ಒಡೆದ ಹೃದಯ; ಮಿಡಿದ ಹೃದಯ


`ಚರಿತ್ರೆಯಿಂದ ಪಾಠ ಕಲಿಯದವರು ಅದನ್ನು ಪುನಃ ಜೀವಿಸುವ ಶಾಪ ಪಡೆಯುತ್ತಾರೆ' 
ಎಂದು ಹೇಳಿದ್ದು ತತ್ವಜ್ಞಾನಿ ಜಾರ್ಜ್ ಸಾಂತಾಯನ. ಸಾಂತಾಯನನ ಮಾತಿನ ಸತ್ಯಾಸತ್ಯತೆ ಸ್ವಲ್ಪ ಕುತೂಹಲದ ವಿಷಯ.
ಚರಿತ್ರೆ:

`ಯಾವುದೇ ಜನಾಂಗದಲ್ಲಿ ಕೋಮುಸೌಹಾರ್ದತೆಯನ್ನು ಮುಂದುವರೆಸಿ ಬರಲು ಕೆಲವು ವಿಶೇಷ ಕ್ರಮ ಕೈಗೊಳ್ಳುನ ಅಗತ್ಯ ಬೀಳುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ನಿಜಾಮನೇ ಸ್ವತಃ ಹೀಗೊಂದು ಕ್ರಮ ಕೈಗೊಳ್ಳುವ ಪರಿಸ್ಥಿತಿ ಒದಗಿ ಬಂತು (ನಿಜಾಮ: ಮಹಬೂಬ್ ಅಲಿ ಪಾಷಾ - ೧೮೬೬-೧೯೧೧). ಅನೇಕ ಭಾರತೀಯ ಹಬ್ಬಗಳು ಚಾಂದ್ರಮಾನ ಪಂಚಾಂಗಕ್ಕನುಸಾರವಾಗಿ, ವರ್ಷದ ಬೇರೆ ಬೇರೆ ತಿಂಗಳುಗಳಲ್ಲಿ ಘಟಿಸುವುದುಂಟು. ಹೀಗಾಗಿ ಎರಡು ಭಿನ್ನ ಹಬ್ಬಗಳು ಒಂದೇ ದಿನ ಬೀಳುವ ಸಾಧ್ಯತೆಯೂ ಉಂಟು. ಇಂಥ ಒಂದು ಕಾಕತಾಳೀಯ ಶಿಯಾ ಮುಸಲ್ಮಾನರ ದುಃಖಭರಿತ ಮೊಹರಂ ತಿಂಗಳಿಗೂ, ಸಂತೋಷದಿಂದ ಬಣ್ಣ ಎರಚುವ ಹೋಳಿ ಹುಣ್ಣಿಮೆಗೂ ನಡುವೆ ಉಂಟಾಯಿತು.'  
ಮುಂದೆ...


7 comments:

Anonymous said...

ನಿಮ್ಮ ಬರಹವನ್ನು ಓದಿದೆ. ಹೈದರಾಬಾದಿನ ನಿಮ್ಮ ಅನುಭವಗಳನ್ನು ಚೆನ್ನಾಗಿ ನಿರೂಪಿಸಿದ್ದೀರಿ.

‘ಕೊಲೆ,ಸುಲಿಗೆ, ಅತ್ಯಾಚಾರ, ಮಹಾಯುದ್ಧಗಳ ಜೊತೆಗೆ ಜನರು ನೆಮ್ಮದಿಯಿಂದ ಇದ್ದರು’ ಎನ್ನುವುದು ‘ಎರಡು ಮಹಾಯುದ್ಧಗಳೇ ನಡೆದರೂ ಕಳೆದ ಶತಮಾನದಲ್ಲಿ ಯುರೋಪಿಯನ್ನರು ನೆಮ್ಮದಿಯಿಂದ ಇದ್ದರು’ ಎಂದು ಹೇಳಿದಂತೆಯೇ ಅರ್ಥರಹಿತವಾದ ನುಡಿಗಟ್ಟಾಗುತ್ತದೆ (ಮಕ್ಕಳ ಕಥೆಗಳು, ಇಂಗ್ಲೀಷ್‍ನಲ್ಲಿ, and they lived happily ever after ಎಂದು ಕೊನೆಯಾಗುತ್ತದಲ್ಲ ಹಾಗೆ).

ಹಿಂದೂ-ಮುಸಲ್ಮಾನ ಸಂಬಂಧಗಳನ್ನು ಇವತ್ತಿನ ರಾಜಕೀಯದ ಹೊರತಾಗಿ ನೋಡುವ ಅಗತ್ಯ ಬಹಳವಿದೆ. ಸುಮಾರು ಒಂದು ಸಾವಿರ ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಮುಸಲ್ಮಾನರು ಬೇರೆಯಾಗೇ ಉಳಿಯುವ ಕಾರಣವೇನು? ಹಾಸನದ ಸುತ್ತ ಮುತ್ತಲಿನ ಹೊಯ್ಸಳರ ಕಾಲದ ದೇವಸ್ಥಾನಗಳನ್ನು ನೋಡಿದರೆ ‘ಮಲ್ಲಿಕ್ ಕಾಫ಼ರ್‌ನ ಹದಿನೇಳು ದಾಳಿಗಳ ನಡುವೆಯೂ ಬೇಲೂರು ಮತ್ತು ಹಳೇಬೀಡಿನ ಜನ ನೆಮ್ಮದಿಯಿಂದ ಇದ್ದರು’ ಎನ್ನುತ್ತೀರಾ? ಇತಿಹಾಸವನ್ನು ನಿರ್ಭೀತಿಯಿಂದ ಅವಲೋಕಿಸುವ ಪರಿಸ್ಥಿತಿಯನ್ನು ನಾವು ನಿರ್ಮಿಸಿಕೊಳ್ಳಬೇಕಾಗಿದೆ. ಸುಳ್ಳುಗಳ ಮೇಲೆ ಕಟ್ಟುವ ರಾಜ್ಯ ಬಹಳ ದಿನಗಳ ತನಕ ಒಂದಾಗಿರುವುದಿಲ್ಲ. ಬಹುಶಃ ನಮ್ಮ ಮತೀಯಲೋಭೆಗಳ ತಳಮಳ ಈ ನೆಲೆಯಿಂದಲೇ ಬಂದುದಾಗಿದೆ.

ಎಂ.ಆರ್. ದತ್ತಾತ್ರಿ

Sriram said...

ದತ್ತಾತ್ರಿ.. ನೀವು ಹೇಳಿದ ಭಾಗವನ್ನು ನಾನು ಮತ್ತೆ ಓದಿದೆ. ಬಹುಶಃ ನೀವು ಹೇಳುವುದರಲ್ಲಿ ಹೆಚ್ಚಿನ ಅರ್ಥವಿದೆ. ನೆಮ್ಮದಿಯಿಂದ ಇದ್ದರು ಅನ್ನುವುದು ಸರಿಯಾದ ಮಾತೂ ಅಲ್ಲ - ಇವೆಲ್ಲ ನಡೆಯುತ್ತಿರುವಾಗ ತಮಗೆ ನೇರವಾಗಿ ತಟ್ಟದಿದ್ದರೂ ನೆಮ್ಮದಿಯಿಂದ ಇರಬೇಕು ಅನ್ನುವ ಆಶಯವೂ ಸರಿಯಲ್ಲ. ಇಲ್ಲಿ ನನ್ನ ಬರಹದ ಪದಪುಂಜಗಳ ಲೋಲುಪತೆಯಲ್ಲಿ ನಾನು ಎಡವಿದ್ದೇನೆ.

ಆದರೆ ಚರಿತ್ರೆಯನ್ನು ಬಳಸಿ ನಮ್ಮನ್ನು ದಾರಿತಪ್ಪಿಸುವ ಕೆಲವರ ರಾಜಕಾರಣದ ವಿರುದ್ಧ ನಾವು ಎಚ್ಚರದಿಂದಿರಬೇಕು. ಬಹುಶಃ ಹಳೇಬೀಡಿನ ಜನ ಅಂದು ನೆಮ್ಮದಿಯಿಂದ ಇದ್ದಿಲ್ಲದಿರಬಹುದು. ಆದರೆ ಇಂದು ಅದರ ಕಾರಣವಾಗಿ ಒಂದು ಕೋಮನ್ನು ಕಾರಣಮಾಡುವುದು ಎಷ್ಟು ಸಮಂಜಸ? ಹೈದರಾಬಾದಿನ ದರ್-ಉಲ್-ತರ್ಜುಮಾವನ್ನು ಸುಟ್ಟು ಅಲ್ಲಿದ್ದ ಅನೇಕ ಅರಬ್ಬಿ ಪುಸ್ತಕಗಳನ್ನು ನಾವು ಕಳದುಕೊಂಡೆವು, ಶಿವಾಜಿಯ ಹೆಸರಲ್ಲಿ ಪುಣೆಯ ಭಂಡಾರ್‌ಕರ್ ಸಂಸ್ಥೆಯ ಮೇಲೆ ಹಿಂದುಗಳಿಂದಲೇ ಹಲ್ಲೆ ನಡೆಯಿತು. ಹಾಗಂತ ಈ ಜನಾಂಗದವರೆಲ್ಲರೂ ಕೆಟ್ಟವರೆಂದು, ಅದೊಂದು ಕೋಮು ಗಲಭೆಗೆ ತಿರುಗಬೇಕೇ? ಫ್ರಿಂಜ್ ಎಲಿಮೆಂಟ್ಸ್ ಎಲ್ಲ ಕೋಮಿನಲ್ಲೂ ಇರುತ್ತಾರೆ. ಅವರು ಕಾನೂನು ವ್ಯವಸ್ಥೆಯ ಸಮಸ್ಯೆಯಾಗಬೇಕೇ ಹೊರತು ಕೋಮಿನ ಸಮಸ್ಯೆಯಾಗಬಾರದು. ಹಿಂದೂಗಳು ಮುಸ್ಲಿಮರು ಎಂಬ ಸ್ಟೀರಿಯೋಟೈಪಿಂಗ್‌ನಿಂದ ಈ ಸಮಸ್ಯೆ ಉದ್ಭವವಾಗುತ್ತದೆ ಅಂತ ನನಗನ್ನಿಸುತ್ತದೆ.

ನಾವು ಕಾನೂನು ವ್ಯವಸ್ಥೆಯ ಸಮಸ್ಯೆಗಳನ್ನು ಕೋಮುಸಮಸ್ಯೆಗಳನ್ನಾಗಿ ಪರಿವರ್ತಿಸದಿದ್ದರೆ ಉತ್ತಮ ಸಮಾಜವಾಗುವುದಕ್ಕೆ ಸಾಧ್ಯ ಅಂತ ನನ್ನ ಅಭಿಪ್ರಾಯ. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

Anonymous said...

ಶ್ರೀರಾಮ್ ಅವರೆ, ನಿಮ್ಮ ಪ್ರಬಂಧದ ನುಡಿಗಟ್ಟಿನ ದೋಷವನ್ನು ತೋರಿಸುವ ಉದ್ಧೇಶ ನನಗಿರಲಿಲ್ಲ. ನಮ್ಮ ಇವತ್ತಿನ ಸಮಸ್ಯೆಗಳಿಗೆ ಆ ಒಂದುಸಾಲಿನಲ್ಲಿ ಅನೇಕ ಅರ್ಥಗಳನ್ನು ಕಂಡಂತಾಗಿ ಆ ಸಾಲನ್ನು ಪುನಃರುಚ್ಚರಿಸಿದೆ ಅಷ್ಟೆ. ನನ್ನ ಮೆಚ್ಚಿನ ಲೇಖಕರಲ್ಲಿ ನೀವೂ ಒಬ್ಬರು. ಚೆಯ ಮೋಟಾರ್ ಸೈಕಲ್ ಡೈರೀಸ್ ಬಗ್ಗೆ ನಿಮ್ಮ ಲೇಖನವನ್ನು ಓದಿ ನನಗೆ ಬಹಳ ಸಂತೋಷವಾಯಿತು. ಅದು ನನ್ನ ಅಚ್ಚುಮೆಚ್ಚಿನ ಸಿನೆಮಾ ಕೂಡ.

ಅಂದಿನ ಮೊಹಮ್ಮದ್ ಘೋರಿಯ ಕೃತ್ಯಗಳಿಗೆ ಇಂದಿನ ಮುಸಲ್ಮಾನರನ್ನು ಗುರಿಯಿಡುವುದನ್ನು ಮನುಷ್ಯತ್ವವಿರುವ ಯಾರೂ ಒಪ್ಪುವಮಾತಲ್ಲ, ಹಾಗಾದರೆ ಹಿಂದಿನ ಅನರ್ಥಗಳ ಜೊತೆ ಸ್ಪರ್ಧಿಸುವಂತೆ ಇವತ್ತಿನ ಅನರ್ಥಗಳು ಸೇರಿಕೊಂಡಾವು. ಯಾವ ಸ್ವರೂಪದ ಹಿಂಸೆಯೂ ಸಮರ್ಥನೆಗೆ ಯೋಗ್ಯವಲ್ಲ.

ಆದರೆ, ಹಿಂಸೆ ನಡೆಯಕೂಡದು ಎನ್ನುವ ಕಾರಣಕ್ಕೇ ಸತ್ಯದ ಹುಡುಕಾಟವನ್ನೇ ನಡೆಸದಿರುವುದು ಕೂಡ ಸಮರ್ಥನೆಗೆ ಯೋಗ್ಯವಲ್ಲ. ಮೇಲಾಗಿ, ನಮ್ಮ ಆಧುನಿಕ ಭಾರತದ "ಜಾತ್ಯಾತೀತ" ನೀತಿಯೇ ಬಹಳ ಗೊಂದಲಮಯವಾಗಿದೆ. ಹಿಂದು-ಮುಸ್ಲಿಂ ಭಾವೈಕ್ಯತೆಯ ಸೂತ್ರಗಳು ಎನ್ನುವಲ್ಲಿಯೇ ಭಾವೈಕ್ಯತೆಯಾಗಿಲ್ಲವೆನ್ನುವ ಸ್ಪಷ್ಟ ಸಂದೇಶವಿದೆ. ಉತ್ತರ ಕಂಡುಕೊಳ್ಳುವ ಗೋಜು ಹಾಗಿರಲಿ, ಭಾರತದಲ್ಲಿನ ಅನ್ಯಧರ್‍ಮೀಯರ ಬಗೆಗೆ/ಸಂಬಂಧಿಸಿದ ಇತಿಹಾಸದ ಬಗೆಗೆ ಪ್ರಶ್ನೆಕೇಳುವುದೇ ತಪ್ಪು ಎನ್ನುವ ಕೆಟ್ಟ ಮನೋಧರ್ಮವನ್ನು ರೂಪಿಸಲಾಗುತ್ತಿದೆ. ಉದಾಹರಣೆಗೆ, ತಾವು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ ನವಾಬ ಹಿಂದು ಹೋಲಿ ಉತ್ಸವದೊಂದಿಗೆ ಸೇರಿ ಅದರ ದಿಕ್ಕನ್ನು ಬದಲಿಸಿದ ಕಥೆಯಲ್ಲಿ ಬರುವ ಭಾವೈಕ್ಯತೆಯ ಸಂದೇಶವನ್ನು ಮೀರಿ ಒಬ್ಬ ಹಿಂದು ಯುವಕ "ನವಾಬರಿಗೆ ತಾವು ಅಷ್ಟುಹೊತ್ತು ಇದ್ದ ಮುಸಲ್ಮಾನ ಜಾತ್ರೆಯನ್ನೆ ದಿಕ್ಕುಬದಲಿಸಲಾಗಲಿಲ್ಲವೇ?" ಎನ್ನುವ ಮುಗ್ಧ ಮತ್ತು ನೇರ ಪ್ರಶ್ನೆಯನ್ನು ಕೇಳಿದರೆ ನಮ್ಮ ಉತ್ತರ ಏನಾಗಬೇಕು? ಇಂದಿನ ಭಾರತದ ಪರಿಸ್ಥಿತಿಯಲ್ಲಿ ಅವನು ಭಾವೈಕ್ಯತೆಯನ್ನು ಪ್ರಶ್ನಿಸುವ ಖಳನಾಯಕನಾಗುತ್ತನೆ. ಉತ್ತರವನ್ನು ಹುಡುಕುವ ಜವಾಬುದಾರಿ ಗೌಣವಾಗಿ ಪ್ರಶ್ನೆಯನ್ನೇ ಪ್ರಶ್ನಿಸುವ (ಅಥವ ಪ್ರಶ್ನಿಸುವ ನಿಲುವನ್ನೆ ಪ್ರಶ್ನಿಸುವ) ದಾರಿಯಲ್ಲಿ ನಮ್ಮ ಪ್ರಜ್ಞಾವಂತ ಸಮಾಜ ಜಾರುತ್ತದೆ. ಕೊನೆಗೆ, ಪ್ರಶ್ನೆಯ ಕೊಲೆಗೆ "ಇದರಿಂದ ಹಿಂಸೆಯೂ ನಡೆಯಬಹುದು ಅಥವ ದೇಶದ ಏಕತೆಗೆ ಭಂಗಬರಬಹುದು" ಎಂದೆಲ್ಲಾ ಸಮಜಾಯಿಷಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿಯ ಮುಖ್ಯ ವಿಷಯವೆಂದರೆ, ನವಾಬನ ಆ ವರ್ಥನೆಯು ಸರಿಯೋ ಅಥವ ಪ್ರಶ್ನಿಸಿದ ಹಿಂದು ಯುವಕನ ಅನುಮಾನಗಳು ನಿಜವೋ ನಮಗ್ಯಾರಿಗೂ ಉತ್ತರ ಗೊತ್ತಿಲ್ಲ. ಅಷ್ಟು ಸುಲಭವಾಗಿ ಉತ್ತರವನ್ನು ಕಂಡುಕೊಳ್ಳುವ ಪ್ರಶ್ನೆಯೂ ಅದಲ್ಲ. ಆದರೆ, ಈ ಐವತ್ತುವರ್ಷಗಳಲ್ಲಿ ನಾವು ಸ್ವೀಕರಿಸಿದ್ದೇವೆಂದು ತಿಳಿದ, ಸೋಶ್ಯಾಲಿಸ್ಟರು ಮತ್ತು ನೆಹರೂ ಹೇರಿದ್ದೆಂದು ಬಹಳ ಜನ ವಾದಿಸುವ, ಜಾತ್ಯತೀಯತೆ ಎನ್ನುವ ಶುದ್ಧ ಕಲ್ಪನೆ ಈ ಪ್ರಶ್ನೆಗಳನ್ನೆಲ್ಲಾ ತಿನ್ನುತ್ತದೆ ಅಥವ ತನಗೆ ಬೇಕಾದ ಹಾಗೆ ತಿರಿಚಿಕೊಳ್ಳುತ್ತದೆ. ಜಾತ್ಯಾತೀಯತೆಯ ಕನ್ನಡಕದಲ್ಲಿ ಹಿಂದೂ ಯುವಕನ ಪ್ರಶ್ನೆ ಒಂದು ಅಪರಾಧ.

ನಾನಿಲ್ಲಿ ಪ್ರಶ್ನಿಸುತ್ತಿರುವುದು ಈ "ಕನ್ನಡಕ"ವನ್ನು. ಈ ಕನ್ನಡಕದಲ್ಲಿ ಮಾತ್ರ ಒಂದು ದೇಶವಾಗಿ ಕಾಣುವ ನಮ್ಮ ಭಾರತ ಕನ್ನಡಕವನ್ನು ಸರಿಸಿದೊಡನೆಯೇ ಬೇರೆಯೇ, ನಾವು ಅಪೇಕ್ಷಿಸದ ಚಿತ್ರವಾಗಿನಿಲ್ಲುತ್ತದೆ. ಮೊದಲು ನಾನೊಬ್ಬ ಹಿಂದು ಅಥವ ನಾನೊಬ್ಬ ಮುಸಲ್ಮಾನ ಎಂದು ಎದೆತಟ್ಟಿ ಹೇಳುವವನು ಮೂಲಭೂತವಾದಿಯಾಗುತ್ತಾನೆ. ಆದರೆ ಮೂಲದಲ್ಲಿ, ಹಿಂದೂವಲ್ಲದೆ ಮುಸ್ಲೀಂನಲ್ಲದೆ ಕೇವಲ ಭಾರತೀಯನಾಗಿ ಬದುಕುವ ಯಾವ ಸಂದರ್ಭಗಳೂ ಭಾರತೀಯನಿಗೆ ಬಂದಿಲ್ಲ. "ಒಂದು ದೇಶ"ವೆನ್ನುವುದು ಭಾರತಿಯನಿಗೆ ತೀರಾ ಇತ್ತೀಚಿನ ಕಲ್ಪನೆ. ಜಾತ್ಯಾತೀಯತೆ ಎನ್ನುವ ಈ ಕನ್ನಡಕವನ್ನು ಭಾರತೀಯನ ಮೇಲೆ ಹೇರಲಾಗಿದೆ.

ಹಿಂದೂ-ಮುಸಲ್ಮಾನ ಸಂಬಂಧದ ಬಗ್ಗೆ ಒಂದು ಮಾತು. ಯಾರು ಒಪ್ಪಲಿ ಬಿಡಲಿ (ಮತ್ತೆ ಕನ್ನಡಕದ ಮಾತು ಬರುತ್ತದೆ) ಇದು ಸಾವಿರ ವರ್ಷಗಳಿಂದಲೂ ರಕ್ತ-ಸಿಕ್ತವಾದ ಸಂಬಂಧ. ಭಾರತಕ್ಕೆ ಮುಸಲ್ಮಾನರ ಆಗಮನವೂ ಬಹಳ ಹಿಂಸಾತ್ಮಕವಾಗಿತ್ತು ಎಂದು ಇತ್ತೀಚೆಗೆ ಒಂದು ಇತಿಹಾಸದ ಪುಸ್ತಕದಲ್ಲಿ ಓದಿದೆ (ಹೆಸರು ಮರೆತು ಹೋಯಿತು, ಬರೆದವನು ಅಮೆರಿಕನ್. ಅವನ ಪ್ರಕಾರ ಅವಾಗ ಸತ್ತ ಹಿಂದೂಗಳ ಸಂಖ್ಯೆ ಎರಡನೇ ಮಹಾಯುದ್ಧದಲ್ಲಿ ಸತ್ತ ಯಹೂದಿಗಳ ಸಂಖ್ಯೆಯನ್ನು ಮೀರಿಸುತ್ತದೆಯಂತೆ). ನಮ್ಮ ವಿಜಯನಗರ ಮತ್ತು ಸುತ್ತಲಿನ ನವಾಬರುಗಳ ಯುದ್ಧಗಳನ್ನೇ ತೆಗೆದುಕೊಳ್ಳಿ. ತೀರ ಹಿಂದಿನದಲ್ಲ ಅದು. ಒಂದು ಯುದ್ಧದ ಗಾಯಗಳು ಆರಲು ಅನೇಕ ಶತಮಾನಗಳು ಬೇಕು. ಯಾವ ಸ್ಲೋಗನ್ನುಗಳು, ಯಾವ ವಾದಗಳು, ಇತಿಹಾಸದ ಪುಸ್ತಕವನ್ನು ಎಷ್ಟು ತಿರುಚಿಬರೆದರೂ ರಾತ್ರೋರಾತ್ರಿ ಈ ಗಾಯಗಳು ಮರೆಯಾಗಿ ರಾಷ್ಟ್ರ್‍ಈಯ ಭಾವೈಕ್ಯತೆಯ ಪ್ರಶಸ್ತಿಯನ್ನು ಪಡೆದ ಸಿನಿಮಾದಂತೆ ಹಿಂದೂ ಮತ್ತು ಮುಸಲ್ಮಾನ ಯುವಕರು ಭಾಯಿ-ಭಾಯಿ ಎಂದು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರುಸುರಿಸುವುದಿಲ್ಲ. ಅಥವಾ, ಇನ್ನು ಮಚ್ಚು ಮುಟ್ಟುವುದಿಲ್ಲವೆಂದು ಪ್ರಮಾಣಮಾಡುವುದಿಲ್ಲ. ಕನ್ನಡಕವನ್ನು ಹಾಕಿಕೊಂಡಾಗ ಭಾವೈಕ್ಯತೆಯ ಸಿನಿಮಾ ಕಾಣುತ್ತದೆ ಮತ್ತು ಕನ್ನಡಕವನ್ನು ತೆರೆದಾಗ ಮಚ್ಚು ಕಾಣುತ್ತದೆ. ಇದರಲ್ಲಿ ಮಚ್ಚು ನಮ್ಮ ದುರಂತವೋ ಅಥವ ಕನ್ನಡಕವೋ ನಮಗೆ ಇನ್ನೂ ತಿಳಿಯದ ವಿಷಯ.

ಎಂ.ಆರ್. ದತ್ತಾತ್ರಿ

Sriram said...

ದತ್ತಾತ್ರಿ

ನೀವು ಹೇಳುವ ಅನೇಕ ಮಜಲುಗಳು ಈ ಸಮಸ್ಯೆಗೆ ಇದೆ. ಸತ್ಯದ ಹುಡುಕಾಟವನ್ನು ನಡೆಸುವುದು ಸ್ವಾಗತಿಸತಕ್ಕ ಮಾತೇ. ಆದರೆ ಭಾರತ ನಿಜಕ್ಕೂ ಜಾತ್ಯಾತೀತವೇ? ಬಹುಶಃ ಇಲ್ಲ. ಇಲ್ಲಿ ನಾವು ಜಾತಿಗೆ ಅತೀತರಾಗಿಲ್ಲದೇ ಎಲ್ಲ ಜಾತಿಗಳಿಗೂ/ಪಂಥಗಳಿಗೂ ಅವರ ನಂಬುಕೆಗಳಿಗನುಸಾರವಾಗಿ ನಡೆದುಕೊಳ್ಳುವ ಸಮಾನ ಅವಕಾಶವನ್ನು ಪಡೆದುಕೊಂಡಿದ್ದೇವೆ. ಹೀಗಾಗಿ 'ಜಾತ್ಯಾತೀತ' ಅನ್ನುವ ಪದದ ಪರಿಭಾಷೆಯನ್ನು ಭಿನ್ನ ರೀತಿಯಲ್ಲಿ ನಾವು ಅರ್ಥೈಸಬೇಕಾಗುತ್ತದೆ. ಹೀಗಾಗಿಯೇ ನಾನು ಭಾರತೀಯನಾಗಿದ್ದೂ ಒಬ್ಬ ಕನ್ನಡಿಗನಾಗಲು, ಕನ್ನಡಿಗನಾಗಿದ್ದೂ ಒಬ್ಬ ಹೈದರಾಬಾದಿಯಾಗಲು, ಹೈದರಾಬಾದಿಯಾಗಿದ್ದೂ ಒಬ್ಬ ಕ್ರೈಸ್ತನಾಗಲು, ಕ್ರೈಸ್ತನಾಗಿದ್ದೂ ಒಬ್ಬ ಸರಕಾರಿ ನೌಕರನಾಗಲು, ಒಬ್ಬ ಪತಿಯಾಗಲು, ಒಬ್ಬ ಮೇಷ್ಟರಾಗಲು ಸಾಧ್ಯವಿದೆ. ಆದ್ದರಿಂದಲೇ ನಾವು ಬಯಸುವ "ಹಿಂದೂವಲ್ಲದೇ, ಮುಸ್ಲಿಮನಲ್ಲದೇ ಕೇವಲ ಭಾರತೀಯನಾಗಿ ಬದುಕುವ" ಸಂದರ್ಭ ನಮಗೆ ಒದಗುವುದಿಲ್ಲ. ಆದರೆ ಒಂದು ಕೋಮಿಗೆ ಸೇರಿದ ಅನ್ನುವ ಮಾತ್ರಕ್ಕೇ ಅವನು ಭಾರತೀಯನಲ್ಲವೇನೋ ಅಥವಾ ಅವನ ನಿಯತ್ತು ಸರಿಯಿಲ್ಲವೇನೋ ಅನ್ನುವ ಅನುಮಾನ ಅಪಾಯಕಾರಿಯಾದದ್ದು.

ಇನ್ನು ನಮ್ಮ ನವಾಬನ ಉದಾಹರಣೆಗೆ ಬರೋಣ. ಅಕಸ್ಮಾತ್ ಆ ಉದಾಹರಣೆಯಲ್ಲಿ ನವಾಬ ಮುಸಲ್ಮಾನರ ಜಾತ್ರೆಯ ದಿಕ್ಕು ಬದಲಿಸಬಹುದಿತ್ತು. ಬದಲಿಸಿದ್ದರೆ ಅದರ ಪರಿಣಾಮ ಹಿಂದೂಗಳ ದಿಕ್ಕನ್ನ ಬದಲಾಯಿಸಿದ್ದಕ್ಕಿಂತ ಭಿನ್ನವಾಗಿ ಇರುತ್ತಿರಲಿಲ್ಲ ಅಲ್ಲವೇ? ಆಗಲೂ ಗಲಭೆಯ ಸಾಧ್ಯತೆಯನ್ನು ಆತ ಇಲ್ಲವಾಗಿಸುತ್ತಿದ್ದ. ಹಾಗೇಕೆ ಮಾಡಲಿಲ್ಲ? ಅದಕ್ಕೆ ಉತ್ತರ ನವಾಬನೇ ಕೊಡಬೇಕು. ನನ್ನನ್ನು ಕೇಳಿದರೆ ಬಹುಶಃ ಅವನಿದ್ದ ಪರಿಸ್ಥಿತಿಯ ಪರಿಸರದಲ್ಲಿ, ಇವರ ಗಮನ ಸೆಳೆದು ದಿಕ್ಕು ಬದಲಾಯಿಸುವುದಕ್ಕಿಂತ ಅವರ ನಡುವೆ ಸೇರಿ ಅವರ ಧ್ಯಾನವನ್ನು ಆಕರ್ಷಿಸುವುದು [ತನ್ನ ಮೇಲೆ ಇನ್ನೂ ಬಣ್ಣ ಬಿದ್ದಿಲ್ಲವಾದ್ದರಿಂದ] ಸುಲಭ ಅನ್ನಿಸಿತೇನೋ.. ಹೇಗೆ ಮಾಡಿದ್ದರೂ ಆತ ತನ್ನ ಮೂಲಭೂತ ಆಶಯಕ್ಕೆ ಧಕ್ಕೆಯಿಲ್ಲದೇ ಗಲಭೆಯನ್ನು ನಿಲ್ಲಿಸಬಹುದಿತ್ತು. ಆದ್ದರಿಂದ ನಿಮ್ಮ ಮುಗ್ಧನ ಪ್ರಶ್ನೆ ಇಲ್ಲಿ ಅಷ್ಟು ಜಟಿಲವಾಗುವುದಿಲ್ಲ.

ಆದರೆ ನಿಮ್ಮ ಕನ್ನಡಕದ ಮಾತು ಮಾತ್ರ ಜಟಿಲವಾದದ್ದು. ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ಕನ್ನಡಕ ತೆಗೆದಾಗ ಕಾಣುವ ಮಚ್ಚೂ ಭ್ರಮೆಯೇ, ಹಾಕಿದಾಗ ಕಾಣುವ ಸೌಹಾರ್ದವೂ ಭ್ರಮೆಯೇ. ಗೋಧ್ರಾದ ಗಲಾಟೆ ನಡೆದಾಗ ನನ್ನ ಮನೆಯಲ್ಲಿ ಆಶ್ರಯ ಪಡೆದ ನನ್ನ ಹಳೇಯ ಮುಸ್ಲಿಂ ವಿದ್ಯಾರ್ಥಿಯನ್ನು ನಾನು ಕನ್ನಡಕ ಧರಿಸಿ ನೋಡಿದೆ. ಆದರೆ ಅವನು ಹಿಂದೂ ಹುಡುಗಿಯನ್ನು ಮದುವೆಯಾಗಿದ್ದ ಅಂತ ಅವನ ಮನೆಗೆ ಅವನನ್ನು ಹುಡುಕಿ ಹೊರಟವರಿಗೆ ಅವನಲ್ಲಿ ಮಚ್ಚು ಕಂಡಿತ್ತು. ಆ ಕ್ಷಣದ ಕಾವಿನಲ್ಲಿ ಅವರುಗಳಿಗೆ ಇನ್ನೇನೂ ಕಾಣುವ ಸಾಧ್ಯತೆ ಇರಲಿಲ್ಲ. ಆ ವಿದ್ಯಾರ್ಥಿ ಆಗ ಅಹಮದಾಬಾದು ಬಿಟ್ಟವನು ಈ ವರೆಗೂ ಇಲ್ಲಿಗೆ ಬಂದಿಲ್ಲ. ಮನೆಯ ಸಾಮಾನನ್ನೂ ಬೇರೊಬ್ಬ ಗೆಳೆಯ ಟ್ರಕ್ಕಿನಲ್ಲಿ ರವಾನೆ ಮಾಡಿದ. ಅವನು ಓದಿದ್ದರಿಂದ ಅವನಿಗೆ ಕೆಲಸ ಸಿಕ್ಕಿತು.. ಆದರೆ ಹಾಗೆ ಹೋಗಲಾರದೇ ಯಾರ ಆಶ್ರಯವೂ ಸಿಗದೇ ಸಿಲುಕಿದವರ ಬಗ್ಗೆ ಕ್ಷಣ ಆಲೋಚಿಸಿ. ಅವರ ತಪ್ಪು ಅವರು ಒಂದು ಕೋಮಿನಲ್ಲಿ ಹುಟ್ಟಿದ್ದೇ ಆಗಿರುತ್ತದೆ. ಇದು ಆ ಬದಿಗೂ ವರ್ತಿಸುವುದು ಈ ಬದಿಗೂ ವರ್ತಿಸುವುದು..

