skip to main |
skip to sidebar
ಡಚ್ ಸಂಜಾತ ಎಂ.ಸಿ.ಎಷರ್ ಹುಟ್ಟಿದ್ದು ೧೯೦೨ರಲ್ಲಿ. ೭೦ ವರ್ಷಗಳ ಜೀವನಕಾಲದಲ್ಲಿ ಎಷರ್ ಅಸಂಖ್ಯಾತ ಚಿತ್ರಗಳನ್ನು ಅನೇಕ ಮಾಧ್ಯಮಗಳಲ್ಲಿ ಬಿಡಿಸಿದರು. ಚಿತ್ರ ನೋಡಿದ ಕೂಡಲೇ 'ಎಷರ್' ಎಂದು ಗುರುತಿಸಬಹುದಾದಂತಹ ಪ್ರತ್ಯೇಕತೆ ಇವರ ಶೈಲಿಯಲ್ಲಿದೆ. ಎಲ್ಲ ಚಿತ್ರಗಳಲ್ಲೂ ಇರುವ ಸಾಮಾನ್ಯ ಅಂಶವೆಂದರೆ ಅವುಗಳಲ್ಲಿನ ಚಾಮತ್ಕಾರಿಕ ಗುಣ. ಈ ಚಿತ್ರಗಳು ನಮ್ಮ ಹೃದಯವನ್ನು ಕಲಕುವುದಿಲ್ಲ. ಅವುಗಳ ಕಲಾತ್ಮಕ ಅಂಶದ ಬಗ್ಗೆ ಟಿಪ್ಪಣಿ ಮಾಡುವುದೂ ಕಷ್ಟ. ಜೊತೆಗೆ ಕಲೆ, ಕಲಾವಿಮರ್ಶೆಯಲ್ಲಿ ಯಾವ ಅನುಭವವೂ ಇಲ್ಲದ ನನಗೆ ಇದು ಕೈಗೆಟುಕುವ ವಿಷಯವೂ ಅಲ್ಲ. ಆದರೆ ಒಂದಂಶ ನಿಜ: ಎಷರ್ ಚಿತ್ರಗಳು ಬೌದ್ಧಿಕವಾಗಿ ಸಾಕಷ್ಟು ಕಸರತ್ತು ಮಾಡಿಸುತ್ತವೆ. ಸತ್ಯ-ಮಿಥ್ಯೆಯ ನಡುವಿನ ಗೆರೆಯನ್ನು ಅವು ಪ್ರಶ್ನಿಸುತ್ತವೆ.