skip to main |
skip to sidebar
ಗುಜರಾತಿನಲ್ಲಿ ಜೀವನದ ಅರ್ಧಭಾಗದಷ್ಟು ಕಳೆದಿರುವ ನನ್ನಂಥವರು ಆ ರಾಜ್ಯದಲ್ಲೇ ಇದ್ದು, ಜನ ಮತ್ತು ದೇಶಕ್ಕಾಗಿ ಅಪ್ರತಿಮ ಕೆಲಸ ಮಾಡುತ್ತಿರುವ ತುಂಬಾ ಭಿನ್ನವಾಗಿರುವ ಇಬ್ಬರನ್ನು ಬೆರಗಿನಿಂದ, ಗೌರವದಿಂದ ಕಾಣದೇ, ಅವರಿಂದ ಪ್ರಭಾವಿತರಾಗದೇ ಇರುವುದು ಕಷ್ಟದ ಮಾತು. ಹಾಲು ಉತ್ಪಾದಕರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದ ಕುರಿಯನ್ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ. ಕುರಿಯನ್ ಅವರ ಕೆಲಸ ಹೆಚ್ಚಿನಂಶ ಗ್ರಾಮ್ಯ ಪ್ರದೇಶಕ್ಕೆ ಸೀಮಿತವಾಗಿತ್ತು. ಪರಿಚಯದವರಿಂದ ಇಳಾಬೇನ್ ಎಂದು ಪ್ರೀತಿಯಿಂದ ಕರೆಸಿಕೊಳ್ಳಲ್ಪಡುವ ಇಳಾ ಭಟ್ ಕುರಿಯನ್‌ಗಿಂತ ತುಂಬಾ ಭಿನ್ನವಾಗಿದ್ದಾರೆ. ಆಕೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕಾಣಿಸಿಕೊಂಡರೂ ಧ್ವನಿಯೇರಿಸಿ ಮಾತನಾಡುವುದಿಲ್ಲ. ಮೇಜು ಗುದ್ದಿ ಕೂಗಾಡುವುದಿಲ್ಲ. ಹಾಗೆ ನೋಡಿದರೆ ಆಕೆ ಒಂದು ಸೊಳ್ಳೆಗೂ ಹಾನಿಯುಂಟುಮಾಡಬಹುದು ಅನ್ನಿಸುವುದಿಲ್ಲ. ಆಕೆಯ ಆಕಾರ ಗಾಂಧೀಜಿಯಂತೆ ಪುಟ್ಟದು, ಮಾತು ಮೃದು. ಆದರೆ ಆಕೆ ಕೈಗೊಂಡ ಯಾವುದೇ ಕೆಲಸವನ್ನು ಹಿಡಿದು ಹೊರಟಾಗ ಆ ಕೆಲಸಕ್ಕೆ ಆಕೆ ಹಾಕಿ ಹಿಡಿವ ಪಟ್ಟು ಗಟ್ಟಿಯಾದದ್ದು, ಉಕ್ಕಿನಂಥದ್ದು. ಜೀವಮಾನವಿಡೀ ಗುಜರಾತಿನ ಬಡ ಹೆಣ್ಣುಮಕ್ಕಳ ಸಮುದಾಯದ ಪರವಾಗಿ ಎಡಬಿಡದೇ ಕೆಲಸಮಾಡಿದ್ದಾರೆ.
No comments:
Post a Comment