ಆಗ್ಡೆನ್ ನ್ಯಾಶ್ ಎಂಬ punಡಿತ

ಪದಚಮತ್ಕಾರ ಶ್ಲೇಷೆ, ವಿಕಟಾರ್ಥ, ನಾನ್‌ಸೆನ್ಸ್, ಅರ್ಥರಹಿತ ಪ್ರಾಸ, ಅರ್ಥಪೂರ್ಣ ಪ್ರಾಸ, ಈ ಎಲ್ಲವನ್ನೂ ಪ್ರತಿನಿಧಿಸಲು ಒಂದೇ ಹೆಸರು ಬೇಕು ಎನ್ನುವುದಾದರೆ ನಾವು ಆಗ್ಡೆನ್ ನ್ಯಾಶ್‌ರನ್ನು ನೆನಪುಮಾಡಿಕೊಳ್ಳಬಹುದು. ನಾನ್ಸೆನ್ಸ್ ಪದ್ಯಗಳ ರಚನೆಯ ರೀತಿಗೇ ಹಲವು ಆಯಾಮಗಳನ್ನು ನೀಡಿದ ಕವಿ ನ್ಯಾಶ್. ನ್ಯಾಶ್ ಬಗ್ಗೆ ಯಾರೇ ಬರೆದರೂ ಓದಲು ಖುಷಿಯಾಗುತ್ತದೆ. ಕಾರಣ: ಎಷ್ಟೇ ಒಣ ವಿಮರ್ಶಕ ಲೇಖನ ಬರೆದರೂ ನ್ಯಾಶ್‌ರ ಕವಿತೆಗಳ ತುಣುಕುಗಳು ಉದಾಹರಣೆಯಾಗಿ ಬರುವುದರಿಂದ, ತನ್ನಿಂದತಾನೇ ಆ ಲೇಖನಕ್ಕೆ ಜೀವ ಬಂದುಬಿಡುತ್ತದೆ.




4 comments:

v.v. said...

ನ್ಯಾಶನೊಗೆದ ಶ್ಲೇಶೆ ಕುರಿತು
ಆಶೆಯಿಂದ ಓದಿಸಿರುವೆ
ದೋಷವಿನಿತೂ ಕಾಣಲಿಲ್ಲ.. ಕೇಶ-ಸಹಿತನೇ..

ಎಂ.ಎಸ್.ಶ್ರೀರಾಮ್ said...

ಯಶಸ್ವಿನಿ: ಶ್ಲೇಷೆಯ ಉಪಯೋಗಕ್ಕೆ ಫೊನೆಟಿಕ್ ಆದ ಭಾಷೆ ಅಡ್ಡಿಯಾಗಬಹುದೆಂದು ನಾನು ವಾದಿಸಿರುವುದನ್ನ ಒಂದು ಅತಿಯಾದ ನಿಲುವೆಂದು ಭಾವಿಸಬಾರದು. ಯಾಕೆಂದರೆ ಕನ್ನಡದಲ್ಲಿ "ಶ್ಲೇಷೆ" ಎಂಬ ಪದವಿರುವುದೇ ನನ್ನ ವಾದವನ್ನು ಅಲ್ಲಗಳೆಯಲು ಸಾಕು. ಆದರೆ ನೀವು ಕೊಟ್ಟಿರುವ ಉದಾಹರಣೆಗಳು ವಾಚ್ಯದಲ್ಲಿ ಪ್ರಯೋಗವಾಗುವಂಥವು. ಬರಹದಲ್ಲಿ ಶ್ಲೇಷೆಯನ್ನು ಪ್ರಯೋಗಿಸುವುದು ಫೊನೆಟಿಕ್ ಭಾಷೆಗಳಲ್ಲಿ ತುಸು ಕಷ್ಟವೇ. ಉದಾಹರಣೆಗೆ ವೈಎನ್ಕೆ ಪನ್ ಬಗ್ಗೆ ಒಂದು ಜೋಕ್ ಹೇಳುತ್ತಿದ್ದರು... "ಒಂದೂರಿನಲ್ಲಿ ಒಬ್ಬ ರಾಜ ಇದ್ದ. ಅವನಿಗೆ ಪನ್ ಅಂದರೆ ಬಹಳ ಇಷ್ಟ, ಆದರೆ ಅವನನ್ನು ಖುಷಿಗೊಳಿಸುವಷ್ಟು ಪನ್ ಮಾಡುವ ವಿದೂಷಕ ಬಹಳ ದಿನಗಳವರೆಗೆ ಸಿಗಲಿಲ್ಲ. ಕಡೆಗೆ ಒಬ್ಬ ಸಿಕ್ಕ. ಅವನು ಎಷ್ಟು ಚತುರನಾಗಿದ್ದನೆಂದರೆ ಕೂತಲ್ಲಿ ನಿಂತಲ್ಲಿ ಪನ್ ಮಾಡುತ್ತಿದ್ದ. ಒಂದು ರೀತಿಯಲ್ಲಿ ಇದು ಅತಿಯಾಗಿ ರಾಜನಿಗೂ ಸುಸ್ತಾಯಿತು. ತಾಳಲಾರದೇ ವಿದೂಷಕನನ್ನು ಜೈಲಿಗೆ ಹಾಕಿದ..ಆಗ ಅವನು ಏನಂದಿರಬಹುದು.. ಓಹ್ ಪನ್ [ಓಪನ್]. ಇಲ್ಲಿ ಇರುವ ಚಮತ್ಕಾರ ಬಾಗಿಲು ತೆರೆಯುವುದಕ್ಕೆ, ಅಯ್ಯೋ ಅಂತ ಪ್ರಲಾಪ ಮಾಡುವುದರ ನಡುವಿನದು.. ಇದನ್ನ ಕನ್ನಡದಲ್ಲಿ ಬರವಣಿಗೆಗೆ ಇಳಿಸಬೇಕಾದರೆ ನಮಗೆ ಕಷ್ಟವಾಗುತ್ತದೆ. ನೀವೇ ಕೊಟ್ಟಿರುವ ಟಿ.ವಿ ಮತ್ತೆ ಅಮೇರಿಕಾದ ಉದಾಹರಣೆಗಳೂ ಇಂಗ್ಲೀಷಿನ ಮೊರೆಹೊಕ್ಕಿವೆ. ಕೈ ತರಚಿದೆ ಅನ್ನುವುದು ಶ್ಲೇಷೆಯೇ? .. ಯಾಕೆಂದರೆ ಕೈ ಎಂಬ ಪದದ ಅರ್ಥ ಇಲ್ಲಿ ಬದಲಾಗಿಲ್ಲ, ಉಪಯೋಗಿಸುವ ಸಂದರ್ಭದಿಂದ ವಿಕಟಾರ್ಥ ಬಂದಿದೆ. ಜಯಲಲಿತಾರನ್ನ jailಲಲಿತಾ ಎಂದು ಒಮ್ಮೆ ಕರೆಯುವ ಪ್ರಯತ್ನ ನಡೆದಿತ್ತು. ಅದನ್ನು ಬರಹದಲ್ಲಿ ಗ್ರಹಿಸುವುದು ಹೇಗೆ? ನನ್ನ ವಾದ ಈ ಹಿನ್ನೆಲೆಯಲ್ಲಿ ಮಾಡಿದ್ದು.

ಆದರೆ ನನ್ನ ವಾದಕ್ಕೆ ಪ್ರತಿಯಾಗಿ ಶ್ಲೇಷೆಯ ಪ್ರಯೋಗದ ಕೆಲ ಉದಾಹರಣೆಗಳನ್ನು ಯಾರಾದರೂ ನೀಡಬಹುದು. ನನ್ನ ವಾದ ಪೋನೆಟಿಕ್ ಭಾಷೆಯಲ್ಲಿ ಶ್ಲೇಷೆಯನ್ನು ಪ್ರಯೋಗ ಮಾಡಲು ಅಸಾಧ್ಯ ಎಂದಲ್ಲ. ಅದು ಸ್ವಲ್ಪ ಗೊಂದಲಮಯವಾದದ್ದು ಎಂದಷ್ಟೇ. ಈ ಚರ್ಚೆಯನ್ನು ನಾನು ಭಾಷಾ ಶಾಸ್ತ್ರಜ್ನರಾದ ತಿರುಮಲೇಶ್‍ಗೆ ಕಳಿಸುತ್ತೇನೆ. ಅವರೇನು ಅನ್ನುತ್ತಾರೋ ನೋಡೋಣ.. ನನಗೂ ಈ ಬಗ್ಗೆ ಹೆಚ್ಚಿನ ಕುತೂಹಲ ಉಂಟಾಗುತ್ತಿದೆ.

Anonymous said...

ಪ್ರಿ೦‌ು ಶ್ರೀರಾಮ್
ಪನ್ ಅರ್ಥಾತ್ ಶ್ಲೇಷೆ ಸಾಮ್ಯ ಮತ್ತು ವ್ಯತ್ಯಾಸಗಳ ಮೇಲೆ ನಡೆಸುವ ಮಾತಿನ ಆಟ. ಕುದುರೆ ಕೆಟ್ಟರೆ ಕತ್ತೆ ಎನ್ನುವ ಹಾಗೆ! ಮುಖ್ಯವಾಗಿ, ಶಬ್ದ ಸಾಮ್ಯವಿದ್ದು ಅರ್ಥ ವ್ಯತ್ಯಾಸವಿರುವುದು ಪನ್‌ಗೆ ಕಾರಣವಾಗುತ್ತದೆ. ಲಕ್ಷ್ಮೀಶ ಕವಿ "ಕೊಡೆಯೆಂಬರಾತಪತ್ರಮಂ" ಎಂದು ಮುಂತಾಗಿ ಹೇಳುವ ಪದ್ಯದಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ; "ಕೊಡೆಯೆಂಬರಾತಪತ್ರಮಂ" ಎಂಬಲ್ಲಿ "ಕೊಡೆ" ಎನ್ನುವ ಪದಕ್ಕಿರುವ "ಛತ್ರಿ" ಮತ್ತು "(ನಾನು) ಕೊಡೆನು" ಎಂಬ ಎರಡು ಅರ್ಥಗಳೂ ಉಪಯೋಗವಾಗಿರುವುದನ್ನು ಗಮನಿಸಬೇಕು. ಅರ್ಥ ಸಾಮ್ಯವಿದ್ದು ಶಬ್ದವ್ಯತ್ಯಾಸವಿರುವುದೂ ಶ್ಲೇಷೆಯೇ; ಇದು ಅಷ್ಟೊಂದು ಜನಪ್ರಿಯವಲ್ಲ. ಶೇಕ್ಸ್‌ಪಿಯರ್ ಇವೆರಡನ್ನೂ ಬಳಸುತ್ತಾನೆ.
ಆದರೆ, ನೀವು ಮುಂದೊತ್ತಿರುವ ವಾದ ಭಾಷೆಯ ಇನ್ನೊಂದು ಆಯಾಮವಾದ ಲಿಪಿಯ ಕುರಿತಾಗಿ: ಓದುವಂತೆ ಬರೆಯುವ `ಫೊನೆಟಿಕ್' ಲಿಪಿಯಿರುವ (ಅಂದರೆ `ಅಕ್ಷರಬದ್ಧ'ವಾದ) ಭಾಷೆಯಲ್ಲಿ ಶ್ಲೇಷೆಗಿರುವಷ್ಟು ಸಾಧ್ಯತೆ ಅದಿಲ್ಲದ, ಬರೆಯುವುದೊಂದು, ಓದುವುದೊಂದು ಎಂಬ ರೀತಿಯ `ನಾನ್-ಫೊನೆಟಿಕ್' ಲಿಪಿಯಿರುವ ಭಾಷೆಗಿಂತ ಕಡಿಮೆ ಎನ್ನುವುದು. (ಭಾಷಾವಿಜ್ಞಾನದ ಪರಿಭಾಷೆಯಲ್ಲಿ ಮಾತ್ರ `ಫೊನೆಟಿಕ್' ಎಂಬ ಪದವನ್ನು ಇಂಗ್ಲಿಷ್ ರೀತಿಯ ಭಾಷೆಗೂ, `ಸಿಲ್ಲಾಬಿಕ್' ಎಂಬ ಪದವನ್ನು ಕನ್ನಡದ ರೀತಿಯ ಭಾಷೆಗೂ ಉಪಯೋಗಿಸುತ್ತಾರೆ! ಯಾಕೆಂದರೆ ಕನ್ನಡದಂಥ ಭಾಷೆಯಲ್ಲಿ ಒಂದೊಂದು ಅಕ್ಷರವೂ ಒಂದೊಂದು `ಸಿಲೆಬ್ಲ್'ನ್ನ--ಅಂದರೆ, ಉಚ್ಚಾರಾಂಶವನ್ನ--ಪ್ರತಿನಿಧಿಸುತ್ತದೆ; ಇಂಗ್ಲಿಷ್‌ನಂಥ ಭಾಷೆಯಲ್ಲಾದರೆ ಹೆಚ್ಚಾಗಿ ಒಂದೊಂದು ಅಕ್ಷರವೂ ಒಂದೊಂದು ಧ್ವನಿಯನ್ನು ಮಾತ್ರ ಪ್ರತಿನಿಧಿಸುವುದು. ಇರಲಿ, ಪಾರಿಭಾಷಿಕ ಶಬ್ದ ಇಲ್ಲಿ ಮುಖ್ಯವಲ್ಲ.) ನಿಮ್ಮ ಈ ಗ್ರಹಿಕೆ ಸರಿಯಾದ್ದೇ ಎಂಬುದರಲ್ಲಿ ಸಂದೇಹವಿಲ್ಲ. ಸರಿ ಮಾತ್ರವೇ ಅಲ್ಲ, ಇದು ಸೂಕ್ಷ್ಮಜ್ಞವೂ ಆದುದು. ನೀವು ಕೊಟ್ಟಿರುವ Versus/Verses, Son/sun ಮುಂತಾದ ಉದಾಹರಣೆಗಳು ಸ್ವಯಂಪೂರ್ಣವಾಗಿವೆ. ಶೇಕ್ಸ್‌ಪಿಯರನ ನಾಟಕಗಳ ತುಂಬ ಇಂಥ ಅನೇಕ ಉದಾಹರಣೆಗಳು ದೊರೆಯುತ್ತವೆ: sole/soul, heart/hart ಮುಂತಾಗಿ; ನಿಜ, ಅವನ ನಾಟಕಗಳು ಓದುವುದಕ್ಕೆಂದು ಬರೆದುವಲ್ಲ. ಆದರೂ, ಅವು ಮುದ್ರಣವಾಗುತ್ತಿರುವಂತೆ, ಓದುಗರಿಗೆ ಈ ಶ್ಲೇಷೆಗಳ ಅರ್ಥವನ್ನು ನಿಭಾಯಿಸುವುದೂ ಅಗತ್ಯವಾಯಿತು. ಇಲ್ಲಿನ ಸಮಸ್ಯೆಯೆಂದರೆ, ಮನಸ್ಸಿನಲ್ಲೇ ಆದರೂ ಪದಗಳನ್ನು ಉಚ್ಚರಿಸಿದರೆ ಮಾತ್ರ ಇಲ್ಲಿ ಶ್ಲೇಷೆಯಿದೆಯೆನ್ನುವುದು ನಮಗೆ ಗೊತ್ತಾಗುವುದು! ಮುದ್ರಣದಲ್ಲಿ ಒಂದೆಡೆ ಎರಡೂ ಪದಗಳನ್ನು ಇರಿಸುವುದು ಸಾಧ್ಯವಿಲ್ಲವಲ್ಲ! ಓಗ್ಡನ್ ನ್ಯಾಶ್‌ನಂತೆಯೆ ಶೇಕ್ಸ್‌ಪಿಯರನನ್ನೂ ಕನ್ನಡದಂಥ ಭಾಷೆಗೆ ಅನುವಾದಿಸಲು ಕಷ್ಟವಾಗುವುದಕ್ಕೆ ಇದೂ ಒಂದು ಕಾರಣ.
ಇಷ್ಟರ ಮಟ್ಟಿಗೆ ಕನ್ನಡದಲ್ಲಿ ಶ್ಲೇಷೆ೦‌ು ಸ್ವಾರಸ್ಯ ಕಡಿಮೆಯೆಂದು ನೀವು ಹೇಳುವುದು ಸರಿ. ಅದಕ್ಕೆಂದೇ ಬಹುಶಃ ಕನ್ನಡ ಇತರ ವಿಧಾನಗಳನ್ನು ಹುಡುಕುವುದು. ಯಾವುದೇ ಭಾಷೆಯಲ್ಲಾಗಲಿ ಶ್ಲೇಷೆ ಸ್ವಾರಸ್ಯಪೂರ್ಣವಾಗಬೇಕಿದ್ದರೆ ಅದು ಚಕಿತಗೊಳಿಸುವಂತಿರಬೇಕು, ಅರ್ಥಾತ್ ಅನಿರೀಕ್ಷಿತವಾಗಿರಬೇಕು. ಅದು ಹೇಗೆಂದು ಪಟ್ಟಿಮಾಡುವಂತಿಲ್ಲ. ಕೆಲವು ಪ್ರಯೋಗಗಳನ್ನು ನೋಡಿಯೆ ತಿಳಯುಬೇಕು. ಉದಾಹರಣೆಗೆ, ವೈಎನ್‌ಕೆಯವರ

ಶುದ್ಧೋದನನ ಮಗ
ಎದ್ದೋದನ!
ಎಂಬ ಪದ್ಯ. ಇಲ್ಲಿ ಶುದ್ಧೋದನ ಎನ್ನುವುದು ನಾಮಪದ; ಆದರೆ ಅದಕ್ಕೆ ಪ್ರಾಸವಾಗಿಯೂ ಸಂವಾದಿಯಾಗಿಯೂ ಬರುವ `ಎದ್ದೋದನ' ಎನ್ನುವುದು ಕ್ರಿಯಾಪದಪುಂಜ; ಅದೇ ರೀತಿ, ಎದ್ದು+ಹೋದನ=ಎದ್ದೋದನ ಎಂಬ ಆಡುಮಾತಿನ ಸಂಧಿ; `ಓದನ' ಎಂಬ ಪ್ರಾಸ--ಇವೆಲ್ಲವೂ ಈ ಎರಡು ಸಾಲಿನ ಪದ್ಯದ ಸೊಗಸಿಗೆ ಕಾರಣವಾಗುತ್ತವೆ. ಇದೊಂದು ನೇರವಾದ (ಅಂದರೆ, ಸಾಂಪ್ರದಾಯಿಕ) ಶ್ಲೇಷೆಯಲ್ಲವಾದರೂ, ಇಲ್ಲಿನ ಪದಬಂಧ ಇದನ್ನು ಶ್ಲೇಷೆಯಾಗಿ ಪರಿವರ್ತಿಸಿದೆ.
ಪನ್ ಯಶಸ್ವಿಯಾಗಬೇಕಾದರೆ ಅದರ ಬಳಕೆಯಲ್ಲಿ ಸ್ವಲ್ಪ ವಕ್ರತೆಯಿರಬೇಕೆನ್ನುವುದನ್ನು ನೀವು ಓಗ್ಡನ್ ನ್ಯಾಶ್‌ನ ಉದಾಹರಣೆಗಳಿಂದ ತೋರಿಸಿಕೊಟ್ಟಿದ್ದೀರಿ. ಪನ್ ಎಂದರೇನೇ ಅದು ವಕ್ರೋಕ್ತಿ, ವಕ್ರನೋಟ. ಅದು ಭಾಷೆಯ ಬಿರುಕಿನಲ್ಲಿ ಬೇರು ಬಿಡುತ್ತದೆ; ಬಿರುಕು ಸ್ವಲ್ಪವಾಗಿದ್ದರೂ ಸಾಕು, ಅದನ್ನು ಅಗಲಿಸಿಕೊಳ್ಳುತ್ತದೆ. ಅಥವಾ ಬಿರುಕಿದ್ದಲ್ಲಿ ತೇಪೆ ಹಾಕುತ್ತದೆ. ಕಚಗುಳಿಯಿಡುತ್ತದೆ, ಭಾಷೆಗೆ ಭಾಷೆಯದೇ ಭೂತಗನ್ನಡಿ ಹಿಡಿ೦ಯುತ್ತದೆ. ಭಾಷಾಸಂಕರದಲ್ಲಿ ಬೆಳೆಯುತ್ತದೆ. ಯಾಕೆಂದರೆ ಅದೊಂದು ಬ್ಯಾಸ್ಟರ್ಡ್ ಇದ್ದಹಾಗೆ! ಸಾಮಾನ್ಯ ತರ್ಕಕ್ಕೆ ಸಿಕ್ಕುವುದಲ್ಲ; ಇದರದು ಅಡ್ಡದಾರಿ, ಲ್ಯಾಟರಲ್ ಥಿಂಕಿಂಗ್. ಆಧುನಿಕ ಪ್ರವೇಶ ಪರೀಕ್ಷೆಗಳಲ್ಲಿರುವ ವರ್ಬಲ್ ರೀಸನಿಂಗ್‌ಗೆ ಬಹಳ ಹತ್ತಿರವಾದ್ದು!
ಆದರೆ ಶ್ಲೇಷೆ ಅಧ್ವಾನದ್ದೂ ಆಗಿರಬಾರದು ನಿಜ. ಯಶಸ್ವಿನಿಯವರು ಉದಾಹರಿಸಿದ ಪುರಂದರದಾಸರ ಕೀರ್ತನೆಯ `ರಾಗಿ' ಪ್ರಯೋಗದಲ್ಲೂ ಈ ಹದವಾದ ವಕ್ರತೆಯಿದೆ. ಶೆರೀಫ ಸಾಹೇಬರು ತಮ್ಮ ಅನೇಕ ರಚನೆಗಳಲ್ಲಿ ಇಂಥ ಪ್ರಯೋಗಗಳನ್ನು ಮಾಡಿದ್ದಾರೆ. ಎಲ್ಲಾ ಕನ್ನಡ ಕವಿಗಳೂ ಮಾಡಿದ್ದಾರೆ. ಕನ್ನಡದಲ್ಲಿ ಇಂಥ ವಕ್ರತೆಯ ಸಾಧ್ಯತೆಗಳು ಬಹಳಷ್ಟಿವೆ ಎನ್ನುವುದಕ್ಕೆ ಈಚೆಗೆ ವಿಪುಲವಾಗಿ ಬೆಳೆಯುತ್ತಿರುವ `punಡಿತವರ್ಗ'--ಅಥವಾ punಡರ ವರ್ಗ (ಪಂಡರು? ಪುಂಡರು?)--ಸಾಕ್ಷಿಯಲ್ಲವೇ ಪುಂಡರವಿಠಲ? ಯಶಶ್ಶನಿ ಅವರನ್ನು ಕಾಡುವುದೇ ನೋಡಬೇಕು! (ಯಶಸ್ವಿನಿಯವರ ಕ್ಷಮೆ ಕೋರಿ!) ಆದರೆ punಡರೀಬಾಯಿ೦ಯವರು ಯಾರೂ ಇನ್ನೂ ಈ ಕ್ಷೇತ್ರಕ್ಕೆ ಪ್ರವೇಶ ಮಾಡಿಲ್ಲವೇಕೆ? ನೋಡಿ, ನನಗೂ ಅಂಟಿಕೊಂಡಿತೇ!?

ಕೆ. ವಿ. ತಿರುಮಲೇಶ್

v.v. said...

ಶ್ಲೇಶೆಯ ಕುರಿತು ಆಸಕ್ತಿಕರ ಚರ್ಚೆ ಒದಗಿಸಿದ್ದಕ್ಕೆ ಶ್ರೀರಾಮ್, ಯಶಸ್ವಿನಿ ಮತ್ತು ತಿರುಮಲೇಶರಿಗೆ ಧನ್ಯವಾದಗಳು.

>> "punಡರೀಬಾಯಿ೦ಯವರು ಯಾರೂ ಇನ್ನೂ ಈ ಕ್ಷೇತ್ರಕ್ಕೆ ಪ್ರವೇಶ ಮಾಡಿಲ್ಲವೇಕೆ?"
punಡರೀಬಾಯಿ ಬಾಗಿಲ ತೆರೆಯಲು ಶ್ಲೇಶಮ್ಮ ಅಡ್ಡಿ ಮಾಡಿರಬಹುದೇ..?