ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ
-
ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ
ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು
ಗಮನಿಸುವುದು ...
6 years ago
16 comments:
Dear Sriram,
I really liked this post. It's interesting that an article written six years back for a newspaper has still not lost its relevance. You must thank Medha for keeping your article still fresh.
I am not surprised that Medha and her intellectual cohorts do not accept remedies provided by India's constitutional democracy. These people are essentially elitists who think that only they are good and only they have all the answers. When that's the case, it is not surprising that they have a tough time accepting any answers that come from a system built on elections.
While these elitist intellectuals think that they know what's good for the common people, they certainly don't want to trust the judgement of the common people. Is there any wonder then that they never want to participate actively in electoral politics?
Thanks for politically incorrect and incisive analysis.
Regards,
V.V.
ಶ್ರೀರಾಮ್ ಅವರೇ, ಸಮಯೋಚಿತ ಲೇಖನ ಪ್ರಸ್ತುತಪಡಿಸಿದ್ದೀರಿ. ಎನ್ ಬಿ ಆಂದೋಲನದ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದರೆ ಮೇಧಾ ಅವರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಿದಿರಿ. ನರ್ಮದಾ ಬಚಾವೋ ಆಂದೋಲನದ ಮೂಲಕ ಮೇಧಾ ಅವರು ಪ್ರಪಂಚದ ಕಣ್ಣಿಗೆ ಗೋಚರವಾಗಿರಬಹುದು, ಆದರೆ, ಇಂತಹ ಸಮಸ್ಯೆಗಳು ಭಾರತದಲ್ಲಿ ಅಗಾಧವಾಗಿವೆ. ಭಾರತದಲ್ಲಿ ಹೋರಾಟಗಳಿಗೆ ಎಣೆಯಿಲ್ಲ, ಅಂತ್ಯವಿಲ್ಲ.
ಮೇಧಾ ಅವರು ಮುಂದಿಡುತ್ತಿರುವ ವಿಚಾರಗಳು ನಮಗೆ ಪ್ರಸ್ತುತವೇ ಅಪ್ರಸ್ತುತವೇ ಎಂಬುದರ ಬಗ್ಗೆ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಅಣೆಕಟ್ಟು ನಿರ್ಮಾಣದಿಂದ ಪರಿಸರ ನಾಶವಾಗುತ್ತದೆ ಎಂಬ ಅಪಾಯದ ಮುನ್ನೆಚ್ಚರಿಕೆಯನ್ನೂ ಮೀರಿ ಕಾಮಗಾರಿ ಆರಂಭಿಸಲಾಯಿತು. ಈ ಕಾಮಗಾರಿಯಿಂದ ಹಾನಿಗೊಳಗಾಗಿ ನಿರಾಶ್ರಿತರಾಗುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಗೊಡವೆಗೇ ಹೋಗದೆ ಮುಂದುವರಿಯಲಾಯಿತು. ಈ ಹಂತದಲ್ಲಿ ಅಣೆಕಟ್ಟು ನಿರ್ಮಾಣ ಕಾರ್ಯ ನಿಲ್ಲಿಸಲು ಅಸಾಧ್ಯ ಎಂದರಿತ ಮೇಧಾ ಅವರು ಕನಿಷ್ಠ ಈ ನಿರಾಶ್ರಿತರ ಕಲ್ಯಾಣಕ್ಕಾಗಿಯಾದರೂ ಟೊಂಕ ಕಟ್ಟಿ ನಿಂತರು. ಅದರಿಂದ ಆಕೆಗೆ ಪ್ರಚಾರ ಸಿಗುತ್ತಿದೆ ಎಂಬ ಕಾರಣಕ್ಕೆ ಆಕೆಯ ಹೋರಾಟವನ್ನೇ ಹೀಗಳೆಯುವುದು ತರವಲ್ಲ ಎಂದು ತೋರುತ್ತದೆ.
ಮಾನ್ಯ ವಿ ವಿ ಅವರು ಮೇಧಾ ಸಂತತಿಯನ್ನು ಟೀಕಿಸಿದ್ದಾರೆ. ಮೇಲ್ವರ್ಗದ ಕುಟುಂಬದಿಂದ ಬಂದದ್ದು ಮೇಧಾ ಅವರ ತಪ್ಪೇ? ಎಲ್ಲಾ ಶ್ರೀಮಂತರು ಕೇವಲ ಶೋಕಿಗಾಗಿ ಹೋರಾಟ ನಡೆಸುತ್ತಾರೆಯೇ?
First of all, let me apologise for continued usage of English. I am having trouble with Unicode on my system.
Sarathy,
My comments have nothing to do with Medha (or anyone) coming from a "rich family". For that matter, I did not even know that she comes from one till you mentioned.
My comments are limited to the inability of people like Medha Patkar and her intellectual supporters to accept decisions made under India's constitutional framework. I neither doubt their committment nor do I think that people coming from rich background fight for these causes just for the show.
Simply put, my view is that the inability of them to accept compromises and partial-solutions provided by the democratic setup is rooted in their intellectual elitism.
Regards,
V.V.
PS: Sriram, I hope you won't mind your blog being used for this exchange of views and opinions.
ಸಾರಥಿ, ಮೊದಲೇ ಹೇಳಿದಂತೆ ನನ್ನ ನಿಲುವು ನರ್ಮದಾ ಪರ ಅಥವಾ ವಿರೋಧದ್ದಲ್ಲ. ದೊಡ್ಡ ಅಣೆಕಟ್ಟುಗಳು ಬೇಕೇ ಇಲ್ಲವೇ, ಅದರಿಂದ ಪರಿಸರಕ್ಕೇನಾಗುತ್ತದೆ, ಅದರ ಸಾಮಾಜಿಕ ಲಾಭ ಎಷ್ಟು ಹಾಗೂ ಅದಕ್ಕೆ ತೆತ್ತಬೇಕಾದ ಬೆಲೆ ಎಷ್ಟು ಎಂಬುದು ಜಟಿಲವಾದ ವಿಷಯ. ಇದರ ಬಗ್ಗೆ ಅನೇಕರು ತಲೆಕೆಡಿಸಿಕೊಂಡಿದ್ದಾರೆ. ನನ್ನ ಕುತೂಹಲ ಇಷ್ಟೇ.. ಯಾರಾದರೂ ಒಂದು ಘಟನೆಯನ್ನ/ಕೆಲಸವನ್ನ ನಿಲ್ಲಿಸುವುದನ್ನೇ ಒಂದು ಜೀವನೋದ್ದೇಶ ಮಾಡಿಕೊಂಡರೆ ಆ ಕಾಯಕದಲ್ಲಿ ಗೆಲುವು ಬಂದರೂ ಶೂನ್ಯ [ಅಥವಾ ನೀವು ಹೇಳಿದಂತೆ ಬೇರೊಂದು ಉದ್ದಶ ಹುಡುಬೇಕಾದ ಪ್ರಮೇಯ ಬರುತ್ತದೆ] ಸೋತರಂತೂ ಶೂನ್ಯವೇ.. ನಾನು ಈ ಥರದ ಉದ್ದಶದ ಹಿಂದೆ ಹೊರಟ ಜನರನ್ನು ಮೇಧಾರ ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಅಷ್ಟೇ.
ವಿವಿ ಹೇಳಿದಂತೆ ಅಣೆಕಟ್ಟು ಕಟ್ಟುವುದಕ್ಕೆ ಒಂದು ವಾದವಿದೆ, ಅದನ್ನು ತಡೆಯುವುದಕ್ಕೂ ಒಂದು ಸಮರ್ಥಿಸಬಲ್ಲ ವಾದವಿದೆ. ಆದರೆ ಈ ಪರ ವಿರೋಧವನ್ನು ಬಗೆಹರಿಸಲು ಎರಡೂ ಕಡೆಯವರು ಮಾತಾಡಬೇಕು, ಸ್ವಲ್ಪ ಸ್ವಲ್ಪ ಬಿಟ್ಟುಕೊಡಬೇಕು. ಮಾತು ಕತೆಯನ್ನು ಒಂದು ಅತಿಯಾದ ನಿಲುವಿನಿಂದ ಪ್ರಾರಂಭಿಸಿದರೆ ಅದು ಮುಂದುವರೆಯುವುದು ಕಷ್ಟ.. ಇದು ನರ್ಮದಾಕ್ಕೇ ಸಂಬಂಧಿಸಬಹುದು, ಅಥವಾ ಕಾಶ್ಮೀರಕ್ಕೇ ಸಂಬಂಧಿಸಬಹುದು.
ಇದನ್ನು ಬರೆಯುತ್ತಿದ್ದಾಗ ನನಗೆ ಒಂದು ವಿಷಯ ಹೊಳೆಯಿತು. ಗಾಂಧಿ ತಮ್ಮ ಸತ್ಯಾಗ್ರಹದಲ್ಲಿ ಎಂದೂ ಕಾನೂನನ್ನು/ಕೋರ್ಟನ್ನು ಪ್ರಶ್ನಿಸಲೇ ಇಲ್ಲ. ಅವರ ಜಗಳವೆಲ್ಲ ಲೆಜಿಸ್ಲೇಚರ್ ಜೊತೆಗಿತ್ತೇ ವಿನಹ ಜುಡಿಷ್ಯಿಯರಿಯ ಜೊತೆಗಲ್ಲ. ಗಾಂಧಿ ಖುಷಿಯಿಂದ ಜೈಲಿಗೆ ಹೋಗುತ್ತಿದ್ದರು. ಆದರೆ ಮೇಧಾ ಮೊಂಡು ಹಿಡಿದವರಂತೆ ಮಾತಾಡಲೂ ಸಿದ್ಧವಿಲ್ಲದವರಂತೆ ಕಾಣುತ್ತಾರೆ. ಗಾಂಧಿ ಯಾವತ್ತೂ ಮಾತುಕತೆಯನ್ನ ಆಗಿನ ಸರಕಾರದೊಂದಿಗೆ ಎಂಗೇಜ್ ಮಾಡುವುದನ್ನ ನಿಲ್ಲಿಸಲೇ ಇಲ್ಲ.
ಈ ಸಂಧರ್ಭದಲ್ಲಿ ನಿಮಗೆ ಅರುಂಧತಿ ಒಂದು ದಿನ ಜೈಲುವಾಸ ಅನುಭವಿಸಿದ್ದು ನೆನಪಿರಬಹುದು. ಮೊದಲಿಗೆ ೨೦೦೦ ರೂಪಾಯೆ ಫೈನ್ ಕಟ್ಟದೆಯೇ ಅದಕ್ಕೆ ಬದಲಾಗಿ ಕೊಟ್ಟಿರುವ ಒಂದು ತಿಂಗಳ ಜೈಲುವಾಸವನ್ನು ಅನುಭವಿಸಲು ಸಿದ್ಧ ಎಂದು ಹೇಳಿದರೂ, ಒಂದು ದಿನದ ನಂತರ ಆಕೆ ಹೊರಬಂದು ಬಿಟ್ಟರು!!!
ಮೇಧಾರ ನೆರವಿಗೆ ಆಮೀರ್ ಖಾನ್ ಬಂದಿದ್ದಾರೆ. ಅವರ ಸಂದರ್ಶನ ನೋಡಿದರೆ ಅವರು ಮಾತಾಡುತ್ತಿರುವುದು ಅಣೆಕಟ್ಟಿನ ಪರವಾಗಿ - "ನಾನು ಕಛ್ನಲ್ಲಿ ಶೂಟಿಂಗ್ ಮಾಡಿದೆ, ಅಲ್ಲಿನ ನೀರಿನ ಸ್ಥಿತಿ ಗೊತ್ತು..." ಇತ್ಯಾದಿ ಹೇಳಿ ಪುನರಾವಾಸ ಆಗಬೇಕೆಂದು ಹೇಳಿದ್ದಾರೆ. ಮೇಧಾ ಅಣೆಕಟ್ಟು ವಿರೋಧಿಯಾದರೂ, ಅಣೆಕಟ್ಟನ್ನು ಸಮರ್ಥಿಸುವ ಆಮೀರ್ ಖಾನ್ ವಿರುದ್ಧ ಯಾಕೆ ಹೇಳಿಕೆ ಕೊಡುವುದಿಲ್ಲ ಹಾಗೂ ಅವರ ಸಮರ್ಥನೆ ತೆಗೆದುಕೊಳ್ಳುತ್ತಾರೆ? ಬಹಶಃ ಅವರ ಈಗಿನ ಹೋರಾಟಕ್ಕೆ ಅದು ಅನುಕೂಲಕರವಾಗಿರಬಹುದು. ಅಥವಾ ಮೇಧಾರಿಗೆ ಈಗ ಬರೀ ಪುನರಾವಾಸದ ಆಸಕ್ತಿ ಮಾತ್ರ ಇದೆಯೇ.?
ಅವರ ವಾದದ ಪ್ರಕಾರ ಅಣೆಕಟ್ಟಿನ ಎತ್ತರ ಹೆಚ್ಚು ಮಾಡುವುದೂ ಪರಿಸರ ವಿರೋಧಿಯಲ್ಲವೇ.. ಇಲ್ಲಿ ಕೋರ್ಟಿನ ತೀರ್ಪು ಬಂದಾಗ ಮೇಧಾ/ಅರುಂಧತಿ ಮಾಡಿದ ವಕ್ತವ್ಯಗಳನ್ನು ನೀವು ನೋಡಿದರೆ ಅವರಿಗೆ ತಮ್ಮ ವಿರೋಧವಾಗಿ ತೀರ್ಪು ಬಂದಾಗ ಅದು ಜನ ವಿರೋಧಿಯಾಗಿ ಕಾಣಿಸುತ್ತದಲ್ಲ?
ಈ ವಿರೋಧಾಭಾಸಗಳು ನನ್ನ ದೃಷ್ಟಿಯಲ್ಲಿ ಅವರ ಒಳ ನಂಬಿಕೆ, ಐಡಿಯಾಲಜಿಯಿಂದ ಬರುವಂಥದ್ದು. ಹಾಗೆಂದು ಅವರ ಉದ್ದೇಶ ಮಹತ್ತರವಾದ್ದೆಂಬುದರ ಬಗ್ಗೆ ಅದಕ್ಕಾಗಿ ಅವರು ಎದ್ದು ನಿಲ್ಲಬಲ್ಲರೆಂಬುದರ ಬಗ್ಗೆ ಅನುಮಾನ ಬೇಕಿಲ್ಲ.ಆದರೆ ಆಮೀರ್ ಜೊತೆ ಅರುಂಧತಿ ಜೊತೆ ಕಾಂಪ್ರಮೈಸ್ ಆದವರು ಸರಕಾರದ ಜೊತೆಗೆ ಕನ್ಸ್ಟ್ರಕ್ಟಿವ್ ಆಗಿ ಯಾಕೆ ಕೆಲಸ ಮಾಡಬಾರದು?
ಅಕಸ್ಮಾತ್ ಆ ಥರ ಅವರು ಕೆಲಸ ಮಾಡಿದರೆ ಅವರ ವ್ಯಕ್ತಿತ್ವವೇ ನಾಶವಾಗಿಬಿಡುತ್ತದೆ. ಆಗ ಮೇಧಾ ಮೇಧಾ ಆಗಿ ಉಳಿಯುವುದಿಲ್ಲ. ಹೀಗಾಗಿ ಈಗ ಮೇಧಾ ತಮ್ಮದೇ ಫೈರ್ಬ್ರಾಂಡ್ ಇಮೇಜಿನ ವಿಕ್ಟಿಮ್ ಆಗಿಬಿಟ್ಟಿದ್ದಾರೆನ್ನಿಸುವುದಿಲ್ಲವೇ??
ವಿವಿ, ಇದನ್ನ ಬ್ಲಾಗಿನಲ್ಲಿ ಈಗ ಹಾಕಿರುವುದೇ ಚರ್ಚೆಗಾಗಿ. ಇದರಿಂದ ನಮಗೆ ಇಂಥ ಆಂದೋಲನಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಅಂತ ನನ್ನ ಅನ್ನಿಸಿಕೆ.
ಶ್ರೀರಾಮ್
ಶ್ರೀರಾಮ್ ಅವರೆ,
ನೀವು ಆರು ವರ್ಷ ಹಿಂದೆ ಬರೆದಿದ್ದ ಲೇಖನವನ್ನು ಮತ್ತೆ ಬ್ಲಾಗ್ನಲ್ಲಿ ಪ್ರಕಟಿಸುವಷ್ಟು ಅದು ಸ(ಸರ್ವ)ಕಾಲಿಕ ಆಗುತ್ತಿದೆ ಎಂಬತಾದರೆ, ಈ ವಿವಾದದ (ಆಗಾಗ್ಗೆ ಮರುಜೀವ ಪಡೆಯುತ್ತಿರುವುದರ) ಹಿಂದೆ ನಿಮ್ಮ ಲೇಖನಿಯ ಕೈವಾಡವಿದೆಯೇ ಎಂಬ ಶಂಕೆ ಮೂಡಲು ಕಾರಣವಾಗಿದೆ!!! ಅದ್ರ ಬಗ್ಗೆ ಆಮೇಲೆ ಅಸತ್ಯಾನ್ವೇಷಣೆ ನಡೆಸೋಣ.
ಒಟ್ಟಿನಲ್ಲಿ, ಆಳುವವರ ಮತ್ತು ಧನದಾಹಿಗಳ ಕುತಂತ್ರದಿಂದಾಗಿ ಮತ್ತು ನೆಲದ ಕಾನೂನು ಕೂಡ ಸಹಾಯಕ್ಕೆ ಬರದಾದಾಗ, ಅಣೆಕಟ್ಟೆ ಸಂತ್ರಸ್ತರು ಸಿಡಿದೆದ್ದು, ನರ್ಮದಾ ಮತ್ತು ಮೇಧಾ ಎರಡೂ ಪದಗಳನ್ನು ಪರಸ್ಪರ ಜೋಡಿಸಿ, ನರ-ಮೇಧ ಶುರುಹಚ್ಚುತ್ತಾರೊ ಎಂಬ ಭೀತಿ ನಮಗೆ.
ತುಳಿತಕ್ಕೊಳಗಾದವರು ಮತ್ತೆ ಮತ್ತೆ ತುಳಿಯಲ್ಪಟ್ಟಾಗ ಅಸ್ಸಾಂನಲ್ಲಿ ಬೋಡೋ ಉಗ್ರರು, ದಕ್ಷಿಣ ರಾಜ್ಯಗಳಲ್ಲಿ ನಕ್ಸಲರು ಬಲಿತುಕೊಂಡ ವಿಚಾರ ನಮ್ಮ ಕಣ್ಣ ಮುಂದಿದೆ. ಹಾಗಿರುವಾಗ ನರ್ಮದಾ-ಮೇಧಾ-ನರಮೇಧ ಪದಗಳ ಐಕಮತ್ಯ ಪ್ರಸ್ತುತವಾಗುವ ದಿನಗಳು ಬರಲಿವೆಯೇ?
ಏನ್ ಹೇಳ್ತೀರಿ....?
ಶ್ರೀರಾಮ್, ನಿಮ್ಮ ಈ ಲೇಖನ ಸರ್ದಾರ ಸರೋವರ ಯೋಜನೆಯ ವಿರೋಧಿಗಳ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳುತ್ತದಾದರೂ ಒಟ್ಟಾರೆ ಜನಾಂದೋಳನಗಳ ಬಗೆಗಿನ ನಿಮ್ಮ ನಿಲುವು ಒಂದು ಬಗೆಯ ಅತಿರೇಕವೆಂದೇ ತೋರುತ್ತಿದೆ. “ಕೋರ್ಟಿನಿಂದ ತೀರ್ಪು ಬಂದ ಮೇಲೆ - ಇದು ಒಪ್ಪಿಗೆಯಿಲ್ಲವೆಂದು ಹೇಳುವುದು ಎಷ್ಟು ಸಮಂಜಸ? ಮೇಧಾ ಯಾಕೆ ಅಣೆಕಟ್ಟಿನ ಕಲಸ ಆಗುತ್ತಿರುವ ಸ್ಥಳದ ಹತ್ತಿರ ಉಪವಾಸ ಕೂಡುವುದಿಲ್ಲ, ಕಡೆಗೂ ಆತ್ಮಾಹುತಿಯ ಸಾಹಸಕ್ಕೆ ಯಾಕೆ ಕೈ ಹಾಕಲಿಲ್ಲ?” ಇತ್ಯಾದಿ ನಿಮ್ಮ ಪ್ರಶ್ನೆಗಳ ಹಿಂದೆ ಮತ್ತು ಅದಕ್ಕಿಂತ ಮುಖ್ಯವಾಗಿ “ತೀರ್ಪು ಅವರ ಪರವಾಗಿದ್ದರೆ ಮುಂದೆ ಏನು ಮಾಡುತ್ತಿದ್ದರು” ಎಂಬ ಕುತೂಹಲದ ಹಿಂದೆ ಬಹುಶಃ ನಿಮ್ಮ ಐಐಎಂನ ಹಿನ್ನೆಲೆ ಕೆಲಸ ಮಾಡುತ್ತಿರಬೇಕು. Dream big, achieve big ನಂತಹ ಘೋಷಣೆಗಳೇ ‘ಆಧುನಿಕ management ಗುರು’ಗಳ ಮೂಲಮಂತ್ರವಲ್ಲವೇ? ಇನ್ನು ನಿಮ್ಮ ಲೇಖನಕ್ಕೆ ಶ್ರೀಯುತ v.v.ಯವರು ತೀರಾ ಬಾಲಿಶವಾಗಿ ಪ್ರತಿಕ್ರಿಯಿಸುವ ಮೂಲಕ ತಮ್ಮ ‘ವಿದೂಷಕ’ತನವನ್ನು ಮೆರೆದಿದ್ದಾರೆ. ಕ್ಷಮಿಸಿ, ಯಾರನ್ನೂ ಹೀಯಾಳಿಸುವುದು ನನ್ನ ಉದ್ದೇಶವಲ್ಲ. ಈ ವಿದ್ಯಮಾನಗಳನ್ನು ನಾನು ಗ್ರಹಿಸಿದ ಆಧಾರದ ಮೇಲೆ ಈ ಕೆಳಗಿನ ಉದಾಹರಣೆಯನ್ನು ಹಂಚಿಕೊಳ್ಳಲಿಚ್ಛಿಸುತ್ತೇನೆ.
ನಮ್ಮ ಕಾರವಾರದ ಬಳಿಯ ಕೈಗಾದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಇರುವುದು ನಿಮಗೆ ತಿಳಿದೇ ಇದೆ. 'ಸಂವಿಧಾನಾತ್ಮಕವಾಗಿ ಚುನಾವಣೆಗಳಲ್ಲಿ ಗೆಲ್ಲದೇ ತಾವೇ ಸರ್ವಜ್ಞರೆಂಬಂತೆ ವರ್ತಿಸುವ' ಕೆಲವು 'ಪರಿಸರವಾದಿ'ಗಳನ್ನು ನಾನು ಭೇಟಿಮಾಡಿದ್ದೇನೆ. ಇವರ hidden agendaಗಳು ಏನಿರಬಹುದು, ರಾಜ್ಯದಲ್ಲಿ ಇಷ್ಟೊಂದು ವಿದ್ಯುತ್ ಕೊರತೆಯಿರುವಾಗ ಇಂತಹ ಯೋಜನೆಗಳನ್ನು ಸ್ವಾಗತಿಸಬೇಕಲ್ಲವೇ ಎಂದುಕೊಳ್ಳುತ್ತಿದ್ದೆ. ಸವಿವರವಾಗಿ ಅಂಕಿ-ಆಂಶಗಳ ಮೂಲಕ ಅವರು ಈ ಯೋಜನೆಯ ಅರ್ಥಹೀನತೆಯ ಬಗ್ಗೆ ತಿಳಿಹೇಳುವಾಗಲೂ ನಾನು ಸ್ವಲ್ಪ ಅನುಮಾನದಲ್ಲೇ ಇದ್ದೆ. ನಂತರ ಈ ಯೋಜನೆಯ ಪರ-ವಿರೋಧದ ಚರ್ಚೆಯನ್ನು ಗಮನಿಸುತ್ತ ಹೋದಹಾಗೆ ನನಗೆ ಎಲ್ಲ ಸ್ಪಷ್ಟವಾಗುತ್ತ ಹೋಯ್ತು. ಯೋಜನೆಯ ವಿರುದ್ಧ ನಾನಾ ಬಗೆಯ ಶಾಂತಿಯುತ ಪ್ರತಿಭಟನೆ, ಸಂವಿಧಾನಿಕ ಚೌಕಟ್ಟಿನಲ್ಲೇ ಹೋರಾಟ ಮಾಡುತ್ತ ಬಂದರೂ ಸರ್ಕಾರ ಇದ್ಯಾವುದನ್ನೂ ಲೆಕ್ಕಿಸದೇ ಕಾಮಗಾರಿಯನ್ನು ಶುರುಮಾಡಿತು. ಕೊನೆಯ ಅಸ್ತ್ರವಾಗಿ ಚಳುವಳಿಗಾರರು ಕೋರ್ಟಿನ ಮೆಟ್ಟಿಲು ಹತ್ತಿದರು. ಈ ಯೋಜನೆ ಎಷ್ಟು ನಿರರ್ಥಕ ಎಂಬುದನ್ನು ಹಲವಾರು ಸ್ಥರಗಳಲ್ಲಿ ಸಾಧಿಸಿತೋರಿಸಿದರೂ ಕೊನೆಗೆ ಸುಪ್ರೀಂ ಕೋರ್ಟು ಯೋಜನೆಯ ಪರವಾಗಿ ತೀರ್ಪು ನೀಡುತ್ತ 'ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳು ಖರ್ಚಾಗಿರುವುದರಿಂದ ಇದನ್ನು ನಿಲ್ಲಿಸಲಾಗದು' ಎಂಬರ್ಥದ ನಿಲುವು ತೆಗೆದುಕೊಂಡಿತ್ತು. ಯೋಜನೆ ಅವೈಜ್ಞಾನಿಕ, ಇದರಿಂದ ನಷ್ಟವೇ ಹೆಚ್ಚು, ಇದು ಅತ್ಯಂತ ಅಪಾಯಕಾರಿ ಎಂದು ತಿಳಿದಮೇಲೂ ಕೋರ್ಟಿನ ತೀರ್ಪು ಹೀಗಿದೆ. ಆದರೆ ಇವ್ಯಾವುದೂ ಯಾರಿಗೂ ಅತಿರೇಕವೆನ್ನಿಸುವುದಿಲ್ಲ.
ಯೋಜನೆಯ ವಿರೋಧಿಗಳು ನೀಡಿದ್ದ ಕಾರಣಗಳಲ್ಲಿ ಮುಖ್ಯವಾದದ್ದು - ವಿದ್ಯುಚ್ಛಕ್ತಿ ಉತ್ಪಾದನೆಗೆ ಪರಮಾಣು ಸ್ಥಾವರ ಅತ್ಯಂತ ದುಬಾರಿ ಹಾಗು ಅಪಾಯಕಾರಿ ಎಂಬುದು, ಪರಮಾಣು ಇಂಧನ ಉರಿದು ಬೂದಿಯಾದ ಮೇಲೆ ಅದರ ಸುರಕ್ಷಿತ ವಿಲೇವಾರಿ ಭಾರತದಂತಲ್ಲಿ ಅಸಾಧ್ಯದ ಮಾತು ಎಂಬುದು, ಈಗ ಆಗುತ್ತಿರುವ ವಿದ್ಯುತ್ ಸೋರಿಕೆ ತಡೆಗಟ್ಟುವುದರಿಂದ ಹಾಗು ಸಣ್ಣ ಪ್ರಮಾಣದ ವಿದ್ಯುತ್ ಯೋಜನೆಗಳಿಂದ ಈಗಿರುವ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂಬುದು. ಆದರೆ ದೇಶದ ಪ್ರಮುಖ ವಿಜ್ಞಾನಿಗಳು, ಪ್ರಗತಿಯ ಹರಿಕಾರರಾದ ಯೋಜನಾಕರ್ತೃಗಳು, ಸದಾ ದೇಶದ ಒಳಿತಿಗಾಗೇ ಚಿಂತಿಸುವ 'ಸಂವಿಧಾನಾತ್ಮಕವಾಗಿ ಚುನಾವಣೆಗಳಲ್ಲಿ ಗೆದ್ದು ಬಂದ' ರಾಜಕಾರಣಿಗಳು ಚಳುವಳಿಗಾರರನ್ನು ಪ್ರತಿಗಾಮಿಗಳೆಂದೂ, ಜನಸಾಮಾನ್ಯರ ದಾರಿತಪ್ಪಿಸುವವರೆಂದೂ ಬಿಂಬಿಸುತ್ತಾ ಹೋದರು.
ಹಿರಿಯ ಸಾಹಿತಿ, ಚಿಂತಕ ಶಿವರಾಮ ಕಾರಂತರು ಚಳುವಳಿಗಾರರ ಬೆಂಬಲಕ್ಕೆ ಬಂದದ್ದಲ್ಲದೇ ಚುನಾವಣೆಗೆ ನಿಂತು ಸೋತರು. ಸಂವಿಧಾನಾತ್ಮಕವಾಗಿ ಚುನಾವಣೆ ಗೆಲ್ಲುವುದಕ್ಕಾಗಿ ಹಣ ಹೆಂಡ ಹಂಚಲು ಅವರಿಂದ ಸಾಧ್ಯವಿರಲಿಲ್ಲ ಹಾಗೇ ಅವರನ್ನೊಪ್ಪಿಸಿ ಕರೆತಂದ ಕುಸುಮಾ ಸೊರಬರಂತ ಪರಿಸರ ಹೋರಾಟಗಾರರ ಬಳಿ ನೈತಿಕ ಶಕ್ತಿ ಜನಸಮುದಾಯಗಳ ಬಗೆಗಿನ ಪ್ರಾಮಾಣಿಕ ಕಾಳಜಿ ಬಿಟ್ಟರೆ ಇನ್ನೇನೂ ಇರಲಿಲ್ಲ. ಯೋಜನೆ ಅನುಷ್ಟಾನಕ್ಕೆ ಬಂದು ಕೆಲಸಮಯದಲ್ಲೇ ಸ್ಥಾವರದ ಒಂದು dome ಕುಸಿದು ಬಿತ್ತು. ಇದು ಅತ್ಯಂತ ಸುರಕ್ಷಿತವಾಗಿರಬೇಕಾದ ಕಟ್ಟಡದ ಹಣೆಬರಹ. ಇನ್ನು ದೇಶದ ಸುರಕ್ಷೆಯ ಪ್ರಶ್ನೆಯೆಂದು ಎಲ್ಲಾ ಬಗೆಯ ಮಾಹಿತಿಯನ್ನೂ ಗೌಪ್ಯವಾಗಿಡುವುದು ಇಂತಹ ಯೋಜನೆಗಳ ಮೂಲಭೂತ ಹಕ್ಕು. ಬಹುಶಃ ಇವೆಲ್ಲ ಸಹಜ ಪ್ರಕ್ರಿಯೆ ಇರಬೇಕು. ಪ್ರತಿಭಟಿಸುವುದು, ಯಾವುದೇ ರಾಜಿಗೂ ಒಪ್ಪದೇ ಹೋರಾಡುವುದು ಮಾತ್ರ ಅತಿರೇಕ ಮತ್ತು ಅಸಂವೈಧಾನಿಕ.
ನರ್ಮದಾ ಯೋಜನೆಯೇನೂ ಇದಕ್ಕಿಂತ ಭಿನ್ನವಲ್ಲ. ಈಗಾಗಲೇ ಅಂಕಿಅಂಶಗಳ ಮೂಲಕ ಇದೆಷ್ಟು ಅವೈಜ್ಞಾನಿಕ, ಹಾನಿಕಾರಕ ಎಂಬುದನ್ನು ಸಾಬೀತು ಮಾಡಲಾಗಿದೆ. ಗುಜರಾತ್ ಬರಗಾಲಪೀಡಿತ ಪ್ರದೇಶ ಅಲ್ಲಿ ನೀರಿನ ಬವಣೆಯಿದೆ ನಿಜ. ಅಲ್ಲೇ ಪಕ್ಕದ ರಾಜಸ್ತಾನದಂತ ಮರುಭೂಮಿಯಲ್ಲಿ ರಾಜೇಂದ್ರ ಸಿಂಗ್ ಜಲಧಾರೆಯನ್ನೇ ಹರಿಸಿದ್ದಾರೆ. ಅಣ್ಣಾ ಹಜಾರೆ ಮಹಾರಾಷ್ಟ್ರದಲ್ಲಿ ಇದನ್ನು ಸಾಧಿಸಿ ತೋರಿಸಿದ್ದಾರೆ. ಇವುಗಳೆಲ್ಲ ಜನಸಮುದಾಯಗಳನ್ನೊಳಗೊಂಡ ಅವರ ಭಾವನೆಗಳನ್ನು ಸಂಸ್ಕೃತಿಯನ್ನು ಅರ್ಥಮಾಡಿಕೊಂಡ alternative approach to development. ಕಳೆದ ಭಾನುವಾರ್ ಉದಯವಾಣಿಯಲ್ಲಿ ಅನಂತಮೂರ್ತಿಯವರು ಬರೆದ ಲೇಖನವನ್ನು ಓದಿ (http://68.178.224.54/udayavani/special.asp?contentid=322055&lang=2).
ಇಲ್ಲಿ ಮುಖ್ಯವಾಗಬೇಕಾದ ಪ್ರಶ್ನೆ development ಎಂದರೇನು, ಯಾರ developmentಗೆ ಯಾರು ಬೆಲೆ ತೆರುವವರು ಎಂಬುದು. ಕೇವಲ sensational coverage ಮಾಡುವ ಟಿ.ವಿ. ವಾರ್ತೆಗಳನ್ನು, ಪತ್ರಿಕಾವರದಿಗಳನ್ನು ಹಿಂಬಾಲಿಸುತ್ತ ಹೋದರೆ ಮಾತ್ರ “ಮೇಧಾ ಮುಂದೇನು” ಎಂಬ ಪ್ರಶ್ನೆ ಮುಖ್ಯವಾಗಲು ಸಾಧ್ಯ.
- ಪ್ರಶಾಂತ್ ಪಂಡಿತ್
prapandit@gmail.com
ವಿವಿ ಅವರೇ, ಕಾಂಪ್ರೊಮೈಸ್ ಅನ್ನೋದು ಭಾರತೀಯರ ಹುಟ್ಟುಗುಣವಾಗಿಬಿಟ್ಟಿದೆ. ಅದರಲ್ಲೂ, ನೀವು ಹೇಳಿದ ಬುದ್ಧಿಜೀವಿ ವರ್ಗದವರಿಗೆ ರಾಜಿ ಎಂಬುದು ರಕ್ತಗತ. ತಾವು ಸಾರ್ವಜನಿಕವಾಗಿ ಬೋಧಿಸುವ ವಿಚಾರಗಳ್ಯಾವುವನ್ನೂ ಅವರು ತಮ್ಮ ಖಾಸಗಿ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ತಮ್ಮ ಅನುಕೂಲತೆಗಳಿಗೆ ತಕ್ಕಂತೆ ರಾಜಿ ಮಾಡಿಕೊಳ್ಳುವುದು ಅವರ ಜನ್ಮಸಿದ್ಧ ಹಕ್ಕು. ಚರ್ಚೆಯ ಮುಖ್ಯ ವಿಷಯದಿಂದ ಸ್ವಲ್ಪ ದೂರ ಹಾರಿ ಕಾಂಪ್ರೊಮೈಸ್ ಮಾಡಿಕೊಂಡಿದ್ದಕ್ಕೆ ಕ್ಷಮಾಪಣೆ ಇರಲಿ...
ಶ್ರೀರಾಮ್ ರವರೇ, ಮೇಧಾ ಪಾಟ್ಕರ್ ಅವರ ಹೋರಾಟದ ಮೂಲ ಗುರಿ ಇದ್ದದ್ದು ಪರಿಸರ ವಿನಾಶದ ವಿರುದ್ಧ. ದುರದೃಷ್ಟವಶಾತ್ ಅವರ ಹೋರಾಟ ಎಂದಿಗೂ ಪ್ರಬಲ ಜನಾಂದೋಲನವಾಗಲಿಲ್ಲ. ಕೇವಲ ಪತ್ರಿಕೆಗಳಲ್ಲಿ ಮಾತ್ರ ಪ್ರಚಾರ ಸಿಕ್ಕಿತು. ಅದಕ್ಕೆ ಭಾಗಶಃ ಕಾರಣ ಅವರು ತಮ್ಮ ಹೋರಾಟವನ್ನು ನರ್ಮದಾ ಬಚಾವೋ ಆಂದೋಲನಕ್ಕೆ ಸೀಮಿತಗೊಳಿಸಿದ್ದು. ಆದ್ದರಿಂದಲೇ ಇರಬಹುದು, ಮೇಧಾ ಅವರ ಹೋರಾಟದ ಆಯುಸ್ಸು ನ ಬ ಆಂದೋಲನದಷ್ಟೇ ಎಂಬ ಅನುಮಾನ ಹೊಗೆಯಾಡುವುದು.
ಇಂದು ಅಣೆಕಟ್ಟು, ಪುನರ್ವಸತಿ ಸಮಸ್ಯೆಗಳಿಗಿಂತ ಜಟಿಲವಾದ ಸಮಸ್ಯೆಗಳು ಹೇರಳವಾಗಿವೆ. ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಕುಡಿಯೊಡೆಯುವ ಹೋರಾಟಗಳು ಕೆಲ ದೂರ ಸಾಗಿದ ಕೂಡಲೇ ವ್ಯವಸ್ಥೆಯ ಶೋಷಣೆಗೆ ಸಿಲುಕಿ ರಾಜಿ (ಕಾಂಪ್ರೊಮೈಸ್) ಆಗಿಬಿಡುತ್ತವೆ. ಇದಕ್ಕೆ ಅರ್ಧ ಕಾರಣ ಜನಸಾಮಾನ್ಯರು. ಯಾವುದೇ ವ್ಯಕ್ತಿ ಅಥವಾ ಪಕ್ಷ ಸಾರ್ವಜನಿಕವಾಗಿ ಒಳ್ಳೆಯದನ್ನು ಮಾಡಿದಾಗ ಅಥವಾ ಕೆಟ್ಟದ್ದನ್ನು ಮಾಡಿದಾಗ ಜನರು ಹೆಚ್ಚು ದಿನ ಜ್ಞಾಪಕವಿಟ್ಟುಕೊಳ್ಳುವುದಿಲ್ಲ. ಒಳ್ಳೆಯ ಕೆಲಸ ಮಾಡಿದರೂ ಜನ ಕೇಳುವುದಿಲ್ಲ ಕೆಟ್ಟ ಕೆಲಸ ಮಾಡಿದರೂ ಜನ ಕೇಳುವುದಿಲ್ಲ ಎಂದಾದಾಗ ಆ ವ್ಯಕ್ತಿಯು ಸುಲಭ ದಾರಿಯಾದ ಭ್ರಷ್ಟಾಚಾರಕ್ಕೆ ದಾಸನಾಗುತ್ತಾನೆ.
ಅಸತ್ಯಾನ್ವೇಷಿ:ಕೋರ್ಟುಗಳು ಪರ್ಫೆಕ್ಟ್ ಅಲ್ಲ, ನಿಜ. ಆದರೆ ಸಿವಿಲ್ ಸೊಸೈಟಿ ಒಪ್ಪಿರುವ ಅನೇಕ ಸಂಸ್ಥಾಗತ ಪ್ರತೀಕಗಳಲ್ಲಿ ಅದು ಒಂದು. ಪ್ರಜಾತಂತ್ರದ ಭಾಗ ಅದು. ನನಗೆ ಒಪ್ಪಿತವಲ್ಲದ, ನನಗೆ ಸರಿ ಅನ್ನಿಸದ ಕೆಲವು ವಿಚಾರಗಳನ್ನು ಈ ಚೌಕಟ್ಟಿನಲ್ಲಿ ಒಪ್ಪದ್ದಿದ್ದರೆ ನಾವು ಒಂದು ಒಪ್ಪ ಸಮುದಾಯವಾಗುವುದಿಲ್ಲ. ಈ ಮಥನದಲ್ಲಿ ಒಮ್ಮೊಮ್ಮೆ ತಪ್ಪು ನಿರ್ಣಯಗಳು ಬರುತ್ತವೆ, ಅದು ನಾವು ಒಂದು ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲಿಸುವ ಬೆಲೆ. ಇದೇ ದೇಶದಲ್ಲಿ ಖಾಲಿಸ್ಥಾನದ, ಬೊಡೊಗಳ, ಜಾರಖಂಡ್, ಉಲ್ಪಾ, ನಕ್ಸಲ್ ಚಳುವಳಿಗಳು ನಡೆದಿವೆ.. ಆದಕ್ಕೆ ಕಾರಣರಾದವರು ನಾವೇ ಚುನಾಯಿಸಿದ ರಾಜಕೀಯ ನಾಯಕರು. ನಿಜ. ಹಾಗಂತ ನಾವು ಪ್ರಜಾತಂತ್ರವನ್ನ ತ್ಯಾಗ ಮಾಡಲು ಸಿದ್ಧರಿದ್ದೇವೆಯೆ?
ಪ್ರಶಾಂತ್: ನಿಮ್ಮ ಅಭಿಪ್ರಾಯದಲ್ಲಿ ಐಐಎಂನ ಹೆಸರು ತಂದು ನನ್ನನ್ನು ಒಂದು ವಿಚಾರಧಾರೆಗೆ ಬೆಸೆಯಲು ಪ್ರಯತ್ನಿಸಿರುವುದು ನನಗೆ ನೋವನ್ನುಂಟುಮಾಡಿದೆ. ಇಲ್ಲಿ ಕೆಲಸ ಮಾಡುವವರೆಲ್ಲರೂ ಬಲಪಂಥೀಯರಾಗಬೇಕೆಂದೇನೂ ಇಲ್ಲ. ನಾನು ನನ್ನ ವಾದ ಸರಣಿಯಲ್ಲಿ ಎಂದೂ ನರ್ಮದಾ ಪರವಾದ ಅಥವಾ ವಿರೋಧವಾದ [ಆ ಮಾತಿಗೆ ಕೈಗಾ ಪರ ಅಥವಾ ವಿರೋಧವಾದ] ನಿಲುವು ತೆಗೆದುಕೊಂಡಿಲ್ಲ. ನನಗೆ ತಿಳಿದಿರುವಂತೆ ಅದು ತುಂಬಾ ಜಟಿಲವಾದ ವಿಷಯ, ಅದರ ಪದರಗಳನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕು. ಹೀಗಾಗಿ ನನ್ನನ್ನು ಐಐಎಂ ಮತ್ತು ಅಣೆಕಟ್ಟು ಪರ ಎಂಬ ಅರ್ಥ ಬರುವಂತೆ ಬಣ್ಣಿಸುವುದು ಸರಿಯಾದದ್ದಲ್ಲ.ನನಗೆ ಶಿವರಾಮ ಕಾರಂತರು ಚುನಾವಣೆ ಗೆದ್ದಿದ್ದರೆ ಒಳ್ಳೆಯದಿತ್ತು ಅಂತ ಆಗ ಅನ್ನಿಸಿತ್ತು. ಆದರೆ ಸೋತರು. ಅದನ್ನ ನಾವು ಒಪ್ಪಬೇಕು. ಗುಜರಾತಿನಲ್ಲಿ ಮೋದಿ ಗೆಲ್ಲುವುದು ನನಗೆ ಇಷ್ಟವಿರಲಿಲ್ಲ, ಅದು ನನ್ನ ಖಾಸಗೀ ಅಭಿಪ್ರಾಯ. ಆ ಬಗ್ಗೆ ನಾನು ಏನು ಮಾಡಿದೆ? ನನ್ನ ಮೂಲಭೂತ ಹಕ್ಕಾದ ಓಟನ್ನು ಹಾಕಿ ಬಂದೆ. ಆನಂತರ ಏನು ಮಾಡಬಹುದಿತ್ತು? ಜನರೊಂದಿಗೆ ಮಾತನಾಡಬಹುದಿತ್ತು, ಬಹುಶಃ ಅವರ ವಿರುದ್ಧ ಪ್ರಚಾರ ಮಾಡಬಹುದಿತ್ತು. ಈಗಲೂ ಅವರ ವಿರುದ್ಧ ಮಾತಾಡಬಹುದು.. ಅದಲ್ಲಾ ನನ್ನ ಹಕ್ಕುಗಳು. ಆದರೆ ನಾನು ಆತನನ್ನು ಮುಖ್ಯಮಂತ್ರಿಯಾಗಿ ಒಪ್ಪುವುದಿಲ್ಲ ಎಂಬ ನಿಲುವು ಎಷ್ಟು ಸಮಂಜಸ? ನಾನು ಮೇಧಾರ ಬಗೆಗಿನ ಪ್ರಶ್ನೆಗಳನ್ನ ಈ ಚೌಕಟ್ಟಿನಲ್ಲಿ ಕೇಳುತ್ತಿದ್ದೇನೆ ಅಷ್ಟೇ. ಹಾಗೆಂದು ಸಿವಿಲ್ ಸೊಸೈಟಿಯಲ್ಲಿ ಕೈಗಾದ ವಿರುದ್ಧ, ನರ್ಮದಾ ಅಣೆಕಟ್ಟಿನ ವಿರುದ್ಧ ಎದ್ದು ನಿಲ್ಲಬಾರದೆಂದೇನೂ ನಾನು ಹೇಳುತ್ತಿಲ್ಲ. ಉದಾಹರಣೆಗೆ ನಾಳೆ ಸರಕಾರ ೨೭% ಒಬಿಸಿ ರಿಜರ್ವೇಶನ್ ನಮ್ಮ ಸಂಸ್ಥೆಗೆ ಅನ್ವಯಿಸಿದರೆ.. ಮತ್ತು ಇಲ್ಲಿರುವ ಎಲ್ಲರೂ ವೈಯಕ್ತಿಕವಾಗಿ ಅದರ ವಿರೋಧಿಗಳಾಗಿದ್ದರೆಂದು ಒಂದು ಕ್ಷಣಕ್ಕೆ ಭಾವಿಸಿದರೆ.. ನಾವುಗಳು ಮಾಡಬಹುದಾದ್ದು ಏನು? ನಾಳೆ ನಾನು ಕ್ಲಾಸಿನಲ್ಲಿ ಪಾಠ ಮಾಡುವುದಿಲ್ಲ ಎಂಬ ನಿಲುವನ್ನು ತೆಗೆದುಕೊಳ್ಳುವುದು ಎಷ್ಟು ಸಮಂಜಸ? [ಇಲ್ಲಿಯೂ ನಾನು ಆರಕ್ಷಣೆಯ ವಿರೋಧಿ ಎಂದು ಭಾವಿಸಬಾರದು, ಆ ಬಗ್ಗೆ ನನಗೆ ನನ್ನದೇ ಅಭಿಪ್ರಾಯವಿದೆ ಆದರೆ ಅದಕ್ಕೆ ಇದು ತಕ್ಕ ಜಾಗವಲ್ಲ].
ಸಾರಥಿ, ಕಾಂಪ್ರೊಮೈಸ್ ಮಾಡಿಕೊಳ್ಳುವ ಅವಶ್ಯಕತೆ ಎಲ್ಲಿಯವರೆಗೆ ಇಲ್ಲ? ನಾವುಗಳು ಪ್ರಜಾತಂತ್ರ ವ್ಯವಸ್ಥೆಯನ್ನ ನಂಬುವುದಾದರೆ ಅದರ ಚೌಕಟ್ಟಿನಲ್ಲಿ ನಮಗಿರುವ ಎಲ್ಲ ಸಾಧ್ಯತೆಗಳನ್ನು ಮುಗಿಸಿದಾಗ ಬಂದ ಫಲಿತವನ್ನು ಒಪ್ಪಿಕೊಳ್ಳಬೇಕಲ್ಲವೇ? ನನಗೆ ಮೇಧಾರ ಇಂದಿನ ನಿಲುವಿನ ಬಗ್ಗೆ - ಪುನರ್ವಸತಿ ಸರಿಯಾಗಿ ಆಗುತ್ತಿಲ್ಲ, ಅದು ಆಗುವವರೆಗೆ ಅಣೆಕಟ್ಟಿನ ಕೆಲಸ ನಿಲ್ಲಬೇಕು - ಎನ್ನುವುದರ ಬಗ್ಗೆ ಯಾವ ತೊಂದರೆಯೂ ಇಲ್ಲ. ಆದರೆ ನಾಳೆ ಕೋರ್ಟು ಇದನ್ನ ಪರೀಕ್ಷಿಸಿ ತನ್ನ ತೀರ್ಪನ್ನು ಕೊಟ್ಟಾಗ ಅವರ ನಿಲುವೇನಿರಬಹುದೆಂಬ ಕುತೂಹಲ ಅಷ್ಟೇ.
