚಿದಾನಂದ ರಾಜಘಟ್ಟ ನೊಬೆಲ್ ಪುರಸ್ಕೃತರ ಬಗ್ಗೆ ಬರೆಯುತ್ತಾ, ಯಾರನ್ನೆಲ್ಲಾ ಭಾರತೀಯರೆಂದು ಹೇಳಿಕೊಂಡು ನಾವು ವಿನಾಕಾರಣ ಹೆಮ್ಮೆ ಪಡಬಹುದು ಎಂದು ಬರೆದಿದ್ದರು. ಅದರಲ್ಲಿ ನೈಪಾಲರ ಹೆಸರನ್ನೂ ಅವರು ಸೇರಿಸಿದ್ದರು. ನೈಪಾಲರು ಎಷ್ಟು ಭಾರತೀಯರೋ, ರಾಯ್ ಕೂಡಾ ಅಷ್ಟೇ ಭಾರತೀಯ. ಹೀಗಾಗಿ ದೇಶದ ಹೆಸರಿನಲ್ಲಿ ಅವನ ಕಾರಿನಲ್ಲಿ ಹೇರಿಕೊಳ್ಳುವುದು ನನ್ನ ಜನ್ಮದ ಹಕ್ಕಾಗಿತ್ತು. ಭಾಷೆಯ ಪರಿಜ್ಞಾನವಿಲ್ಲದ ಜಾಗದಲ್ಲಿ ಎರಡು ಭಾರೀ ಸೂಟ್‌ಕೇಸುಗಳನ್ನು ಹೇರಿಕೊಂಡು, ಟ್ಯಾಕ್ಸಿ ಹಿಡಿದು, ಗಂಟೆಗೊಮ್ಮೆ ಬ್ರಸಲ್ಸ್ ಗೆ ಹೋಗುವ ರೈಲನ್ನು ಹತ್ತಿ ಅದರಲ್ಲಿ ಪ್ರಯಾಣ ಮಾಡುವುದಕ್ಕಿಂತ, ಭಾರತೀಯನೆಂದು ಹೇಳಿಕೊಂಡು ಹೇರಿಕೊಂಡು ಹೋಗುವುದೇ ಉತ್ತಮ ಎನ್ನಿಸಿತ್ತು. ಮೇಲಾಗಿ ಈ ಮೂಲಕ ೨೮ ಯೂರೋಗಳನ್ನೂ ಉಳಿಸಿ ಅದರಲ್ಲಿ ಮನೆಗೆ ಬೆಲ್ಜಿಯನ್ ಚಾಕೊಲೇಟುಗಳನ್ನೂ ತರಬಹುದಿತ್ತು!
ಸಾಮಾನ್ಯವಾಗಿ ಸೆಮಿನಾರುಗಳಿಗೆಂದು ವಿದೇಶಕ್ಕೆ ಹೋದಾಗ ಭಾರತೀಯರ ಒಂದು ತಂಡ ಯಾವಾಗಲೂ ಕಾಣಿಸುತ್ತದೆ. ಎಲ್ಲರೂ ಒಂದು ಗುಂಪಾಗಿ, ಅಲ್ಲಿ ಇಲ್ಲಿ ಓಡಾಡುವುದು, ಸ್ಥಳೀಯ ಪ್ರಾವಾಸೀ ತಾಣಗಳಿಗೆ ಭೇಟಿ ನೀಡುವುದು, ಹಾಗೂ ಬಂದ ಮುಖ್ಯಕೆಲಸವಾದ ಪೇಪರ್ ಓದುವುದು ಎಲ್ಲವೂ ನಡೆಯುತ್ತದೆ. ಸಾಮಾನ್ಯವಾಗಿ ದೇಸಿಗಳಲ್ಲಿ ಎರಡು ಭಾಗಗಳು ಸಹಜವಾಗಿಯೇ ಆಗುತ್ತವೆ. ಒಂದು ಭಾಗ ಸಾಹಸಿಗಳದ್ದು. ಅವರು ಯಾವುದೇ ರೀತಿಯ ಊಟವನ್ನಾದರೂ ತಿನ್ನಬಲ್ಲವರು, ಆಯಾ ಜಾಗದ ನೈಟ್ ಕ್ಲಬ್ಬುಗಳನ್ನು ಶೋಧಿಸಿ ನೋಡುವವರು ಮತ್ತು ಅಲ್ಲಿರಬಹುದಾದ ಯಾವುದೇ ಮನರಂಜನೆಯನ್ನಾಗಲೀ ಲಗಾಮಿಲ್ಲದೇ ಅಸ್ವಾದಿಸಲು ತಯಾರಾಗಿರುವವರು. ಎರಡನೇ ಭಾಗ ಛಳಿಯನ್ನು ತಡೆಯಲಾರದೇ ಒದ್ದಾಡುವ, ಮನೆಯಿಂದ ಎಂಟಿಆರ್ ಪ್ಯಾಕೆಟ್ಟುಗಳನ್ನು ಕಟ್ಟಿ ತಂದಿರುವ, ಯಾವ ರಿಸ್ಕನ್ನೂ ತೆಗೆದುಕೊಳ್ಳದೇ ಆಯೋಜಕರು ತೋರಿಸಿದ ನೋಟಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಬರುವ ಭಯಭೀತರು. ಅವರು ಯಾವಾಗಲೂ ತಮ್ಮ ಜೇಬನ್ನು ತಡಕಿ ನೋಡುತ್ತಾ, ಹಣವನ್ನು ಎಣಿಸುತ್ತಾ, ಪಾಸ್‍ಪೋರ್ಟ್ ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಾ ಭಯಭೀತಿಯಿಂದ ಕಳೆಯುವವರು. ಅವರುಗಳಲ್ಲಿ ಕೆಲ ಧುರೀಣರು ಹಣ ಉಳಿತಾಯ ಮಾಡುವ ನಾನಾ ವಿಧಾನಗಳನ್ನು ಕಂಡು ಹಿಡಿದವರಾಗಿರುತ್ತಾರೆ. [ಉದಾಹರಣೆಗೆ, ಸೆಮಿನಾರಿನಲ್ಲಿ ಕೊಟ್ಟ ಅಲ್ಪಾಹಾರವನ್ನು ಹೆಚ್ಚಾಗಿ ತಿಂದರೆ ರಾತ್ರೆಯ ಊಟದ ಖರ್ಚು ತಪುತ್ತದೆ ಅನ್ನುವವರು, ಹಣ್ಣ್ದು ಹಂಪಲನ್ನು ಕೊಂಡು ರೂಮಿನಲ್ಲಿ ತಿನ್ನುವವರು, ಮತ್ತು ಸೂಪು ಕುಡಿದರೆ ಜೊತೆಗೆ ಕೊಡುವ ಬ್ರೆಡ್ಡಿನಲ್ಲೇ ಊಟಮುಗಿಸಬಹುದೆಂದು ಲೆಕ್ಕ ಹಾಕುವವರು].