ಅದೇ ಕ್ಷಣಕ್ಕೆ ಶತಮಾನಗಳ ರಕ್ತಸಿಕ್ತ ಸಂಬಂಧಕ್ಕೆ ನೀವು ಹೇಳಿದಂತೆ ಕನ್ನಡಕ ಹಾಕುವುದು ಸಾಧ್ಯವಾಗದ ಮಾತು. ಆದರೆ ಮಚ್ಚೂ ಭ್ರಮೆ, ಕನ್ನಡಕವೂ ಭ್ರಮೆಯಾಗುವುದಾದರೆ, ಆಶಾವಾದಿಯಾದ ನಾನು ಸುಳ್ಳಾದರೂ ಕನ್ನಡಕವನ್ನೇ ಹೆಚ್ಚಿನ ಕಾಲ ಧರಿಸಬಯಸುತ್ತೇನೆ. ಆಗಲೇ ನನಗೆ ನನ್ನ ಒಂದಿಬ್ಬರು ವಿದ್ಯಾರ್ಥಿಗೆಳೆಯರನ್ನು ಉಳಿಸಿಕೊಳ್ಳುವ, ಅವರಿಗೂ ಕನ್ನಡಕ ತೊಡಿಸುವ ಅವಕಾಶ ಸಿಗುತ್ತದೆ. ನಾನು ಈ ನಿಲುವನ್ನು ತೆಗೆದುಕೊಳ್ಳುತ್ತಲೇ ನಿಮ್ಮ ಮಾತುಗಳನ್ನು ಅಲ್ಲಗಳೆಯದೇ ನಿಲ್ಲುತ್ತೇನೆ.

ಪ್ರೀತಿಯಿರಲಿ

ಶ್ರೀರಾಮ್

Anonymous said...

>> ಕೇವಲ ಕಾನೂನು ಸಮಸ್ಯೆಯಾ?

>> ಇಲ್ಲಿ ಎಲ್ಲರೂ ಸಾಂಸ್ಕೃತಿಕ-ಧಾರ್ಮಿಕ ಸಾಮರಸ್ಯದಿಂದ (ಐಕ್ಯತೆ ಅಲ್ಲ) ಇದ್ದಾರಾ?

>> ಕೋಮುಗಲಭೆ ಅಂದರೆ ಅದು ಶುರುವಾಗುವುದು ಹಿಂದೂಗಳಿಂದ, ಅದರಲ್ಲಿ ಸಾಯುವವರು ಅಮಾಯಕ ಮುಸಲ್ಮಾನರು ಅಂತ ಅರ್ಥವಾ?

>> ಗೋಧ್ರಾದಲ್ಲಿ ನಡೆದ ದುರಂತಕ್ಕೆ ನಾವು ತಲೆ ತಗ್ಗಿಸುತ್ತೇವೆ. ಘಜ಼್ನಿಯ ಹೆಸರು ಹೇಳಿದರೆ ಮುಸಲ್ಮಾನರಿಗೆ ನಾಚಿಕೆಯಾಗುತ್ತಾ?

>> ಯಾರೋ ಮಾಡಿದ ತಪ್ಪಿಗೆ ಒಂದು ಕೋಮಿನ ಜನರನ್ನೇ ಶಂಕಿಸುವುದು ತಪ್ಪು. ಆದರೆ, ಆ ಕೋಮಿಗೆ ಸೇರಿದವನಾದ್ದರಿಂದ ಆತನನ್ನು ಶಂಕಿಸಬಾರದ?

ನಾನು ನಿಮ್ಮ ವಿದ್ಯಾರ್ಥಿ, ಉತ್ತರ ಕೊಡಿ :-)

ಹಿಂದೂ ಅಲ್ಲದೆಯೂ ಭಾರತೀಯನಾಗಿ ಬದುಕುವುದು ಸಾಧ್ಯವಿದೆ. ಆ ಅವಕಾಶವೂ ಇದೆ. ಇಲ್ಲಿ ನಿರೀಶ್ವರವಾದಕ್ಕೂ ನೆಲೆಯಿದೆ. ಯಾವ ಕರ್ಮಾಚರಣೆಗಳನ್ನು ಮಾಡದ, ಜಾತಿ ಬಿಟ್ಟ ಅನೇಕ ಬ್ರಾಹ್ಮಣರಿದ್ದಾರೆ, ಹಿಂದೂಗಳಿದ್ದಾರೆ. ಮುಸಲ್ಮಾನರಿಗೆ ಕ್ರೈಸ್ತರಿಗೆ ಇದು ಕಷ್ಟವಾಗಬಹುದು. ನನ್ನ ಸಹಪಾಠಿಯೊಬ್ಬ ಹೇಳಿದ್ದು- 'ಬೈಬಲ್ನ ಇತಿಹಾಸ ತಿಳಿದ ನಂತರ ನನಗೆ ಬೈಬಲ್ನಲ್ಲಿ ಕ್ರೈಸ್ತ ಧರ್ಮದಲ್ಲಿ ಯಾವುದೇ ನಂಬಿಕೆ ಇಲ್ಲ. ಆದರೆ ನಾನದನ್ನು ಸಂಪೂರ್ಣವಾಗಿ ನಿರಾಕರಿಸಿದರೆ ನಾನೊಬ್ಬ ಕ್ರೈಸ್ತನಲ್ಲ ಅಂತ ಒಮ್ಮೆ ರೆಜಿಸ್ಟರ್ ಆದರೆ ನನಗ್ಯಾರೂ ಮದುವೆಗೆ ಹೆಣ್ಣು ಕೊಡೋದಿಲ್ಲ!. ನಂಬಿಕೆ ಇದಿಯೋ ಇಲ್ಲವೋ ನಾನೊಬ್ಬ ಕ್ರೈಸ್ತ!'.

ನಾವು ಧಾರ್ಮಿಕ ಸ್ವಾತಂತ್ರ್ಯವನ್ನು ಒಪ್ಪಿಕೊಂಡಂತೆ ಧರ್ಮನಿಷ್ಠೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಒಬ್ಬ ಬ್ರಾಹ್ಮಣ ಜಾತಿ ಬಿಟ್ಟರೆ ಅವನೊಬ್ಬ ಹೀರೋ. ಒಬ್ಬ ಹಿಂದೂ ಅಥವ ಮುಸಲ್ಮಾನ ತನ್ನ ಧರ್ಮದ ವಿರುದ್ಧ (ಅದು ಅವನಿಗೆ ಎಷ್ಟರ ಮಟ್ಟಿಗೆ ತಿಳಿದಿರುತ್ತೋ!) ಮಾತಾಡಿದರೆ, ಅದನ್ನು ಬೈದು ಬರೆದರೆ ಅವನು ಗ್ರ್‍ಏಟ್.

