ದೇವರ ಪ್ರಸಾದ, ಬಕ್ಷೀಸು, ರಸೀತಿಪುಸ್ತಕ


ಗಣಪತಿ ಹಬ್ಬದ ಸೀಜನ್ ಬಂತೆಂದರೆ ರಸೀದಿಯ ಪುಸ್ತಕಗಳು ಹೊರಬಂದು ಚಂದಾ ವಸೂಲಿಯ ಕಾರ್ಯಕ್ರಮ ಪ್ರಾರಂಭವಾಗಿಬಿಡುತ್ತದೆ. ಮೊಹಲ್ಲಾದ ಪಡ್ಡೆ ಹುಡುಗರಿಗೆಲ್ಲಾ ಇದ್ದಕ್ಕಿದ್ದಂತೆ ಭಕ್ತಿಯ ಭಾವ ಉಕ್ಕಿ ಹರಿದು ಸಾಂಸ್ಕೃತಿಕ ಪರಿಜ್ಞಾನ ಬಂದುಬಿಡುತ್ತದೆ. ಈ ಗಣಪತಿ ಹಬ್ಬದ ಅರ್ಥವ್ಯವಸ್ಥೆ ಗುಜರಾತಿನಲ್ಲಿ ನಡೆವ ದಸರಾ ಹಬ್ಬದ ದಾಂಡಿಯಾಗಿಂತ ಮತ್ತು ದೀಪಾವಳಿಯ ಬಕ್ಷೀಸಿನ ಅರ್ಥವ್ಯವಸ್ಥೆಗಿಂತ ಭಿನ್ನವಾಗಿದೆ.

ಗುಜರಾತಿನಲ್ಲಿ ಅನೇಕ ವರ್ಷಗಳನ್ನು ಕಳೆದ ನನಗೆ ಅಲ್ಲಿನ ವ್ಯಾಪಾರೀ ಮನೋಭಾವದಲ್ಲಿರುವ ವಿಚಿತ್ರ ನ್ಯಾಯ ಅರ್ಥವಾಗುವುದಕ್ಕೆ ವರ್ಷಗಳೇ ಹಿಡಿದುವು. ಆದರೆ ಅದನ್ನು ಅರ್ಥೈಸಿದ ನಂತರ ಅಲ್ಲಿನ ಜೀವನ ದುಸ್ತರವೆನ್ನಿಸಲಿಲ್ಲ. ಮೊದಲಿಗೆ ದಸರಾದ ದಾಂಡಿಯಾದ ಕಥೆ ಹೇಳುತ್ತೇನೆ. ಪ್ರತೀ ದಸರಾದಲ್ಲೂ ಹತ್ತೂ ದಿನ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ದಾಂಡಿಯಾ ಕಾರ್ಯಕ್ರಮವೆಂದರೆ ರಾತ್ರೆಯ ಊಟದ ನಂತರ ಇಡೀ ಸಮುದಾಯ ಒಂದೆಡೆ ಸೇರಿ ಅಲ್ಲಿನ ದಾಂಡಿಯಾ ಸಂಗೀತಕ್ಕೆ ವೃತ್ತಾಕಾರದಲ್ಲಿ ಕೋಲಾಟ ಆಡುವುದು. ನಿಮಗೆ ಆಟ ಬರಬೇಕೆನ್ನುವ ನಿಯಮವೇನೂ ಇಲ್ಲ. ಭಾಗವಹಿಸುವ ಮನಸ್ಸಿರಬೇಕು ಅಷ್ಟೇ. ಮೊದಲ ದಿನ ಕೆಲ ಘಂಟೆಗಳು ನಡೆಯುವ ಈ ಕಾರ್ಯಕ್ರಮ ದಶಮಿಯ ಹೊತ್ತಿಗೆ ಇಡೀ ರಾತ್ರೆಯ ಕಾರ್ಯಕ್ರಮವಾಗುತ್ತದೆ. ಸಾಮಾನ್ಯತಃ ಎಲ್ಲ ಮೊಹಲ್ಲಾಗಳಲ್ಲೂ, ಕ್ಯಾಂಪಸ್ಸಿನಲ್ಲೂ ತಮ್ಮದೇ ದಾಂಡಿಯಾ ಕಾರ್ಯಕ್ರಮ ನಡೆಯುತ್ತದೆ. ಸಮುದಾಯದವರನ್ನು ಯಾರೂ ಹಣ ಕೇಳುವುದಿಲ್ಲ. ಆದರೆ ದಿನಕ್ಕೊಂದಿಷ್ಟು ಜನರ ಮನೆಯಿಂದ ಪ್ರಶಾದ್ ಬರುತ್ತದೆ, ಹಣ ಎಲ್ಲಿಂದ ಬಂತು, ಹೇಗೆ, ಎಷ್ಟು ಎನ್ನುವ ಹಿಸಾಬಿಲ್ಲದೇ ಸಂಭ್ರಮವಾಗಿ ಹಬ್ಬ ನಡೆಯುತ್ತದೆ. ಇದು ಯಾವ ನಿಯಮಗಳಿಗೂ ಬದ್ಧವಲ್ಲ. ನಮ್ಮ ಮನೆಯಲ್ಲಿ ನಡೆಯುವ ಜಂಟಿ ಸಂಸಾರದ ಖರ್ಚಿನ ಮಾದರಿಯಲ್ಲಿ ನಡೆದುಹೋಗುತ್ತದೆ. ಇಲ್ಲಿ ಯಾವ ಸರಕಾರದ ಪಾತ್ರವೂ ಇಲ್ಲ.


No comments: