Showing posts with label ದೇಶಕಾಲ. Show all posts
Showing posts with label ದೇಶಕಾಲ. Show all posts

ಕನ್ನಡ ಭಾಷೆ, ತಂತ್ರಾಂಶ ಮತ್ತು ಬ್ಲಾಗ್ ಲೋಕ

ಇಪ್ಪತ್ತು ವರುಷಗಳ ಹಿಂದೆ ಬರವಣಿಗೆ ಎನ್ನುವುದು ಕಾಗದದ ಮೇಲೆ ಸೇರಿಸುವ ಅಕ್ಷರಜಾಲವಾಗಿತ್ತು. ಹಾಗೂ ಬರೆದದ್ದು ಪ್ರಕಟಗೊಳ್ಳಲು ಹಲವು ಸಹಜ ಅಡಚಣೆಗಳೂ ಇದ್ದುವು. ಈಗ ತಂತ್ರಜ್ಞಾನದ ವೃದ್ಧಿಯೊಂದಿಗೆ ಇಂದು ಕೀಲಿಮಣೆಯ ಮೇಲೆ ಹಲವುಬಾರಿ ಬೆರಳುಗಳನ್ನಾಡಿಸಿ, ಒಂದು ಗುಂಡಿಯನ್ನು ಒತ್ತಿದರೆ ಬರೆದದ್ದು ಜಗತ್ತಿಗೇ ತಿಳಿಯುತ್ತದೆ. ಅಚ್ಚು ಮಾಧ್ಯಮದಲ್ಲೂ ಇದು ತುಂಬಾ ಸರಳವಾಗಿದೆಯೆಂದು ಗೆಳೆಯರೊಬ್ಬರು ಹೇಳಿದರು. ಡಿಟಿಪಿಯ ತಂತ್ರಜ್ಞಾನ ಬಂದಿರುವುದರಿಂದ ಮೊದಲು 1000 ಪ್ರತಿಗಳಿಗೆ ಕಡಿಮೆ ಅಚ್ಚು ಮಾಡುವುದು ಕಷ್ಟ ಎಂದು ಒದ್ದಾಡುತ್ತಿದ್ದುದಕ್ಕೆ ವಿರುದ್ಧವಾಗಿ 150 ಪ್ರತಿಗಳನ್ನು ಅಚ್ಚು ಹಾಕಬಹುದಾದ ಸಾಧ್ಯತೆಯಿದೆಯಂತೆ. ಅಕ್ಷರ ಜೋಡಣೆಯನ್ನು ಕಂಪ್ಯೂಟರಿನಲ್ಲಿ ಕಾಯ್ದಿರಿಸಬಹುದಾದ್ದರಿಂದ, ಸರಕಾರಿ, ಲೈಬ್ರರಿ ಆರ್ಡರುಗಳು ಬಂದಾಗ ಇನ್ನಷ್ಟು ಪ್ರತಿಗಳನ್ನು ಅಚ್ಚು ಹಾಕಬಹುದು...



ಗುರುಪ್ರಸಾದ್ ಕಾಗಿನೆಲೆ - ಈ ವರೆಗೆ

ಈಚೆಗಷ್ಟೇ ನಾನು ಗುರುವಿನ ಶಕುಂತಳಾ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹಾಕಿಕೊಂಡಿದ್ದ ಟಿಪ್ಪಣಿಗಳಾಧಾರದ ಮೇಲೆ ಅವರ ಬಗೆಗೆ ಬರೆದಿದ್ದೆ. ಆ ಬರಹದ ಕಡೆಯ ಸಾಲುಗಳಿಂದ ಅವರ ಈ ವರೆಗಿನ ಬರವಣಿಗೆಯ ಅವಲೋಕನ ಮಾಡುತ್ತೇನೆ. 

"ಗುರುಪ್ರಸದ್ ನನ್ನ ಮಟ್ಟಿಗೆ ಕನ್ನಡದಲ್ಲಿ ಬರೆಯುತ್ತಿರುವ ಸಮಕಾಲೀನರಲ್ಲಿ ಒಂದು ಭಿನ್ನ ಧ್ವನಿ ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಭಿನ್ನತೆಯೊಂದೇ ಅವರ ಗುಣವಲ್ಲ. ಅವರಿಗೆ ಕಥೆ ಕಟ್ಟುವ ಕಲೆ ಕೈವಶವಾಗಿದೆ. ಅವರ ಸಂದರ್ಭಕ್ಕೆ ತಕ್ಕಂತೆ ಮಾನವ ವ್ಯಾಪಾರಗಳ ಬಗ್ಗೆ ಅದರ ಅರ್ಥಹೀನತೆ-ಅರ್ಥವಂತಿಕೆಯ ಬಗ್ಗೆ ಅವರು ಸಮರ್ಥವಾಗಿ ಬರೆಯಬಲ್ಲರು. ಗ್ಲೋಬಲ್ ಆಗುತ್ತಿರುವ ನಮ್ಮ ಸಮಾಜದ ತಲ್ಲಣಗಳನ್ನು ಅವರು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕನ್ನಡ ಲೋಕ ಅವರನ್ನು ಉತ್ಸಾಹದಿಂದ ಬರಮಾಡಿಕೊಂದು ಪ್ರೋತ್ಸಾಹಿಲಿ ಅನ್ನುವ ಆಶಯ ನನ್ನದು. ಈ ಮುಖ್ಯವಾದ ಧ್ವನಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗಲೆಂದು ಹಾರೈಸುತ್ತೇನೆ."