ಪ್ರಶಾಂತ್ ಪಂಡಿತರೇ,
ಸಾಂವಿಧಾನಿಕ ಪ್ರಜಾಸತ್ತೆಯ ವ್ಯವಸ್ಥೆಯಲ್ಲಿದ್ದುಕೊಂಡು, ಸುಪ್ರೀಂ ಕೋರ್ಟಿನ ತೀರ್ಮಾನವನ್ನು ಧಿಕ್ಕರಿಸುತ್ತೇನೆ ಎನ್ನುವ ಧೋರಣೆಯ ಹಿಂದೆ, "ನಾನೊಬ್ಬನೇ ಸರ್ವಜ್ಞ. ಅಷ್ಟೇ ಅಲ್ಲ, ಪರಿಸರ/ಸಾಮಾಜಿಕ ಕಾಳಜಿ ಇರುವುದು ನನಗೆ ಮಾತ್ರ" ಎಂಬ ಮನೋಭಾವ ಇದೆ ಎಂದು ನನ್ನ ಅಭಿಪ್ರಾಯ. ನನ್ನ ಅಭಿಪ್ರಾಯವನ್ನು "ಬಾಲಿಶ" ಮಾತ್ರ ಅಲ್ಲ, "ತೀರಾ ಬಾಲಿಶ" ಮತ್ತು "ವಿದೂಷಕತನ"ವೆಂದು ಕರೆದಿದ್ದೀರಿ; ಒಳ್ಳೆಯದು.
ಶ್ರೀರಾಮ್ರವರಂತೆ, ನಾನೂ ಸಹ ನರ್ಮದಾ ವಿವಾದದ ಬಗೆಗಾಗಲೀ, ಕೈಗಾ ಅಣು ಸ್ಥಾವರದ ಬಗೆಗಾಗಲೀ ಪರ ಅಥವಾ ವಿರೋಧ ವ್ಯಕ್ತಪಡಿಸಿಲ್ಲ. ಅದಕ್ಕಿಂತ ಮುಖ್ಯವಾಗಿ, ಮೇಧಾ ಮತ್ತು ಅವರ ಬುದ್ಧಿಜೀವಿ ಹಿಂಬಾಲಕರ ಎಲೈಟಿಸ್ಟ್ ಮನೋಭಾವನೆಯನ್ನು ಸಂಪೂರ್ಣ ತಪ್ಪು ಎಂದೂ ಸಹ ನಾನು ಹೇಳಿಲ್ಲ. (ಕೆಲ ವರ್ಷಗಳ ಹಿಂದೆ ಓದಿದ ವಿಲಿಯಂ ಎ. ಹೆನ್ರಿಯ "ಇನ್ ಡಿಫೆನ್ಸ್ ಆಫ್ ಎಲೈಟಿಸಂ" ನಾನು ಮೆಚ್ಚಿದ ಪುಸ್ತಕಗಳಲ್ಲಿ ಒಂದು - ಆತನ ವಾದವನ್ನು ಪೂರ್ಣವಾಗಿ ಒಪ್ಪದಿದ್ದರೂ ಸಹ.)
ಯಾವುದೇ ವ್ಯವಸ್ಥೆ ಪರ್ಫೆಕ್ಟ್ ಅಲ್ಲ; ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ, ಹಠಮಾರಿತನದ ಅಗತ್ಯ ಇದೆ ಎಂಬ ಅರಿವೂ ಸಹ ನನಗಿದೆ. ಪ್ರಜಾಸತ್ತೆಯಾಗಲೀ, ಸಂವಿಧಾನವಾಗಲೀ, ಸಂವಿಧಾನವನ್ನು ಇಂಟರಪ್ರಿಟ್ ಮಾಡುವ ಸುಪ್ರೀಂ ಕೋರ್ಟ್ ಆಗಲಿ "infallible" ಅಲ್ಲ. ಹಾಗೆಯೇ ಮೇಧಾ ಪಾಟ್ಕರ್ ಮತ್ತು ಇತರೆ ಪರಿಸರವಾದಿಗಳೂ ಸಹ ಪ್ರಶ್ನಾತೀತರಲ್ಲ. ಪ್ರಶ್ನಿಸುವುವರೆಲ್ಲಾ ವಿರೋಧಿಗಳೂ ಅಲ್ಲ. ವಿರೋಧಿಗಳೆಲ್ಲಾ 'ವಿದೂಷಕ'ರೂ ಅಲ್ಲ. (ವೈರಿಗಳೂ ಅಲ್ಲ!)
ಕೈಗಾ ವಿಚಾರ ಬರೆಯುತ್ತಾ ಪರಿಸರವಾದಿಗಳನ್ನು ಭೇಟಿ ಮಾಡಿ ಸವಿವರವಾಗಿ ಅಂಕಿ-ಅಂಶಗಳನ್ನು ಪಡೆದ ವಿಷಯ ಬರೆದಿದ್ದೀರಿ. ಹಾಗೆಯೇ ಅಣು ಸ್ಥಾವರದ ಪರ ಇರುವವರ ಜೊತೆಯೂ ಭೇಟಿ ಮಾಡಿದ್ದೀರೆ? (ಇದೊಂದು ಪ್ರಶ್ನೆ ಮಾತ್ರ. ಅನ್ಯಥಾ ಭಾವಿಸಬೇಡಿ.)
"ಇಲ್ಲಿ ಮುಖ್ಯವಾಗಬೇಕಾದ ಪ್ರಶ್ನೆ development ಎಂದರೇನು, ಯಾರ developmentಗೆ ಯಾರು ಬೆಲೆ ತೆರುವವರು ಎಂಬುದು" ಎಂಬ ನಿಮ್ಮ ಮಾತನ್ನು ಒಪ್ಪ ಬಹುದಾದರೂ, ಇತರೆ ಪ್ರಶ್ನೆಗಳನ್ನು ಕೇಳುವುದೇ ತಪ್ಪು ಎನ್ನುವಂತಹ ಧೋರಣೆಯನ್ನು ಒಪ್ಪುವುದು ಕಷ್ಟ.
ಮಾನ್ಯ ಸಾರಥಿಯವರೇ,
"ಕಾಂಪ್ರೊಮೈಸ್ ಅನ್ನೋದು ಭಾರತೀಯರ ಹುಟ್ಟುಗುಣವಾಗಿಬಿಟ್ಟಿದೆ" ಎಂದು ನೀವು ಬರೆದಿರುವುದನ್ನು ಓದಿದಾಗ, ಪ್ರಜಾಸತ್ತೆ ಭಾರತದಲ್ಲಿ ಕೊಂಚ ಮಟ್ಟಿಗೆ ತಳವೂರಿರುವುದಕ್ಕೆ ಅದೂ ಒಂದು ಕಾರಣವಿರಬಹುದೇ ಎಂಬ ಅನುಮಾನ ಬಂತು.
ವಂದನೆಗಳೊಂದಿಗೆ,
ವಿ.ವಿ.
ಶ್ರೀರಾಮ್ ಹಾಗು ವಿ.ವಿ.ಯವರೇ,
ಯಾರನ್ನೂ ವೈಯ್ಯಕ್ತಿಕವಾಗಿ ಟೀಕಿಸುವುದು ನನ್ನ ಉದ್ದೇಶವಲ್ಲ. ನಿಮ್ಮ ಅಭಿಪ್ರಾಯಗಳನ್ನು ಅರ್ಥೈಸಿಕೊಳ್ಳುವಾಗ (ಹಾಗೆಯೇ ನಿಮ್ಮ ವಿಚಾರಧಾರೆ ಏನಿರಬಹುದು ಎಂದು ಊಹಿಸುತ್ತಾ ಪ್ರತಿಕ್ರಿಯಿಸುವಾಗ) ನಿಮಗೆ ನೋವುಂಟು ಮಾಡಿದ್ದಲ್ಲಿ ದಯವಿಟ್ಟು ಕ್ಷಮಿಸಿ. ನನ್ನ ಪ್ರತಿಕ್ರಿಯೆಗಳೇನಿದ್ದರೂ ideologyಗೆ.
ಶ್ರೀರಾಮ್: ನಾನು ಕಂಡ ಐಐಎಂನಿಂದ ಬಂದ managerಗಳು/ವಿದ್ಯಾರ್ಥಿಗಳು/ಅವರ ಶಿಕ್ಷಕರೆಲ್ಲ ಭಾರತವನ್ನು ನಾಳೆಯೇ ಅಮೇರಿಕಾ ಮಾಡಿಬಿಡುವ ಪಣತೊಟ್ಟವರಂತೆ ವರ್ತಿಸುವುದನ್ನು ನೋಡಿ ಬೇಸರಗೊಂಡಿದ್ದೇನೆ. ಲಾಭ ಮಾಡುವುದೊಂದೇ ಜೀವನದ ಏಕೈಕ ಗುರಿ ಎಂದು ತೀರ್ಮಾನಿಸಿ ಸಮಾಜದ ಎಲ್ಲ ಆಗುಹೋಗುಗಳಿಂದ safe distance ಕಾಯ್ದುಕೊಳ್ಳುತ್ತ ಮಹತ್ವದ ಪ್ರಶ್ನೆ, ಸಮಸ್ಯೆಗಳೆಲ್ಲದರಿಂದ escape ಆಗುವುದನ್ನು ಕಂಡು ರೋಸಿ “there is something in the ideology of these institutions, which make the people what they are” ಎಂಬ ತೀರ್ಮಾನಕ್ಕೆ ಬರತೊಡಗಿದ್ದೇನೆ. ನಿಮ್ಮ ಲೇಖನ ಓದುತ್ತ ಹೋದ ಹಾಗೆ ನೀವು ಎತ್ತುವ ಪ್ರಶ್ನೆಗಳ ಧಾಟಿಯಿಂದ ನಿಮ್ಮ ideologyಯೂ ಹೀಗೇ ಇರಬಹುದು ಎಂದು ಭಾವಿಸಿ ಪ್ರತಿಕ್ರಿಯಿಸಿದ್ದೇನೆ. ಅದು ತಪ್ಪಾದಲ್ಲಿ ಸಂತೋಷ, ಆದ ನೋವಿಗೆ ಕ್ಷಮೆಯಿರಲಿ. ಈ ವಿಷಯವನ್ನು ಇನ್ನೊಮ್ಮೆ ಚರ್ಚಿಸಬಹುದು. ಈಗ ಮುಖ್ಯ ವಿಷಯಕ್ಕೆ ಬರೋಣ.
ನನ್ನನ್ನು ಐಐಎಂ ಮತ್ತು ಅಣೆಕಟ್ಟು ಪರ ಎಂಬ ಅರ್ಥ ಬರುವಂತೆ ಬಣ್ಣಿಸುವುದು ಸರಿಯಾದದ್ದಲ್ಲ.
ನಿಮ್ಮ ಲೇಖನ ಓದುತ್ತ ಹೋದಹಾಗೆ ಎಲ್ಲೂ ನೀವು ಈ ಗಂಭೀರ ವಿದ್ಯಮಾನದ ಆಳಕ್ಕಿಳಿಯದೇ ಯಾವ ಸ್ಪಷ್ಟ ನಿಲುವೂ ತೆಗೆದುಕೊಳ್ಳದೇ ಮೇಲ್ಮಟ್ಟದ ಗ್ರಹಿಕೆಯಿಂದ, “ಸಿನಿಕ ಕುತೂಹಲದಿಂದ” ಪ್ರಶ್ನೆಮಾಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ. ಉದಾಹರಣೆಗೆ ಸ್ವಾತಂತ್ಯ್ರ ಸಿಗುವ ಮುನ್ನ ಈ ಪ್ರಶ್ನೆ ಕೇಳಿದ್ದರೆ ಹೇಗಿರುತ್ತಿತ್ತು - “ಗಾಂಧಿ = ಸ್ವಾತಂತ್ಯ್ರ ಹೋರಾಟ, ಸ್ವಾತಂತ್ಯ್ರ ಹೋರಾಟ = ಗಾಂಧಿ ಎಂಬಂತಾಗಿರುವಾಗ ಸ್ವಾತಂತ್ಯ್ರ ಬಂದೇ ಬಿಟ್ಟರೆ ಗಾಂಧಿ ಮುಂದೇನು ಮಾಡುತ್ತಾರೆ?” ಇಲ್ಲಿ ನಾನು ಮೇಧಾರನ್ನು ಗಾಂಧಿಗೆ ಹೋಲಿಸುತ್ತಿಲ್ಲ. ಅವರು ನಂಬಿರುವ ತತ್ವ, ಸಿದ್ಧಾಂತಗಳ ಬಗ್ಗೆ ಅವರಿಗಿರುವ conviction ನೋಡಿ ಅವರ ಹೋರಾಟದ larger goal ಏನಿರಬಹುದು ಎಂದು ನೋಡಲು ಪ್ರಯತ್ನಿಸುತ್ತಿದ್ದೇನೆ. ಈ ಯೋಜನೆಯ ಪರ ಅಥವಾ ವಿರುದ್ಧ ನಿಲುವು ತೆಗೆದುಕೊಳ್ಳುವುದಕ್ಕೆ ಸಾಕಷ್ಟು ತಲೆಕೆಡಿಸಿಕೊಳ್ಳಬೇಕು, ಅದು ಜಟಿಲವಾದ ವಿಷಯ, ಅದರಲ್ಲಿ ಹಲವಾರು ಪದರಗಳಿವೆ ಎನ್ನುವ ನೀವು ಮೇಧಾರ ಚಳುವಳಿಯ ಸ್ವರೂಪವನ್ನು ಅದರ ಗುರಿಯನ್ನು (ಬಹುಶಃ ಪತ್ರಿಕಾ ವರದಿಗಳ/ಟಿ.ವಿ. ರಿಪೋರ್ಟ್ ಗಳ ಆಧಾರದ ಮೇಲೆಯೇ) ನಿರ್ಧರಿಸಿಬಿಡುತ್ತೀರಿ ! ಈ ಹಿನ್ನೆಲೆಯಲ್ಲಿ ನನಗೆ ಅನಂತಮೂರ್ತಿಯವರ ವಿಶ್ಲೇಷಣೆ ಸಮಂಜಸ ಎನ್ನಿಸುತ್ತದೆ.
ಈ ಮಥನದಲ್ಲಿ ಒಮ್ಮೊಮ್ಮೆ ತಪ್ಪು ನಿರ್ಣಯಗಳು ಬರುತ್ತವೆ, ಅದು ನಾವು ಒಂದು ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲಿಸುವ ಬೆಲೆ.
ವಿಪರ್ಯಾಸ ನೋಡಿ. ಬಂದೂಕು ಹಿಡಿದು ಕ್ರಾಂತಿಮಾಡಲು ಹೊರಟವರೂ ಇದೇ ಧಾಟಿಯಲ್ಲಿ ಮಾತಾಡುತ್ತಾರೆ. ನಿರಂತರ ಅನ್ಯಾಯಕ್ಕೆ ತುಳಿತಕ್ಕೆ ಗುರಿಯಾಗಿ ರೋಸಿಹೋಗಿ ಸರ್ಕಾರದ ಪ್ರತಿನಿಧಿಗಳ ಪ್ರಾಣತೆಗೆದು “ಇದು ನಮಗಾದ ಅನ್ಯಾಯಕ್ಕೆ ಅವರು ಸಲ್ಲಿಸಬೇಕಾದ ಬೆಲೆ” ಎನ್ನುತ್ತಾರೆ. ಇಂತಹ ಬೆಲೆ ಸಲ್ಲಿಸದೇ ಹೊಸ ನ್ಯಾಯಯುತ ವ್ಯವಸ್ಥೆ ಕಟ್ಟಲಾಗದು ಎನ್ನುತ್ತಾರೆ. ನಮ್ಮ ಘನ ಸರ್ಕಾರಗಳು ನೂರಾರು ಕೋಟಿ ರೂಪಾಯಿ ಖರ್ಚುಮಾಡಿ ಇವರನ್ನು ‘ನಿಗ್ರಹಿಸಹೊರಟಿದೆ’. ಮೇಧಾ ಮತ್ತವರ ಸಂಘಟನೆ ಕಳೆದ 20 ವರ್ಷಗಳಿಂದ ಹೋರಾಡುತ್ತಿದ್ದರೂ ಹತಾಶರಾಗಿ ಈ ದಾರಿ ಹಿಡಿದಿಲ್ಲ ಎಂಬುದು ಬಹಳ ಮುಖ್ಯ. ಹಾಗೆಯೇ ಯಾರೂ ಅನವಶ್ಯಕವಾಗಿ ಅಪಾರ ಬೆಲೆತೆರಬೇಕಾದ ಅಗತ್ಯವಿಲ್ಲ.
ಹಾಗಂತ ನಾವು ಪ್ರಜಾತಂತ್ರವನ್ನ ತ್ಯಾಗ ಮಾಡಲು ಸಿದ್ಧರಿದ್ದೇವೆಯೆ?
ಬಹುಶಃ ಇಲ್ಲ. ರಕ್ತಕ್ರಾಂತಿ ಎಂದು ಶುರುವಾಗಿ ನಂತರ ಹಾದಿತಪ್ಪಿದ ಏಷ್ಟೋ ಚಳುವಳಿಗಳನ್ನು ಇತಿಹಾಸದಲ್ಲಿ ನೋಡಿದ್ದೇವೆ. ಆದರೆ ಈಗಿನ ದುರಂತ ನೋಡಿ. ಶಾಂತಿಯುತ ಹೋರಾಟಗಳನ್ನು ನಿರ್ಲಕ್ಷಿಸುವ ಮೂಲಕ ಪ್ರಜೆಗಳ ಸರ್ಕಾರವೇ ಇಂತಹ ಹಿಂಸಾತ್ಮಕ ಹೋರಾಟಕ್ಕೆ ಕಾರಣವಾಗುತ್ತಿದೆ. ಸರ್ಕಾರಗಳ ಈ ಕಾರ್ಯ ವೈಖರಿಯನ್ನು ಮೇಧಾ ಪ್ರಶ್ನಿಸುತ್ತಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲೇ ನಡೆಯುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ. ಆಳುವವರ ದಪ್ಪ ಚರ್ಮ ಭೇಧಿಸಿ ಅವರನ್ನು sensitize ಮಾಡಲು ಯತ್ನಿಸುತ್ತಿದ್ದಾರೆ. ಇದು ನನ್ನ ಗ್ರಹಿಕೆ.
ಅವರಿಗೆ ತಮ್ಮ ವಿರೋಧವಾಗಿ ತೀರ್ಪು ಬಂದಾಗ ಅದು ಜನ ವಿರೋಧಿಯಾಗಿ ಕಾಣಿಸುತ್ತದಲ್ಲ?
ತೀರ್ಪು ಬರುವುದು ಅವರ ವಿರುದ್ಧವೋ ಅಥವಾ ಅವರ ಚಳುವಳಿಯ ಬೇಡಿಕೆಗಳ ವಿರುದ್ಧವೋ? ಅವರು ಸುಮಾರು 20 ವರ್ಷಗಳಿಂದ ಹೋರಾಡುತ್ತಿರುವುದು ತಮ್ಮದೇನೋ ಬೇಳೆ ಬೇಯಿಸಿಕೊಳ್ಳಲೆಂದೋ ಅಥವಾ ಅವರೇನಾದರೂ ಜನಸಮುದಾಯವೊಂದನ್ನು ಪ್ರತಿನಿಧಿಸುತ್ತಿದ್ದಾರೋ? ನಿಮ್ಮ ಈ ಪ್ರಶ್ನೆಗೆ ಕಾರಣವೇ ತಿಳಿಯುತ್ತಿಲ್ಲ.
ವಿ.ವಿ:ಸಾಂವಿಧಾನಿಕ ಪ್ರಜಾಸತ್ತೆಯ ವ್ಯವಸ್ಥೆಯಲ್ಲಿದ್ದುಕೊಂಡು, ಸುಪ್ರೀಂ ಕೋರ್ಟಿನ ತೀರ್ಮಾನವನ್ನು ಧಿಕ್ಕರಿಸುತ್ತೇನೆ ಎನ್ನುವ ಧೋರಣೆಯ ಹಿಂದೆ, "ನಾನೊಬ್ಬನೇ ಸರ್ವಜ್ಞ. ಅಷ್ಟೇ ಅಲ್ಲ, ಪರಿಸರ/ಸಾಮಾಜಿಕ ಕಾಳಜಿ ಇರುವುದು ನನಗೆ ಮಾತ್ರ" ಎಂಬ ಮನೋಭಾವ ಇದೆ ಎಂದು ನನ್ನ ಅಭಿಪ್ರಾಯ.
ಕೈಗಾದಂತೆ ಸಾಕಷ್ಟು ಉದಾಹರಣೆಗಳಲ್ಲಿ ಕೋರ್ಟಿನ ತೀರ್ಮಾನವನ್ನು ನೀವು ಗಮನಿಸಿದರೆ ಯಾರಿಗೆಷ್ಟು ಕಾಳಜಿಯಿದೆಯೆಂಬುದು ಸ್ಪಷ್ಟವಾಗುತ್ತದೆ. ದಶಕಗಳ ಕಾಲ ಶಾಂತಿಯುತವಾಗಿ ಸಾಂವಿಧಾನಿಕ ಚೌಕಟ್ಟಿನೊಳಗೇ ಹೋರಾಡುತ್ತ ಒಂದರ ಮೇಲೊಂದು (ಯಾವ justifiable ಕಾರಣವೂ ಇಲ್ಲದೇ) ಸೋಲುಂಡು ಹತಾಶರಾದವರು ಇಂತಹ ಧೋರಣೆ ಉಳ್ಳವರಾದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಎಲ್ಲ ಚಳವಳಿಗಳಲ್ಲೂ ‘ಮಂದಗಾಮಿ’ಗಳೂ ಇರುತ್ತಾರೆ ‘ತೀವ್ರಗಾಮಿ’ಗಳೂ ಇರುತ್ತಾರೆ. ಪರಿಸರವಾದಿಗಳೇ ‘ಹೀಗೆ’, ಅವರ ಮನೋಭಾವ ‘ಇಂಥದ್ದು’ ಎಂಬ ಅಭಿಪ್ರಾಯ ಹೊಂದಿದವರು ಯಾರೂ ಅವರ ಜೊತೆ ಒಡನಾಡಿರುವುದಿಲ್ಲ/ಚರ್ಚಿಸಿರುವುದಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ.
ಹಾಗೆಯೇ ಮೇಧಾ ಪಾಟ್ಕರ್ ಮತ್ತು ಇತರೆ ಪರಿಸರವಾದಿಗಳೂ ಸಹ ಪ್ರಶ್ನಾತೀತರಲ್ಲ. ಪ್ರಶ್ನಿಸುವುವರೆಲ್ಲಾ ವಿರೋಧಿಗಳೂ ಅಲ್ಲ. ವಿರೋಧಿಗಳೆಲ್ಲಾ 'ವಿದೂಷಕ'ರೂ ಅಲ್ಲ. (ವೈರಿಗಳೂ ಅಲ್ಲ!)
ಯಾರೂ ಪ್ರಶ್ನಾತೀತರಲ್ಲ. ಈ ಹಿಂದೆ ತಿಳಿಸಿದಂತೆ ನಾನು ಪ್ರಶ್ನೆಮಾಡುವುದರ ಮೂಲಕವೇ ಕೈಗಾ ಯೋಜನೆಯ ಬಗ್ಗೆ ಅರಿಯಲು ಸಾಧ್ಯವಾಯ್ತು. ಆದರೆ ಇಂತಹ ಘಟನೆಗಳು ನಡೆದಾಗಲೊಮ್ಮೆ ಪ್ರಶ್ನೆಮಾಡಿ ನಂತರ ಸುಮ್ಮನಿರುವುದರಿಂದ ವಿಷಯದ ಆಳಕ್ಕೆ ಹೋಗುವುದು ಸಾಧ್ಯವಿಲ್ಲ ಹಾಗೆಯೇ ಸ್ಪಷ್ಟ ಅರಿವು/ಅಭಿಪ್ರಾಯ ಮೂಡುವುದೂ ಇಲ್ಲ.
ಕೈಗಾ ವಿಚಾರ ಬರೆಯುತ್ತಾ ಪರಿಸರವಾದಿಗಳನ್ನು ಭೇಟಿ ಮಾಡಿ ಸವಿವರವಾಗಿ ಅಂಕಿ-ಅಂಶಗಳನ್ನು ಪಡೆದ ವಿಷಯ ಬರೆದಿದ್ದೀರಿ. ಹಾಗೆಯೇ ಅಣು ಸ್ಥಾವರದ ಪರ ಇರುವವರ ಜೊತೆಯೂ ಭೇಟಿ ಮಾಡಿದ್ದೀರೆ? (ಇದೊಂದು ಪ್ರಶ್ನೆ ಮಾತ್ರ. ಅನ್ಯಥಾ ಭಾವಿಸಬೇಡಿ.)
ಖಂಡಿತ. ಈ ಹಿಂದೆ ತಿಳಿಸಿದಂತೆ ಇಂತಹ ಬೃಹತ್ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ವಿವರ ಕೊಡುವುದರಲ್ಲಿ ಕಾನೂನಿನ ತೊಡಕುಗಳಿವೆ. ರಾಷ್ಟ್ರದ ಸುರಕ್ಷತೆಯ ದೃಷ್ಟಿಯಿಂದ ಇಂತಹ ಸೂಕ್ಷ್ಮ ವಿವರಗಳನ್ನು ಎಲ್ಲರಿಗೂ ಕೊಡಲಾಗದು ಎನ್ನುತ್ತಾರೆ. ಸರಿ ಒಪ್ಪೋಣ. ಸಂಘಟನೆಯೊಂದು ಹೋದರೆ ಮಾಹಿತಿ ದೊರೆಯಬಹುದೇ? ಅದೂ ಇಲ್ಲ. ಏಕೆಂದರೆ ನೀವೀಗ ಅವರ ಯೋಗ್ಯತೆಯನ್ನೇ ಪ್ರಶ್ನಿಸುತ್ತಿದ್ದೀರಿ ಎಂಬಂತೆ ನೋಡಲಾಗುತ್ತದೆ. ವಿವರವಾದ ಮಾಹಿತಿ ಪಡೆಯಲು ವರ್ಷಗಟ್ಟಲೇ ಹೋರಾಡಬೇಕು. ಹಾಗೆ ಪಡೆದ ಮಾಹಿತಿಯನ್ನು ವಿಶ್ಲೇಷಿಸಿ ಲೋಪ ದೋಷಗಳನ್ನು ಪಟ್ಟಿಮಾಡಿ ತೋರಿಸುವಷ್ಟರಲ್ಲಿ ಅರ್ಧ ಕಾಮಗಾರಿ ಮುಗಿದಿರುತ್ತದೆ. ಹೀಗೆ ಪ್ರಶ್ನಿಸುವ ಮನೋಭಾವವನ್ನೇ ನೀವು ಪ್ರಶ್ನಿಸಬಹುದು. Policy ಮಾಡುವವರು ಅದನ್ನು ಅನುಷ್ಠಾನಗೊಳಿಸುವವರು ಕನಿಷ್ಟ ಪ್ರಾಮಾಣಿಕತೆಯಿಂದ ಪಾರದರ್ಶಕವಾಗಿ ಕೆಲಸಮಾಡುತ್ತಿದ್ದರೆ ಈ ಪ್ರಮೇಯವೇ ಬರುತ್ತಿರಲಿಲ್ಲವೇನೋ. ಇವರಲ್ಲಿ ವಿಶ್ವೇಶ್ವರಯ್ಯನಂತವರು ಯಾರಿದ್ದಾರೆ ಈಗ? ನೀವು ಯಾವುದೇ ಬೃಹತ್ ಯೋಜನೆಯನ್ನು ನೋಡಿ, ಹಗರಣಗಳು ಅವ್ಯವಹಾರ ಇತ್ಯಾದಿಗಳೇ ಕಾಣುತ್ತವೆ. ಇನ್ನು ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ಕೊಡುವವರು ಯಾರು?
ಇತರೆ ಪ್ರಶ್ನೆಗಳನ್ನು ಕೇಳುವುದೇ ತಪ್ಪು ಎನ್ನುವಂತಹ ಧೋರಣೆಯನ್ನು ಒಪ್ಪುವುದು ಕಷ್ಟ.
ಶ್ರೀರಾಮರ ಬರಹದಲ್ಲಿ ಹಾಗು ನಿಮ್ಮ ಪ್ರತಿಕ್ರಿಯೆಯಲ್ಲಿ ಬಹುಪಾಲು ಸಿನಿಕತನ/ಕುಹಕ ಇರುಂವಂತಿದೆ. ಇದು ನನ್ನ ಗ್ರಹಿಕೆ. ಇದು ತಪ್ಪು ಗ್ರಹಿಕಿಯಾದಲ್ಲಿ ನೀವು ನಿಮ್ಮ ನಿಲುವನ್ನು ಸ್ಪಷ್ಟಪಡಿಸುವಿರೆಂದು ನಂಬಿದ್ದೇನೆ.
- ಪ್ರಶಾಂತ್ ಪಂಡಿತ್
ಪ್ರಶಾಂತ,
ಬಹುಶಃ ನನ್ನ ಲೇಖನದ ಉದ್ದೇಶವನ್ನು ನಾನು ಸ್ಪಷ್ಟಮಾಡುವುದರಲ್ಲಿ ವಿಫಲಗೊಂಡಿದ್ದೇನೆ ಅನ್ನಿಸುತ್ತದೆ. ಅಥವಾ ನೀವು ನನ್ನ ವಾದವನ್ನು ಭಾವಶೂನ್ಯ್ತತೆಯಿಂದ ನೋಡುತ್ತಿಲ್ಲ. ನಾನು ಐಐಎಂನಲ್ಲಿದ್ದೇನೆಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅದನ್ನು ನೀವೇ ಕಂಡುಕೊಂಡು ಕೆಲವು ಅಭಿಪ್ರಾಯಗಳನ್ನ ಐಐಎಂ ಬಗ್ಗೆ ಹೇರಿದ್ದೀರ. ನಿಮಗೆ ನಾನು ಐಐಎಂನಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಗೊತ್ತಾದಂತೆಯೇ ನೀವು ನನ್ನ ಕೆಲಸದ ಬಗ್ಗೆ ನನ್ನ ಪ್ರೊಫೆಶನಲ್ ಬರವಣಿಯ ಬಗ್ಗೆ ತುಸು ಹೋಂವರ್ಕ್ ಮಾಡಿದ್ದರೆ ಬಹುಶಃ ನನ್ನ ಮೇಲೆ ವೈಯಕ್ತಿಕವಾಗಿ ಹಾಕಿದ ಆರೋಪವನ್ನು ನೀವು ಹಾಕುತ್ತಿರಲಿಲ್ಲವೇನೋ.
ಯಾವುದೇ ವ್ಯಕ್ತಿ/ಸಂಸ್ಥೆ/ಚಳುವಳಿಯನ್ನು ಅಧ್ಯಯನ ಮಾಡುವಾಗ ಪೂರ್ವಾಗ್ರಹದ ನಿಲುವಿನಿಂದ ಬಂದರೆ ಆಗುವ ಅಪಾಯ ನಿಮ್ಮ ಬರವಣಿಗೆಯಲ್ಲಿ ನನಗೆ ಕಾಣುತ್ತಿದೆ. ಇರಲಿ.
ಹೌದು ನರ್ಮದಾ ಪರ-ವಿರೋಧದ ಬಗ್ಗೆ ನಾನು ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ, ತೆಗೆದುಕೊಳ್ಳುವುದೂ ಇಲ್ಲ. ಆದರೆ ಅಕಾಡಮಿಕ್ ಬದುಕಿನ ಬಗ್ಗೆ ನಿಮಗೆ ತುಸು ಆಸಕ್ತಿಯಿದ್ದಲ್ಲಿ ಇಷ್ಟು ಹೇಳಬಹುದು. ನಾವುಗಳು ಟಿವಿ ನೋಡುತ್ತೇವೆ ನಿಜ, ಪತ್ರಿಕೆ ಓದುತ್ತೇವೆ ನಿಜ. ಆದರೆ ನಮ್ಮ ಅಭಿಪ್ರಾಯಗಳು ಅದರ ಮೇಲೇ ಆಧಾರಿತವಾಗಿರುತ್ತವೆ ಅನ್ನುವುದು ಎಷ್ಟು ನಿಜ? ನಾವುಗಳು ಇದಲ್ಲದೇ ಗಂಭೀರ ಅನಾಲಿಸಿಸ್ ಇರುವ ಪೇಪರುಗಳನ್ನೂ ಓದುತ್ತೇವೆ. ನರ್ಮದಾದ ಬಗ್ಗೆ ಅರ್ಥಶಾಸ್ತ್ರಿ ಯೋಗೀಂದರ್ ಅಲಗ್ ಅವರ ಬರವಣಿಗೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಾನು ಆ ಸಾಹಿತ್ಯವನ್ನು ಇಲ್ಲಿಗೆ ಎಳೆದು ತರದಿರುವುದಕ್ಕೆ ಕಾರಣ ಚರ್ಚೆಯ ಮುಖ್ಯ ವಿಷಯ ಅದಲ್ಲ ಅನ್ನುವುದೇ [ಅಂದಹಾಗೆ, ನೀವ್ಯಾರು, ಎಲ್ಲಿ ಕೆಲಸ ಮಾಡುತ್ತಿದ್ದೀರ, ನಿಮ್ಮ ರಾಜಕೀಯ ನಿಲುವೇನು ಎಂದು ಕಂಡುಹಿಡಿಯುವ ಪ್ರಯತ್ನ ನಾನು ಮಾಡಿಲ್ಲ... ಆದರೆ ನೀವು ಐಐಎಂನಲ್ಲಂತೂ ಖಂಡಿತ ಓದಿಲ್ಲ/ಓದುವುದಿಲ್ಲ ಅಂತ ಊಹಿಸಬಹುದು]..
ನನಗೆ ನರ್ಮದಾ ಆಂದೋಲನದ ವಾದಸರಣಿ ಮೂಡಿಬಂದಿರುವ ವಿಕಸಿತಗೊಳ್ಳುತ್ತಿರುವ ದಿಕ್ಕನ್ನು ಅರ್ಥಮಾಡಿಕೊಳ್ಳುವ ಆಸಕ್ತಿಯಿದೆ. ಆ ಬಗ್ಗೆ ನಾನು ಬಹಳ ಸ್ಪಷ್ಟ ನಿಲುವನ್ನು ತೆಗೆದುಕೊಂಡ ದಿನ ಅದು ಆಸಕ್ತಿಯಾಗಿ ಉಳಿಯುವುದಿಲ್ಲ.. ನನ್ನ ಅಕಾಡಮಿಕ್ ಶಿಕ್ಷಣ ನನಗೆ ಕಲಿಸಿರುವುದು ಈ ರೀತಿಯ ಆರೋಗ್ಯಪೂರ್ಣ ಆಸಕ್ತಿಯನ್ನು ಉಳಿಸಿಕೊಳ್ಳುವುದನ್ನು. ಹೀಗಾಗಿ ನಾನು ಇಲ್ಲ್ಲಿ ಯಾವ ವಿಪರೀತದ ನಿಲುವನ್ನೂ ತೆಗೆದುಕೊಳ್ಳುವುದಿಲ್ಲ.
ನೀವು ಮೇಧಾರನ್ನು ಗಾಂಧಿಗೆ ಯಾಕೆ ಹೋಲಿಸಬಾರದು? ಖಂಡಿತ ಹೋಲಿಸಿ. ನನ್ನ ಒಂದು ಟಿಪ್ಪಣಿಯಲ್ಲಿ ಗಾಂಧಿಯ ನಿಲುವನ್ನು ತಂದಿದ್ದೇನೆ. ಆ ಬಗ್ಗೆ ನಿಮ್ಮ ಪ್ರತಿಕ್ರಿಯೆ ನನಗೆ ಕಾಣಲಿಲ್ಲ. ನೀವು ಲೇಖನವನ್ನು ಗಮನಿಸಿದರೆ ಅದರ ಉದ್ದಕ್ಕೂ ಇರುವುದು ಚಳವಳಿಗಳ ಉದ್ದೇಶ ಹಾಗೂ ಅವುಗಳ ಬೆಳವಣಿಗೆಯ ವಿಚಾರದ ಮಾತುಗಳೇ ಹೊರತು ನೀವು ಆರೋಪಿಸಲು ಪ್ರಯತ್ನಿಸಿರುವ ಪರಸಿರ-ವಿಕಾಸದ ವಿಷಯವಲ್ಲ. ನಾನು ಸ್ವಾತಂತ್ರ ಚಳುವಳಿಗಳನ್ನೊ ಅಟಾನಮಿಯಂಥಹ ಆಂದೊಲನಗಳನ್ನು ಲೇಖನದಲ್ಲಿ ಚರ್ಚಿಸಿದ್ದೇನೆ, ಉದಾಹರಣೆಗೆ ಲೇಖನದ ಈ ಭಾಗವನ್ನು ನೋಡಿ:
"ಈ ಎಲ್ಲ ಜನಾಂದೋಳನಗಳೂ ಎರಡು ಧಾರೆಗಳನ್ನ ನಮ್ಮ ಮುಂದಿಡುತ್ತದೆ. ಜನಾಂದೊಳನಗಳಲ್ಲಿ ಬರಬಹುದಾದ ಸಣ್ಣಪುಟ್ಟ ಆಂದೊಳನಗಳನ್ನ ಸದ್ಯಕ್ಕೆ ಬಿಟ್ಟು ಬಿಡೋಣ. ದೊಡ್ಡ (ನರ್ಮದಾದಂತಹ) ಆಂದೋಳನಗಳಲ್ಲಿ ನಾವು ಯಾವುದಾದರೂ ಒಂದು ವಿಚಾರದ "ಪರ" ವಾಗಿ ಹೋರಾಡುವಾಗ, ಸೋಲೆಂಬುದು ಇಲ್ಲವೇ ಇಲ್ಲ. ಉತ್ತರಾಖಂಡ್, ಜಾರ್ಖಂಡ್, ಗೊರ್ಖಾಲ್ಯಾಂಡ್... ಇತ್ಯಾದಿ ಆಂದೋಳನಗಳನ್ನ ತೆಗೆದುಕೊಂಡರೆ ಬೇರೆ ಬೇರೆ ಹಂತದಲ್ಲಿ (ಸಂವಿಧಾನಾವನ್ನ ಒಪ್ಪಿ, ಅದರ ಚೌಕಟ್ಟಿನೊಳಗೆ ಕೆಲಸ ಮಾಡಲು ತಯಾರಾದಾಗ) ಅದರ ನಾಯಕರು - ಆ ವಿಚಾರಧಾರೆ - ಸಫಲತೆ ಪಡೆದದ್ದನ್ನ ನೋಡಬಹುದು. ಸಫಲತೆ ಪಡೆಯದ ವಿದರ್ಭ, ತೆಲಂಗಾಣಾ, ಕೊಡಗು ಇತ್ಯಾದಿಗಳು ಎಂದಿಗೂ "lost cause" ಆಗುವುದೇ ಇಲ್ಲ.. ಎಲ್ಲಿಯವರೆಗೆ ಅದು ಸಫಲವಾಗುವುದಿಲ್ಲವೋ ಅಲ್ಲಿಯವರೆಗೆ ಅದರ ನಾಯಕರ ಕೆಲಸ ಮುಂದುವರೆಯುತ್ತಲೇ ಇರುತ್ತದೆ. ಅದು ಸಫಲವಾದಾಗ ಅದನ್ನ ಕಟ್ಟುವ ಕಾಪಾಡುವ ಕೆಲಸ ಮಾಡಬಹುದು (ದುರಾದೃಷ್ಟದಿಂದ ಅದರ ನಾಯಕತ್ವ ಆಂದೋಳನಕಾರರಿಗೆ ಸಿಗದಿರಲೂಬಹುದು - ಜಾರ್ಖಂಡ್ನಲ್ಲಿ ಶಿಬೂ ಸೋರೆನ್ಗೆ ಆದ ಹಾಗೆ..)
ಅದೇ ಯಾವುದೇ ವಿಷಯಕ್ಕೆ ವಿರುಧ್ಧವಾಗಿ ಕೆಲಸ ಮಾಡಿದಾಗ - ಸಫಲತೆ ಪ್ರಾಪ್ತವಾದರೂ ಅದು ಒಂದು "dead end" ಆಗಿಬಿಡುತ್ತದೆ. ನರ್ಮದಾ ಅಣೆಕಟ್ಟು ನಿಲ್ಲಿಸಿಬಿಟ್ಟರೆ ಇಂಥದೇ ಕೆಲಸದ ಮೇಲೆ ತಮ್ಮಿಡೀ ಜೀವನವನ್ನ ಕಳೆದಿರುವ ಮೇಧಾ ಏನು ಮಾಡುತ್ತಾರೆ... ಬೇರೊಂದು ಅಣೆಕಟ್ಟನ್ನ ವಿರೋಧಿಸುತ್ತಾರೆಯೇ, ಅಥವಾ ವ್ಯವಸ್ಥೆಯ ಮುಖ್ಯಧಾರೆಯಲ್ಲಿ ಬೆರೆತು ಹೋಗುತ್ತಾರೆಯೇ...
ಸ್ವಾತಂತ್ರ ಸಂಗ್ರಾಮದಂತಹ ಹೋರಾಟಗಳು ಬೇರೆಯೇ ಸ್ಥರದವು - ಅಲ್ಲಿ ಹೋರಾಟಗಾರರು ಕೈಗತ್ತಿಕೊಂಡಿರುವ ವಿಷಯ ಮೂಲಭೂತವಾಗಿ ಸಂವಿಧಾನವನ್ನ ಪ್ರಶ್ನಿಸಿ, ಅದರೊಂದಿಗಿನ ಕೊಂಡಿಗಳನ್ನು ಮುರಿಯುವುದೇ ಆಗಿದೆ. ಆ ಸಂದರ್ಭದಲ್ಲಿ ಮೂಲಭೂತ ಉದ್ದೇಶವೇ ಇರುವ ವ್ಯವಸ್ಥೆಯನ್ನ ಪ್ರಶ್ನಿಸುವುದಾಗಿರುತ್ತದೆ. ಇಂಥ ಸಂಗ್ರಾಮಗಳಲ್ಲಿ - ಒಂದು ಭೂಪ್ರದೇಶ ಹಂಚಿಹೋಗಬಹುದು (ರಷ್ಯಾ, ಯುಗೋಸ್ಲಾವಿಯಾ...) ಅಥವಾ ಸಂವಿಧಾನವೇ ಬದಲಾಗಬಹುದು (ದಕ್ಷಿಣ ಆಫ್ರಿಕಾ). ಆದರೆ ಮೇಧಾ ಎತ್ತಿರುವ ವಿಷಯ ಆ ದೃಷ್ಟಿಯಿಂದ ಪರಿಸರ ಮತ್ತು ದೊಡ್ಡ ಅಣಕಟ್ಟುಗಳಿಂದ ಆಗಬಹುದಾದ ಕಷ್ಟನಷ್ಟಗಳಿಗೆ ಸೀಮಿತವಾಗಿದೆ.
ನಿಮ್ಮ ಅಭಿಪ್ರಾಯದಲ್ಲಿ ಮೇಧಾರು ಮಾಡುತ್ತಿರುವ "ಶಾಂತಿಯುತ ಹೋರಾಟವನ್ನು ಸರಕಾರ ನಿರ್ಲಕ್ಷಿಸಿದೆ". ನಿಜವೇ? ಹಾಗಾದರೆ ಸೈಫುದ್ದಿನ್ ಸೋಸ್ ಯಾಕೆ ಮೇಧಾರನ್ನು ನೋಡಲು ಹೋದರು? ಸುಪ್ರೀಂ ಕೋರ್ಟು ಯಾಕೆ ತನ್ನ ಅಭಿಪ್ರಾಯವನ್ನು ನೀಡಿತು? ಮೇಧಾರ ವಿಷಯದಲ್ಲಿ ಚರ್ಚೆ ನಡೆಯಲು ನನಗೆ ತಿಳಿದಂತೆ ಸರಕಾರ ಅಡ್ಡಬಂದಿಲ್ಲ. ಅದರ ಅರ್ಥ ಮೇಧಾರ ಎಲ್ಲ ವಾದವನ್ನೂ ಸರಕಾರ ಒಪ್ಪಬೇಕೆಂದೂ ಅಲ್ಲ. ಹೇಗೆ ಮೇಧಾರು ಸರಕಾರದ ವಾದವನ್ನು ಒಪ್ಪುವುದಿರುವುದಕ್ಕೆ ಆಕೆಗೆ ಕಾರಣಗಳೂ ಹಕ್ಕೂ ಇದೆಯೋ ಹಾಗೆಯೇ ಸರಕಾರಕ್ಕೂ ಇದೆ..
ಸಂವಿಧಾನದ ಚೌಕಟ್ಟನ್ನ ನೀವು ಒಪ್ಪುವುದೇ ಆದರೆ ಮೇಧಾ ಜನಪ್ರತಿನಿಧಿಯಾಗುವುದು ಹೇಗೆ? ಹೌದು, ಒಂದು ಸಮುದಾಯದ ಪರವಾಗಿ ಆಕೆ ನಿಂತಿದ್ದಾರೆ. ಆದರೆ ಅವರೆದುರಿಗೆ ಮಾತನಾಡುತ್ತಾ ಚರ್ಚಿಸುತ್ತಾ ನಿಂತಿರುವ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಜನವಿರೋಧಿಗಳೋ? ಸಂವಿಧಾನದ ಚೌಕಟ್ಟನ್ನು ನಾವು ಒಪ್ಪುವುದಾದರೆ ಮೇಧಾ ಮಾತ್ರ ಜನಪರ ಮಿಕ್ಕವರು ವಿರೋಧಿಗಳು ಎಂದು ಒಪ್ಪುವುದು ಕಷ್ಟವಾಗುತ್ತೇನೋ.
ಅಂದಹಾಗೆ ಲೇಖನದಲ್ಲಿರುವ ಎರಡೂ ಬದಿಯ ವಾದಗಳನ್ನು ನೀವು ಗಮನಿಸಿಯೇ ಇಲ್ಲ ಅನ್ನಿಸುತ್ತದೆ. ನನ್ನ ಪ್ರತಿಕ್ರಿಯ ಮುಗುಸುವ ಮುನ್ನ ಕೆಲ ಭಾಗಗಳನ್ನು ಇಲ್ಲಿ ಮತ್ತೆ ಹಚ್ಚುತ್ತೇನೆ:
"ಆದರೆ ಈಗ ಆಂದೋಳನ ಒಂದು ವಿಚಿತ್ರ ಹಂತ ತಲುಪಿಬಿಟ್ಟಿದೆ. ಈಗ ಮೇಧಾ ಮತ್ತು ಆಂದೋಳನಕಾರರು ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆಯಿಡಬೇಕಾಗುತ್ತದೆ. ಪರಿಸರ, ಪುನರ್ವಸತಿ - ಎರಡರ ಬಗೆಗೂ ಒಂದೇ ಧ್ವನಿಯಲ್ಲಿ ಮಾತನಾಡದೇ ಪುನರ್ವಸತಿಯ ವಿಷಯವನ್ನ ಪಟ್ಟಾಗಿ ಹಿಡಿದು, ಸರಕಾರದಿಂದ ಕೆಲಸ ತೆಗೆಯುವ ಅಜೆಂಡಾ ಯಾರಾದರೂ ಕೈ ಹಿಡಿಯಲೇ ಬೇಕಾಗಿದೆ." [ಆರು ವರ್ಷಗಳ ಕೆಳಗೆ ನಾನು ಬರೆದದ್ದನ್ನೇ ಮೇಧಾ ಮಾಡುತ್ತಿದ್ದಾರೆ. ಆದರೆ ನನ್ನ ಲೇಖನ ಓದಿ ಇದನ್ನು ಅವರು ಮಾಡಿದರು ಅಂತ ನಾನು ವಾದಿಸಿದರೆ ಅದು ಖಂಡಿತವಾಗಿ ಅತಿರೇಕವಾಗುತ್ತದೆ. ಆದರೆ ನಾನು ಆ ಥರದ ಕ್ಲೈಮ್ ಮಾಡಿದ ದಿನ ನಿಮ್ಮ ಮನಸ್ಸಿನಲ್ಲಿರುವ ಐಐಎಂ ಇಮೇಜಿಗೆ ನಾನು ಒಗ್ಗಬಹುದು!!]
"ಮೇಧಾ ಕೋರ್ಟಿನ ಬಗ್ಗೆ ತಮಗೆ ನಂಬಿಕೆಯಿಲ್ಲವೆಂದಮಾತ್ರಕ್ಕೆ ಆಕೆ ಚರ್ಚಿಸುತ್ತಿರುವ ಮೂಲಭೂತ ವಿಷಯಗಳ ಮಹತ್ವ ಕಡಿಮೆಯಾಯಿತೆಂದು ಯಾರೂ ನಂಬಬಾರದು."
"ದೊಡ್ಡ ನೀರಾವರಿ ಯೋಜನೆಗಳು, ಅಣೆಕಟ್ಟುಗಳು ಎಷ್ಟು ಜಟಿಲವಾದ ವಿಷಯವೆಂದು ನಿರೂಪಿಸಲೋ ಎಂಬಂತೆ ಉಚ್ಚನ್ಯಾಯಾಲಯದ ತೀರ್ಪೂ ಸರ್ವಾನುಮತದಿಂದ ಕೂಡಿಲ್ಲ. "
"ನ್ಯಾಯಪಾಲಿಕೆಯಂಥಹ ಸಂಸ್ಥೆಯ ತೀರ್ಪನ್ನ "not acceptable to the affected people" ಎಂಬಂತ ನಿಲುವನ್ನ ಬುದ್ಧಿಜೀವಿಗಳಾದ ಮೇಧಾರಂತಹವರು ತೆಗೆದುಕೊಂಡಾಗ ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿರುವವರೆಲ್ಲ ಎದ್ದು ಕೂತುಕೊಳ್ಳುವ ಸಮಯ ಬರುತ್ತದೆ. ಆದರೆ ತೀರ್ಪು ಬಂದಕೂಡಲೇ ಮೇಧಾ ಹಾಗೆ ಪ್ರತಿಕ್ರಯಿಸಿದರೂ, ಈಚೆಗೆ ಕೊಟ್ಟ ಸಂದರ್ಶನವೊಂದರಲ್ಲಿ ತಮ್ಮ ಮುಂದಿರುವ ಸಂವಿಧಾನಬದ್ಧ ದಾರಿಗಳನ್ನ ಚರ್ಚಿಸಿರುವುದು ಒಳ್ಳಯದೇ ಆಗಿದೆ. "
ದಯವಿಟ್ಟು ಲೇಖನವನ್ನು ಪೂರ್ವಾಗ್ರಹವಿಲ್ಲದೇ ಓದಿ. ಜನಾಂದೋಲನಗಳನ್ನು ಲೀಡ್ ಮಾಡುವ ನಾಯಕರ ಜೀವನೋದ್ದೇಶದ ದೃಷ್ಟಿಯಿಂದ ಈ ಲೇಖನವನ್ನು ಬರೆಯಲಾಗಿದೆ. ಮೇಧಾರನ್ನು ನಾನು ಕ್ರಾಂತಿಕಾರರಿಗೆ ಹೋಲಿಸುತ್ತಿಲ್ಲ. ಅವರ ಉದ್ದೇಶಗಳನ್ನು ನಾನು ಪ್ರಶ್ನಿಸುತ್ತಿಲ್ಲ. ಅವರ ಮುಂದಿರುವ ದ್ವಂದ್ವಗಳನ್ನು ಅರ್ಥಮಾಡಿಕೊಳ್ಳಲು ಅವರ ನಿಲುವು ಬದಲಾಗುವುದಕ್ಕೆ - ಫೋಕಸ್ ಬೇರತ್ತ ತಿರುಗುವುದಕ್ಕೆ ಇರಬಹುದಾದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನಾನು ಉತ್ತರಗಳನ್ನು ನೀಡುತ್ತಿಲ್ಲ. ನನಗೆ ನಾನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದೇನೆ ಅಷ್ಟೇ. ಈ ನನ್ನ ಶೋಧನೆಯಲ್ಲಿ ತುಸುದೂರ ನೀವು ಸಹಯಾತ್ರೆ ಮಾಡಿದರೆ ನನಗೆ ಒಳ್ಳೆಯದೇ..
ಶ್ರೀರಾಮ್
ಶ್ರೀರಾಮ್,
ನಾನು ನಿಮ್ಮ ಲೇಖನವನ್ನು ಓದುವಾಗ ಹಾಗು ಪ್ರತಿಕ್ರಿಯಿಸುವಾಗ ಪೂರ್ವಾಗ್ರಹಪೀಡಿತನಾಗಿಲ್ಲ ಎಂದು ತಿಳಿಸಬಯಸುತ್ತೇನೆ. ಆದರೆ “ಭಾವಶೂನ್ಯತೆಯಿಂದ ನೋಡುತ್ತಿಲ್ಲ” ಎಂಬುದನ್ನು ಒಪ್ಪುತ್ತೇನೆ. ಏಕೆಂದರೆ ಸಾಮಾನ್ಯ ಜನರನ್ನು, ರೈತರನ್ನು, ಆದಿವಾಸಿಗಳನ್ನು ಒಳಗೊಂಡಿರುವ ಈ ಚಳವಳಿಯನ್ನು ಒಂದು “ಅಕಡೆಮಿಕ್ ಕೇಸ್ ಸ್ಟಡಿ”ಯಾಗಿ ನೋಡಲು ನನ್ನಿಂದ ಸಾಧ್ಯವಿಲ್ಲ (ಇಂತಹ ಕಾರಣಗಳಿಗಾಗಿಯೇ ನೀವು ಸರಿಯಾಗಿಯೇ ಊಹಿಸಿದಂತೆ ನಾನು ಐಐಎಂನಲ್ಲಿ ಓದಿಲ್ಲ, ಓದುವುದೂ ಸಾಧ್ಯವಿಲ್ಲ. ಐಐಎಂ ಕುರಿತ ನನ್ನ ನಿಲುವು ಹಾಗು ನಿಮ್ಮ ವಾದಸರಣಿಯ ಹಿಂದಿನ ಪ್ರಭಾವದ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಪ್ರತ್ಯೇಕವಾಗಿ ನಿಮಗೆ ಬರೆಯುವೆ). ನಿಮ್ಮ ಲೇಖನ ಓದುತ್ತ ಹೋದಹಾಗೆ ಯಾವ ನೆಲೆಯಲ್ಲಿ ನೀವು ಇಂತಹ ಪ್ರಶ್ನೆಮಾಡುತ್ತಿದ್ದೀರಿ ಎಂದು ಯೋಚಿಸತೊಡಗಿದೆ. ನನ್ನ ಮೊದಲ ಪ್ರತಿಕ್ರಿಯೆ ಹೀಗೆ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಬಂದದ್ದು (ಬರೆದು ಮುಗಿಸಿದ ಮೇಲೆ ನಿಮ್ಮ ಬಗ್ಗೆ ಎಲ್ಲೋ ಓದಿದ್ದು ನೆನಪಾಗಿ ನಿಮ್ಮ ಹಿನ್ನೆಲೆಯ ಕುರಿತಾದ ನನ್ನ ಅನುಮಾನದ ಸಾಲನ್ನೂ ಸೇರಿಸಿದೆ. ಆದರೆ ಪೂರ್ವಾಗ್ರಹದಿಂದಲೇ ನಿಮ್ಮ ಬರಹವನ್ನು ಅರ್ಥೈಸಿಕೊಂಡೆ ಎಂಬುದು ನಿಜವಲ್ಲ). ಇದನ್ನು ಓದಿದ ನನ್ನ ಸ್ನೇಹಿತರೊಬ್ಬರು ನಿಮ್ಮ ಪ್ರತಿಕ್ರಿಯೆ ಸರಿಯಾಗಿದೆ “ಅದೊಂದು ಸಾಲನ್ನು ಬಿಟ್ಟು” ಎಂದರು.
ನಿಮ್ಮ ಲೇಖನ ಓದುತ್ತಿದ್ದ ಹಾಗೆ ಹಲವಾರು ಪ್ರಶ್ನೆಗಳು ಮೂಡಿದವಾದರೂ ಇದನ್ನು ಭಾವಶೂನ್ಯತೆಯಿಂದ ಓದಬೇಕು ಎಂದು ಹೊಳೆಯಲಿಲ್ಲ. ನಿಮ್ಮ ಬ್ಲಾಗಿನ ಎಲ್ಲ ಬರಹಗಳನ್ನು ಓದಿರುವ ನನಗೆ ಈ ಬರಹ ಕೇವಲ “ಅಕಡೆಮಿಕ್” ಆಸಕ್ತಿಯುಳ್ಳವರಿಗೆ ಮಾತ್ರ ಎಂಬುದು ತಿಳಿಯದಾಯಿತು. ಹಾಗಾಗಿಯೇ ನಂತರದ ಪ್ರತಿಕ್ರಿಯೆಗಳು, ಪ್ರಶ್ನೋತ್ತರ ಇತ್ಯಾದಿ ಗೊಂದಲವಾದದ್ದು. ನಿಮ್ಮ ಸಮಯ ಹಾಳುಮಾಡಿದ್ದಕ್ಕೆ ಕ್ಷಮೆಯಿರಲಿ.
ಹಿಂದೊಮ್ಮೆ ಯೋಗಿಂದರ್ ಅಲಗ್ ಅವರ ಲೇಖನವನ್ನು ಓದಿದ್ದೇನೆ. ಅಲ್ಲಿ ಕೂಡ ಭಾವಶೂನ್ಯನಾಗಿ ಓದಲಾಗದೇ ಅರ್ಧಕ್ಕೇ ನಿಲ್ಲಿಸಿದೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ಹಳ್ಳಿಗಳು ಮುಳುಗುವುದು, ಜನ ಬೇರೇಡೆಗೆ ಹೋಗಿ ಹೊಸಬದುಕನ್ನು ಕಟ್ಟಿಕೊಳ್ಳಲು ಯತ್ನಿಸುವುದು, “ಇವೆಲ್ಲ ಇಂತಹ ಯೋಜನೆಗಳಲ್ಲಿ ಸಹಜ” ಹಾಗು “ಇವೆಲ್ಲ ಆಧುನಿಕತೆಗೆ ನಾವು ತೆರಬೇಕಾದ ಬೆಲೆ” ಎನ್ನುವುದು, ಕ್ರೌರ್ಯದ ಹೊಸ ರೂಪ ಅಷ್ಟೇ. ಒಂದು ಸಂಸ್ಕೃತಿಯನ್ನೇ ಬುಡಸಮೇತ ಕಿತ್ತೆಸೆಯುವುದು ಅಗತ್ಯವೂ ಅಲ್ಲ, ಅನಿವಾರ್ಯವೂ ಅಲ್ಲ. ಮತ್ತು ಅವರ ಹೋರಾಟ ಅಧ್ಯಯನ ಮಾಡಬೇಕಾದ ವಸ್ತುವೂ ಅಲ್ಲ. ನಿಮ್ಮೊಂದಿಗಿನ ಸಹಯಾತ್ರೆ ನನಗೆ ಕಷ್ಟ.
ಕೊನೆಯ ಮಾತು: ಮೊನ್ನೆ ದೆಹಲಿಯಲ್ಲಿ ಮೇಧಾರೊಂದಿಗೆ ಉಪವಾಸ ಕೂತ ಮಹಿಳೆಯ ಮನೆಯಿರುವ ಜಾಗ ಅಕ್ಷರಶಃ ದ್ವೀಪವಾಗಿದೆ. ಅಲ್ಲಿ ಈಗ ಆಕೆ ಒಂಟಿಯಾಗಿ ಬದುಕುತ್ತಿದ್ದಾಳೆ (ಈ ವಿಷಯ ತಿಳಿದಾಗ ನನಗೆ ಗಿರೀಶ ಕಾಸರವಳ್ಳಿಯವರ ದ್ವೀಪ ಚಿತ್ರದ ನಾಗಿಯ ನೆನಪಾಯಿತು). ಆಣೆಕಟ್ಟೆಯ ಎತ್ತರ ಹೆಚ್ಚಾಗಿ ಮುಂಬರುವ ಮಳೆಗಾಲದಲ್ಲಿ ಅದೂ ಮುಳುಗಲಿದೆ. ಹೀಗೆ ಪ್ರತಿಯೊಬ್ಬರದೂ ಒಂದೊಂದು ಕಥೆಯಿದೆ. ಮೇಧಾರ ಮುಂದಿರುವ ದ್ವಂದ್ವಗಳನ್ನು, ನಿಲುವುಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತಿರುವ ನೀವು ಈ ಜಾಗಗಳಿಗೆ ಹೋಗುವುದರಿಂದ ಸಾಕಷ್ಟು ಒಳನೋಟಗಳು ದೊರೆಯಬಹುದು.
- ಪ್ರಶಾಂತ್
ಶ್ರೀರಾಮರೆ,
ಈ ವಿಷಯದ ಕುರಿತು ಮಾತನಾಡುವ ನೈತಿಕ ಸ್ಥೈರ್ಯ ನನಗಿಲ್ಲದಿದ್ದರೂ, ನಿಮ್ಮ ಲೇಖನ ಓದಿದ ಮೇಲೆ ನನ್ನ ಅನುಮಾನಗಳು.
1. ಮೇಧಾ ನರ್ಮದಾ ಆಗಿಹೋದರೆ ಏನು ಮಾಡುತ್ತಾರೆ ಎನ್ನುವುದು ಯವಾಗ ಪ್ರತುತವಾಗುತ್ತದೆಯೆಂದರೆ, ಮೇಧಾ ಆಂದೋಲನವನ್ನು ಈ ಭಯದಲ್ಲಿ (ಗೊತ್ತಿದ್ದೋ,, ಗೊತ್ತಿಲ್ಲದೆಯೋ) ಜೀವಂತವಿಟ್ಟಿದ್ದಾರೆ ಎಂದಾಗ ಮಾತ್ರ, ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಸುಪ್ತಭಯದ ನಿರ್ದೇಶನದಲ್ಲಿ ಆ ದಾರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದಾಗ ಮಾತ್ರ. ಇಲ್ಲದೇ ಹೋದಲ್ಲಿ '....ಮುಂದೇನು?' ಎನ್ನುವ ಅಪಾಯ ಆಧುನಿಕ ಕಾಲದ ಯಾವುದೇ ವೃತ್ತಿಗೆ ಅನ್ವಯಿಸಬಹುದು. ಆದ್ದರಿಂಡ ನಿಮ್ಮ ಲೇಖನ ನನಗೆ ಆಶ್ಚರ್ಯ ತಂದಿದೆ.
2. ಅವರು ನ್ಯಾಯಾಲಯದ ಕುರಿತು ಮಾಡಿರುವ ಟೀಕೆಗಳು ಮತ್ತು ವ್ಯಕ್ತಪಡಿಸಿರುವ ಅನುಮಾನಗಳು ಪ್ರಜಾಪ್ರಭುತ್ವ ವ್ಯವಸ್ತೆಯಡಿ ಇವತ್ತು ಇಲ್ಲದಿರುವ (ನ್ಯಾಯಾಲಯದ ತೀರ್ಪುಗಳ ವಿರುದ್ದ ಪ್ರಜಾಸತ್ತಾತ್ಮಕವಾಗಿ ವ್ಯಕ್ತಪಡಿಸಬಹುದಾದ ತೀವ್ರವಾದ ಪ್ರಟಿಭಟನೆ) ಸಾಧ್ಯತೆಯೊಂಡರ ಅವಶ್ಯಕತೆಯತ್ತ ನಮ್ಮೆಲ್ಲರನ್ನೂ ಯೋಚಿಸುವಂತೆ ಮಾಡಬೇಕಲ್ಲವೇ? ಈ ಮಾತು ಹೇಳುವಾಗ, ವಿಷಯದ ವ್ಯಾಪಕತೆ ಮತ್ತು ತೀವ್ರತೆ ನನ್ನ ಗಮನದಲ್ಲಿದೆ.
3. ಮೇಧಾರ ವಿಪರೀತ ನಿಲುವುಗಳು ವ್ಯವಸ್ಥೆಯ ಕ್ರೊಉರ್ಯದ ಕನ್ನಡಿಯಾಗಿರಲೂ ಬಹುದಲ್ಲವೇ?
ತಮ್ಮ ಲೇಖನದ ಧ್ವನಿಯನ್ನು ಸರಿಯಾಗಿ ಗ್ರಹಿಸದೇ ಹೋಗಿದ್ದಲ್ಲಿ ಕ್ಷಮೆಯಿರಲಿ. ಎಲ್ಲಕ್ಕಿಂತಾ ಮುಖ್ಯವಾಗಿ, ನೀವು ಹೀಗೆ ಚರ್ಚೆಗೆ ತೆರೆದುಕೊಳ್ಳುವುದು ನನ್ನಂಥವರಿಗೆ ನೆಮ್ಮದಿಯ ವಿಷಯ.
ಇಂತಿ
ಶಿವು
ಶಿವು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
೧.ಮುಂದೇನು? ಎನ್ನುವುದು ಒಂದು ಕುತೂಹಲದ ಪ್ರಶ್ನೆ. ಅದು ಅವರ ಅಜೆಂಡಾದ ಹುಡುಕುವಿಕೆಯ ಬಗ್ಗೆ ಆಗಿದೆ. ಆದರ ಸರಕಾರ, ಕೋರ್ಟು, ಮತ್ತು ಮೀಡಿಯಾ ನನ್ನ ಈ ಪ್ರಶ್ನೆಯನ್ನೇ ಅಪ್ರಾಸಂಗಿಕ ಮಾಡಿಬಿಟ್ಟಿವೆ.
೨.ನಿಮ್ಮ ಈ ಪಾಯಿಂಟು ಚರ್ಚೆಯನ್ನು ಮುಂದಕ್ಕೆ ಒಯ್ಯಲು ಅನುವು ಮಾಡಿಕೊಡುತ್ತದೆ. ಹೌದು, ಪ್ರತಿಭಟನೆ ವ್ಯಕ್ತಪಡಿಸುವ ಮಾರ್ಗ ಒದಗಿಬರಬಹುದು. ಆದರೆ ಅದೊಂದೇ ಮಾರ್ಗವೂ ಅಲ್ಲ. ಉದಾಹರಣೆಗೆ ಸರಕಾರ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಕನೂನನ್ನ ಬದಲಾಯಿಸಬಹುದು [ಇಂಥ ಪ್ರಯತ್ನಗಳು ಹಿಂದೆ ಬೇರೆ ಸಂದರ್ಭದಲ್ಲಿ ನಡೆದಿವೆ].. ಹೀಗೆ ಕಾನೂನನ್ನು ಬದಲಾಯಿಸಲು ಸರಕಾರದ ಮೇಲೆ ಜನತೆ ಒತ್ತಡ ಹೇರಬಹುದು. [ನರ್ಮದಾದ ಸಂದರ್ಭದಲ್ಲಿ ನನಗೆ ಈ ಸಾಧ್ಯತೆ ಕಾಣಿಸುತ್ತಿಲ್ಲ, ಯಾಕೆಂದರೆ ಅಣೆಕಟ್ಟಿನ ವಿಷಯದಲ್ಲಿ ಬುದ್ಧಿಜೀವಿಗಳಲ್ಲೂ ಏಕಾಭಿಪ್ರಾಯ ಇರುವಂತೆ ಇಲ್ಲ, ಸರಕಾರವಂತೂ ಅಣೆಕಟ್ಟು ಪರವಾಗಿಯೇ ಇದೆ]. ಆದ್ದರಿಂದ ಸಿವಿಲ್ ಸೊಸೈಟಿ ಮತ್ತು ಜನಾಂದೋಲನಗಳು ಕೋರ್ಟಿನ ತೀರ್ಪಿನನಂತರವೂ ತಮ್ಮ ಉದ್ಯಮವನ್ನ ನಡೆಸಬಹುದು. ಆದರೆ ಅದನ್ನು ಪ್ರಸ್ತುತ ಪಡಿಸುವ ರೀತಿಯಲ್ಲಿ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ತೀರ್ಮಾನ ಒಪ್ಪಿತವಲ್ಲ ಅನ್ನುವುದಕ್ಕಿಂತ ಈ ಕಾನೂನು ಸಮರ್ಪಕವಾಗಿಲ್ಲ, ಇದರಲ್ಲಿ ಪರಿಶೋಧನೆ ಬರಬೇಕು ಅನ್ನುವುದು ಹೆಚ್ಚು ಸಮರ್ಪಕ ನಿಲುವಾಗಬಹುದು. [ಇದನ್ನೂ ನಾನು ನರ್ಮದಾದ contextನಲ್ಲಿ ಹೇಳುತ್ತಿಲ್ಲ ಯಾಕೆಂದರೆ ಇದರಲ್ಲಿ ಉಚ್ಚನ್ಯಾಯಾಲಯ ಯಾವ ಕಾನೂನಿನಡಿಯಲ್ಲಿ ತೀರ್ಪು ನೀಡಿತು, ಅದರ ಆಯಾಮಗಳೇನು ಅನ್ನುವುದು ನನಗೆ ಗೊತ್ತಿಲ್ಲ]
೩.ವ್ಯವಸ್ಥೆಯ ಕ್ರೌರ್ಯಕ್ಕಿಂತ ಅಸಮರ್ಥತೆ ಹೆಚ್ಚಿರಬಹುದೆಂದು ನನಗೆ ಅನ್ನಿಸುತ್ತದೆ. ಒಂದು ನಿಟ್ಟಿನಲ್ಲಿ ಸರಕಾರದ ಅಂಗಗಳು ಮೇಧಾ [ವೈಯಕ್ತಿಕ] ವಿಷಯದಲ್ಲಿ ಸಮರ್ಪಕವಾಗಿ ನಡೆದುಕೊಂಡಿದೆ ಅನ್ನಿಸುವುದಿಲ್ಲವೇ? ಅವರ ಆಂದೂಲವನ್ನು ದಮನ ಮಾಡುವ ಯತ್ನ ನಡೆದಿಲ್ಲ [ಗುಜರಾತ್ ರಾಜ್ಯದಲ್ಲಿ ಆಕೆ ಸುರಕ್ಷಿತವಲ್ಲ ಅನ್ನುವುದು ಈ ಮೇಲಿನ ನನ್ನ ಅಭಿಪ್ರಾಯಕ್ಕೆ ಹೊರತಾಗಿದೆ]. ಸರಕಾರ ಆಕೆಯನ್ನ ಮಾತುಕತೆಯಲ್ಲಿ ಎಂಗೇಜ್ ಮಾಡಿದೆ. ಸೈಫುದ್ದೀನ್ ಸೋಸ್ ಒಳಗೊಂಡಂತೆ ಒಂದು ರಿವ್ಯೂ ಮಾಡಿದೆ.. ಆದರೂ ಸರಕಾರ ತನ್ನ ಕರ್ತವ್ಯವಾದ ಪುನರ್ವಸತಿಯ ಕಾರ್ಯವನ್ನು ಸಮರ್ಪಕವಾಗಿ ಮಾಡುತ್ತಿದೆಯೇ ಎಂಬುದರ ಬಗ್ಗೆ ಪ್ರಶ್ನೆಯಿದೆ.
ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ಈ ಬಗ್ಗೆ ಇನ್ನಷ್ಟು ಯೋಚಿಸಲು ನಿಮ್ಮ ಟಿಪ್ಪಣಿ ನನ್ನನ್ನ ಪ್ರೇರೇಪಿಸಿತು.
ಶ್ರೀರಾಮ್
ಪ್ರಶಾಂತ್ ಪಂಡಿತರೇ,
ನಾನು ಓದಿದ ಹಾಗೆ, ಶ್ರೀರಾಮ್ ಅವರ ಲೇಖನ ನರ್ಮದಾ ವಿವಾದದ ಬಗೆಗಲ್ಲ; ಒಂದು ಚಳುವಳಿಯ ಮುಂಚೂಣಿಯಲ್ಲಿರುವವರಿಗೆ ಆ ಚಳುವಳಿಯೇ ಜೀವನವಾದಾಗ ಏಳುವ ಪ್ರಶ್ನೆಗಳ ಕುರಿತು ಒಂದು ವಿಶ್ಲೇಷಣೆ.
ಈ ವಿಶ್ಲೇಷಣೆಯಲ್ಲಿ ಮೇಧಾ ಮತ್ತು ಅರುಂಧತಿಯಂತಹ ಬುದ್ಧಿಜೀವಿಗಳು ಸಂವಿಧಾನವನ್ನು ಪ್ರಶ್ನಿಸುವ ವಿಷಯದ ಪ್ರಸ್ತಾಪ ಇದ್ದುದರಿಂದ, ಜನ ಪ್ರತಿನಿಧಿಗಳಿಂದ ನಿರ್ಮಿತವಾದ ವ್ಯವಸ್ಥೆ ತೋರುವ ಪರಿಹಾರಗಳನ್ನು ಒಪ್ಪದವರ ಮನೋಭಾವ ಎಂತಹುದಿರಬಹುದೆಂದು ನನ್ನ ಅಭಿಪ್ರಾಯ ತಿಳಿಸಿದೆ ಅಷ್ಟೇ.
ನಾನು ಕಳೆದ ಹದಿನಾರು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದೇನೆ. ನರ್ಮದಾ ಅಣೆಕಟ್ಟಿನ ವಿಚಾರದಲ್ಲಿ ನನಗೆ ಆಸಕ್ತಿ ಇದೆಯಾದರೂ, ನಾನು ಅದರ ವಿರೋಧಿಯೂ ಅಲ್ಲ, ಪರವೂ ಅಲ್ಲ.
ಪ್ರ. ಪಂ.: "ಪರಿಸರವಾದಿಗಳೇ ‘ಹೀಗೆ’, ಅವರ ಮನೋಭಾವ ‘ಇಂಥದ್ದು’ ಎಂಬ ಅಭಿಪ್ರಾಯ ಹೊಂದಿದವರು ಯಾರೂ ಅವರ ಜೊತೆ ಒಡನಾಡಿರುವುದಿಲ್ಲ/ಚರ್ಚಿಸಿರುವುದಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ."
ನನ್ನ "ಎಲೈಟಿಸ್ಟ್" ಕಾಮೆಂಟ್ ಕೇವಲ ಪರಿಸರವಾದಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ. ಹಾಗೆಯೇ, ನಾನು ಮೇಧಾ ಮತ್ತು ಅರುಂಧತಿಯವರೊಡನೆ ಒಡನಾಡಿಲ್ಲ/ಚರ್ಚಿಸಿಲ್ಲ ಎಂಬುದನ್ನೂ ಒಪ್ಪುತ್ತೇನೆ. ಆದರೆ ನಾನು ವ್ಯಕ್ತ ಪಡಿಸಿದ ಅಭಿಪ್ರಾಯಕ್ಕೆ ಅಂತಹ ಒಡನಾಟ/ಚರ್ಚೆ ಅಗತ್ಯವಿಲ್ಲ ಎಂದೇ ನನ್ನ ಭಾವನೆ.
In fact I did not say anything new or even mildly revelatory. An intellectual by nature has to be an elitist. This is even more true about those intellectuals who are not ready to compromise with a democratic system that's built on popular votes.
ಪ್ರ.ಪಂ.: "ಶ್ರೀರಾಮರ ಬರಹದಲ್ಲಿ ಹಾಗು ನಿಮ್ಮ ಪ್ರತಿಕ್ರಿಯೆಯಲ್ಲಿ ಬಹುಪಾಲು ಸಿನಿಕತನ/ಕುಹಕ ಇರುಂವಂತಿದೆ. ಇದು ನನ್ನ ಗ್ರಹಿಕೆ. ಇದು ತಪ್ಪು ಗ್ರಹಿಕಿಯಾದಲ್ಲಿ ನೀವು ನಿಮ್ಮ ನಿಲುವನ್ನು ಸ್ಪಷ್ಟಪಡಿಸುವಿರೆಂದು ನಂಬಿದ್ದೇನೆ."
ಪ್ರಶಾಂತ ಪಂಡಿತರೇ, ಪರಿಸರದ ಬಗೆಗಿನ ನಿಮ್ಮ ವಾದವನ್ನು ನಾನು ಒಪ್ಪ್ದಲೀ, ಬಿಡಲೀ ನಿಮ್ಮ ವಾದದ ಪ್ರಾಮಾಣಿಕತನವನ್ನು ನಾನು ಪ್ರಶ್ನಿಸಿಲ್ಲ; ಪ್ರಶ್ನಿಸುವುದೂ ಇಲ್ಲ. ಸಾಮಾನ್ಯ ಮತದಾರರಿಂದ (ಹಣ, ಹೆಂಡದ ಆಮಿಷಕ್ಕೆ ಒಳಗಾಗುವರು) ಹಿಡಿದು, ಜನ ಪ್ರತಿನಿಧಿಗಳು, ದೇಶದ ಪ್ರಮುಖ ವಿಜ್ಞಾನಿಗಳು, ಯೋಜನಾಕರ್ತೃಗಳು, ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು, ಕಡೆಗೆ ಐ.ಐ.ಎಂ.ನ ವಿದ್ಯಾರ್ಥಿ/ಶಿಕ್ಷಕರವರೆಗೆ ಎಲ್ಲರನ್ನೂ ಸಂಶಯದಿಂದ ನೋಡುವ ನೀವು, ಬುದ್ಧಿಜೀವಿಗಳ ಮನೋಭಾವನೆಯ ಕುರಿತಾದ ನನ್ನ ಅಭಿಪ್ರಾಯದಲ್ಲಿ "ಸಿನಿಕತನ/ಕುಹಕ" ಕಾಣುವುದರಲ್ಲಿ ನನಗೆ ಅಚ್ಚರಿಯೇನೂ ಇಲ್ಲ. ಬದಲಾಗಿ, ನನ್ನ ವಾದಕ್ಕೆ ಉದಾಹರಣೆ ದೊರಕಿತೆಂಬ ತೃಪ್ತಿ ಇದೆ.
ಪರಿಸರವಾದದಲ್ಲಿ ತಿರುಳಿದ್ದರೂ, ಅದು ಯಾವುದೇ ದೇಶದಲ್ಲೂ mainstream ಆಗಿ sustain ಆಗದಿರುವುದಕ್ಕೆ ಎಲ್ಲರನ್ನೂ ಸಂಶಯಿಸುವ ಇಂತಹ joyless idealism ಕೂಡಾ ಕಾರಣವಿರಬಹುದೇ?
ವಂದನೆಗಳೊಂದಿಗೆ,
"ವಿ.ವಿ."
http://www.outlookindia.com/full.asp?fodname=20060503&fname=madhu&sid=1&pn=1
ಇಷ್ಟು ದಿನಗಳಾದ ನಂತರ ಈ ಚರ್ಚೆಯನ್ನು ಮುಂದುವರೆಸುತ್ತಿರುವುದು ಸಮಂಜಸವೋ ಅಲ್ಲವೋ ಎನ್ನಿಸುವಾಗಲೂ ಮಧು ಕಿಶ್ವರ್-ರ ಈ ಲೇಖನವನ್ನು ಪ್ರಸ್ತಾಪಿಸದೇ ಇರುವುದು ಕಷ್ಟವಾಗುತ್ತಿದೆ.
ಶ್ರೀರಾಮರು ತಮ್ಮ ಲೇಖನದಲ್ಲಿ ಹೇಳುವುದನ್ನು ಹೆಚ್ಚು ಸೂಕ್ಷ್ಮವಾಗಿ ಹೇಳಿದ್ದಾರೆ ಎನ್ನಿಸುತ್ತದೆ. ಮಧು ಬಹಳಷ್ಟು ತೀವ್ರವಾದ ಟೀಕೆಗಳನ್ನು ಮಾಡಿದ್ದಾರೆ. ಮತ್ತು ಪ್ರತಿಯೊಂದಕ್ಕೂ ವಿವರಗಳನ್ನೂ, ಸಾಂದರ್ಭಿಕ ಉದಾಹರಣೆಗಳನ್ನು ಕೂಡಾ ಕೊಟ್ಟಿದ್ದಾರೆ.
ಶ್ರೀರಾಮರ ಲೇಖನದ ಕಾರಣವಾಗಿ ನಡೆದ ಚರ್ಚೆಗಳನ್ನು ಗಮನಿಸಿದವರಿಗೆ ಉಪಯೋಗವಾಗಲೆಂದು ಇದನ್ನು ಇಲ್ಲಿ ಕೊಟ್ಟಿರುತ್ತೇನೆ.
ಈ ಹಿನ್ನೆಲೆಯಲ್ಲಿ ನಮ್ಮ ನಮ್ಮ ಅಭಿಪ್ರಾಯಗಳು ಹೇಗಿರುತ್ತವೆಂದು ಮತ್ತು ಮುಂದಿನ ವಿದ್ಯಮಾನಗಳ ಕುರಿತು ಯಾವ ರೀತಿ ಗಮನಿಸುತ್ತೇವೆ, ಯಾವ ನಿಲುವುಗಳನ್ನು ತಾಳುತ್ತೇವೆ ಎಂದು ಕುತೂಹಲಗೊಂಡಿದ್ದೇನೆ.
-ಶಿವು
Post a Comment