ಕ್ರಾಸ್ ಧರಿಸಿ ಪ್ರತಿಭಾನುವಾರ ಚರ್ಚಿಗೆ ಹೋಗುವವನನ್ನು, ಗಡ್ಡ ಬಿಟ್ಟು ಪ್ರತಿಶುಕ್ರವಾರ ನಮಾಜ಼ು ಮಾಡುವವರನ್ನು ಧಾರ್ಮಿಕ ಅನ್ನುತ್ತೇವೆ. ತಿಲಕ ಇಟ್ಟುಕೊಂಡರೆ ಆತ ಧರ್ಮಾಂಧ. ಸಿಸ್ಲಾಂ ಕುರಿತು ಯಾರಾದರು ಮಾತಾಡಿದರೆ ಅದು ಅಲ್ಪಸಂಖ್ಯಾತರಿಗೆ ನೋವುಂಟು ಮಾಡುತ್ತದೆ. ಹಿಂದೂ ದೇವತೆಗಳನ್ನು ನಗ್ನಗೊಳಿಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ತಿರುವು ಪಡೆಯುತ್ತದೆ.

ಎಲ್ಲಿಯವರೆಗೆ ನಾವು ಇಂತಹ ಬೂಟಾಟಿಕೆಗಳಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ಸಾಮರಸ್ಯ ಸಾಧ್ಯವೇ ಇಲ್ಲ. ಎಲ್ಲರಿಂದಲೂ ತಪ್ಪಾಗಿದೆ. ಅದನ್ನು ಎಲ್ಲರೂ ಒಟ್ಟಾಗಿ ಸರಿಪಡಿಸಿಕೊಂಡು ಮುನ್ನಡೆಯಬೇಕಲ್ಲವೆ?. ತಪ್ಪಿನ ಅರಿವಿಲ್ಲದಿದ್ದವರಿಗೆ ತಿಳಿಹೇಳಬಹುದು. ನಾನು ಮಾಡಿದ ತಪ್ಪೇ ಸರಿ ಅನ್ನುವವರಿಗೆ ಏನು ಹೇಳುವುದು?. ಅಂತವರಿಂದ ಎಂತಹ ಸಾಮರಸ್ಯ ಸಾಧ್ಯ?. ಹಂದಿ ಬಿದ್ದಿದ್ದಕ್ಕೆ ಗೋ ಮಾಂಸ ಬಿದ್ದಿದ್ದಕ್ಕೆ ಕಿತ್ತಾಡುವವರಲ್ಲಿ ಮೌಢ್ಯ ಇದೆ, ಸರಿ. ಆತಂಕದ ಸಂಗತಿಯೆಂದರೆ ಇಸ್ಲಾಂ ಮೂಲಭೂತವಾದಿಗಳಲ್ಲಿ ಬಹುಪಾಲು ಮಂದಿ ಉನ್ನತ ಶಿಕ್ಷಣ ಪಡೆದ ಆಧುನಿಕ ನಾಗರೀಕ ಸಮಾಜದವರು.

ನಾನು ಮಚ್ಚು ಹಿಡಿಯುವವನಲ್ಲ :-). ಆದರೆ, ಸುಳ್ಳಾದರೂ ಸರಿ, ನಾನು ಕನ್ನಡಕ ಧರಿಸುತ್ತೇನೆ ಅನ್ನುವುದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ನಾನು ಯಾರಿಗೂ ಸುಳ್ಳಿನ ಕನ್ನಡಕ ಧರಿಸುವಂತೆ ಹೇಳುವುದಿಲ್ಲ. ಸುಳ್ಳಿನ ಮಚ್ಚನ್ನು ಕೆಳಗಿಡಿ ಅನ್ನುತ್ತೇನೆ. ಯಾಕೆಂದರೆ, ಎರಡೂ ಸುಳ್ಳೇ ಆಗಿರುತ್ತದೆ. ಸತ್ಯ ತಿಳಿದಿದ್ದರೂ ಅದನ್ನು ಸುಳ್ಳೆಂದು ನಂಬಿ ಬದುಕಲು ಪ್ರಯತ್ನಿಸಿ ಸಂಘರ್ಷದಲ್ಲಿ ಸಿಲುಕಿ ಮಚ್ಚು ಹಿಡಿಯುವ ಸಾಧ್ಯತೆಗಳಿರುತ್ತವೆ. ಈಗಿನ ಹೆಚ್ಚಿನ ಹಿಂದೂಗಳು ಸಿಲುಕಿರುವುದು ಇಂತಹ ಸಂಘರ್ಷದಲ್ಲಿ. ಆದ್ದರಿಂದ, ಈ ಸುಳ್ಳಿನ ಕನ್ನಡಕವೂ ಅಪಾಯಕಾರಿ ಅನ್ನುವುದು ನೆನಪಿರಲಿ. ನಾನು ಸತ್ಯದಲ್ಲಿ ನಂಬಿಕೆ ಇಟ್ಟವನು.

ಏನಾದರು ತಪ್ಪಿದ್ದರೆ ಕ್ಷಮೆಯಿರಲಿ.

ಪ್ರೀತಿಯಿಂದ,
ವಿಕ್ರಮ ಹತ್ವಾರ.

Anonymous said...

ಸ್ನೇಹಿತರೆ,
ನಿಮ್ಮ ಚರ್ಚೆಗೆ ಪೂರಕವಾದ ಕೆಲವು ಲೇಖನಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
http://colonial.consciousness.googlepages.com/secularismandindianintellectuals

http://colonial.consciousness.googlepages.com/vaucityofsecularism

http://colonial.consciousness.googlepages.com/ColonialProjectofSecularIndia.pdf

Anonymous said...

http://colonial.consciousness.googlepages.com/secularismandindianintellectuals