ಹೀಗೆ ಬರೆಯುತ್ತಿದ್ದಾಗ ನನಗೆ ಗುರುವಿನ ಮಿಕ್ಕ ಕೃತಿಗಳ ಪರಿಚಯವಿರಲಿಲ್ಲ. ಅವರ ಕಾದಂಬರಿ ಬಿಳಿಯ ಚಾದರ ಬಿಡುಗಡೆಯಾಗಿರಲಿಲ್ಲ ಹಾಗೂ ಅವರ ಎರಡೂ ಪುಸ್ತಕಗಳಾದ ನಿರ್ಗುಣ ಮತ್ತು ಪ್ರಬಂಧಗಳ ಸಂಕಲನವಾದ ವೈದ್ಯ-ಮತ್ತೊಬ್ಬ ನಾನು ಓದಿರಲಿಲ್ಲ. ಈಗ ನಾನು ಅವುಗಳೆಲ್ಲವನ್ನೂ ಓದಿದ್ದೇನೆ. ಓದಿದ ನಂತರವೂ ನನ್ನ ಮೇಲಿನ ಅಭಿಪ್ರಾಯದಲ್ಲಿ ಮೂಲಭೂತ ಬದಲಾವಣೆಯೇನೂ ಆಗಿಲ್ಲ. ಆದರೂ ಒಬ್ಬ ಲೇಖಕನ ಕಾಳಜಿಗಳು ಹಾಗೂ ಬರಹಗಾರ ತೆರೆದುಕೊಳ್ಳುವ ರೀತಿಯಬಗ್ಗೆ ಕೆಲ ಒಳನೋಟಗಳನ್ನು ನಾನು ಈ ಹೊಸ ಓದಿನ ಮೂಲಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ. 




ಕನ್ನಡಕ್ಕಿನ್ನೊಂದು ಪತ್ರಿಕೆ, ಕನ್ನಡ ಕಾವ್ಯ, ಕೆಲವು ಇತರ ವಿಚಾರಗಳು

ಭಾಗ ೧: ಶಬ್ದಗುಣ: ಮತ್ತೊಂದು ಸಣ್ಣ ಪತ್ರಿಕೆ

ದೇಶಕಾಲದ ಬಗ್ಗೆ ಚರ್ಚಿಸುತ್ತಿರುವಾಗಲೇ ಕನ್ನಡಕ್ಕೆ ಮತ್ತೊಂದು ಸಣ್ಣ ಪತ್ರಿಕೆಯ ಪ್ರವೇಶವಾಗಿದೆ. ಇದು ವಸಂತ ಬನ್ನಾಡಿಯವರು ಇತ್ತೀಚೆಗೆ ಹೊರತಂದ ಅರೆವಾರ್ಷಿಕ ಪತ್ರಿಕೆ ಶಬ್ದಗುಣ. ದೇಶಕಾಲದ ಬಗ್ಗೆ ನಾನು ನಾಲ್ಕು ಸಂಚಿಕೆಗಳ ನಂತರ ಬರೆದೆನಾದರೂ ಇದರ ಬಗ್ಗೆ ನಾನು ತಕ್ಷಣವೇ ಬರೆಯುತ್ತಿರುವುದಕ್ಕೆ ಕಾರಣಗಳು ಹಲವು. ಮೊದಲ ಭಾಗದಲ್ಲಿ ನಾನು ಈ ಪತ್ರಿಕೆಯ ಸ್ಥಾನ, ಉದ್ದೇಶ, ವಿನ್ಯಾಸದ ಬಗೆ ಚರ್ಚಿಸುತ್ತೇನೆ. ಎರಡನೆಯ ಭಾಗದಲ್ಲಿ ಈ ಸಂಚಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಕಾಲೀನ ಕನ್ನಡಕಾವ್ಯದ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆಯುತ್ತೇನೆ. ಕಡೆಯದಾಗಿ ಕಾವ್ಯವಲ್ಲದೇ ಈ ಸಂಚಿಕೆಯಿಂದ ಹೊರಹೊಮ್ಮಿರುವ ಕೆಲವು ವಿಚಾರಗಳನ್ನು ಚರ್ಚೆ ಮಾಡುವ ಉದ್ದೇಶ ನನಗಿದೆ. ಅಂದರೆ ಶಬ್ದಗುಣದಲ್ಲಿ ಸಾಕಷ್ಟು ಹೂರಣವಿದೆ ಅಂತ ನಾನು ಒಪ್ಪಿದಂತಾಯಿತು. ಅದು ನಿಜವೂ ಸಹ.




ಕನ್ನಡದಲ್ಲಿ ಸಣ್ಣ ಪತ್ರಿಕೆಗಳು, ದೇಶಕಾಲದ ನಾಲ್ಕು ಸಂಚಿಕೆಗಳು

ಕನ್ನಡದಲ್ಲಿ ಅತ್ಯುತ್ತಮ ಸಣ್ಣ ಪತ್ರಿಕೆಗಳು ಬಂದಿವೆ, ಮತ್ತು ನಿಂತುಹೋಗಿವೆ ಸಹ. ಕೆಲವು ಸಣ್ಣ ಪತ್ರಿಕೆಗಳು ಆಯಾಕಾಲದ ಸಾಹಿತ್ಯದ, ಸಾಹಿತ್ಯ ಶೈಲಿಯನ್ನು ಪ್ರತಿನಿಧಿಸಿ ನಿಂತಿವೆ. ಹೀಗಾಗಿಯೇ ಅವು ಆಯಾ ಸಾಹಿತ್ಯಕಾಲದ ಉತ್ತಮ ಲೇಖಕರ ಹೆಸರಿನ ಜೊತೆ ಅವಿನಾಭಾವವಾಗಿ ಅಂಟಿನಿಂತಿದೆ. ಸಾಕ್ಷಿಯ ಜೊತೆ ಅಡಿಗರ ಹೆಸರು, ರುಜುವಾತುವಿನ ಜೊತೆ ಅನಂತಮೂರ್ತಿಯವರ ಹೆಸರು, ಅದಕ್ಕೂ ಹಿಂದೆ ಜೀವನದ ಜೊತೆ ಮಾಸ್ತಿಯವರ ಹೆಸರು ಇದಕ್ಕೆ ಉದಾಹರಣೆಗಳು. ಒಂದು ಥರದಲ್ಲಿ ಈ ಲೇಖಕರು ಆಯಾ ಸಮಯಘಟ್ಟಕ್ಕೆ ಪ್ರಯೋಗಗೊಂಡ ಹೊಸ ಬರವಣಿಗೆಯ ಶೈಲಿಯನ್ನು ಪ್ರತಿನಿಧಿಸುತ್ತದ್ದರಿಂದ ಆ ಶೈಲಿಯ ಸಮರ್ಥ ಅನುಯಾಯಿಗಳನ್ನು ಹುಟ್ಟುಹಾಕುವುದರಲ್ಲಿ ಈ ಪತ್ರಿಕೆಗಳು ಪ್ರೇರಕವಾಗುವಂತಹ ಕೆಲಸ ಮಾಡಿದವು. ಅಂಕಣದಂತಹ ಪತ್ರಿಕೆಯನ್ನು ಹುಟ್ಟುಹಾಕಿದ್ದು ಪಿಪಿ ಗೆಳೆಯರ ಬಳಗದ ತ್ರಿಮೂರ್ತಿಗಳು [ಪಿಪಿ= ಪೋಲಿ ಪಟಾಲಂ]. ಅವರಲ್ಲಿ ಎಚ್ ಎಸ್ ಆರ್ ಮತ್ತು ಕೆ ವಿ ನಾರಾಯಣ ವಿಮರ್ಶಕರೆಂದು ಪ್ರಸಿದ್ಧರು. ಚಿ.ಶ್ರೀನಿವಾಸರಾಜು ಸಾಹಿತ್ಯಪ್ರೇಮಿ, ಸಾಹಿತ್ಯ ಪರಿಚಾರಕರು, ಮತ್ತು ಲೇಖಕರು [ಆದರೆ ಹೆಚ್ಚು ಬರೆದವರಲ್ಲ]. ಬಹುಶಃ ಕನ್ನಡದ ಸಣ್ಣಪತ್ರಿಕೆಯಲ್ಲಿ ಒಂದು ಗುಂಪಿನ ಪ್ರಯತ್ನ ಇದೇ ಮೊದಲನೆಯದಿರಬಹುದು....