ಅರವಿಂದ ಅಡಿಗರ ಬಿಳಿಹುಲಿ

ಸಾಮಾನ್ಯವಾಗಿ ಹೊಸ ಲೇಖಕನ ಪ್ರಥಮ ಪುಸ್ತಕಕ್ಕೆ ದೊರೆಯುವುದಕ್ಕಿಂತ ಹೆಚ್ಚಿನ ಪ್ರಚಾರ ಈ ಪುಸ್ತಕಕ್ಕೆ ದೊರೆತಿರಬಹುದೇನೋ. ಈ ಪುಸ್ತಕ ಬಿಡುಗಡೆಯಾದ ಕೆಲದಿನಗಳಲ್ಲೇ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿತ್ತು. ಅನೇಕ ಟಿವಿ ವಾಹಿನಿಗಳಲ್ಲಿ ಈ ಪುಸ್ತಕದ ಜಾಹಿರಾತೂ ಕಂಡಿತ್ತು. ನನ್ನ ಅರಿವಿನಲ್ಲಿ ಸಣ್ಣ ಪರದೆಯ ಮೇಲೆ ಮೊದಲಬಾರಿಗೆ ಕಾರ್ಯಕ್ರಮಗಳನ್ನು ಒಂದು ಸಾಹಿತ್ಯ ಕೃತಿ ಪ್ರಾಯೋಜಿಸುತ್ತಿತ್ತು. ಇದೆಲ್ಲವೂ ಒಂದು ಹೊಸತನದಿಂದ ಕೂಡಿದ್ದು. ಸಾಹಿತ್ಯದ ಒಂದು ಕೊನೆಯಲ್ಲಿ ಚೇತನ್ ಭಗತ್‍ರ ಪುಸ್ತಕಗಳು ವಿಚಿತ್ರ ದಾಖಲೆಗಳನ್ನು ಸ್ಥಾಪಿಸುತ್ತಾ, ಬೆಳೆಯುತ್ತಾ ಹೋದಂತೆಯೇ ಈಗ ಜಾಹೀರಾತಿನ ಬಲವನ್ನೂ ಉಪಯೋಗಿಸಿ ಮಾರಾಟಮಾಡುತ್ತಿರುವ ’ಸಾಹಿತ್ಯ ಕೃತಿ’ಯಿಂದಾಗಿ ಭಾರತೀಯ ಆಂಗ್ಲ ಬರವಣಿಗೆಯ ಮಾರುಕಟ್ಟೆ ಮತ್ತೊಂದು ಘಟ್ಟವನ್ನೇ ತಲುಪಿದೆ ಅನ್ನಿಸುತ್ತದೆ. ಭಾರತೀಯ ಸಂಜಾತ ಹಿಂದಿನ ವಿಜೇತರನ್ನು ನೋಡಿದರೆ ಯಾರಿಗೂ ಈ ರೀತಿಯ ಓಪನಿಂಗ್ ದೊರೆತಿರಲಿಲ್ಲವೇನೋ. ಅರುಂಧತಿ ರಾಯ್‍ ಅವರ ಪುಸ್ತಕವನ್ನು ಹಾರ್ಪರ್ ಕಾಲಿನ್ಸ್ ಸಂಸ್ಥೆ ಪ್ರಕಟಿಸಲು ನಿರಾಕರಿಸಿತ್ತು. ಅದರಲ್ಲಿನ ತಿರುಳನ್ನು ನೋಡಿದ ತರುಣ್ ತೇಜ್‍ಪಾಲ್ ಆ ಸಂಸ್ಥೆಯಿಂದ ಹೊರಬಿದ್ದು ಇಂಡಿಯಾ ಇಂಕ್ ಅನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಆಕೆಯ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಪ್ರಕಟಿಸಿದ್ದರು. ಕಿರಣ್ ದೇಸಾಯಿ ಅವರ ಪುಸ್ತಕವನ್ನು ಪ್ರಕಟಿಸಲು [ಅದು ಅವರ ಎರಡನೆಯ ಪುಸ್ತಕವಾಗಿದ್ದು, ಆಕೆ ಅನಿತಾ ದೇಸಾಯಿಯವರ ಮಗಳಾಗಿದ್ದರೂ ಸಹ] ಅವರಿಗೆ ಪೀಕಲಾಟವಾಗಿತ್ತು ಅನ್ನುವ ಮಾತನ್ನು ಆಕೆಗೆ ಬುಕರ್ ಬಂದಾಗ ಕೇಳಿದ್ದೆವು. ಅರವಿಂದ ಅಡಿಗರ ಪುಸ್ತಕಕ್ಕೆ ಇಂಥಹ ತೊಂದರೆ ಉಂಟಾಗಲಿಲ್ಲ. ಅರುಂಧತಿಯನ್ನು ಇಲ್ಲವೆಂದ ಹಾರ್ಪರ್ ಕಾಲಿನ್ಸ್ ಸಂಸ್ಥೆ ಅಡಿಗರನ್ನು ಪ್ರಕಟಿಸಿದ್ದಲ್ಲದೇ ಸಾಕಷ್ಟು ಪ್ರಚಾರವನ್ನೂ ನೀಡಿತು.




No comments: