ಫಕೀರ ಎನ್ನುವ ಅಂಕಿನನಾಮದಲ್ಲಿ ಬರೆಯುವ ಶ್ರೀಧರ ಬನವಾಸಿಯವರು ನನ್ನನ್ನು ತಮ್ಮ ಕಾದಂಬರಿಗೆ ಮುನ್ನುಡಿಯನ್ನು ಬರೆದುಕೊಡಬೇಕೆಂದು ಹೇಳಿದಾಗ ನಾನು ಸಂತೋಷದಿಂದ ಒಪ್ಪಿದೆ. ಬನವಾಸಿಯವರು ತಮ್ಮ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ ಮತ್ತು ಬ್ರಿಟಿಷ್ ಬಂಗ್ಲೆಯ ಪ್ರತಿಗಳನ್ನು ನನಗೆ ಅವುಗಳು ಪ್ರಕಟವಾದ ತಕ್ಷಣವೇ ಕಳುಹಿಸಿದ್ದರು. ಹೀಗೆ ಯುವ ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸುತ್ತಿರುತ್ತಾರೆ ಹಾಗೂ ಕೂದಲು ನರೆಯುತ್ತಿರುವ ತಮ್ಮ ಹಿರಿಯ ಜನಾಂಗದವರಿಂದ ಒಂದು ರೀತಿಯ ಪ್ರೋತ್ಸಾಹದ-ವಿಮರ್ಶೆಯ-ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಅದು ಸಹಜವೇ. ಬರವಣಿಗೆಯನ್ನು ಕೈಗೊಂಡ ಹೊಸತರಲ್ಲಿ ಈ ಪ್ರಕ್ರಿಯೆಗೆ ಯುವ ಲೇಖಕರಾಗಿ ನಾನು ನನ್ನ ಓರಗೆಯವರೂ ಒಡ್ಡಿಕೊಂಡದ್ದು ನೆನಪಿಗೆ ಬರುತ್ತದೆ. ಹೀಗಾಗಿ ಯುವ-ಹೊಸದಾಗಿ ಬರೆವಣಿಗೆಯನ್ನು ಕೈಹಿಡಿದ ಬರಹಗಾರರಲ್ಲಿ ನಾವುಗಳು ನಮ್ಮ ಗತಕಾಲವನ್ನೂ,ಯೌವನವನ್ನೂ ಕಾಣುತ್ತೇವೆ. ಅದೇ ಕಾಲಕ್ಕೆ ನಮ್ಮ ಕಾಲದ-ಸಮಯದ-ಕಾಯಕದ ಒತ್ತಡಗಳಲ್ಲಿ ಹಲವೊಮ್ಮೆ ಬಂದ ಪುಸ್ತಕಗಳನ್ನು ಓದಿ, ಅದನ್ನು ಕಳುಹಿಸಿಕೊಡುವ ತೊಂದರೆಯನ್ನು ಕೈಗೊಂಡ ಲೇಖಕರಿಗೆ ಒಂದೆರಡು ಸಾಲು ಪತ್ರವನ್ನೂ ಬರೆಯದಿರುವ ಅಪರಾಧವನ್ನು ನಾವು ಸದಾ ಮಾಡುತ್ತಲೇ ಇರುತ್ತವೆ. ಬರೆಯಬಾರದೆಂದಲ್ಲ – ಆದರೆ ಹೇಗೂ ಇಂದು-ನಾಳೆಯೆಂದು ಆ ಓದನ್ನು ಮುಂದುವರೆಸಿ ಹತಾಶೆಯಿಂದ ಸುಮ್ಮನಾಗಿಬಿಡುತ್ತೇವೆ. ನಾವು ಅರಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಗಳು ಅರಳುತ್ತಿರುವುದೇ ಇದಕ್ಕೆ ಕಾರಣ.
ಮುಂದೆ....
ಮುಂದೆ....
No comments:
Post a Comment