ಬದಲಾಗುತ್ತಿರುವ ನಗರದ ತಲ್ಲಣಗಳ ಒಳಪದರಗಳು


ನಾವು ಚಿಕ್ಕವರಿದ್ದಾಗ ಬೆಂಗಳೂರಿನ ರಸ್ತೆಯ ಮೇಲೆ ನಮಗೆ ಬಿಟಿಎಸ್ ನ ಕೆಂಪು ಬಸ್ಸುಗಳಲ್ಲದೇ, ಎಚ್ಎಎಲ್, ಎಚ್ಎಂಟಿ, ಐಟಿಐ, ಬಿಇಎಲ್ ಸಂಸ್ಥೆಗಳ ಬಸ್ಸುಗಳೂ ಕಾಣಿಸುತ್ತಿದ್ದುವು. ದಿನದ ಷಿಫ್ಟಿಗನುಸಾರ ನಗರದ ವಿವಿಧ ಜಾಗಗಳಿಂದ (ಆಗ) ಊರಾಚೆ ಇದ್ದ ಫ್ಯಾಕಟರಿಗಳಿಗೆ ಜನ ಹೋಗುತ್ತಿದ್ದರು. ಆ ಬಸ್ಸುಗಳಲ್ಲಿ ಇದ್ದವರೆಲ್ಲರೂ ಇಂಜಿನಿಯರುಗಳೇನೂ ಅಲ್ಲ. ಕೆಲವರು ಇಂಜಿನಿಯರುಗಳಿದ್ದರೂ, ಐಟಿಐ ತರಬೇತಿ ಪಡೆದ ಮಾಡಿದ ಫೋರ್ಮನ್ನು, ಸೂಪರ್ ವೈಸರು, ಕಾರ್ಮಿಕರು – ಹೀಗೆ ವಿವಿಧ ಸ್ಥರಗಳಲ್ಲಿ ಕೆಲಸ ಮಾಡುತ್ತಿದ್ದ ಸಮವಸ್ತ್ರ ಧರಿಸಿದ ಜನರು ಇರುತ್ತಿದ್ದರು. ಇದೂ ಸಾಲದೆಂಬಂತೆ, ಸಂಸ್ಥೆಗಳಲ್ಲಿ ದಿನಗೂಲಿಯ ಮೇಲೆ ಕೆಲಸ ಮಾಡುತ್ತಿದ್ದ ಜನರೂ ಇರುತ್ತಿದ್ದರು. ಬಸ್ಸಿನಲ್ಲಿ – ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಮಾತನಾಡುವವರು ಸಿಗುತ್ತಿದ್ದರು. ಊಟವನ್ನು ಮನೆಮನೆಯಿಂದ ಪಡೆದು ಟಿಫಿನ್ ಕ್ಯಾರಿಯರ್ ಗಳನ್ನು ಪಡೆದು ಸೈಕಲ್ ಮೇಲೆ ಒಯ್ಯುವ "ಡಬ್ಬಾವಾಲಾ"ಗಳೂ ಇದ್ದರು. ಫ್ಯಾಕ್ಟರಿಯಲ್ಲಿ ವಿಭಾಗೀಯ ಕ್ಯಾಂಟೀನ್ ಇರುತ್ತಿತ್ತು. ಹಾಗೂ ಅಂದಿನ ಸಿನೇಮಾಗಳಲ್ಲಿ ಹೀರೋ ಕಾರ್ಮಿಕ ನಾಯಕನಾಗಿರುವುದು ಅಪರೂಪವೇನೂ ಆಗಿರಲಿಲ್ಲ. ಕಾರ್ಮಿಕ ಸಂಘಗಳೂ ಚಟುವಟಿಕೆಯಿಂದಿದ್ದುವು. ಕಾರ್ಮಿಕರು ಸಾಂಸ್ಕೃತಿಕ ವೇದಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಮುದಾಯದಂತಹ ಸಾಂಸ್ಕೃತಿಕ ಸಂಸ್ಥೆಗಳ ಮೂಲವೂ ಕಾರ್ಮಿಕ ಸಂಘಟನೆಯಲ್ಲಿತ್ತು.



No comments: