ಬುದ್ಧಿವಂತಿಕೆಯ ಗೆರೆ

ಒಂದು ಸ್ವಯಂ ಸೇವಾ ಸಂಸ್ಥೆ ಯಾವ ಕೆಲಸವನ್ನು ಎಷ್ಟು ಮಾಡಬೇಕು - ಎಲ್ಲಿ ಅದನ್ನು ನಿಲ್ಲಿಸಬೇಕು ಅನ್ನುವುದು ಕುತೂಹಲದ ವಿಷಯ. ಇದು ನಮ್ಮ ಗ್ರಾಮೀಣ ಪ್ರಾಂತದಲ್ಲಿ ಕೆಲಸ ಮಾಡುತ್ತಿರುವ ಒಳ್ಳೆಯ ಸಂಸ್ಥೆಗಳ ಮುಂದೆ ಆಗಾಗ ತಲೆಯೆತ್ತಿ ನಿಲ್ಲುವ ದ್ವಂದ್ವ. ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಪ್ರದಾನ್ [ಪ್ರೊಫೆಷನಲ್ ಅಸಿಸ್ಟೆಂಸ್ ಫರ್ ಡೆವೆಲಪ್ಮೆಂಟ್ ಆಕ್ಷನ್] ಸಂಸ್ಥೆಯ ಕಾರ್ಯಕಲಾಪಗಳು ಹೀಗೆ ಗ್ರಾಮೀಣ ಬಡವರ ಬದುಕಿನ ಅನೇಕ ಮಜಲುಗಳನ್ನು ಮುಟ್ಟಿ ಹೋಗುತ್ತದೆ. ಕೆಲ ವರ್ಷಗಳ ಹಿಂದೆ ನಾನು ಝಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಗೆ ಅವರ ಕೆಲಸವನ್ನು ನೋಡಲು ಹೋಗಿದ್ದೆ. ಅಲ್ಲಿ ಕೆಲಸ ಪ್ರಾರಂಭವಾದದ್ದು ಸ್ವ-ಸಹಾಯ ಗುಂಪುಗಳನ್ನು ಏರ್ಪಾಟು ಮಾಡಿ ಆ ಮೂಲಕ ಉಳಿತಾಯ-ಸಾಲದ ಚಟುವಟಿಕೆಯನ್ನು ತಮ್ಮ ನಡುವೆಯೇ ನಡೆಸಿಕೊಳ್ಳುವುದರ ಮೂಲಕ. ಆದರೆ ಬಡವರು ಕೇವಲ ಉಳಿತಾಯ ಮಾಡುವುದು - ಸುಲಭವಾಗಿ ಸಾಲ ಪಡೆಯುವುದು - ಈ ಎರಡರಿಂದಾಗಿಯೇ ಅಭಿವೃದ್ಧಿಯಾಗುತ್ತದೆ ಎಂದು ನಾವು ನಂಬುವುದಕ್ಕೆ ಆಗುವುದಿಲ್ಲ. ಏಕೆಂದರೆ ಹೀಗೆ ಸಾಲವಾಗಿ ಪಡೆದ ಹಣವನ್ನು ಹೇಗೆ ಉಪಯೋಗಿಸಬೇಕು ಅದರಿಂದ ಹೇಗೆ ಹೆಚ್ಚು ಆದಾಯ ಪಡೆಯಬೇಕು ಅನ್ನುವ ಪ್ರಶ್ನೆಯನ್ನೂ ನಾವು ಎದುರಿಸಬೇಕಾಗುತ್ತದೆ. ಮೈಕ್ರೋಫೈನಾನ್ಸ್ [ಚಿಕ್ಕಸಾಲ] ದಿಂದ ಲೈವ್ಲಿಹುಡ್ ಫೈನಾನ್ಸ್ [ಜೀವನೋಪಾಧಿಯ ಸಾಲ]ಕ್ಕೆ ಬೆಳೆಯುವ ಬಗ್ಗೆ ಸಾಕಷ್ಟು ಚರ್ಚೆ ಈಚಿನ ದಿನಗಳಲ್ಲಿ ನಡೆಯುತ್ತಿದೆ.





No comments: